ಈ ಚಿತ್ರದಲ್ಲಿ ಒಂದು 'ವಿಶೇಷ' ಇದೆ!!! 'ಇಲ್ಲಿ ಒಂದು ಸಮಸ್ಯೆ ಇದೆ' ಎಂದು ಥೇಟ್ ಆಪ್ತಮಿತ್ರದ ಆಚಾರ್ಯರ ಸ್ಟೈಲಲ್ಲಿ ಅವಿನಾಶ್ ಹೇಳುವ ತನಕ ಚಿತ್ರಕ್ಕೆ ಯಾಕೆ ಅಂಗಾರಕ ಅಂತ ಹೆಸರಿಟ್ಟಿದ್ದಾರೆ ಎಂಬುದೇ ಪ್ರೇಕ್ಷಕರಿಗೆ ತಿಳಿಯುವುದಿಲ್ಲ. ಆ ಮಟ್ಟಿಗೆ ಇದೊಂದು ಸಸ್ಪೆನ್ಸ್ ಚಿತ್ರ. ಆ ಸಸ್ಪೆನ್ಸನ್ನು ಕ್ಲೈಮ್ಯಾಕ್ಸಿನ ತನಕ ಹಿಡಿದಿಟ್ಟು, ನಾಯಕನಿಗೆ ಕುಜದೋಷ ಇದೆ ಅಂದಾಗ ಜನ ಮತ್ತೆ ಅಂಗಾರಕ ಮತ್ತು ಕುಜ ಎರಡೂ ಒಂದೇನಾ ಅಂತ ಹುಳ ಬಿಟ್ಕೊಂಡು ಯಾವುದಾದರೂ ಚಾನೆಲ್ಗೆ ಫೋನ್ ಮಾಡಿ ಕೇಳೋಕೆ ಡಿಸೈಡ್ ಮಾಡ್ತಾರೆ. ಹಾಗಂತ 'ಕುಜ' ಅಂತ ಚಿತ್ರಕ್ಕೆ ಹೆಸರಿಟ್ಟರೆ ಅದು 'ನಡು'ಗನ್ನಡಿಗರ ಬಾಯಲ್ಲಿ ಇನ್ನೇನೋ ಆಗಿ ಅಪಾರ್ಥವಾದೀತು ಎಂಬ ಮುನ್ನೆಚ್ಚರಿಕೆ ವಹಿಸಿ ಅಂಗಾರಕ ಎಂದು ಹೆಸರಿಟ್ಟಿದ್ದ್ದಾರೆ ನಿರ್ದೇಶಕರು. ಆದರೆ, ಅಂಗಾರಕದಲ್ಲಿ ಇತ್ತೀಚಿನ ಎಲ್ಲ ಚಿತ್ರಗಳಿಗಿಂತ ವಿಭಿನ್ನ ಅನಿಸಿಕೊಳ್ಳುವಂಥ ಒಂದು ವಿಶೇಷ ಇದೆ. ಈ ಚಿತ್ರದ ಆರಂಭದಲ್ಲಿ ಶ್ವಾಸಕೋಶ ಹಿಂಡುವುದಿಲ್ಲ, ಮುಕೇಶ ಬರುವುದಿಲ್ಲ. ಇದು ಧೂಮಪಾನ 'ಮುಕ್ತ', ಮದ್ಯಪಾನ 'ಮುಕ್ತ' ಚಿತ್ರ. ಆದರೂ ಚಿತ್ರ 'ದೂರದಿಂದಲೇ ಜೀವ ಹಿಂಡುತ್ತದೆ'. ಸೋ... ಇದು ಸದಭಿರುಚಿಯ ಹಾಗೂ ಮಸಾಲೆ ಇಲ್ಲದ ಸಾದಾ ಅಭಿರುಚಿಯ ಚಿತ್ರ. ಈ ಚಿತ್ರದಲ್ಲಿ ಒಂದು ಸಮಸ್ಯೆ, ಒಂದು ವಿಶೇಷ ಮಾತ್ರವಲ್ಲ... ಒಂದು ಕಥೆಯೂ ಇದೆ! ನಿರೂಪಣೆಯಲ್ಲಿ ಕೊರತೆಯೂ ಇದೆ. ಅಗ್ರಿಕಲ್ಚರ್ ಎಮ್ಮೆಸ್ಸಿ ಮಾಡಿ ಹಳ್ಳೀಲಿ ಸೆಟ್ಲ್ ಆಗಲು ಬರುವ ನಾಯಕ ಒಳ್ಳೆ ಕಲ್ಚರ್ ಇರೋ ಹಳ್ಳಿ ಹುಡುಗೀನ ಕಂಡು ಅಪ್ಪನ ಮಾತಿಗೆ ಅಗ್ರೀ ಮಾಡದೆ ಅವಳೇ ಬೇಕೆಂದು ಹಠ ಹಿಡಿಯುತ್ತಾನೆ. ರಾಜಕೀಯ ಲಾಭಕ್ಕಾಗಿ ಸ್ನೇಹಿತನ ಮಗಳನ್ನು ಸೊಸೆ ಮಾಡಿಕೊಳ್ಳಲು ಯೋಚಿಸಿದ್ದ ತಂದೆ, ಜ್ಯೋತಿಷ್ಯದ ಕಾರಣವಿಟ್ಟುಕೊಂಡು ಕಥೆಗೆ ಹಲವು ಟ್ವಿಸ್ಟ್ ಕೊಡುತ್ತಾನೆ. ಕೊನೆಯಲ್ಲಿ ಎಲ್ಲವೂ ಗೊತ್ತಾಗಿ ದೋಷ ಪರಿಹಾರವಾಗುತ್ತದೆ. ಚಿತ್ರದ ಕೊನೆಯಲ್ಲಿ ನಾಯಕನ ತಂದೆ ಎಲ್ಲರನ್ನೂ ಕ್ಷಮೆ ಕೇಳುತ್ತಿದ್ದರೆ, ಪ್ರೇಕ್ಷಕರಲ್ಲಿ ಕ್ಷಮೆ ಕೋರುತ್ತಿದ್ದಾರಾ ಎಂಬಂತೆ ಭಾಸವಾಗುತ್ತದೆ. ಚಿತ್ರದಲ್ಲಿ ಕಥೆ ಹಳೆಯದಿದೆ ಎಂಬ ಅರಿವಿರುವ ನಿರ್ದೇಶಕರು ಚಿತ್ರಕ್ಕೆ ವೇಗ ದೊರಕಿಸಲು ಪ್ರಯತ್ನಿಸಿ 'ನಾಲ್ಕು ವರ್ಷಗಳ ನಂತರ' ಎಂದು ಅಪ್ಡೇಟ್ ಮಾಡ್ತಾರೆ. ಆದರೆ ಫ್ಲಾಷ್ಬ್ಯಾಕ್ 'ಭೂತ' ಚಿತ್ರವನ್ನು ಮತ್ತೆ ಇಪ್ಪತ್ತೈದು ವರ್ಷ ಹಿಂದೆ ಕಳಿಸುತ್ತದೆ. ವಿಜಯ್ ಪಾತ್ರದಲ್ಲಿ ಪ್ರಜ್ವಲ್, ಸ್ವಗತದಲ್ಲಿ ಮಾತಾಡಿಕೊಳ್ಳುವಾಗ, ಪದೇಪದೇ ತಲೆಯಾಡಿಸುವಾಗ, ತಮಿಳಿನ ವಿಜಯ್ರನ್ನು ನೆನಪಿಸುತ್ತಾರೆ. ಕಣ್ಣಿಲ್ಲದಿರೋವ್ರರನ್ನು ಕಂಡು ಮರುಗುವ ಪ್ರಣೀತಾರನ್ನು ನೋಡಲು ಎರಡು ಕಣ್ಣು ಸಾಲದು. ಹಾರ್ದಿಕಾ ಶೆಟ್ಟಿಯವರ ಮುಂದಿನ ಚಿತ್ರಕ್ಕೆ ಹಾರ್ದಿಕ ಶುಭಾಶಯಗಳು. ಪಾಂಡು ಮತ್ತು ಕುರಿ ಬಾಂಡು 'ಟೀವಿ' ಕಾಮಿಡಿ ಟೈಮಿಂಗ್ ಅಲ್ಲಲ್ಲಿ 'ರೈಟ್' ಅಲ್ಲಲ್ಲಿ ರಾಂಗ್ ಆಗಿದೆ. ಅನ್ಯಗ್ರಹದ ಹೆಸರಿನ ಚಿತ್ರದಲ್ಲಿ ಅರ್ಜುನ್ ಜನ್ಯ ಸಂಗೀತದ ಎರಡು ಹಾಡುಗಳು ಗಮನ ಸೆಳೆದರೂ, ಸಾಹಿತ್ಯವನ್ನು ನುಂಗಿಹಾಕಬಾರದಿತ್ತು. ಥ್ರಿಲ್ಲರ್ ಮಂಜು ತಮ್ಮ ಟ್ರೇಡ್ಮಾರ್ಕ್ ಫೈಟ್ ಕಂಪೋಸ್ ಮಾಡೋ ಮೂಲಕ ಮೂರು ಸಾಹಸ ನಿರ್ದೇಶಕರ ಮಧ್ಯೆ ತಮ್ಮನ್ನು ಗುರುತಿಸಿಕೊಂಡಿದ್ದಾರೆ. ಒಟ್ಟಾರೆಯಾಗಿ, ಅಂಗಾರಕನದು ಒಂಥರಾ ಹೈಜೆನಿಕ್ ಆದರೂ ಸಪ್ಪೆ ಊಟ. ಅಭಿರುಚಿಯ ವಿಷಯದಲ್ಲಿ ಅಂಗಾರಕ ತೀರಾ ಜಿಎಸ್ಎಲ್ವಿಯ ಎತ್ತರಕ್ಕಲ್ಲದಿದ್ದರೂ, ರುಚಿಯ ಲೆಕ್ಕದಲ್ಲಿ ನಮ್ಮ ಲೋಕಲ್ ಎಸ್ಎಲ್ವಿ ಹತ್ತಿರಕ್ಕೂ ಬಂದಿಲ್ಲ. ತರಂಗಿಣಿ ಚಿತ್ರಕ್ಕೆ ರಾಜ್ಯಪ್ರಶಸ್ತಿ ಗಳಿಸಿ ಭರವಸೆ ಮೂಡಿಸಿದ್ದ ಕೌಶಿಕ್ ಅವರ ನಿರ್ದೇಶನ 'ಹೌ ಸಿಕ್' ಅನ್ನುವಂತೇನೂ ಇಲ್ಲವಾದರೂ, ಅಂಗಾರಕಯಾನ ಮುಗಿಸಿರೋ ರಾಕೆಟ್ ಯುಗದಲ್ಲಿ ಈ ಸ್ಲೋ (ಎ)ಮೋಶನ್ ಚಿತ್ರ ಬೇಕಿತ್ತಾ ಎಂಬುದು ನೋಡುಗರಲ್ಲುಳಿಯುವ ಕಟ್ಟಕಡೆಯ ಪ್ರಶ್ನೆ. ಅಂಗಾರಕ ಅಂತ ಟೈಟಲಿಟ್ಟು ಅಂಗಚೇಷ್ಟೆ, ಅಂಗಾಂಗ ಪ್ರದರ್ಶನಗಳೇ ಇಲ್ಲವೆಂಬ ಗೊಣಗಾಟ ಮಾಮೂಲಿ ಪ್ರೇಕ್ಷಕರಿಂದ ಕೇಳಿ ಬಂದದ್ದು ಚಿತ್ರಕ್ಕೆ ಸಿಕ್ಕಿರುವ ನಿಜವಾದ 'ಯು' ಸರ್ಟಿಫಿಕೇಟು. - ನವೀನ್ ಸಾಗರ್