ಪ್ರೀತಂ ಗಣೇಶಂ ಸುಂದರಂ ಚಿತ್ರದ ಹೆಸರಿಗೆ ಮ್ಯಾಚ್ ಆಗುವಂತೆ ರಂಗು ರಂಗು ಬಟ್ಟೆ ತೊಟ್ಟು ಬೀಚಲ್ಲಿ ಬೀಸುತ್ತಿರುವ... ಚಿತ್ರದ ಹೆಸರಿಗೆ ಮ್ಯಾಚ್ ಆಗುವಂತೆ ರಂಗು ರಂಗು ಬಟ್ಟೆ ತೊಟ್ಟು ಬೀಚಲ್ಲಿ ಬೀಸುತ್ತಿರುವ ಕೂಲ್ ಬ್ರೀಝ್ ನಡುವೆ ನಡೆದುಬರುವ ನಾಯಕ ಗಣೇಶ್ ಕೈಯಲ್ಲಿ ಕೂಡಾ ರಂಗು ತುಂಬಿರಲಿ ಅಂತ ಬ್ರೀಝರ್ ಕೊಟ್ಟಿದ್ದಾರೆ, ಆದರೂ ಈ ವರ್ಣರಂಜಿತ ನಾಯಕ ರಂಗೇನಹಳ್ಳಿಯವನಲ್ಲ, ಶ್ರೀಮಂತನೂ ಅಲ್ಲ! ಬೆಂಗಳೂರಿನ ಪ್ರತಿಷ್ಟಿತ ಹೋಟೆಲೊಂದರಲ್ಲಿ ಶೆಫ್, ಅಡುಗೆ ಭಟ್ಟ. ಈತನ ಕುಡಿತ ಬ್ರೀಝರ್ ಗೆ ಮಾತ್ರ ಸೀಮಿತವಾಗಿಲ್ಲ. ಬಿಯರ್ ಬಾಟ್ಲಿ ಹಿಡಿದು ಗೋವಾ ಬೀಚಿನಲ್ಲಿ ಪ್ರೀತಿ ಕುರಿತು ಡಯಲಾಗು ಹೇಳುವಲ್ಲಿಂದ ಪ್ರೇಕ್ಷಕರಿಗೆ ಓಪನ್ ಆಗುವ ಚಿತ್ರ ಫ್ಲ್ಯಾಷ್ ಬ್ಯಾಕ್ ನೊಳಗೆ ಇನ್ನೊಂದು ಫ್ಲ್ಯಾಷ್ ಬ್ಯಾಕ್ ಹೇಳಿ ಕೊನೆಗೆ ಪ್ರಾರಂಭದಲ್ಲಿದ್ದ ಬೀಚಿಗೆ ಚಿತ್ರದ ಕತೆ ತಿರುಗಿ ಬಂದು ಮುಂದುವರೆಯುತ್ತದೆ. ಹೋಟೆಲ್ ಓನರ್ ನ ಮಗಳ ಜೊತೆ ಮದುವೆ ನಿಶ್ಚಯವಾಗಿದ್ದ ನಾಯಕ ಮದುವೆ ಮುಂಚೆ 'ತೀರ್ಥ'ಯಾತ್ರೆ ಮಾಡುವುದಾಗಿ ಸತ್ಯವಾದ ಸತ್ಯ ಹೇಳಿ ಗೋವಾಗೆ ಬರುತ್ತಾನೆ, ಅಲ್ಲಿ ಮೊದಲ ನಾಯಕಿ ರಚಿತಾಗೆ ಲೈನು ಹೊಡೆಯುವ ಕತೆಯನ್ನು ಮೊದಲ ಫ್ಲ್ಯಾಷ್ ಬ್ಯಾಕಿನಲ್ಲಿ ಹೇಳಲಾಗಿದೆ. ಆ ಕತೆಯಲ್ಲೇ ಬೀಚ್ ನಲ್ಲಿ ಹೋಟೆಲ್ ನಡೆಸುತ್ತಿರುವ ರಂಗಾಯಣ ರಘುಗೆ ನಾಯಕ ಓನರ್ ಮಗಳನ್ನು ಶ್ರೀಮಂತಿಕೆಯ ಆಸೆಗೆ ಪಟಾಯಿಸಿದ ಕತೆಯನ್ನು ಇನ್ನೊಂದು ಫ್ಲ್ಯಾಷ್ ಬ್ಯಾಕ್ ಮೂಲಕ ಹೇಳಿದ್ದಾರೆ. ನಾಯಕನ ಕಲರ್ ಫುಲ್ ದುನಿಯಾ ತೆರೆದುಕೊಳ್ಳುವುದೇ ಗೋವಾದಲ್ಲಿ. ನಮ್ಮ ನಟಿ ಮಣಿಯರು ಟೂ ಪೀಸು ತೊಡಲು ನಕರಾ ಮಾಡಿದರೂ ನಿರಾಸೆ ಹೊಂದಬೇಡಿ, ಆ ಕೊರತೆಯನ್ನು ನೀಗಿಸಲು ಫಾರಿನ್ ಹುಡುಗಿಯರಿದ್ದಾರೆ ಚಿತ್ರದಲ್ಲಿ. ಚಿತ್ರದ ಕಾಮಿಡಿ ತುಂಬಾ ಕಿಲಾಡಿತನದಿಂದ ಕೂಡಿದೆ, ಕೆಲವೊಮ್ಮೆ ಅದು ಎರಡೆರಡು ಅರ್ಥ ಕೊಡುವುದರಿಂದ ಯಾವುದು ಬೇಕೋ ಅದನ್ನು ಪಡೆದುಕೊಳ್ಳುವ ಸ್ವಾತಂತ್ರ್ಯ ಪ್ರೇಕ್ಷಕರಿಗೆ. ಗಣೇಶ್ ಚಿತ್ರದಲ್ಲಿ ಸ್ಲಿಮ್ಮಾಗಿ ಟ್ರಿಮ್ಮಾಗಿ ಕಾಣಿಸುತ್ತಾರೆ. ನಟರೆಲ್ಲರೂ 6 ಪ್ಯಾಕ್ ಬೆಳೆಸಿದರೆ, ಗಣೇಶ್ 4 ಪ್ಯಾಕು ಬೆಳೆಸಿದ್ದಾರೆ.. ಅದಕ್ಕೇ ಫುಲ್ ಬಾಡಿ ತೋರಿಸದೆ ಶರ್ಟ್ ನ ಟಾಪ್ ೪ ಬಟನ್ ಗಳನ್ನು ಮಾತ್ರವೆ ತೆರೆದು ಅರೆ ಮೈ ತೋರಿಸಿರುವುದು. ಗಣೇಶರ ಕಾಮಿಡಿ ಟೈಮಿಂಗ್ ಚೆನ್ನಾಗಿದೆ, ಅಭಿನಯವೂ ರುಚಿಗೆ ತಕ್ಕಷ್ಟು ಉಪ್ಪು ಎಂಬಂತಿದೆ, ಅವರ ಹಿಂದಿನ ಚಿತ್ರಗಳಿಗೆ ಹೋಲಿಸಿದರೆ ದಿಲ್ ರಂಗೀಲಾ ಚೆನ್ನಾಗಿದೆ. ಚಿಕ್ಕ್ ಚಡ್ಡಿ ತೊಟ್ಟು ಮುದ್ದಾಗಿ ಕಾಣುವ ಕನ್ನಡ ನಾಯಕಿಯರ ಸಾಲಿಗೆ ಚಿತ್ರದ ನಾಯಕಿ ರಚಿತಾ ರಾಮ್ ಸೇರ್ಪಡೆಗೊಂಡಿದ್ದಾರೆ, ಎಣ್ಣೆ ಹೊಡೆಯುವ, ಮಾತಿಗೆ ತಪ್ಪಿದರೆ ತಪರಾಕಿ ನೀಡುವ ಗುಳಿಗೆನ್ನೆಯ ಹುಡುಗಿಯಾಗಿ ಅವರ ಅಭಿನಯ ಜಸ್ಟ್ ಪಾಸ್. ಎರಡನೇ ನಾಯಕಿ ಪ್ರಿಯಾಂಕ ರಾವ್, ಅಚ್ಯುತ್ ಕುಮಾರ್, ರಂಗಾಯಣ ರಘು, ದತ್ತಣ್ಣ ತಮ್ಮ ಪಾತ್ರಳಿಗೆ ನ್ಯಾಯ ಒದಗಿಸಿದ್ದಾರೆ. ಹಾಲಿವುಡ್ ನ "ಎಟರ್ನಲ್ ಸನ್‌ಶೈನ್ ಆಫ್ ಎ ಸ್ಪಾಟ್‌ಲೆಸ್ ಮೈಂಡ್', ಕನ್ನಡದ 