'ಕೃಷ್ಣ'ನ್ ಸ್ಟಾರ್ಟ್ ಸ್ಟೋರಿ ಖುಷಿ ಕೊಡುವ ಒಂದು ಹಾಡು, ಕಾಡುವ ಎರಡು ಹಾಡುಗಳು, ನೆನಪಿನಲ್ಲಿ ಉಳಿಯುವ ಸಂಗೀತ, ಅಬ್ಬಾ...! ಎನ್ನಿಸುವ ಸಾಹಸ ದೃಶ್ಯಗಳು, ಗುಟ್ಟು ಬಿಟ್ಟುಕೊಡದೆ ಆಗಾಗ ಎದುರಾಗುವ ತಿರುವುಗಳು, ಪೇಲವವಾಗಿ ಕಾಣುವ ನಾಯಕಿಯರು, ಮಿಂಚುವ ನಾಯಕ... ಹೊಸಬರ ಸಿನಿಮಾವೊಂದಕ್ಕೆ ಇಷ್ಟರ ಇನ್ನೇನು ಬೇಕು? ಏನೂ ಬೇಡ. ಇರೋದನ್ನೇ ಇನ್ನೂ ಚೆನ್ನಾಗಿ ಹದವಾಗಿ ಬೆರಸಬಹುದಿತ್ತು. ಆದರೆ ಬೆರೆಸುವ ಕೆಲಸ ಮಾತ್ರ ಇಲ್ಲಿ ಪಕ್ವಗೊಂಡಿಲ್ಲ. ಹಾಗಂತ ಕೆಟ್ಟ ಸಿನಿಮಾ ನೋಡಿದ್ದೇವೆಂಬ ಬೇಸರವಿಲ್ಲ. ಈಗ ಬರುತ್ತಿರುವ ಹಾಸ್ಯದ ಹೆಸರಿನ ಅಪಹಾಸ್ಯದ ಚಿತ್ರಗಳು, ಸ್ಟಾರ್‌ಗಿರಿಯ ನೆರಳಿನ ರಿಮೇಕ್ ಮಾಲುಗಳ ನಡುವೆ 'ಒಮ್ಮೆ ನೋಡಬಹುದು' ಎನ್ನುವ ಮೆಚ್ಚುಗೆಗೆ ಪಾತ್ರವಾಗುತ್ತದೆ 'ಮದರಂಗಿ' ಚಿತ್ರ. ನಿರ್ದೇಶಕ ಮಲ್ಲಿಕಾರ್ಜುನ ಮುತ್ತಲಗೇರಿ ಮೊದಲ ಪ್ರಯತ್ನದಲ್ಲಿ ತಕ್ಕಮಟ್ಟಿಗೆ ಯಶಸ್ಸು ಕಂಡಿದ್ದಾರೆ. ಹಾಗಂತ ಕಥೆ ತೀರಾ ಹೊಸದು, ಯಾರೂ ಹೇಳದ ಕಥೆಯನ್ನು ಹೇಳಿದ್ದಾರೆ ಎಂದರೆ ತಪ್ಪಾಗುತ್ತದೆ. ಪದವಿ ಮುಗಿಸಿ ಕೆಲಸವಿಲ್ಲದೆ ನಿರುದ್ಯೋಗಿರುವ ಮಗ, ಗಂಡನನ್ನು ಕಳೆದುಕೊಂಡಿರುವ ಅಮ್ಮ, ಮದುವೆ ವಯಸ್ಸಿಗೆ ಬಂದಿರುವ ತಂಗಿ, ಇವರ ಕುಟುಂಬಕ್ಕೆ ಆಸರೆಯಾಗಿದ್ದವನೇ ಮಾರಿಯಾಗುವುದು, ಯಾರೋ ಮಾಡಿದ ಕೊಲೆಗೆ ಇನ್ಯಾರೋ ಬಂಧನ, ನಾಯಕನ ಮೇಲೆ ಅಕ್ಕ, ತಂಗಿಯ ಪ್ರೀತಿ, ನಾಯಕಿಯ ತಂದೆಯಿಂದಲೇ ಹುಚ್ಚನಾಗುವ ನಾಯಕ, ಪೊಲೀಸರ ಪ್ರವೇಶ... ಹೀಗೆ ಪ್ರಮುಖ ಪಾತ್ರ, ತಿರುವುಗಳಲ್ಲಿ ಸಂಚರಿಸುವ 'ಮದರಂಗಿ', ಕೊನೆತನಕ ಎಲ್ಲೂ ಚಿತ್ರದ ನಿಜವಾದ ಗುಟ್ಟು ರಟ್ಟಾಗುವುದಿಲ್ಲ. ಬಹುಷಃ ಚಿತ್ರದ ನಿಜವಾದ ಸತ್ವ ಇದೇ ಇರಬೇಕು. ಹೀಗಾಗಿ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸುತ್ತ ಕೊನೆತನಕ ಕೂರಿಸುತ್ತದೆ. ಸಂಗೀತ ನಿರ್ದೇಶಕ ಅನೂಪ್ ಸೀಳಿನ್ ತಣ್ಣಗೆ ರಾಗಗಳ ಖದರ್‌ನ್ನು ಈ ಚಿತ್ರದ ಮೂಲಕ ಮತ್ತೊಮ್ಮೆ ಸಾಬಿತು ಮಾಡಿದ್ದಾರೆ. 