ಸಿನಿಮಾ 'ಪಗಡೆ' ಆಟವಲ್ಲ ಭಯೋತ್ಪಾದನೆಯ ಕುರಿತ ಚಿತ್ರಗಳು ಎಂದಾಗ ಸಿದ್ಧ ಸೂತ್ರಗಳು ನಿರ್ದೇಶಕರ ಮುಂದೆ ನಿಲ್ಲುತ್ತವೆ. ಭಯೋತ್ಪಾದನೆಯ ಕುರಿತ ಚಿತ್ರಗಳು ಎಂದಾಗ ಸಿದ್ಧ ಸೂತ್ರಗಳು ನಿರ್ದೇಶಕರ ಮುಂದೆ ನಿಲ್ಲುತ್ತವೆ. ವರ್ಲ್ಡ್ ಕಪ್ ಮ್ಯಾಚ್ ನೋಡಲು ಬರುವ ಪಾಕಿಸ್ತಾನಿಗಳು, ಸ್ಥಳೀಯರ ನೆರವಿನಿಂದ ವಿದ್ವಂಸಕ ಕೃತ್ಯಗಳನ್ನು ಮಾಡುವುದು, ಜೊತೆಗೆ ಗೃಹ ಮಂತ್ರಿಯ ಮಗನನ್ನೋ, ಮಗಳನ್ನೋ ಅಪಹರಿಸಿ ಕೊಲ್ಲುವುದಕ್ಕೆ ಯೋಜನೆ ರೂಪಿಸುವುದು, ಇದರ ನಡುವೆ ನಮ್ಮಲ್ಲೇ ಕೆಲವರು 'ಸೌಹಾರ್ದ' ಮೆರೆದು ಪಾಕಿಸ್ತಾನಿಗಳಿಗೆ ಪಾಠ ಕಲಿಸುವುದು, ಭಯೋತ್ಪಾದಕರ ಸಂಚುಗಳಲ್ಲಿ ಸಿಕ್ಕಿಕೊಂಡಿರುವ ನಾಯಕನ ಕುಟುಂಬಕ್ಕೆ ಮುಕ್ತಿ... ಈ ಅಂಶಗಳಿಂದ 'ಟೆರರ್ ಸಿನಿಮಾ' (ಒಂದು ರೀತಿಯಲ್ಲಿ ಹಾರರ್ ಇದ್ದ ಹಾಗೆ) ಗಳು ಹೊರಗೆ ಕಾಲಿಟ್ಟಿಲ್ಲ. ಅಪರೂಪಕ್ಕೆ ಆಗಾಗ ಕೆಲವು ಭಿನ್ನ ಪ್ರಯೋಗಗಳೊಂದಿಗೆ ಭಯೋತ್ಪಾದಕ ಚಿತ್ರಗಳು ಮೂಡಿ ಬಂದಿವೆಯಾದರೂ ಮೂಲ ಸೂತ್ರಗಳನ್ನು ಬಿಟ್ಟುಕೊಟ್ಟಿಲ್ಲ. ಅಂಥ ಹಳೆ ಸೂತ್ರಗಳ ಇನ್ನೊಂದು ಚಿತ್ರ 'ಪಗಡೆ'. ಪುರುಷೋತ್ತಮ್ ನಿರ್ದೇಶಕ. ವಿಶ್ವಾಸ್ ಭಾರದ್ವಜ್, ಗಮ್ಯ ಜೋಡಿ. ಉಳಿದಂತೆ ಧರ್ಮ, ಅಚ್ಯುತ್ ಕುಮಾರ್, ರವಿಶಂಕರ್, ಹೊನ್ನವಳ್ಳಿ ಕೃಷ್ಣ, ಅಮಿತ್, ಯತಿರಾಜ್, ಶೋಭಿನಾ ಪ್ರಮುಖ ಪಾತ್ರಧಾರಿಗಳು. ಕೆಲ ಚಿತ್ರಗಳು ಇರುತ್ತವೆ. ಅವು