'ಸಾಯಿ ಗುಡಿ'ಗೆ ಪ್ರಶಸ್ತಿಯೇ ಗುರಿ! ಕೆಲವು ಚಿತ್ರಗಳನ್ನು ಪ್ರೇಕ್ಷಕರು ನೋಡಬೇಕೆಂಬ ಷರತ್ತು ಇಲ್ಲ. ಆ ಚಿತ್ರ ಮಾಡಿದ ನಿರ್ದೇಶಕ, ನಿರ್ಮಾಪಕ, ನಟವರ್ಗಕ್ಕೂ ಅಷ್ಟೇ- ಯಶಸ್ವಿ ಒಂದು ವಾರ, 25, 50, 100ನೇ ದಿನಗಳ ಸಂಭ್ರಮದ ಪೋಸ್ಟರ್‌ಗಳನ್ನು ಹಾಕಿಕೊಳ್ಳುವ ಉಮೇದು ಬೇಕಿಲ್ಲ! ಯಾಕೆಂದರೆ ಅವರು ಮೊದಲೇ ನಿರ್ಧರಿಸಿರುತ್ತಾರೆ. 'ಕಥೆ ಚೆನ್ನಾಗಿದ್ದರೂ ಇಂಥ ಚಿತ್ರಗಳಿಗೆ ಪ್ರೇಕ್ಷಕರು ಬರಲ್ಲ, ಚಿತ್ರಮಂದಿರಗಳು ಸಿಗಲ್ಲ' ಎಂದು. ಒಂದು ವೇಳೆ ಪ್ರೇಕ್ಷಕ ಬಂದು ನೋಡಿದರೆ ಅದು ಆ ಚಿತ್ರಕ್ಕೆ ಸಿಗುವ ಬೋನಸ್. ಯಾಕೆಂದರೆ ರಾಜ್ಯ ಪ್ರಶಸ್ತಿ, ಇಲ್ಲವೆ ಸಬ್ಸಿಡಿ ರೂಪದಲ್ಲಿ ಮೈನ್ ಪೇಮೆಂಟ್ ಬರುವ ಗ್ಯಾರಂಟಿ ಕಾರ್ಡ್ ಇದೆಯಂತೆ. ಜನ ನೋಡದ ಚಿತ್ರಗಳನ್ನು ಈ ಮಂದಿ ಮಾಡುವುದು ಯಾಕೆ? ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿತಲ್ಲವೇ!? ಒಳ್ಳೆಯ ಕಥೆ ಇದ್ದು, ಸಾಮಾಜಿಕ ಪರಿಣಾಮ ಬೀರುವಂಥ ಅಂಶಗಳಿದ್ದರೂ 'ಪ್ರೇಕ್ಷಕ ನೋಡಲ್ಲ ಬಿಡಿ' ಎನ್ನುವ ಮನಸ್ಥಿತಿಯಲ್ಲಿ ಮೂಡಿಬಂದಿರುವ ಚಿತ್ರ 'ಗರ್ಭದ ಗುಡಿ'. ಹೆಸರು ನೋಡಿ ಇದು ಭಕ್ತಿಪ್ರಧಾನ ಚಿತ್ರ ಎಂದುಕೊಳ್ಳಬೇಡಿ. ಇಲ್ಲಿ 'ಗರ್ಭ' ಎನ್ನುವ ಪದವನ್ನು ಪ್ರತ್ಯೇಕಿಸಿ. ಹೌದು, ಹೆಣ್ಣು ಭ್ರೂಣ ಹತ್ಯೆಯನ್ನು ವಿರೋಧಿ, ಇಂಥ ಪಾಪ ಕೃತ್ಯಗಳಿಂದ ಮುಂದೊಂದು ದಿನ ಹೆಣ್ಣು ಸಂತತಿಯೇ ಇರಲ್ಲ ಎನ್ನುವ ಎಚ್ಚರಿಕೆ ಕೊಡುವ ನಿಟ್ಟಿನಲ್ಲಿ ಸಿದ್ಧವಾಗಿರುವ 'ಗರ್ಭದ ಗುಡಿ'ಯ ಪೂಜಾರಿ ಓಂ ಸಾಯಿಪ್ರಕಾಶ್. ಹೆಣ್ಣಿನ ಕಣ್ಣೀರಿನಲ್ಲಿ ಆಗಾಗ ನೆನೆಯುವ ನಿರ್ದೇಶಕ ಸಾಯಿಪ್ರಕಾಶ್, 'ಗಂಡನ ಮನೆ'ಯಲ್ಲಿ ಹೆಣ್ಣಿನ ಕಷ್ಟಗಳಿಗೆ ಕ್ಯಾಮೆರಾ ಹಿಡಿದವರು. 