ಇಷ್ಟರಲ್ಲಿ ಇನ್ನೇನ್ ಮಾಡೋಕ್ ಸಾಧ್ಯ ಸಿನಿಮಾ ಶುರುವಾಗುತ್ತಿದ್ದಂತೆ ಗಾಂಧಿನಗರದೊಳಗಿನ ಕಥೆ ಅಂದುಕೊಳ್ಳುತ್ತೇವೆ. ಸಿನಿಮಾ ಶುರುವಾಗುತ್ತಿದ್ದಂತೆ ಗಾಂಧಿನಗರದೊಳಗಿನ ಕಥೆ ಅಂದುಕೊಳ್ಳುತ್ತೇವೆ. ಆದರೆ, ನೋಡುತ್ತಾ ಹೋದಂತೆ 'ಸೈಕೋಸೊಮ್ಯಾಟಿಕ್‌'ನಿಂದ ದೃಷ್ಟಿಕಳೆದುಕೊಳ್ಳುವನಿರ್ದೇಶಕನ ಕಾಮಿಡಿ ಡ್ರಾಮಾವಾಗಿ ರೂಪಾಂತರಗೊಳ್ಳುತ್ತದೆ 'ಮಂಗನ ಕೈಲಿ ಮಾಣಿಕ್ಯ'. ರಂಗಭೂಮಿ ಹಿನ್ನೆಲೆಯ ರಾಜೇಂದ್ರ ಕಾರಂತ್ ನಿರ್ದೇಶನದ ಈ ಚಿತ್ರದಲ್ಲಿ ಒಳ್ಳೆಯ ಒಂದು ಸಾಲಿನ ಕಥೆಯಿದೆ. ಅವರ ಬಗ್ಗೆ ನಂಬಿಕೆ ಇದ್ದವರಿಗೆ ಈ ಚಿತ್ರದ ಬಗ್ಗೆಯೂ ನಂಬಿಕೆ ಇತ್ತು. ಆದರೆ, ಅದು ಸಂಪೂರ್ಣ ನಿರಾಸೆಯನ್ನೇನೂ ಮಾಡಿಲ್ಲ. ಕಾಮಿಡಿ ಸಿನಿಮಾ ಎಂದರೆ ಎಲ್ಲ ಪಾತ್ರಗಳು ಜೋಷ್‌ನಲ್ಲೇ ಮಾತನಾಡಬೇಕು ಎಂಬ ಈ ನಿಯಮವನ್ನು ಇಲ್ಲೂ ಶ್ರದ್ಧೆಯಿಂದ ಫಾಲೋ ಮಾಡಲಾಗಿದೆ. ರಮೇಶ್ ಅರವಿಂದ್, ರಂಗಾಯಣ ರಘು, ರವಿಶಂಕರ್‌ರಂಥ 'ಟೈಮಿಂಗ್‌' ನಟರು ಮತ್ತು ರಾಜೇಂದ್ರ ಕಾರಂತ್‌ರಂಥ ನಿರ್ದೇಶಕ ಸೇರಿ ಇಡೀ ಚಿತ್ರ 'ರ' ಕಾರ ಪ್ರಿಯವಾಗಿದೆ. ಆದರೆ ರಂಜನೆಗಂತೂ ಮೋಸವಿಲ್ಲ. ಇಲ್ಲಿ ನಾಯಕನೇ ನಿರ್ದೇಶಕ ಎಂದರೆ ಅದು ತೆರೆಯ ಮೇಲಿನ ಚಿತ್ರದ ಕಥೆ. ರವಿಶಂಕರ್ ಒಂದು ಹಾಡು ಹಾಡಿದ್ದಾರೆ, ಛಾಯಾಗ್ರಹಕರು ಕೂಡ ಅಭಿನಯಿಸಿದ್ದಾರೆ, ಒಂದು ಸಿನಿಮಾ ಕಥೆ ಆದ್ದರಿಂದ ಶೂಟಿಂಗ್ ಅಸೆಟ್‌ಗಳನ್ನೇ ಸಿನಿಮಾದಲ್ಲೂ ಬಳಸಲಾಗಿದೆ. ಹಾಗಾಗಿ ಬಜೆಟ್ ವಿಷಯದಲ್ಲಿ ನಿರ್ಮಾಪಕರಿಗೆ ಸಾಕಷ್ಟು ವರ್ಕ್ ಔಟ್ ಆಗಿದೆ ಎನ್ನಬಹುದು. ಮಧ್ಯಂತರವರೆಗೂ ಸಿನಿಮಾ ನಿಮ್ಮನ್ನು ಯಾವುದೇ ಗೊಂದಲ ಇಲ್ಲದೆ ನೋಡಿಸಿಕೊಂಡು