'ಗುಬ್ಬಿ' ಗೂಡೊಳಗೆ ಕಲ್ಲು, ಮುಳ್ಳು! ಚಿತ್ರ ನೋಡಿದವನಿಗೆ ಗೂಡಿನ ತುಂಬಾ ಕಲ್ಲು, ಮುಳ್ಳುಗಳೇ ಹೆಚ್ಚಾಗಿ ಕಾಣಿಸುತ್ತವೆ. ಹೀಗಾಗಿ ಪ್ರೇಕ್ಷಕ, 'ಇಲ್ಲಿ ಏನ್ ನಡಿತೀದೆ' ಎಂದು ಪದೇ ಪದೇ ಅದೇ ಸಂಭಾಷಣೆ ನೆನಪಿಸಿಕೊಳ್ಳುತ್ತಾನೆ. ಸಾಫ್ಟ್‌ವೇರ್ ಉದ್ಯೋಗಿ ಪ್ರೀತಂ, ದಿನಸಿ ಅಂಗಡಿಯ ಮಾಲೀಕನ ಮಗ ಉಮೇಶ್ ಶೆಟ್ಟಿ, ಮನೆ ಬ್ರೋಕರ್ ಯೋಗಿ ಈ ಮೂವರು ಚಡ್ಡಿ ದೋಸ್ತ್‌ಗಳು. ಪ್ರತಿಯೊಂದನ್ನೂ ಸ್ನೇಹಿತರಿಬ್ಬರ ಬಳಿ ಹೇಳಿಕೊಳ್ಳುವ ಪ್ರೀತಂ, ತನ್ನ ಲವ್ ಸ್ಟೋರಿಯನ್ನೂ ನರೇಟ್ ಮಾಡುತ್ತಾನೆ. ಆದರೆ ಪ್ರೀತಂ ಪ್ರೀತಿಸುವ ಹುಡುಗಿ ದೇಶ ಬಿಟ್ಟು ಮಲೇಷ್ಯಾಗೆ ಹೋಗಿದ್ದಾಳೆ. ಪ್ರೇಯಸಿಯನ್ನು ಹುಡುಕಿಕೊಂಡು ಹೊರಡಲು ಸಿದ್ಧನಾಗುವ ಜಿಪುಣ ಸ್ನೇಹಿತ ಪ್ರೀತಂ ಜೊತೆ ವಿದೇಶಿ ಪಯಣ ಕೈಗೊಳ್ಳುವ ಐಡಿಯಾ ಶೆಟ್ಟಿ ಮತ್ತು ಯೋಗಿಯದ್ದು. ವಿದೇಶಕ್ಕೆ ಹೋಗುವ ಈ ಮೂವರ ಜೊತೆ ಸ್ವದೇಶದಲ್ಲಿ ಆಕಸ್ಮಿಕವಾಗಿ ಪರಿಚಯವಾದ ಮಿಲನ ಸೇರಿಕೊಳ್ಳುತ್ತಾಳೆ. ಮಲೇಷ್ಯಾದಲ್ಲಿರುವ ಈಕೆಯ ದೊಡ್ಡಪ್ಪನ ಮನೆಯಲ್ಲಿ ಮೂವರ ಉಚಿತ ವಾಸ. ಈ ಫಾರಿನ್ ಟ್ರಿಪ್‌ನಲ್ಲಿ ಒಂದು ಪ್ರೇಮ ಕಥೆ ಮೂರಾಗುತ್ತದೆ. ಶೆಟ್ಟಿಗೆ ಲೋಕಲ್ ಹುಡುಗಿ, ಯೋಗಿಗೆ ಅಲ್ಲೇ ಇರುವ ಯೋಗ ಟೀಚರ್ ಜೊತೆಯಾಗುತ್ತಾಳೆ. ಮುಂದೆ ಮೂವರ ಪ್ರೇಮಕಥೆ ಏನಾಗುತ್ತದೆಂದು ವಿರಾಮಕ್ಕೂ ಮುನ್ನವೇ ಪ್ರೇಕ್ಷಕನಿಗೆ ಅರ್ಥವಾದರೂ ನಿರ್ದೇಶಕ ಪ್ರೀತಂ ಗುಬ್ಬಿ ಮಾತ್ರ ಹಿಗ್ಗಿಸುವ ಸಾಹಸ ಮಾಡುತ್ತಾರೆ. ಸೆಕೆಂಡ್ ಹಾಫ್‌ನಲ್ಲಾದರೂ ಗುಬ್ಬಿ ಅಸ್ತ್ರದಲ್ಲಿ ಏನೋ ಅಡಗಿರಬಹುದು ಎಂದುಕೊಂಡು ಬಂದರೆ, ಆಗಲೂ ಬಬಲ್‌ಗಮ್ ಅಗಿಯುವ ಕಾರ್ಯದಲ್ಲಿ ಚಿತ್ರ ನಿರತವಾಗಿರುತ್ತದೆ. ರಂಗಾಯಣ ರಘು ಕೈಯಲ್ಲಿ ಕಾಮಿಡಿ ಮಾಡಿಸಲು ಹೋಗಿ ಅಪಹಾಸ್ಯಕ್ಕೆ ಒಳಗಾಗುತ್ತಾರೆ. ಹೋಗಿಲಿ ಸಾಧು ಏನಾದರು ನಗಿಸಬಹುದೇ? ಎಂದುಕೊಂಡರೆ ಕೋಕಿಲಾರನ್ನೂ ಅಳಿಸುತ್ತಾರೆ ಗುಬ್ಬಿ. ಪ್ರೇಕ್ಷಕನಿಗೆ ