೧೦ ವರ್ಷದ ಹಿಂದಿನ ರಂಗನ್ ಸ್ಟೈಲ್! ಪೋಸ್ಟರ್ ಮೇಲೆ 'ಆರೋಗ್ಯಕ್ಕೆ ಹಾನಿಕರ' ಎಂದು ಬರೆಸಿದರೆ ಹೇಗೆ!? ಎಂಬ ಚಿಂತನೆ.. ಚಿತ್ರ ವಿಮರ್ಶಕರು ಅಪಾಯಕಾರಿ ಚಿತ್ರಗಳ ಕುರಿತು ಎಷ್ಟು ಮನವಿ ಮಾಡಿದರೂ ಆ ಚಿತ್ರವನ್ನು ನೋಡಲು ಕೆಲವರಾದರೂ ಚಿತ್ರಮಂದಿರಕ್ಕೆ ತೆರಳುತ್ತಾರೆ, ಮನೆ ಮುಂದೆ ತನ್ನ ಪಾಡಿಗೆ ಹೋಗುತ್ತಿದ್ದ ಶನಿಯನ್ನು ಕರೆದು ಪಕ್ಕದಲ್ಲಿ ಕೂರಿಸಿಕೊಳ್ಳುವಂಥವರು ಈ 'ಕೆಲವರು'. ಸಿಗರೇಟು ಸೇದುವುದನ್ನು ಜನ ಬಿಡುತ್ತಾರೋ ಇಲ್ಲವೋ ಪ್ಯಾಕಿನ ಮೇಲೆ 'ಆರೋಗ್ಯಕ್ಕೆ ಹಾನಿಕರ' ಎಂದು ಸರಕಾರದವರಂತೂ ಬರೆಸಿರುತ್ತಾರೆ. ಹಾಗೆಯೇ ಚಲನಚಿತ್ರಗಳಿಗೆ ಗ್ರೇಡ್ ಕೊಡುವಂತೆ ಇನ್ನು ಮುಂದೆ ಚಿತ್ರದ ಪೋಸ್ಟರ್ ಗಳ ಮೇಲೆ 'ಆರೋಗ್ಯಕ್ಕೆ ಹಾನಿಕರ' ಎಂದು ಬರೆಸಿದರೆ ಹೇಗೆ!? ಎಂಬ ಚಿಂತನೆ ಮೂಡಿಸುವ ಚಿತ್ರ 'ರಂಗನ್ ಸ್ಟೈಲ್'. ಈ ಚಿತ್ರ ಪ್ರದರ್ಶನಗೊಳ್ಳುತ್ತಿರುವ ಚಿತ್ರಮಂದಿರದ ಸುತ್ತ ಮುತ್ತ ಅಪಾಯಕಾರಿ ವಲಯವೆಂದು ಘೋಷಣೆ ಮಾಡಿದಲ್ಲಿ ಹೇಗಿರಬಹುದು ಎಂಬುದು ಪ್ರೇಕ್ಷಕನ ತರ್ಕ. ಇಂಥಹ ಒಂದು ಚಿತ್ರವನ್ನು ನಿರ್ದೇಶಿಸಿದ ಶ್ರೇಯಸ್ಸು ಪ್ರಶಾಂತ್ ರಿಗೆ ಸಲ್ಲಬೇಕು! ನಿರ್ದೇಶಕ ಪ್ರಶಾಂತ್ ರ ನಿರ್ದೇಶನ ಕೌಶಲ್ಯ, ಚಾಕಚಕ್ಯತೆ ಚಿತ್ರದ ತುಂಬಾ ಆವರಿಸಿಕೊಂಡು ಪ್ರೇಕ್ಷಕನನ್ನು ಒಂದು ಕ್ಷಣವೂ ಪ್ರಶಾಂತವಾಗಿರಲು ಬಿಟ್ಟಿಲ್ಲ. ಅತ್ಯಂತ ಬಾಲಿಶ ಟ್ರ್ಯಾಜಿಕ್ ಪ್ರೇಮ ಕತೆಯನ್ನು ಚಿತ್ರ ಹೊಂದಿದೆ, ಪ್ರೀತಿ ಶುರುವಾಗಿ 5-6 ದಿನಗಳಷ್ಟೆ ಕಳೆದವು ಎಂದು ಪ್ರೇಕ್ಷಕ ಅಂದುಕೊಳ್ಳುತ್ತಿದ್ದರೆ, 5 