ಕ್ಯಾರೆಕ್ಟರ್ಸ್ ಸ್ಪೆಷಲ್ ನಾನು ನನ್ನಿಷ್ಟದಂತೆ ಸಿನಿಮಾ ಮಾಡುತ್ತೇನೆ...ಜನಕ್ಕೆ ಏನು ಬೇಕೋ ಅದನ್ನ ಕೊಡ್ತೀವಿ ಕಣ್ರೀ... ಸಿನಿಮಾ ಮಾಡುವವರು ಸಾಮಾನ್ಯವಾಗಿ ಹೇಳುವ ಎರಡು ಪ್ರಮುಖ 'ಸಂಭಾಷಣೆಗಳು' ಇವು. ನಾನು ನನ್ನಿಷ್ಟದಂತೆ ಸಿನಿಮಾ ಮಾಡುತ್ತೇನೆ... ಜನಕ್ಕೆ ಏನು ಬೇಕೋ ಅದನ್ನ ಕೊಡ್ತೀವಿ ಕಣ್ರೀ... ಸಿನಿಮಾ ಮಾಡುವವರು ಸಾಮಾನ್ಯವಾಗಿ ಹೇಳುವ ಎರಡು ಪ್ರಮುಖ 'ಸಂಭಾಷಣೆಗಳು' ಇವು. ಆದರೆ 'ಇವರು ಸಂಭಾಷಣೆಯನ್ನೇ ಸಿನಿಮಾ ಎಂದುಕೊಂಡಿದ್ದಾರೆ' ಎಂದು ಆರೋಪಿಸುವವರ ಮುಂದೆ 'ಡೈರೆಕ್ಟರ್ಸ್ ಸ್ಪೆಷಲ್' ಚಿತ್ರದ ಮೂಲಕ ನಿರ್ದೇಶಕ ಗುರುಪ್ರಸಾದ್ 'ನನ್ನ ಚಿತ್ರದ ಪಾತ್ರಗಳು ಹೇಳಿದಂತೆ ಸಿನಿಮಾ ಮುಗಿಸಿದ್ದೇನೆ' ಎಂದಿದ್ದಾರೆ. ಚಿತ್ರದ ಕೊನೆಯಲ್ಲಿ, ನಿರ್ದೇಶಕನ ಕ್ಲೈಮ್ಯಾಕ್ಸ್ ಅನ್ನು ಒಪ್ಪದೆ ಅವನಿಗೇ ಧಿಕ್ಕಾರ ಕೂಗುತ್ತವೆ ಪಾತ್ರಗಳು. ಡೈರೆಕ್ಟರ್ ಅದಕ್ಕೆ ಮಣಿಯುತ್ತಾನೆ. ಹಾಗಾಗಿ, ಚಿತ್ರದ ಕ್ಲೈಮ್ಯಾಕ್ಸ್ ಅನ್ನು 'ಪಾತ್ರಗಳ ಒತ್ತಾಯದ ಮೇರೆಗೆ' ಎಂದು ವರ್ಣಿಸಬಹುದು. ಈ ಕಾರಣಕ್ಕೆ ಇದನ್ನು 'ಡೈರೆಕ್ಟರ್ ಸ್ಪೆಷಲ್' ಎನ್ನುವುದಕ್ಕಿಂತ 'ಕ್ಯಾರೆಕ್ಟರ್ಸ್ ಸ್ಪೆಷಲ್' ಎನ್ನುವುದು ಸೂಕ್ತ. ಅದರ ಜೊತೆಗೆ, ಇನ್ನು ಮುಂದೆ ಯಾರೂ ಕೂಡ 'ಸ್ಪೆಷಲ್ ಕ್ಯಾರೆಕ್ಟರ್ ಗುರು, ಯಾರ ಮಾತೂ ಕೇಳುವುದಿಲ್ಲ' ಎಂದು ಆರೋಪಿಸುವಂತಿಲ್ಲ. ಸಿನಿಮಾ ಮುಗಿದ ಕೂಡಲೆ ಸೀಟಿನಿಂದ ಎದ್ದು 'ವಾಹ್ ಅದ್ಭುತ ಸಿನಿಮಾ' ಅಥವಾ 'ಥೂ ಡಬ್ಬಾ ಸಿನಿಮಾ' ಎನ್ನುವಂಥ ಚಿತ್ರ ಇದಲ್ಲ. ಡೈರೆಕ್ಟರ್ಸ್ ಸ್ಪೆಷಲ್ ಚಿತ್ರವನ್ನು ಒಂದು ನಿರ್ದಿಷ್ಟ ವಿಮರ್ಶೆಗೆ ವೈಯಕ್ತಿಕ ನಿಲುವಿನ ಫ್ರೇಮ್ ಗೆ ಒಳಪಡಿಸಿ, ಡೈರೆಕ್ಟ್ ಆಗಿ ಚೆನ್ನಾಗಿದೆ, ಚೆನ್ನಾಗಿಲ್ಲ ಎಂದು ಹೇಳುವುದು ಕಷ್ಟ. ಹಾಗಾಗಿ ಒಂದಷ್ಟು 'ಗೊಂದಲಗಳಿವೆ ಎನ್ನುವುದು ಮಾತ್ರ ಸ್ಪಷ್ಟ'. 'ಒಬ್ಬೊಬ್ಬರಿಗೆ ಒಂದೊಂಥರಾ' ಅಲ್ಲ, ಒಬ್ಬರಿಗೇ, 'ಒಮ್ಮೆ ಒಂಥರಾ, ಮತ್ತೊಮ್ಮೆ ಬೇರೆ ಥರ' ಕಾಣಬಹುದಾದ ಚಿತ್ರ ಇದು. ಹಾಗಾಗಿ, ಚಿತ್ರದ ಬಗ್ಗೆ ಆತುರದ ನಿರ್ಧಾರಕ್ಕೆ ಬಂದರೆ ಹತಾಶ ಪ್ರೇಕ್ಷಕ, ಹತಾಶ ವಿಮರ್ಶಕನಾಗುವ ಅಪಾಯವಿದೆ. ಸಣ್ಣದೊಂದು ಮನೆ ಮತ್ತು ಮಾತು, ಈ ಎರಡನ್ನಿಟ್ಟುಕೊಂಡೇ ಸಿನಿಮಾ ಮಾಡಿ ಮನೆಮಾತಾದವರು ಗುರುಪ್ರಸಾದ್. ಇಲ್ಲೂ ಗುರು ಅದನ್ನೇ ಮಾಡಿದ್ದಾರೆ. 'ದೇವರೇ ಅಗಾಧ ನಿನ್ನ ಮಹಿಮೆಯ ಕಡಲು' ಹಾಡು, ಅದಕ್ಕೊಂದು ಮೂಡ್ ಸೆಟ್ ಮಾಡುತ್ತದೆ. ಯಾರೂ ಇಲ್ಲದ ಅನಾಥನೊಬ್ಬ ಅಪ್ಪ, ಅಮ್ಮ, ಅಣ್ಣ, ತಂಗಿಯರನ್ನು 'ತಂದು' ಮನೆ ಕಟ್ಟುತ್ತಾನೆ. ಆದರೆ ಹಣ ಅವರೆಲ್ಲರ ನಿಯತ್ತು ಕೆಡಿಸುತ್ತದೆ. ಸಂಬಂಧಗಳಿಗೆ ಕೈ ಎತ್ತಿದ ಅವರಿಗೆ ಮನೆಮಗನನ್ನೇ ಕೊಲ್ಲುವ ಯೋಚನೆ ಬಂದು, ಅದಕ್ಕೆ ಸಮ್ಮತಿ ಸೂಚಿಸಿ ಒಬ್ಬೊಬ್ಬರೇ ಕೈ ಎತ್ತಿದಾಗ, ಕಳ್ಳನನ್ಮಕ್ಳಿದ್ದಾರವ್ವ ಮನೆ ತುಂಬಾ ಎನ್ನುವ ಪರಿಸ್ಥಿತಿ. ಅದು, ಬೀದೀಲಿ ಹೋಗೋ ಮಾರಮ್ಮನ್ನ ಮನೆಗೆ ಕರೆದು, ಗೃಹಭಂಗ ಮಾಡಿಕೊಳ್ಳುವ ಸಮಯ. ಈ ಹಾದಿಯಲ್ಲಿ, ಚಿತ್ರದ ಫಸ್ಟ್ ಹಾಫ್ ಈಸ್ ದಿ ಬೆಸ್ಟ್ ಹಾಫ್ ಎನ್ನುವುದರಲ್ಲಿ ಅನುಮಾನವಿಲ್ಲ. ಮಠ, ಎದ್ದೇಳು ಮಂಜುನಾಥನ ಹ್ಯಾಂಗೋವರ್ನಲ್ಲಿ ಡೈರೆಕ್ಟರ್ಸ್ ಸ್ಪೆಷಲ್ ಗೆ ಕಣ್ಣು ಹಾಕುವ ಪ್ರೇಕ್ಷಕನಿಗೆ, ನಿರ್ದೇಶಕ ಗುರುಪ್ರಸಾದ್, ಮಾತು ತಪ್ಪದ ಮಗನಂತೆ ಕಾಣುತ್ತಾರೆ. ಗುರು ಸಂಭಾಷಣೆಯಲ್ಲಿ ಬರೀ ತರಲೆ ಕಿಲಾಡಿತನ ಅಷ್ಟೇ ಅಲ್ಲ ಗಂಭೀರವಾದ ವಿಷಯಕ್ಕೂ ಜಾಗ ಇರುತ್ತದೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಹಾಗಾಗಿ, ಪೋಲಿ ಸಂಭಾಷಣೆಗಳಷ್ಟೇ ಅಲ್ಲ, ಗಂಭೀರ ವಿಷಯಗಳೂ ಭಾವುಕ ಪ್ರೇಕ್ಷಕನಿಗೆ ತಾಗಿವೆ. ಸೆಕೆಂಡ್ ಹಾಫ್ನಲ್ಲಿ ಗುರುವಿನ ಮುಂದೆ ಗುರಿ ಸ್ಪಷ್ಟವಿಲ್ಲ ಎನಿಸಿದರೆ ಅದಕ್ಕೆ ಕಾರಣ, 'ಶಿವ, ಪಾರ್ವತಿ, ಗಣೇಶ, ರಾವಣ'. ಇಂಥ ಉಪಕಥೆಗಳಿಂದಾಗಿ ತಡೆರಹಿತ ಮನರಂಜನೆಗೆ ಅಪಚಾರ. ಪಾತ್ರಗಳು ಮೈಮರೆತು ಅಭಿನಯಿಸಿದರೆ ಚೆನ್ನ. ಆದರೆ ನಿರ್ದೇಶಕ ಮೈ ಮರೆತರೆ ಕಷ್ಟ ಎನ್ನುತ್ತಾನೆ ಪ್ರೇಕ್ಷಕ. ಕೆಲವೊಮ್ಮೆ ತಮ್ಮಲ್ಲಿರುವ ಒಂದಷ್ಟು ಸಂಭಾಷಣೆಗಳು ವೇಸ್ಟ್ ಆಗಬಾರದು ಎಂಬ ಕಾರಣಕ್ಕೆ ಅದಕ್ಕೆ ಹೊಂದುವ ದೃಶ್ಯ ಹೆಣೆದಿದ್ದಾರೆಯೇ ಗುರು ಎಂಬ ಅನುಮಾನವೂ ಮೂಡುತ್ತದೆ. ಈ ಹಾದಿಯಲ್ಲಿ ಗುರು, ದಾರಿ ತಪ್ಪಿದ ಮಗ ಎನಿಸಿದರೂ ಕೊನೆಯಲ್ಲಿ ಒಳ್ಳೆಯವರಿಗೆ ಒಳ್ಳೆಯದೇ ಆಗುತ್ತದೆ. 