ಶತ್ರು ಪರ್ವಾಗಿಲ್ಲ ಕಳೆದ ಶುಕ್ರವಾರ ಶರತ್ ಲೋಹಿತಾಶ್ವ ನಾಯಕತ್ವದ 'ಶತ್ರು' ಚಿತ್ರ ಬಿಡುಗಡೆಯಾಗಿದೆ... ಕಳೆದ ಶುಕ್ರವಾರ ಶರತ್ ಲೋಹಿತಾಶ್ವ ನಾಯಕತ್ವದ 'ಶತ್ರು' ಚಿತ್ರ ಬಿಡುಗಡೆಯಾಗಿದೆ ಎಂದರೆ ಪ್ರೇಮ್ ಅಭಿಮಾನಿಗಳಿಗೆ ಬೇಸರವಾಗಬಹುದು. ಆದರೆ ಅದು ನಿಜ. ಶರತ್ ಅವರನ್ನು ತೆಗೆದು ನೋಡಿದರೆ ಶತ್ರು, ಗುಂಪಿನಲ್ಲಿ ಗೋವಿಂದ ಅನ್ನುವಂಥ ಸಾಧಾರಣ ಚಿತ್ರ ಆಗಿಬಿಡುತ್ತದೆ. ಆ ಲೆಕ್ಕದಲ್ಲಿ ಶರತ್ ಈ ಚಿತ್ರದ 'ಆಪ್ತಶತ್ರು'. 'ಉತ್ತರ' ಕರ್ನಾಟಕದ ಕನ್ನಡ ಮಾತನಾಡುವ ಶರತ್, ತೆರೆಯ ಮೇಲೆ ಇರುವವರೆಗೆ ಬೋರ್ ಆಗುವ 'ಪ್ರಶ್ನೆ'ಯೇ ಇಲ್ಲ. ಪ್ರೇಮ್ಗಾಗಿ ಅಲ್ಲದಿದ್ರೂ ಶರತ್ ಲೋಹಿತಾಶ್ವ ಅವರ ಮುಖ ನೋಡಿಕೊಂಡಾದರೂ ಪ್ರೇಕ್ಷಕ ಚಿತ್ರಮಂದಿರಕ್ಕೆ ಹೋಗಬಹುದು ಎನ್ನುವ ಶರತನ ಸಾಹಸಗಳ ಸಿನಿಮಾ ಇದು. ಕಥೆಯಲ್ಲಿ ಆಗಾಗ ಗಂಟೆ ಹಿಡ್ಕೊಂಡು ಊರು ಸುತ್ತುವ ಶರತ್ ಸಿನಿಮಾದ ಎರಡೂವರೆ ಗಂಟೆ ಕಳೆಯಲು ಸಾಕಷ್ಟು ಸಹಾಯ ಮಾಡಿದ್ದಾರೆ. ಕಥೆಯ ವಿಷಯದಲ್ಲಿ, ಶತ್ರು ಸಿಂಗಂ ಚಿತ್ರದಿಂದ ಸಿಡಿದ ಎಷ್ಟನೇಯ ಭಾಗವೋ ಗೊತ್ತಿಲ್ಲ. ಹಾಗಾಗಿ ಪ್ರೇಕ್ಷಕರಿಗೆ ಕೆಂಪೇಗೌಡನನ್ನೇ ನೋಡಿದ ಅನುಭವ. ಆದರೆ ಇವನು ಕೇಶವಾಪುರದ ಕೆಂಪೇಗೌಡ. ಸಿಂಗಂ ಶೈಲಿಯಲ್ಲಿ ಸಿಂಹದಂತೆ ಅಡ್ಡಾಡುವ ಶತ್ರು ಕೈಯಲ್ಲಿ ಗನ್ ಇರುವ ಕಾರಣಕ್ಕೆ ಇವನನ್ನು ಶತ್ರುಗನ್ ಸಿಂಹ ಎನ್ನಬಹುದು. ಈ ಪೊಲೀಸ್ ಆಫೀಸರ್ ಬೆಂಗಳೂರಿನಲ್ಲಿ ಶತ್ರುವಿನ ಕಡೆಯವನ ಎನ್ಕೌಂಟರ್ ಮಾಡಿದಾಗ ಆ ವಿಲನ್ ಇವನನ್ನು ತನ್ನೂರಿಗೆ ಟ್ರಾನ್ಸ್ಫರ್ ಮಾಡಿಸಿಕೊಳ್ಳುತ್ತಾನೆ. ಅಲ್ಲಿಂದ ಮುಂದೆ, ದುಷ್ಟರನ್ನು ಕಂಡಲ್ಲಿ ಸುಟ್ಟುಬಿಡುವ ಶತ್ರು ಚಿತ್ರದ ನಾಯಕನ ಹುಟ್ಟು ಗುಣ ಸತ್ರೂ ಹೋಗಲ್ಲ ಎನ್ನುವಂತೆ, ಇವನು ಅವರ ಹಿಂದೆ ಬಿದ್ದು, ಅವರ ಹಿಂದೆಯೇ ಇದ್ದು ಶತ್ರು ಸಂಹಾರ ಮಾಡುವುದು ಚಿತ್ರದ ಕತೆ. ನಿಜಜೀವನದಲ್ಲಿ ಪೊಲೀಸ್ ಆಗಿ ಕೆಟ್ಟವರಿಗೆ ಸಿಂಹಸ್ವಪ್ನ ಆಗಬೇಕು ಎಂದುಕೊಂಡಿದ್ದ ಪ್ರೇಮ್ರ ಈ ಸಿನ್ಮಾ ಸ್ವಪ್ನ ಇದು. ಇಷ್ಟು ದಿನ ರೋಸ್ ಹಿಡಿದು ಈಗ ಗನ್ ಧಾರಿಯಾಗಿರುವ ಪ್ರೇಮ್ ಅವರದ್ದು ಘನಂದಾರಿ ಅಭಿನಯ ಅಲ್ಲದಿದ್ದರೂ ಸಿಕ್ಸ್ ಪ್ಯಾಕ್ನಲ್ಲಿ ತಮ್ಮ ಲವ್ಲೀ ಸ್ಟಾರ್ ಇಮೇಜ್ನ ಬೌಂಡರಿ ದಾಟಿದ್ದಾರೆ ಎನ್ನಬಹುದು. ಆದರೆ, ಅವರ ಡೈಲಾಗ್ಗಳಲ್ಲಿ ದಮ್ಮಿಲ್ಲ. ದಮ್ಮಿದ್ರೆ ಎದುರಿಗೆ ಬಂದು ಮಾತಾಡೋ ಎನ್ನುವ ಸಾಯಿಕುಮಾರ್ ಡೈಲಾಗ್ನ ರಿದಮ್ ಇದೆ ಅಷ್ಟೆ. ನಾಯಕ ಪ್ರೇಮ್ ಇಷ್ಟು ದಿನ ಪ್ರೇಮಕಥೆಗಳಲ್ಲಿ ಎದೆತಟ್ಟುವ ಕೆಲಸ ಮಾಡಿ ಈಗ ತೊಡೆತಟ್ಟುವ ಕೆಲಸ ಮಾಡಿದ್ದರೂ, ಈ ಟಚ್ಚಲಿ ಏನೋ ಇದೆ ಅನಿಸುವುದು ಕಷ್ಟ. ಇದರ ಜೊತೆ, ಲವ್ಲೀ ಸ್ಟಾರ್ನ ಇಟ್ಕೊಂಡು ಆ್ಯಕ್ಷನ್ ಸಿನಿಮಾ ಮಾಡೋದು ಅಂದ್ರೆ ಅದೇನು ಜೋಕೆ? ಎನ್ನುವ ನಿರ್ದೇಶಕ ಜೆಕೆ ಕಥೆಯ ನಿರೂಪಣೆಯ ವಿಷಯದಲ್ಲಿ ಒಂದಿಷ್ಟು ಜೋಕೆಯಾಗಿರಬೇಕಿತ್ತೇನೋ. ಕಥೆಯಲ್ಲಿ ರಂಗಾಯಣ ರಘು ಪಾತ್ರವನ್ನು ಸಾಯಿಸೋದು ಯಾಕೆ ಎನ್ನುವುದು ಗೊತ್ತಾಗುವುದೇ ಕಷ್ಟ. ನಾಯಕ ವಿಲನ್ ಬಳಿಗೆ ಯಾರದ್ದೋ ಹೆಣ ಮತ್ತು ಹಣ ತೆಗೆದುಕೊಂಡು ಹೋಗಿ ಕೊಡುವುದು ಯಾತಕ್ಕೆ ಎಂಬ ಗೊಂದಲ. ಬುಲೆಟ್ ಪ್ರಕಾಶ್, ನಾಣಿ ಜೋಡಿ ನೀರಸವಾಗಿದೆ. ಜೊತೆಗೆ, ಕಾಲ್ಶೀಟ್ ಇಲ್ಲದ ಕಾರಣಕ್ಕೋ ಏನೋ ಬುಲೆಟ್ ಪ್ರಕಾಶ್ ಇದ್ದಕ್ಕಿದ್ದಂತೆ ಮಾಯವಾಗುತ್ತಾರೆ. ಅದಕ್ಕಿಂತಲೂ ಕಾಮಿಡಿ ಎಂದರೆ ಒಂದು ಸೀನ್ನಲ್ಲಿ ಬುಲೆಟ್ ಇಲ್ಲ ಎಂಬ ಕಾರಣಕ್ಕೆ ಅವರ ಆಕೃತಿಯನ್ನೇ ಹೊಂದಿದ್ದಾರೆ ಎಂಬ ಕಾರಣಕ್ಕೆ ಹರಿ ಎಂಬ ಹಾಸ್ಯನಟ ಯಾರ ಅನುಮತಿಯೂ ಇಲ್ಲದೆ ನಾಣಿಗೆ ಹೊಸ ಜೋಡಿಯಾಗಿ ಕಥೆಯೊಳಕ್ಕೆ ನುಸುಳಿಬಿಡುವುದನ್ನು ನೋಡಿದಾಗ ಪ್ರೇಕ್ಷಕರಿಗೆ ಈ ಕಷ್ಟ ನನ್ ಶತ್ರುಗೂ ಬೇಡ ಎನಿಸಬಹುದು. ಆ್ಯಕ್ಷನ್ ಸಿನಿಮಾ ಆದರೂ ನಾಯಕಿಯ ಕೆನ್ನೆಯ ಮೇಲಿರುವ ಡಿಂಪಲ್ನಾಗೆ ಒಂದ್ ಲವ್ಸ್ಟೋರಿ ಇದೆ. ಆದರೆ, ಹಾಡುಗಳನ್ನು ಬಿಟ್ಟು ಬೇರೆಲ್ಲೂ ನಾಯಕ ನಾಯಕಿ ಲವ್ ಮಾಡ್ತಾರೆ ಅನಿಸುವುದಿಲ್ಲ. ರಂಗಾಯಣ ರಘು ಅಭಿನಯ ಮತ್ತು ಸಂಭಾಷಣೆಗೆ ಅವರ ಶತ್ರುಗಳೂ ತಲೆದೂಗಬೇಕು. ಚಿತ್ರದ ಹಾಡುಗಳಿಗಿಂತ ರೀರೆಕಾರ್ಡಿಂಗ್ನಲ್ಲೇ ಹೆಚ್ಚಿನ ಸಂಗೀತ ಕೇಳಿಸಬಹುದು. ಮ್ಯಾಥ್ಯೂ ರಾಜನ್ ಛಾಯಾಗ್ರಹಣ ಚಿತ್ರವನ್ನು ಸ್ಟೈಲಿಷ್ ಆಗಿಸಿದೆ. ಸತ್ರು ಪರ್ವಾಗಿಲ್ಲ ಎನ್ನುತ್ತಾ ನ್ಯಾಯಕ್ಕಾಗಿ ಹೋರಾಡುವ ಪೊಲೀಸ್ನ ಆಫೀಸರ್ನ ಕಥೆ ನೋಡಿ 'ಶತ್ರು, ಪರ್ವಾಗಿಲ್ಲ' ಎನ್ನಬಹುದಷ್ಟೆ. ಹಾಗಾಗಿ, 'ಶತ್ರುಗಳನ್ನೂ ಪ್ರೀತಿಸಿ' ಎಂಬ ಮಾತುಗಳು ಕೇಳುವುದಕ್ಕೆ ಮಾತ್ರ ಹಿತವಾಗಿರುತ್ತದೆ ಎನಿಸಿದರೆ ತಪ್ಪಿಲ್ಲ. -ಹರಿ