ತಿಂಗಳಾದವು ಎಂಬ ಡಯಲಾಗು ನಾಯಕನಿಂದ ಹೊರಬೀಳುತ್ತದೆ. ಸಂಭಾಷಣೆಕಾರ ಮಂಜು ಮಾಂಡವ್ಯರ ಪ್ರತಿಭೆಗೆ 'ರಂಗ ಯಾವ್ ಕೆಲ್ಸಾನು ಡಿಫರೆಂಟಾಗ್ ಮಾಡಲ್ಲ, ಆದ್ರೆ ಮಾಡಿದ್ ಕೆಲ್ಸಾ ಎಲ್ಲ ಡಿಫರೆಂಟ್' ಸಂಭಾಷಣೆ ಸಾಕ್ಷಿ. ಒಂದೋ ಎರಡೋ ಪಂಚ್ ಡಯಲಾಗ್ ಇದ್ದರೂ ಅವ್ಯಾವುದನ್ನೂ ಪ್ರೇಕ್ಷಕ ನೆನಪಿಟ್ಟುಕೊಳ್ಳುವಂತಹ ಒಳ್ಳೆಯ ಕೆಲಸಕ್ಕೆ ಕೈ ಹಾಕುವುದಿಲ್ಲ. 'ಬೋರ್' ಎನ್ನುವುದು ಚಿತ್ರದಲ್ಲಿ ಅಡಗಿ ಕುಳಿತಿಲ್ಲ ಬದಲಾಗಿ ಚಿತ್ರದ ತುಂಬಾ ರಾಜಾರೋಷವಾಗಿ ಓಡಾಡಿಕೊಂಡಿದೆ. ಪೋಲಿಸ್ ಅಧಿಕಾರಿಯಾಗಿ ನಾಲ್ಕು ನಿಮಿಷ ಕಾಣಿಸಿಕೊಂಡು ಸುದೀಪ್ ಪ್ರೇಕ್ಷಕರಿಗೆ ಆಕ್ಸಿಜನ್ ನೀಡುತ್ತಾರಾದರೂ, ಅದು ಕೆಲವೇ ನಿಮಿಷಗಳಲ್ಲಿ ಮುಗಿದು ಮತ್ತೆ ಉಸಿರುಗಟ್ಟುವ ವಾತಾವರಣ ನಿರ್ಮಾಣವಾಗುತ್ತದೆ. ಚಿತ್ರಕತೆಯಲ್ಲಿ ಹಾಸ್ಯವಿಲ್ಲದಿದ್ದರೂ ಪರದೆ ಮೇಲೆ ಬರುವ ಪ್ರತಿ ಸನ್ನಿವೇಶಗಳಿಗೆ ಪ್ರೇಕ್ಷಕರೇ ಟಾಂಗ್ ಕೊಟ್ಟು ಅಪಹಾಸ್ಯ ಮಾಡುವುದರಿಂದ ಚಿತ್ರಮಂದಿರದಲ್ಲಿ ಕಾಮಿಡಿಗೆ ಕೊರತೆಯಿಲ್ಲ. ಸಿನಿ ಟೆಕ್ ಸೂರಿ ಕ್ಯಾಮೆರಾ ಯಾರಿಗು ಕ್ಯಾರೆ ಎಂದಿಲ್ಲ, ಕಡೇ ಪಕ್ಷ ಹಾಡುಗಳಲ್ಲಾದರೂ ಕ್ವಾಲಿಟಿ ತಂದಿಲ್ಲ. ಒಂದು ಶಾಟ್ 'ಗಾಳಿಪಟ'ವನ್ನು ನೆನಪಿಗೆ ತಂದರೆ ನಾಯಕ ನಾಯಕಿಯ ಜೊತೆ ರೌಡಿಗಳನ್ನು ಹಿಂದಿಕ್ಕಿ ಓಡಿಹೋಗುವ ಸೀನು ಪಕ್ಕಾ 'ಡಾರ್ಲಿಂಗ್' ಜೆರಾಕ್ಸ್. ಅಂಗಡಿ ಇಟ್ಟುಕೊಂಡ ' ' ನಾಯಕ ರಂಗ ಸ್ನೇಹಿತರ ಜೊತೆ ಅಡ್ಡಾದಲ್ಲಿ ಪ್ರೀತಿ ಪ್ರೇಮದ ಬಗ್ಗೆ ಉಡಾಫೆಯ ಮಾತಾಡಿ ಕೊನೆಗೆ ಉಡದ ತರಹ ಪ್ರೀತಿಗೆ ಅಂಟಿಕೊಂಡು ಬಿಡುತ್ತಾನೆ. ರಂಗ, ಹುಡುಗಿಯ ದೊಡ್ಡಪ್ಪನ ವಿರೋಧ ಕಟ್ಟಿಕೊಂಡು ನಾಯಕಿಯ ಜೊತೆಗೆ ಓಡಿ ಹೋಗಿ ಕೊನೆಗೆ ಸುದೀಪ್ ಮಧ್ಯಸ್ಥಿಕೆಯಲ್ಲಿ ಎಲ್ಲವೂ ಸುಖಾಂತ್ಯವಾಯಿತು ಎನ್ನುವಷ್ಟರಲ್ಲಿ ಮತ್ತೊಂದು ವಿಘ್ನ ಎದುರಾಗುತ್ತದೆ ಫೇಸ್ ಬುಕ್ಕಿನ ಮೂಲಕ. ಮತ್ತೆ ಬ್ರೇಕಪ್ ಆಗಿ ಮುಂದೆ ಅರ್ಧರಾತ್ರಿಯಲ್ಲಿ 'ರಂಗ' ಪ್ರದೀಪ್ ಮುಂಗಾರು ಮಳೆ ಗಣೇಶ್ ಆಗಿ ಪರಿವರ್ತನೆಗೊಂಡು ಮಳೆಯಲಿ ಜೊತೆಯಿಲ್ಲದೆ ನಡೆದು ಇನ್ನೇನೋ ಆಗಿ ಸಿನೆಮಾ ಕತೆ ಟ್ರ್ಯಾಜಿಕ್ ಆಗಲು ಕಾರಣಕರ್ತರಾಗುತ್ತಾರೆ. ಪ್ರದೀಪ್ ಮತ್ತು ಕನ್ನಿಕಾ ತಿವಾರಿ ಅಭಿನಯ ಅತಿ ಕೆಟ್ಟದಾಗಿಲ್ಲ ಅಷ್ಟೆ. ಸಾಧು ಮತ್ತು ರೇಖಾ ದಾಸ್ ನೀಡುವ ಕಾಮಿಡಿ ಟಾನಿಕ್ ಹೆಚ್ಚು ಹೊತ್ತು ಕೆಲಸ ಮಾಡುವುದಿಲ್ಲ. ಗುರುಕಿರಣ್ ರ ಸಂಗೀತದಲ್ಲಿ 'ಖಂಡಿತ ನಿನ್ನ' ಹಾಡು ಒಂದೆ ತನ್ನ ವಿಭಿನ್ನತೆಯಿಂದ ಗಮನ ಸೆಳೆಯುತ್ತದೆ, ಇತರ ಹಾಡುಗಳು ಮತ್ತು ಹಿನ್ನಲೆ ಸಂಗೀತದ ಹಿನ್ನಲೆಯ ಬಗ್ಗೆ ಹೇಳದಿರುವುದೇ ಸೂಕ್ತ. ಚರ್ಚುಗಳಲ್ಲಿ ಹಾಡುವ ಪ್ರೇಯರ್, ಕೋರಸ್ ಗಳನ್ನಿಟ್ಟುಕೊಂಡು ಹೈ ಪಿಚ್ ವೋಕಲ್ ಮತ್ತು ವಯಲಿನ್ ಜೊತೆ ನುಡಿಸಿ ಹಿನ್ನಲೆ ಸಂಗೀತವೆಂದು ಕರೆಯುವುದು ಕನ್ನಡದ ಮಟ್ಟಿಗಿನ ದುಸ್ಥಿತಿ. ಚಿತ್ರದಲ್ಲೆಲ್ಲೂ ತಂತ್ರಜ್ನಾನದ ಬಳಕೆ ಕಾಣುವುದಿಲ್ಲ, ಈ ಚಿತ್ರ ಕನ್ನಡ ಚಿತ್ರರಂಗವನ್ನು ಹತ್ತು ವರ್ಷ ಹಿಂದಕ್ಕೆ ಕರೆದೊಯ್ದಿದೆ. ಇನ್ನೂ ಈ ಚಿತ್ರವನ್ನು ನೋಡಬೇಕೆನಿಸುತ್ತಿದೆಯೇ? ಹೌದೆಂದಾದರೆ ಚಿತ್ರ ವೀಕ್ಷಿಸಲು ನಿಮಗೆ ಹೇಳಿ ಮಾಡಿಸಿದ ದಿನ 'ಶನಿ'ವಾರ! - ಹರ್ಷವರ್ಧನ್ ಕನ್ನಡಪ್ರಭ ಡಾಟ್ ಕಾಂ