'ಕೊಂಡು ತಂದು, ಹೊತ್ತು ಮಾರಿ, ಲಾಭ ಗಳಿಸಲು ವಿದ್ಯೆಯೇನು ಬಳೆಯ ಮಲಾರವೇ?' ಎನ್ನುವ ಅನುಮಾನಿಗಳ ಮಧ್ಯೆ ಕೊಂಡು ತಂದ ಸಂಬಂಧಗಳಿಂದ ಪ್ರೀತಿ ಗಳಿಸಲು ಸಾಧ್ಯ ಎಂಬ ಪಾಸಿಟಿವ್ ಸಂದೇಶದೊಂದಿಗೆ ಚಿತ್ರಕ್ಕೆ ಅರ್ಥಪೂರ್ಣ 'ಶುಭಂ'. ತಮ್ಮ ಕಲರ್ ಫುಲ್ 'ಚಿತ್ರ'ಗಳಿಗೆ ಹೆಸರಾಗಿರುವ ಛಾಯಾಗ್ರಾಹಕ ಮಹೇಂದ್ರ ಸಿಂಹ ಇಲ್ಲಿನ ಹಳೆಯ ಮನೆಯೊಂದರ ಡಲ್ ಕ್ಯಾನ್ವಾಸ್ ನಲ್ಲಿಯೂ 'ಗೋಡೆಗಳಿಗೂ ಕಣ್ಣುಗಳಿರುತ್ತವೆ' ಎಂದು ತೋರಿಸಿದ್ದಾರೆ. ಅನೂಪ್ ಸೀಳಿನ್, ಸಂಗೀತ, ಹಿನ್ನೆಲೆ ಸಂಗೀತದಲ್ಲಿ ಬೆಸ್ಟ್, ಅಭಿನಯದಲ್ಲಿ ಗೆಸ್ಟ್. ಮನೆಮಗನಂತಿರುವ ಧನಂಜಯ ತಮ್ಮ ಪಾತ್ರದ ಮಿತಿಗಳ ನಡುವೆಯೂ ತಮ್ಮ ಜವಾಬ್ದಾರಿ ನಿಭಾಯಿಸಿದ್ದಾರೆ. 'ರೀ, ಜಗ್ಗೇಶ್' ಎಂದು ಕರೆದರೆ 'ಬಂದಿದ್ದೇನೆ 'ಗುರು'ಗಳೇ' ಎನ್ನುವ ರಂಗಾಯಣ ರಘು ಪಾತ್ರದಲ್ಲಿ 'ಎದ್ದೇಳು ಮಂಜುನಾಥ' 'ಎದ್ದು ಕಾಣುತ್ತಾನೆ'. ವತ್ಸಲಾ ಮೋಹನ್, ರಾಮ್ ಅವರದ್ದು ನಿಜವಾದ ಸಹಜಾಭಿನಯ. ಐಟಂ ಸಾಂಗ್ ನಲ್ಲಿ ಪೂಜಾಗಾಂಧಿ ಯಾರಿಗೂ ತೊಂದರೆ ಕೊಡದೆ ಬಂದುಹೋಗುತ್ತಾರೆ. ಕೆ.ವಿ. ರಾಜು ಚಿತ್ರಗಳ ನಾಯಕಿಯರಂತೆ ಕಾಣುವ ತಂಗಿಯ ಪಾತ್ರದ ಹುಡುಗಿ ಸ್ಮಿತಾ, ಪೂಜಾಗಾಂಧಿಗಿಂತ ಬೋಲ್ಡ್. ಮನೆಗೆ ಬರುವ ಅತಿಥಿ ಪಾತ್ರದಲ್ಲಿ, ಗುರು ಗೌರವ ನಟರಾಗಿದ್ದಾರೆ. - ಹರಿ