'ತವರಿನ ತೊಟ್ಟಿಲು' ಕಟ್ಟಿ ಅದರಲ್ಲಿ 'ದೆವರ ಕೊಟ್ಟ ತಂಗಿ'ಯನ್ನು ಉಯ್ಯಾಲೆ ತೂಗಿದವರು. ಆದರೆ ಹೇಗಾದರೂ ಮಾಡಿ ತನ್ನ ಕೆರಿಯರ್‌ನಲ್ಲಿ ನೂರು ಚಿತ್ರಗಳನ್ನು ಮಾಡಬೇಕೆಂಬ ಯೋಚನೆ ಯಾವಾಗ ಬಂತೋ ಗೊತ್ತಿಲ್ಲ, 'ಗರ್ಭದ ಗುಡಿ' ಕಟ್ಟಿದ್ದಾರೆ. ಅನುಪ್ರಭಾಕರ್, ಮೋಹನ್, ರಮೇಶ್ ಭಟ್, ಪದ್ಮವಾಸಂತಿ, ಪದ್ಮಜಾ ರಾವ್, ಸಿಹಿಕಹಿ ಚಂದ್ರು, ಟೆನ್ನಿಸ್ ಕೃಷ್ಣ, ಶಶಿಕಲಾ, ಚಂದ್ರಕಲಾ ಮೋಹನ್, ಗಿರಿಜಾ ಲೋಕೇಶ್, ಎಂ. ಎಸ್. ಉಮೇಶ್ ಮತ್ತಿತರರು 'ಸಾಯಿ ಗುಡಿ'ಯ ದೇವರು. ಪ್ರೇಕ್ಷಕರೇ ಇವರ ಪಾಲಿಗೆ ಭಕ್ತರು. ಭ್ರೂಣ ಹತ್ಯೆ ಮಾಡುವುದು ಅಪರಾಧ ಎಂದು ಹೇಳುವ ಎಷ್ಟೇ ಕಾನೂನುಗಳಿದ್ದರೂ ನಿತ್ಯ ಹೆಣ್ಣು ಕೂಸುಗಳನ್ನು ಕಾಣೆಯಾಗಿಸುವ ಕೆಲಸ ಮಾತ್ರ ನಡೆಯುತ್ತಲೇ ಇದೆ. ಸಮಾಜ ಎಷ್ಟೇ ಮುಂದುವರೆದರೂ ಹೆಣ್ಣನ್ನು ಗೌರವಿಸುವ ಮನಸ್ಥಿತಿ ಬೆಳೆಸಿಕೊಂಡಿಲ್ಲ ಎನ್ನುವ 'ಗರ್ಭದ ಗುಡಿ', ಗರ್ಭದಲ್ಲೇ ಲಿಂಗ ಪತ್ತೆ ಮಾಡುವ ಮೆಡಿಕಲ್ ಕ್ರೈಮ್ ಅನ್ನು ಕೂಡ ತೆರೆದಿಡುತ್ತದೆ. ಗಂಡು ಬೇಕು, ಹೆಣ್ಣು ಬೇಡ ಎಂದವನ ಬದುಕು ಮುಂದೆ ಬೀದಿಗೆ ಬರುವುದು, ಹೆಣ್ಣು ಹೆತ್ತವನು ಹುಚ್ಚನಾಗುವುದು, ತನ್ನ ಅಪ್ಪನಿಂದಲೇ ತಿರಸ್ಕರಕ್ಕೊಳಗಾದ ಹೆಣ್ಣು ಮಗಳು ಸಮಾಜ ಸೇವಕಿಯಾಗುವುದು... ಇವು ಚಿತ್ರದ ಪ್ರಧಾನ ಅಂಶಗಳು. 60 ಎಂಎಂನಲ್ಲಿ ರೀಲು ಸುತ್ತಿರುವ ನಿರ್ದೇಶಕ ಸಾಯಿಪ್ರಕಾಶ್, ಕಾಟಾಚಾರಕ್ಕೆ ಸ್ವಪ್ನ ಚಿತ್ರಮಂದಿರದಲ್ಲಿ ಬಿಡುಗಡೆ ಮಾಡಿದ ನಿರ್ಮಾಪಕರಿಗೆ ಚಿತ್ರವನ್ನು ಜನ ನೋಡದಿದ್ದರೂ ಪರ್ವಾಗಿಲ್ಲ. ಒಂದು ರಾಜ್ಯ ಪ್ರಶಸ್ತಿ ಬರಲಿ ಎನ್ನುವ ಧಾವಂತ ಮಾತ್ರ ಚಿತ್ರದುದ್ದಕ್ಕೂ ಎದ್ದು ಕಾಣುತ್ತದೆ. ಸಾಯಿ ಗುಡಿಗೆ ಪ್ರಶಸ್ತಿಯೇ ಗುರಿ. ಹೀಗಾಗಿ ಇಲ್ಲಿ ಪಾತ್ರಗಳ ಅಭಿನಯ, ಕಥೆ, ಸಂಭಾಷಣೆ, ಸಂಗೀತ ಯಾವುದರ ಬಗ್ಗೆಯೂ ಚಕಾರ ಎತ್ತದಿರುವುದೇ ಒಳ್ಳೆಯದು. ಸಾಯಿ ಗುಡಿಗೆ ಗಂಟೆ ಕಟ್ಟಲಾಗುವುದೇ! - ಆರ್.ಕೇಶವಮೂರ್ತಿ