ಜೋಕು, ಸಸ್ಪೆನ್ಸುಗಳ ಜಂಕ್ಷನ್ ಅಷ್ಟೂ ಜೋಕುಗಳನ್ನು ಎಡಿಟ್ ಮಾಡಿ ತೆಗೆದರೆ, ಪ್ಯಾರ್ಗೆ ಆಗ್ಬುಡಲು ಅರ್ಧ ತಾಸು ಸಾಕಿತ್ತು. ಆದರಿದು ಹಾಸ್ಯಪ್ರಧಾನ ಚಿತ್ರ. ಕೋಮಲ್ ಇರುವ ಕಾರಣಕ್ಕೆ ಜೋಕುಗಳು ಜರೂರು. 'ಮುಂಬೈ ಪುಣೆ ಮುಂಬೈ' ಮರಾಠಿ ಚಿತ್ರದ ಕಥೆ ಸಾಲದಾಗಿ, ಇಂಟರ್ನೆಟ್‌ನಿಂದಲೂ ಕೆಲವು ಜೋಕುಗಳನ್ನು ಸಾಲ ತಂದ ನಿರ್ದೇಶಕರನ್ನು ಇಲ್ಲಿ ನಿಜವಾಗಿ ಕೈಹಿಡಿದಿದ್ದು ಕೇಶವಾದಿತ್ಯ ಅವರ ಲವಲವಿಕೆಯ ಸಂಭಾಷಣೆ. ಪರಿಣಾಮಕಾರಿ ನಟನೆ ಹುಡುಕಿ. ಸಿಗದು. ಎದ್ದುಬಂದ ಮೇಲೂ ಗೀತೆಗಳು ಗಿಟಾರ್ ಬಾರಿಸುತ್ತವಾ ಕೇಳಿ. ಕಾಡವು. ಮೈಸೂರಿನ ಸುತ್ತಮುತ್ತ ನಿಂತ ಕ್ಯಾಮೆರಾ. ಮರ ಹತ್ತಿ ಕಂಡಿದ್ದರೂ ಇದಕ್ಕಿಂತ ಚೆನ್ನಾಗಿ ಕಾಣಿಸುತ್ತಿತ್ತೇನೋ ಮೈಸೂರು! ಆದರೆ, ಕಡಿಮೆ ದುಡ್ಡಿಗೆ ತೆಗೆದ ಕ್ವಾಲಿಟಿ ಚಿತ್ರಗಳ ಸಾಲಿಗೆ ಸೇರಲು 'ಪ್ಯಾರ್ಗೆ ಆಗ್ಬುಟೈತೆ' ಪರದಾಡದು. ಚಿತ್ರದ ಕೊರತೆಗಳೆಲ್ಲ ನಗುವಲ್ಲಿ ಲೀನವಾದರೆ ಅದಕ್ಕೆ ಪ್ರೇಕ್ಷಕನ ಹಗುರ ಮನಸ್ಸನ್ನು ಹೊಣೆಮಾಡಿ. ನಿರ್ದೇಶಕ 'ಕವಿನ್ ಬಾಲ್‌' ಎಸೆದ ಈ ಪ್ರಯೋಗಕ್ಕೆ ಪ್ರೇಕ್ಷಕನ ಮೊಗದಿಂದ ನಗೆ ಔಟಾದರೆ ಸಾಕಿತ್ತು. ಅದು ಸಾಕಷ್ಟಾಗುತ್ತದೆ. ಕಥೆ ಕಾಲಿಡುವುದು ರೇಲ್ವೆ ಸ್ಟೇಶನ್ನಿನಲ್ಲಿ. ಬೆಂಗಳೂರಿನ ಹುಡುಗಿ, ಅಮ್ಮ ಸೂಚಿಸಿದ ಹುಡುಗನನ್ನು ಕಾಣಲು ಮೈಸೂರಿಗೆ ಬರುತ್ತಾಳೆ. ಸ್ಮಾರ್ಟಾಗಿ ಸ್ಮಾರ್ಟ್‌ಫೋನು ಹಿಡಿದರೂ ಕ್ಷುದ್ರಗ್ರಹದಂತೆ ಬಂದಪ್ಪಳಿಸುವ ಅಕುಲ್ ಬಾಲಾಜಿ, ನಾಯಕಿಯ ಮೊಬೈಲನ್ನು ಮೂರು ಪೀಸು ಮಾಡಿ ಮರೆಯಾಗುತ್ತಾನೆ. ಅಲ್ಲಿಂದ ಅವಳಿಗೆ ಎಲ್ಲ ರೀತಿಯ ಕರೆಗಳೂ ಬಂದ್. ಸಂಜೆ ಟ್ರೈನಿಗೆ ವಾಪಸಾಗಬೇಕು. ಈ ಮಧ್ಯ ಹುಡುಗನನ್ನೂ ಕಂಡು, ಒಂದಿಷ್ಟು ಮಾತಾಡಬೇಕು. ಆಗವಳಿಗೆ ಸಿಗುವುದು ನಾಯಕನ ನೆರವು. ಅವನ ಸ್ನೇಹಿತನ ಮೊಬೈಲಂಗಡಿಯಲ್ಲಿ ಮೊಬೈಲನ್ನು ರಿಪೇರಿಗಿಟ್ಟು ನಾಯಕನೊಟ್ಟಿಗೆ ಮೈಸೂರು ಸುತ್ತುತ್ತಾಳೆ. ಈ ನಡುವೆ ಮೈಸೂರು ಮೋಸದ ನಗರಿ ಅಂತ ಬಿಂಬಿಸಲು ನಾನಾ ಸೀನುಗಳ ಮೇಳ. ಆ ಆರೋಪವನ್ನು ಸನ್ನಡತೆ ಮೂಲಕ ನಿರ್ನಾಮ ಮಾಡುವ ನಾಯಕ, ಆಕೆಯನ್ನು ನಗಿಸುತ್ತಲೇ ಸಾಗುತ್ತಾನೆ. ಕೆಲವೊಮ್ಮೆ ಪ್ರೇಕ್ಷಕನಿಗೆ ಬರದ ನಗು ನಾಯಕಿಯಲ್ಲಿ ಬಂತಲ್ಲ ಅಂತನ್ನಿಸುವಾಗಲೇ ಇನ್ನೊಂದು ನಗು ಬಂದು ಪ್ರೇಕ್ಷಕನ ತುಟಿ ಮೇಲೆ ಕೂರುತ್ತದೆ. ನಾಯಕನ ಮೊಬೈಲಿನಿಂದ ಹುಡುಗನ ಮೊಬೈಲಿಗೆ ಎಷ್ಟು ಸಲ ಕರೆಮಾಡಿದರೂ ಬ್ಯುಸಿ ಅಂತಲೇ ಬರುವುದರಲ್ಲೂ ಸಸ್ಪೆನ್ಸ್ ಇದೆ. ತಾನು ನೋಡಲು ಬಂದಿರುವುದು ಇದೇ ಹುಡುಗನನ್ನು ಅಂತ ಆಕೆಗೆ ಗೊತ್ತಾಗಲು ಕ್ಲೈಮ್ಯಾಕ್ಸೇ ಬರಬೇಕು. ಹಾಡೊಂದು ಬಿಟ್ಟರೆ ಇಡೀ ಫಿಲ್ಮಿನಲ್ಲಿ ಒಂದೇ ಕಾಸ್ಟ್ಯೂಮಿನಲ್ಲಿ ರೆಡ್ಡಿಶ್ ಆಗಿರುವ ನಾಯಕಿ ಪ್ರಾರ್ಥನಾ ಸನ್ನಿವೇಶಕ್ಕೆ ತಕ್ಕಂತೆ ಮುಖಭಾವ ಹೊರಳಿಸುವುದನ್ನು ನೋಡಿಯೇ ಪುಳಕಗೊಳ್ಳಬೇಕು. ರಚನಾ ಮೌರ್ಯ ಅವರ ಐಟಂ ಹೆಜ್ಜೆಗಳು ಆ ಕ್ಷಣವೇ ಅಳಿಸಿಹೋಗುತ್ತವೆ. 'ಆಟೋ ಅಚ್ಚು'ವಾದ ಟೆನಿಸ್ ಕೃಷ್ಣರ ರಿಕ್ಷಾಪ್ರಸಂಗಗಳು ಅಚ್ಚುಮೆಚ್ಚು. ಚೀನೀ ಚೆನ್ನಪ್ಪನಾದ ಮಾಸ್ಟರ್ ಆನಂದ್ ಅವರ ಪೆದ್ದುತನವನ್ನು ಮೊಬೈಲಿನಲ್ಲಿ ಸೆರೆಹಿಡಿಯಲಡ್ಡಿಯಿಲ್ಲ. ಈ ಚಿತ್ರಕ್ಕೆ ಟೈಟಲ್ ಸಿಕ್ಕಿದ್ದು ಹಿಂದಿನ ಚಿತ್ರದ ಜನಪ್ರಿಯ ಹಾಡಿನಿಂದ. ಆದರೆ 'ಪ್ಯಾರ್ಗೆ ಆಗ್ಬುಟೈತೆ'ಯಲ್ಲಿ ಅಂಥದ್ದೇನೂ ರಂಜಿಸುವ ಹಾಡುಗಳಿಲ್ಲದೆ ಇರುವುದರಿಂದ ಕೋಮಲ್‌ರ ಮುಂದಿನ ಚಿತ್ರಕ್ಕೆ ಟೈಟಲ್ ಸಿಗುವುದು ಕಷ್ಟ! ಪಂಚಿಂಗ್ ಡೈಲಾಗ್‌ಗಳ ಕೋಮಲ್ ಕಾಣಿಸಿದ್ದಾರೆ. ನಟ ಕೋಮಲ್ ಇಲ್ಲಿ ಮಿಸ್ಸಿಂಗ್. ಲಾಸೇನೂ ಆಗದು. ಬೇಕಾದರೆ ನೀವೂ ಒಮ್ಮೆ ನೋಡಿ ಮತ್ತು ಹುಡುಕಿ. - ಕೀರ್ತಿ ಕೋಲ್ಗಾರ್