'ಉಗ್ರಂ' ಯಾಕೆ ನೋಡಬೇಕು? ಟ್ರೇಲರ್ ನಿಂದ ಬಹುನಿರೀಕ್ಷಿತ ಚಿತ್ರ ಎನಿಸಿ ಕೊಂಡಿದ್ದ ಉಗ್ರಂ ಆ ನಿರೀಕ್ಷೆ ಉಳಿಸಿಕೊಂಡಿಲ್ಲ. ಟ್ರೇಲರ್ ನಿಂದ ಬಹುನಿರೀಕ್ಷಿತ ಚಿತ್ರ ಎನಿಸಿಕೊಂಡಿದ್ದ ಉಗ್ರಂ ಆ ನಿರೀಕ್ಷೆಯನ್ನು ಉಳಿಸಿಕೊಂಡಿಲ್ಲ... ಮೊದಲಿಗೆ ಟೈಟಲ್ ಕಾರ್ಡ್ ಓಡುತ್ತಿರುವಾಗಲೇ ಒಂದು ಓಬಿರಾಯನ ಕಾಲದ ಕುಟುಂಬ ದ್ವೇಷದ ಕತೆಯನ್ನು ' ' ಲೆವೆಲ್ಲಲ್ಲಿ ಡ್ರಾಯಿಂಗ್ ಗಳ ಮೂಲಕ ತೋರಿಸುತ್ತಾರೆ. ಆದರೆ 'ಉಗ್ರಂ' ಆ ಲೆವೆಲ್ ನಲ್ಲಿಲ್ಲ, ಬಹುತೇಕರು ಸೀಟು ಹುಡುಕುವುದರಲ್ಲಿ ಮಗ್ನರಾಗಿರುವುದರಿಂದ ಆ ಧ್ವೇಷದ ಕತೆಯನ್ನು ಮಿಸ್ ಮಾಡಿಕೊಳ್ಳುವ ಸಾಧ್ಯತೆಗಳೇ ಹೆಚ್ಚು. ಆದರೆ ಚಿಂತಿಸಬೇಡಿ ಅದೇನು ನಿಮ್ಮನ್ನು ಅಜ್ಞಾನಿಗಳನ್ನಾಗಿಸುವುದಿಲ್ಲ, ಚಿತ್ರವನ್ನು ಎಲ್ಲಿಂದ ನೋಡಿದರೂ ಒಂದೆ. ಕತೆಯಲ್ಲಿ ಸತ್ವವಿಲ್ಲ, ರೌಡಿಸಂ ಚಿತ್ರವಾದ್ದರಿಂದ ಅಕ್ಷನ್ ಗೇ ಪ್ರಾಧಾನ್ಯತೆ. ಕತೆಗೋಸ್ಕರ ಆಕ್ಷನ್ ಅಲ್ಲ, ಆಕ್ಷನ್ ಗೋಸ್ಕರ ಕತೆ ಮಾಡಿದ ಹಾಗಿದೆ. ಟ್ರೇಲರ್ ನಿಂದ ಬಹುನಿರೀಕ್ಷಿತ ಚಿತ್ರ ಎನಿಸಿಕೊಂಡಿದ್ದ ಉಗ್ರಂ ಆ ನಿರೀಕ್ಷೆಯನ್ನು ಉಳಿಸಿಕೊಂಡಿಲ್ಲ. ಈ ಹೊಸ ಚಿತ್ರದ ಮುಖ್ಯ 'ನ್ಯೂ'ನತೆ ಕತೆ, ಸಂಭಾಷಣೆ ಮತ್ತು ಪಾತ್ರ ಪೋಷಣೆ ಸರಿಯಿಲ್ಲದಿರುವುದು. ಚಿತ್ರ, ಪೂರ್ತಿ ಅಲ್ಟ್ರಾ ಮೋಷನ್, ಕ್ಲೋಸಪ್ ಶಾಟ್, ಡಾಲಿ ಶಾಟ್, ಎಕ್ಸ್ ಟ್ರೀಮ್ ಕ್ಲೋಸಪ್ ಶಾಟ್ ಗಳಿಂದ ತುಂಬಿಕೊಂಡಿದೆ. ಕನ್ನಡದ ಮಟ್ಟಿಗೆ ಇದು ವಿಭಿನ್ನ ಪ್ರಯತ್ನ. ಇಲ್ಲಿ ಹೊಡೆದಾಡಲು ಬಹು ದೊಡ್ಡ ರೌಡಿಗಳ ಪಡೆಯೇ ಇದೆ. ನಿರ್ದೇಶಕ ಪ್ರಶಾಂತ್ ನೀಲ್ ಇಷ್ಟವಾಗೋದು ರೌಡಿಗಳನ್ನು ಪೌರಾಣಿಕ ರಾಕ್ಷಸರಂತೆ ಚಿತ್ರಿಸಿರುವ ರೀತಿಯಲ್ಲಿ, ಅವರ ರೌಡಿಗಳು ವಾಸಿಸುವುದು ಕೋಟೆ ಕೊತ್ತಲಗಳಲ್ಲಿ, ರಾಕ್ಷಸರಂತೆ ಅವರೂ ಅಬ್ಬರಿಸುತ್ತಾರೆ. ಗುಡುಗುವ ಆಕಾಶದತ್ತ ಮುಖ ಮಾಡಿ ಬೊಬ್ಬಿರಿಯುವ ವಿಲನ್ ಗಳ ಹಿಂಬದಿಯಿಂದ ಲೋ ಅಂಗಲ್ ನಲ್ಲಿ ತೆಗೆಯುವ ಶಾಟ್ ಪ್ರಶಾಂತ್ ಅವರ ಟ್ರೇಡ್ ಮಾರ್ಕ್. ಚಿತ್ರಕತೆ ವೇಗಗತಿಯಲ್ಲಿ ಸಾಗುತ್ತದೆ. ವಿಲನ್ ಗಳೆಲ್ಲ ತರಗಲೆಗಳಂತೆ ಹಾರುತ್ತಾರೆ, ತರಗಲೆಗಳೂ ಹಾರುತ್ತವೆ. ಒಂದು ದೃಶ್ಯದಲ್ಲಿ ಮುರಳಿ ಮಹಡಿ ಮೇಲಿಂದ ಜಿಗಿಯುತ್ತಾರೆ, ಮುಂದಿನ ಶಾಟ್ ನಲ್ಲಿ ನೆಲದ ಮೇಲಿನ ತರಗಲೆಗಳನ್ನು ತೋರಿಸಲಾಗುತ್ತೆ, ಮೇಲಿಂದ ಹಾರಿದ್ದ ಮುರಳಿ ತರಗಲೆಗಳಿದ್ದ ನೆಲದ ಮೇಲೆ ಸ್ಟೈಲಾಗಿ ಬಿದ್ದು ಮೊಣ ಕಾಲಿನ ಮೇಲೆ ಕುಳಿತುಕೊಳ್ಳುವ ಫೋರ್ಸಿಗೆ ತರಗಲೆಗಳೆಲ್ಲ ಮೇಲ್ಮುಖವಾಗಿ ಹಾರುತ್ತವೆ, ಈ ಶಾಟ್ ಅನೇಕ ಹಾಲಿವುಡ್ ನ ಸೂಪರ್ ಹೀರೋ ಚಿತ್ರಗಳನ್ನು ನೆನಪಿಸುತ್ತದೆ. 'ರಾಮ್ ಲೀಲಾ' ಖ್ಯಾತಿಯ ರವಿ ವರ್ಮನ್ ರ ಛಾಯಾಗ್ರಾಹಣ ಕಣ್ಣಿಗೆ ಹಬ್ಬ, ಉಗ್ರಂ ನ ನಿಜವಾದ ಹೀರೋ ಅವರೇ! ಸೀನೊಂದರಲ್ಲಿ ಗಮನಿಸದೇ ಹೋಗಬಹುದಾಗಿದ್ದ ಬೆಂಕಿಯಿಂದ ಹಾರುವ ಒಂದೆರಡು ಕಿಡಿಗಳನ್ನೂ ಫೋಕಸ್ ಮಾಡಿ ಹಿಡಿದಿರುವುದು, ಸಣ್ಣ ಸಣ್ಣ ಡೀಟೇಲ್ಸ್ ಗೂ ಅವರು ಕೊಡುವ ಪ್ರಾಮುಖ್ಯತೆಗೆ ಸಾಕ್ಷಿ. ಕತೆ: ಅಮ್ಮನ ಸಮಾಧಿ ನೋಡಲು ವಿದೇಶದಿಂದ ಕರ್ನಾಟಕಕ್ಕೆ ಬರುವ ನಾಯಕಿಯನ್ನು ದಾಡಿ ಬಿಟ್ಟ ದಾಂಡಿಗರು ಅಪಹರಿಸಲೆತ್ನಿಸುತ್ತಾರೆ, ಆಗ ಆಕೆಯನ್ನು ಕಾಪಾಡುವ ಜವಾಬ್ದಾರಿ ಮುರಳಿಯ ಹೆಗಲೇರುತ್ತದೆ, ಬೇತಾಳದಂತೆ! ಆದರೆ ಹರಿಪ್ರಿಯಾರನ್ನು ನೋಡಿ, ಹೆಗಲೇರಿರುವುದು ಬೇತಾಳವಲ್ಲ ದೇವತೆಯೆಂದು ಬಹು ಬೇಗ ತಿಳಿಯುತ್ತದೆ. ಒಂದು ಕಾಲದಲ್ಲಿ ರೌಡಿಯಾಗಿ ಮೆರೆದಿದ್ದ ಅಗಸ್ತ್ಯ 'ಕೋಟಿಗೊಬ್ಬ', ಅದಕ್ಕೇ ರೌಡಿಸಮ್ ಬಿಟ್ಟು ಆರಾಮಾಗಿರುತ್ತಾನೆ. ಹೀಗಿರುವಾಗ ಮತ್ತೆ ರೌಡಿಸಮ್ ಆತನನ್ನು ತನ್ನತ್ತ ಸೆಳೆಯುತ್ತದೆ. ಹುಡುಗಿಗಾಗಿ ಅವಿನಾಶ್, ಅತುಲ್ ಕುಲಕರ್ಣಿಯರನ್ನು ಎದುರು ಹಾಕಿಕೊಳ್ಳುತ್ತಾನೆ. ಹಳೆ ಸ್ನೇಹಿತ, ಪ್ರಸ್ತುತ ಶತ್ರು ತಿಲಕ್ ನೊಡನೆ ಮುಖಾಮುಖಿಯಾಗುತ್ತಾನೆ. ಕೊನೆಗೇನಾಗುತ್ತದೆ ಊಹಿಸುವುದು ಕಷ್ಟವೇನಲ್ಲವಲ್ಲ. ಅಗಸ್ತ್ಯನಾಗಿರುವ, ನಾಯಕ ಶ್ರೀಮುರಳಿಯ ಆಕ್ಷನ್ ಬಗ್ಗೆ ಕ್ವಶ್ಚನ್ ಮಾಡೋ ಹಾಗೇ ಇಲ್ಲ, ನಗುವುದರಲ್ಲಿ ಜಿಪುಣತನ ತೋರುವ ಅವರ ಆಂಗ್ರಿ ಯಂಗ್ ಮ್ಯಾನ್ ಲುಕ್ಕು ಕಿಕ್ಕು ಕೊಡುತ್ತದೆ, ನಮಗೂ, ವಿಲನ್ ಗಳಿಗೂ. ಮೇಕಪ್ ಇಲ್ಲದ ಹೊರತಾಗಿಯೂ ನಾಯಕಿ ಹರಿಪ್ರಿಯ ಪ್ರಿಯವಾಗುತ್ತಾರೆ. ಆಕ್ಷನ್ ಚಿತ್ರವಾದರೂ, ಹೆಣ್ಣುಮಕ್ಕಳನ್ನು ಚಿತ್ರಮಂದಿರದತ್ತ ಸೆಳೆಯುವ ಪ್ರಯತ್ನವನ್ನು ಅಲ್ಲಲ್ಲಿ ಮಾಡಿಸಿದ್ದಾರೆ ಮಾತೃ ವಾಕ್ಯ ಪರಿಪಾಲಕ ಅಗಸ್ತ್ಯನ ಮೂಲಕ. ತಾಂತ್ರಿಕತೆಯನ್ನೇ ಮಾಂತ್ರಿಕ ಅಸ್ತ್ರವಾಗಿಸಿಕೊಂಡ "ಉಗ್ರಂ' ಕತೆಯಲ್ಲಿ ಮಾತ್ರ ಹಳೆಯ ಮಂತ್ರವನ್ನೇ ಜಪಿಸಿರುವ ಕಾರಣ ಪ್ರೇಕ್ಷಕ ನಿರ್ದೇಶಕ ಪ್ರಶಾಂತ್ ನೀಲ್ ರ ಮುಂದಿನ ಪ್ರಯತ್ನದ ಬಗ್ಗೆ ಕುತೂಹಲ ತಾಳಬಹುದಷ್ಟೇ! ವೇಗವಾಗಿ ಸಾಗುವ 'ಉಗ್ರಂ' ಸಾಹಸ ಪ್ರಿಯರಿಗೆ ಇಷ್ಟವಾಗಬಹುದು. -ಹರ್ಷವರ್ಧನ್ (ಕನ್ನಡಪ್ರಭ ಡಾಟ್ ಕಾಂ ಗಾಗಿ)