'ಲೈಫು ಇಷ್ಟೇನೆ' ಚಿತ್ರಗಳ ನಾಯಕಿಯರಂತೆ ಇಲ್ಲಿನ ನಾಯಕಿಯೂ ರಾತ್ರಿ ನಿರ್ಜನ ರೋಡ್ ಮೇಲೆ, ನೆಲದ ಮೇಲೆ ಮಲಗಿ ಆಕಾಶ ದಿಟ್ಟಿಸುವುದು ಕಾಕತಾಳೀಯವಷ್ಟೆ! ಫ್ಲ್ಯಾಷ್ ಬ್ಯಾಕುಗಳ ನಂತರ ಗೋವಾದಿಂದ ಬೆಂಗಳೂರಿಗೆ ವಾಪಾಸಾಗುವ ನಾಯಕನ ಬದುಕಿನಲ್ಲಿ ಅನಿರೀಕ್ಷಿತವಾದದ್ದು ನಡೆಯುತ್ತದೆ, ಗೋವಾದಲ್ಲಿ ಮಾಡಿದ್ದ ಅವಾಂತರಗಳು ಮನೆಗೇ ಹುಡುಕಿಕೊಂಡು ಬರುತ್ತವೆ, ಆಗ ಉಂಟಾಗುವ ಪಜೀತಿ ನೋಡಲು ಮಜ. ಛಾಯಾಗ್ರಾಹಕ ವೇಣುರ ತುಂಟ ಕಣ್ಣು ಕೆಲ ಕಡೆ ಟಾಪ್ ಆಂಗಲ್ ನಲ್ಲಿ ತಂಟೆ ಮಾಡಿದ್ದರೂ, ಅವರ ಛಾಯಾಗ್ರಹಣ ಅದ್ಭುತ ಎನ್ನಲಾಗದು. ಬೀಚ್ ಬದಿಯ ಒಂದು ಸೀನಿನಲ್ಲಿ ಕ್ಯಾಮೆರವನ್ನು ಬಲೂನ್ ಗೆ ಕಟ್ಟಿ ಹಾರಿ ಬಿಟ್ಟು ಮೇಲಿಂದ ಶೂಟ್ ಮಾಡಿರುವ ಪ್ರಯೋಗ ಕೊಂಚ ಅಲುಗಾಟದಿಂದ ಯಶಸ್ವಿಯಾಗಿಲ್ಲ. ಚಿತ್ರದ ಬಹಳಷ್ಟು ಕಡೆ ಅನವಶ್ಯಕವಾಗಿ ಫಿಷ್ ಐ ಲೆನ್ಸ್ ಬಳಕೆ ಮಾಡಲಾಗಿದೆ. ಗೋವಾದಲ್ಲಿ ಚಿತ್ರೀಕರಣ ನಡೆಸಿದ್ದರೂ ಅಲ್ಲಿನ ಅನೇಕ ರಮ್ಯಾದ್ಭುತ ಲೊಕೇಶನ್ ಗಳು ಚಿತ್ರದಲ್ಲಿ ಮಾಯವಾಗಿದೆ. ಚಿತ್ರದ ಮೊದಲಾರ್ಧ ಚೆನ್ನಾಗಿ ಮೂಡಿ ಬಂದಿದ್ದು, ಅದರ ಕ್ರೆಡಿಟ್ಟು ಚಿತ್ರಕತೆ, ಸಂಭಾಷಣೆ ಮತ್ತು ಕಾಮಿಡಿಗೆ ಸಲ್ಲುತ್ತದೆ. ಕೊನೆಯಾರ್ಧ ಮೊದಲನೆಯದಕ್ಕೆ ಹೋಲಿಸಿದರೆ ಸಪ್ಪೆಯಾಗಿದೆ. ಇವೆಲ್ಲ ನ್ಯೂನತೆಗಳನ್ನು ಹೊರತುಪಡಿಸಿದರೆ ದಿಲ್ ರಂಗೀಲಾ ಅಚ್ಚುಕಟ್ಟಾದ ಚಿತ್ರ. ಕೊಟ್ಟ ಕಾಸಿಗೆ ಅರೆ ಮಜ್ಜಿಗೆ ನೀಡಿದ್ದಾರೆ ನಿರ್ದೇಶಕ ಪ್ರೀತಮ್ ಗುಬ್ಬಿ. -ಹರ್ಷವರ್ಧನ್ (ಕನ್ನಡಪ್ರಭ ಡಾಟ್ ಕಾಂ)