'ಡಾರ್ಲಿಂಗ್ ಡಾರ್ಲಿಂಗ್...' ಹಾಡಿನಲ್ಲಿ ಕುಣಿಸುವ ಅನೂಪ್, ಮಳೆ ಹಾಡಿನಲ್ಲಿ ಕಾಡುತ್ತಾರೆ. ಗಿರೀಶ್ ಛಾಯಾಗ್ರಹಣ ಮತ್ತು ಶ್ರೀ ಕ್ರೇಜಿಮೈಂಡ್ಸ್ ಸಂಕಲನ ಮದರಂಗಿಗೆ ಹೊಸ ಬಣ್ಣ ಹಚ್ಚಿದೆ. ಕುರಿ ಪ್ರತಾಪ್, ಸಾಧು ಕಾಮಿಡಿ ಕ್ಲಿಕ್ ಆಗಿದೆ. ಹಾಡು, ಫೈಟು, ನೃತ್ಯದಲ್ಲಿ ನಾಯಕ ಕೃಷ್ಣ ಸೈ ಎನ್ನಿಸಿಕೊಂಡಿದ್ದಾರೆ. ಆದರೆ ಮತಿಭ್ರಮಣೆಯಾಗುವ ಪಾತ್ರದಲ್ಲಿ ಮತ್ತಷ್ಟು ತೀವ್ರತೆ ಬೇಕಿತ್ತು ಎನ್ನಿಸುತ್ತದೆ. ತನ್ನ ಮನೆಯಲ್ಲಿ ಕೆಲಸ ಮಾಡುವ ಹುಡುಗ ತನ್ನ ಮಗಳನ್ನೇ ಪ್ರೀತಿ ಮಾಡುವಾಗ ಸಿಟ್ಟಾಗುವ ಅಪ್ಪ ನಾಯಕನನ್ನು ದ್ವೇಷಿಸುವುದು ಕನ್ನಡ ಚಿತ್ರಗಳಲ್ಲಿ ಹೊಸದೇನು ಅಲ್ಲ. ಆದರೆ ಒಂದು ಸಣ್ಣ ಎಳೆಯೊಂದಿಗೆ ಟ್ವಿಸ್ಟ್‌ಗಳ ಮೂಲಕ ಚಿತ್ರವನ್ನು ಕಟ್ಟಿಕೊಡುವ ನಿಟ್ಟಿನಲ್ಲಿ ನಿರ್ದೇಶಕ ಪ್ರಾಮಾಣಿಕವಾದ ಶ್ರಮ ಹಾಕಿದ್ದಾರೆ. ಆದರೆ ಕಥೆಗೆ ಇನ್ನೂ ಏನೋ ಬೇಕಿತ್ತು ಎಂಬುದು ಪ್ರೇಕ್ಷಕರ ಬೇಸರ. ನಾಯಕಿಯರು ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿಲ್ಲ. 'ಡಾರ್ಲಿಂಗ್‌' ಹಾಡಿನಲ್ಲಿ ಕಾಣುವ ನಟಿ ನಕ್ಷಾ ಶೆಟ್ಟಿಯ ಉತ್ಸಾಹ ಬೇರೆ ಸಂದರ್ಭದಲ್ಲಿ ಇರಲ್ಲ. ಇದೆಲ್ಲದರ ನಡುವೆ ಒಳ್ಳೆಯ ಚಿತ್ರ ಮಾಡಬೇಕೆಂಬ ಕನಸಂತೂ ಚಿತ್ರತಂಡದಲ್ಲಿ ಎದ್ದು ಕಾಣುತ್ತದೆ. ಅವಿನಾಶ್, ವಿನಯಾ ಪ್ರಸಾದ್, ರೇಖಾ, ಶರತ್ ಲೋಹಿತಾಶ್ವ ಮುಂತಾದ ಪಾತ್ರಗಳು ಬಂದು ಹೋದರೂ ಮೋಸವಿಲ್ಲ. ಚಿತ್ರರಂಗದ ಪ್ರವೇಶಕ್ಕೆ ಸ್ಟಾರ್ಟ್ ಹೇಳಿರುವ ನಾಯಕ ಕೃಷ್ಣನಿಗೆ 'ಮದರಂಗಿ' ಗ್ರೀನ್ ಸಿಗ್ನಲ್. - ಆರ್. ಕೇಶವಮೂರ್ತಿ