ಯಾಕೆ ಸಿನಿಮಾ ಆಗಿವೆ, ಅಂಥ ಸಿನಿಮಾಗಳನ್ನು ತಯಾರಿಸುವ ಅಗತ್ಯವೇನು, ಜನ ಆ ಚಿತ್ರಗಳನ್ನು ಯಾಕೆ ನೋಡಬೇಕು? ಎಂಬಿತ್ಯಾದಿ ಪ್ರಶ್ನೆಗಳನ್ನು ಹುಟ್ಟು ಹಾಕುತ್ತವೆ. ಇಂಥವೇ ಪಶ್ನೆಗಳ ಜಾಡು ಹಿಡಿದು 'ಪಗಡೆ' ನೋಡಲು ಹೊರಟರೆ ನಿರ್ಲಿಪ್ತತೆ ಮೂಡುತ್ತದೆ. ಚಿತ್ರದ ಕಥೆ, ಪಾತ್ರಧಾರಿಗಳ ಅಭಿನಯ, ಬೆಂಗಳೂರಿನ ಸೌಹಾರ್ದಕ್ಕೂ, ಪಾಕಿಸ್ತಾನಕ್ಕೂ ಏನು ಸಬಂಧ? ಅಷ್ಟಕ್ಕೂ ನಿರ್ದೇಶಕ ಹೇಳ ಹೊರಟಿರುವುದೇನು? ಹೀಗೆ ಏನನ್ನೂ ಕೇಳದೆ ಸುಮ್ಮನೆ ನೋಡಬೇಕಾದ ಚಿತ್ರವಿದು. ಬೆಂಗಳೂರಿನಲ್ಲಿ ನಡೆದ ವಿಶ್ವಕಪ್ ಪಂದ್ಯ ನೋಡಲು ಬರುವ ಪಾಕಿಸ್ತಾನಿ ಕ್ರೀಡಾಭಿಮಾನಿಗಳ ಪೈಕಿ ಕೆಲವರು ವಾಪಸು ಹೋಗಲ್ಲ. ಅವರು ಭಯೋತ್ಪಾದಕರಾ ಎಂಬುದು ಪೊಲೀಸರ ಶಂಕೆ. ಅದಕ್ಕೆ ತಕ್ಕಂತೆ ನಾಯಕನೇ ಇಲ್ಲಿ ಭಯೋತ್ಪಾದಕ. ಆತ ಗೃಹ ಸಚಿವರ ಮಗನನ್ನು ಕೊಲ್ಲಲು ಬಂದಿರುತ್ತಾನೆ. ಆಸ್ಪತ್ರೆಗೆ ಸೇರುವ ನಾಯಕನ ಮುಂದೆ ಕಣ್ಣೀರು ಹಾಕುತ್ತ ನಿಲ್ಲುವ ಮುಖ್ಯ ಪಾತ್ರಧಾರಿಗಳು ಸರದಿಯಂತೆ ಪ್ಲ್ಯಾಷ್ ಬ್ಯಾಕ್‌ಗೆ ಹೋಗುವ ಮೂಲಕ ಕಥೆ ಸಾಗುತ್ತದೆ. ಈ ಪ್ಲ್ಯಾಷ್ ಬ್ಯಾಕ್ ತಂತ್ರ, ಗಂಭೀರ ಕಥೆಯನ್ನು ಆಯ್ಕೆ ಮಾಡಿಕೊಂಡಿರುವುದು ಸರಿ. ಆದರೆ ಅದನ್ನು ತೆರೆ ಮೇಲೆ ಪರಿಣಾಮಕಾರಿಯಾಗಿ ಕಟ್ಟಿಕೊಟ್ಟಿಲ್ಲ. ಹೀಗಾಗಿ ಸಿನಿಮಾ ನಿರ್ದೇಶನ 'ಪಗಡೆ' ಆಟವಲ್ಲವೆಂದು ನಿರ್ದೇಶಕರು ತಿಳಿಯಬೇಕಿದೆ. - ಕೇಶು