ಪುರಸೊತ್ತಾಗಿರೋರಿಗೆ ಮಾತ್ರ ಸಿನಿಮಾ ಮಾಡುವವರಲ್ಲಿ ಎರಡು ವಿಧ. ಏನೆಲ್ಲ ಕಷ್ಟಪಟ್ಟು ಹೊಸದನ್ನೇ ಕೊಡಬೇಕು ಎಂದು ಪ್ರಯತ್ನಿಸುವವರು ಮತ್ತು ಅದೇ ಹಳೆ ಕಥೆ ಇಟ್ಕೊಂಡು ಹೊಸ ಚಿತ್ರ ಮಾಡಿ ದುಡ್ಡು ಮಾಡುವವರು. ಈ ಪೈಕಿ ಎರಡನೇ ಕೆಟಗರಿಯ ಚಿತ್ರ ಬೃಂದಾವನ. ಅದೇ ಕಥೆ ಇಟ್ಕೊಂಡು ಎಷ್ಟು ಸಿನಿಮಾ ಮಾಡಬಹುದು ಎನ್ನುವ ಚಾಲೆಂಜಿಗೆ ಉತ್ತರದಂತಿದೆ ಚಾಲೆಂಜಿಂಗ್ ಸ್ಟಾರ್ ಅಭಿನಯದ ಈ ಚಿತ್ರ. ತೆಲುಗು ನಿರ್ದೇಶಕರಿಗೆ ಬೇರೆ ಯಾವುದೂ ಹೊಸ ಕಥೆ ಹೊಳೆಯದಿದ್ದಾಗ ಉಳಿಯುವ ದಾರಿ ಒಂದೇ. ಚಿತ್ರದ ನಾಯಕನನ್ನು ಕರೆದು 'ಒಂದ್ ಕೆಲ್ಸ ಮಾಡು, ಎರಡು ಫ್ಯಾಮಿಲಿನ ಒಂದ್ ಮಾಡು', ಒಟ್ನಲ್ ಏನೋ ಒಂದ್ ಮಾಡು ಎನ್ನುತ್ತಾರೆ. ಇಲ್ಲಿ ಆಗಿರುವುದೂ ಅದೇ. ನಾಯಕಿ ತನ್ನ ಪ್ರೇಮಿಯನ್ನು, ಗೆಳತಿಯ ಪ್ರಿಯಕರನಾಗಿ ಅಭಿನಯಿಸುವಂತೆ ಒತ್ತಾಯಿಸುತ್ತಾಳೆ. ಆದರೆ ಕೊನೆಗೆ ನಾಯಕ ಇಬ್ಬರು ಹುಡುಗಿಯರಿಗೂ ಪ್ರಿಯನಾಗುವುದರಿಂದ, ಒಂದ್ ಹೇಳಿದ್ರೆ ಇನ್ನೊಂದ್ ಮಾಡಿದ ಎನ್ನುವಂತೆ 'ನೋಡ್ಕೊಂಡ್ ಬಾರೋ ಅಂದ್ರೆ ನೀ ಮಾಡ್ಕೊಂಡ್ ಬಂದ್ಯಲ್ಲೋ' ಅಂತಾಳೆ ಮೊದಲ ನಾಯಕಿ. ಈ ಕಥೆ ಹೇಳಲು ನಿರ್ದೇಶಕರು ತೆಗೆದುಕೊಂಡಿರುವ ಸಮಯ 3 ತಾಸು. ಒಂದು, ಎರಡು, ಮೂರು ಆಮೇಲಿನ್ನೇನು...ಎನ್ನುವ ಪ್ರೇಕ್ಷಕನಿಗೆ, ಜಾಹೀರಾತುಗಳ ಹಾವಳಿಯಿಲ್ಲದೆ ಒಂದ್ ಹತ್ತು ಸೀರಿಯಲ್‌ಗಳನ್ನ ಸತತವಾಗಿ ನೋಡುವ ಅನುಭವ. ಆರಂಭದ ಸೀನ್‌ನಲ್ಲಿ ಒಂದು ನಾಟಕದ ಪ್ಲಾನ್ ಆಗುತ್ತದೆ, ಇಂಟರ್‌ವಲ್‌ವರೆಗೂ ಆ ನಾಟಕದ ಯಶಸ್ವಿ ಪ್ರದರ್ಶನ. ಆದರೆ ಅಲ್ಲಿಂದ ಮುಂದೆ ಇದು ನಾಟಕ ಅಂತ ಹೇಳೋಕೆ ಇನ್ನರ್ಧ ಸಿನಿಮಾ ವ್ಯಯಿಸಿದ್ದಾರೆ ನಿರ್ದೇಶಕ ಮಾದೇಶ್. ಮಧ್ಯಂತರದ ನಂತರ ಹೆಚ್ಚೆಂದರೆ ಮೂರು ಸೀನ್‌ಗಳಲ್ಲಿ ಮುಗಿಸಬಹುದಾಗಿದ್ದ ಚಿತ್ರವನ್ನು ಮೂರು ಗಂಟೆಯವರೆಗೂ ಎಳೆದೊಯ್ದಿರುವ ಅವರ ತಾಳ್ಮೆ ದೊಡ್ಡದು. ಹಾಗಾಗಿ ದ್ವಿತೀಯಾರ್ಧದಲ್ಲಿ ಕುರಿ ಪ್ರತಾಪ ಮತ್ತು ಸಾಧು ಕೋಕಿಲಾರ ಪ್ರತಾಪವೇ ಹೆಚ್ಚು. ಸಿನಿಮಾ ಮುಗಿಯುವವರೆಗೂ ನಿರ್ದೇಶಕರು ಹೇಳಿದಷ್ಟು ಸಲ ನಾಯಕನ ಮೇಲೆ ದಂಡೆತ್ತಿ ಬರುವ ವಿಲನ್‌ಗೆ 'ನಿನ್ ಕಮಿಟ್‌ಮೆಂಟ್ ಇಷ್ಟ ಆಯ್ತು ಕಣೋ' ಎಂಬ ಡೈಲಾಗ್ ಹೊಡೆದು ಋಣ ತೀರಿಸುತ್ತಾನೆ ನಾಯಕ. ಜಾಯಿಂಟ್ ಫ್ಯಾಮಿಲಿ ಕಥೆ ಆದ್ದರಿಂದ ಜಾಯಿಂಟ್ ಪೆಯ್ನ್‌ಗಳಿಗೆ ಕೊರತೆ ಇಲ್ಲ. ಮನೆಮಕ್ಕಳಿರಲವ್ವ ತೆರೆತುಂಬಾ ಎನ್ನುವ ಕಥೆಯನ್ನು ಟೀಮ್ ಎಫರ್ಟ್ ಎನ್ನಲೂಬಹುದು. ಒಂದೆರಡು ಹೊಡೆದಾಟಗಳನ್ನು ಬಿಟ್ಟರೆ ಎಲ್ಲೂ ಅಶ್ಲೀಲ ಎನಿಸುವಂಥ ಸಂಭಾಷಣೆಗಳಿಲ್ಲ. ಆ ಲೆಕ್ಕದಲ್ಲಿ ಕಂಪ್ಲೀಟ್ ಫ್ಯಾಮಿಲಿ ಚಿತ್ರವಾದರೂ, ನಾಯಕ ಕೃಷ್ಣ, ಇಬ್ಬರು ನಾಯಕಿಯರನ್ನೂ ಒಲಿಸಿಕೊಳ್ಳುವುದಕ್ಕೋ ಏನೋ ಇದು ಕೃಷ್ಣಲೀಲೆಯ ಸಿನಿಮಾ ಎಂದು ಸೆನ್ಸಾರ್ ಮಂಡಳಿ ಯು ಎ ನೀಡಿದೆ. ಅಭಿಮಾನಿಗಳಿಗೆ ಚಿತ್ರ ಇಷ್ಟವಾದರೂ ಅವರೂ ಸಂಪೂರ್ಣ ತೃಪ್ತರಲ್ಲ. ಕ್ರಿಷ್ ಪಾತ್ರದಲ್ಲಿ ದರ್ಶನ್ ಫೈಟ್‌ಗಳಲ್ಲಿ 'ಕ್ರಿಷ್‌' ಗೇಲ್‌ನಂತೆ ಕಂಡರೂ, ಕ್ರಿಷ್‌ನಂತೆ ಆಗಾಗ ಗಾಳಿಯಲ್ಲಿ ಹಾರಿ 'ರೋಪ್‌' ಹಾಕ್ಕೊಂಡ್ ಫೈಟ್ ಮಾಡಿದರೂ, ವಿಲನ್‌ಗಳಿಗೆ 'ರೋಪ್‌' ಹಾಕುವ ಅವರ ಡೈಲಾಗ್‌ಗಳಲ್ಲಿ ಜೋಷ್ ಇಲ್ಲ. ಡಿಐ ಸಮಸ್ಯೆಯೋ ಅಥವಾ ಥಿಯೇಟರ್ ಸಮಸ್ಯೆಯೋ ಇಡೀ ಸಿನಿಮಾ ಡಲ್. ಐಸ್‌ಲ್ಯಾಂಡ್‌ನಲ್ಲಿ ಕೋಟಿಗಟ್ಟಲೇ ವೆಚ್ಚದಲ್ಲಿ ಚಿತ್ರೀಕರಿಸಿದ್ದಾರೆ ಎನ್ನಲಾದ ಹಾಡು ಕೂಡ ಕರಗಿ ನೀರಾಗಿದೆ. ನಾಯಕಿಯರಿಗೆ ಒಬ್ಬರಿಗೊಬ್ಬರು ಪರಿಚಯ ಇದ್ದರೂ ತಾವು ಅಕ್ಕತಂಗಿ ಅಂತ ಗೊತ್ತಿರುವುದಿಲ್ಲ ಎಂಬುದನ್ನು ಪ್ರೇಕ್ಷಕ ಒಂದು ಡೈಲಾಗ್ ಕೇಳಿ ಸುಮ್ಮನೇ ಒಪ್ಪಿಕೊಳ್ಳಬೇಕು. ಹಾಗೆ ನೋಡಿದರೆ, ಸಿನಿಮಾ ತೀರಾ ಬೋರಾಗದಂತೆ ಮಾಡಿರುವುದರಲ್ಲಿ 'ಏನ್ ನಿಮ್ ಕಣ್ಣಿಗೆ ನಾನು ಕಾಮಿಡಿಯನ್ ಥರಾ ಕಾಣ್ತೀನಾ?' ಎನ್ನುವ ಸಾಧು ಕಾಣಿಕೆ ದೊಡ್ಡದು. ಅಷ್ಟೊಂದು ಜನ ಕಲಾವಿದರಲ್ಲಿ ಎಲ್ಲರಿಗೂ ಸಮಪ್ರಮಾಣದ ಡೈಲಾಗ್ ಕೊಡುವಲ್ಲಿ ನಿರ್ದೇಶಕರು ವಿಫಲರಾಗಿದ್ದಾರೆ. ಆದ್ರೂ ಏನು ಮಾಡೊಕಾಗಲ್ಲ, ಜಾಯಿಂಟ್ ಫ್ಯಾಮಿಲಿ ಅಂದ್ಮೇಲೆ ಒಂದ್ ಡೈಲಾಗ್ ಬರುತ್ತೆ, ಹೋಗತ್ತೆ ಅದಕ್ಕೆಲ್ಲ ತಲೆ ಕೆಡಿಸಿಕೊಳ್ಳಬಾರದು. ನನಗೆ ಒಂದೂ ಡೈಲಾಗ್ ಕೊಟ್ಟೇ ಇಲ್ಲ ಎಂಬುದನ್ನು ವೀಣಾ ಸುಂದರ್ ಬಾಯಿಬಿಟ್ಟೇ ಹೇಳುತ್ತಾರೆ, ಆದರೆ ಅದೇ ಪರಿಸ್ಥಿತಿಯಲ್ಲಿರುವ ನಿರೋಷಾ ಕುಟುಂಬದ ಮರ್ಯಾದೆ ಉಳಿಸಲು ಸುಮ್ಮನಿದ್ದುಕೊಂಡೇ ಎಲ್ಲವನ್ನೂ ಸಹಿಸಿಕೊಳ್ಳುತ್ತಾರೆ. ಪುರುಷಪ್ರಧಾನ ಚಿತ್ರ ಆದ್ದರಿಂದ ಗೀತಾ ಮತ್ತು ಸಂಗೀತಾ ಅವರಿಗೂ ಬಾಯಿಬಿಡಲು ಹೆಚ್ಚಿನ ಅವಕಾಶವಿಲ್ಲ. ಹರಿಕೃಷ್ಣ ಹಾಡುಗಳಲ್ಲಿ ಚಿತ್ರವನ್ನು ಗೆಲ್ಲಿಸುವಂಥ ತಾಕತ್ ಇರುವುದು 'ಛೀ ಕಳ್ಳ, ಕಳ್ಳ, ಓನ್ ಮಾಡ್ತಾ ಇದೀಯೋ, ಲವ್ ಮಾಡ್ತಾ ಇದೀನಿ' ಹಾಡಿಗೆ ಮಾತ್ರ. ಉಳಿದ ಹಾಡುಗಳು ದರ್ಶನ್ ಹರಿಕೃಷ್ಣ ಜೋಡಿಯ ಹಾಡುಗಳ ಖ್ಯಾತಿಯಿಂದ ಬಲುದೂರ. ರಮೇಶ್ ಬಾಬು ಛಾಯಾಗ್ರಹಣಕ್ಕೆ ಅದ್ದೂರಿ ಸೆಟ್‌ಗಳೇ ಆಧಾರ. ನಾಯಕಿಗೋಸ್ಕರವೇ ಸಿನಿಮಾ ನೋಡಬಹುದು ಎನ್ನುವ ಚಾರ್ಮ್ ಕಾರ್ತಿಕಾ ಅವರ ಮುಖದಲ್ಲಾಗಲೀ, ಅಭಿನಯದಲ್ಲಾಗಲೀ ಇಲ್ಲ. ತನ್ನ ಬಾಯ್‌ಫ್ರೆಂಡ್ ಅನ್ನು ಇನ್ನೊಬ್ಬಳ ಜೊತೆ ಸೇರಿಸುವ ಮಿಲನ ಅವರದ್ದು ಕಣ್ಣು,ಕಣ್ಣು ಬಿಡುವಂಥ ಅಭಿನಯ. ಸಾಯಿಕುಮಾರ್, ಸಂಪತ್, ದೊಡ್ಡಣ್ಣ, ಶರತ್ ಬಾಬು ನಾಯಕ ದರ್ಶನ್ ಪಾತ್ರಕ್ಕೆ ಗೌರವ ಸಲ್ಲಿಸಿದ್ದಾರೆ. ಬೃಂದಾವನ ಚಿತ್ರ ನೋಡುವಾಗ ಆಗಾಗ 'ಬ್ರೂ' ಕುಡಿಯಬೇಕು ಎನ್ನುವಷ್ಟು ಬೋರ್ ಆಗದಿದ್ದರೂ, ಮೂರು ಗಂಟೆಯ ಫ್ಯಾಮಿಲಿ ಡ್ರಾಮಾ ಇರುವ ಚಿತ್ರಕ್ಕೆ 'ಪುರಸೊತ್ತಾಗಿರೋರಿಗೆ ಮಾತ್ರ' ಎನ್ನುವ ಅಡಿಬರಹ ಹಾಕಬಹುದಿತ್ತು. - ಹರಿ