ಹೋಗುತ್ತದೆ. ಸಿನಿಮಾದೊಳಗಿನ ಹಿರೋಯಿನ್ ಜತೆ ಕುರುಡು ನಿರ್ದೇಶಕನ ಎಪಿಸೋಡ್‌ನಲ್ಲಿ ಶ್ ಸ್ವಲ್ಪ ಕಿವಿ ಮುಚ್ಚಿಕೊಳ್ಳಿ ಎನ್ನುವಂಥ ಕೆಲವು ಸಂಭಾಷಣೆಗಳಿವೆ. ಅದೀಗ ಮಾಮೂಲು ಬಿಡಿ. ಯಾಕೆಂದರೆ, ಪ್ರೇಕ್ಷಕ ಪ್ರಭು ಕೂಡಾ ಒಪ್ಪಿಕೊಂಡಿದ್ದಾನೆ. ಸಾಮಾನ್ಯವಾಗಿ ಕಾಮಿಡಿ ಸಿನಿಮಾದಲ್ಲಿ ಕ್ಲೈಮಾಕ್ಸ್ ನಗೆಯ ಹಬ್ಬವನ್ನು ಸೃಷ್ಟಿಸಬೇಕು, ನಿಯಮದಂತೆ ಇಲ್ಲೂ ಕೊನೆಗೊಂದು ಕಾಮಿಡಿ ಕಿಕ್ ನೀಡಿ ಸಿನಿಮಾ ಮುಗಿಸಲಾಗಿದೆ. ನಾಯಕನ ಎಕ್ಸ್ ಲವರ್ ಆಗಿ ನಟಿಸಿರುವ ಹರ್ಷಿಕಾ ಪೂಣಚ್ಚ ಅಲ್ಲದೆ, ಮತ್ತೆ ಮೂವರು ಹಿರೋಯಿನ್‌ಗಳಿದ್ದಾರೆ. ಹರ್ಷಿಕಾ ಎಂದಿಗಿಂತ ಫ್ರೆಷ್ ಆಗಿ ಕಂಡರೆ, ಸೋನಿಯಾ ಗೌಡ ಗಮನ ಸೆಳೆಯುತ್ತಾರೆ. ಹಾಸ್ಯ ಮತ್ತು ಭಾವನಾತ್ಮಕ ದೃಶ್ಯಗಳನ್ನು ರುಚಿಗೆ ತಕ್ಕಂತೆ ಬೆರೆಸಲಾಗಿದೆ. ಇಷ್ಟರ ಮಧ್ಯೆ, ಗಾಂಧಿನಗರದಲ್ಲಿನ 'ವ್ಯವಹಾರಗಳ'ನ್ನು, ಯಶಸ್ವೀ ನಿರ್ದೇಶಕರ ಅಹಂಕಾರಗಳನ್ನು ತೋರಿಸಿದ್ದಾರೆ ಕಾರಂತ್. ಅಬ್ಬೇಪಾರಿಯಾಗಿದ್ದ ನಿರ್ದೇಶಕ ಒಂದು ಹಂತಕ್ಕೆ ಹೋದ ಮೇಲೆ ಹೇಗಾಗುತ್ತಾನೆ? ನಿರ್ಮಾಪಕರು ಯಾವ ರೀತಿ ನಿರ್ದೇಶಕರನ್ನು ಬಳಸಿಕೊಳ್ಳುತ್ತಾರೆ? ಯಾವ ರೀತಿ ಪ್ರೋಡ್ಯುಸರ್‌ಗಳನ್ನು ಕ್ಯಾಚ್ ಹಾಕೋಬೇಕು.. ಹೀಗೆ ಕೆಲವೊಂದಿಷ್ಟು ಆಸಕ್ತಿಕರ ವಿಷಯಗಳಿವೆ. ಸಿನಿಮಾ ಮೇಕಿಂಗ್ ಬಗ್ಗೆ ಅಷ್ಟೇನೂ ಹೇಳುವಂತಿಲ್ಲ. ಹಾಡುಗಳು ಮತ್ತು ಹಿನ್ನೆಲೆ ಸಂಗೀತ ನೀಡಿರುವ ರಾಜೇಶ್ ರಾಮನಾಥ್ ತಮ್ಮ ಮಿತಿಯಲ್ಲೇ ಕೆಲಸ ಮಾಡಿವೆ. ಜೆ.ಜಿ.ಕೃಷ್ಣ ಅವರ ಛಾಯಾಗ್ರಹಣ ಇಷ್ಟರಲ್ಲಿ ಇನ್ನೇನ್ ಮಾಡೋಕೆ ಸಾಧ್ಯ ಎನ್ನುವಂತಿದೆ. - ಮಲ್ಲಿಕಾರ್ಜುನ್ ತಿಪ್ಪಾರ್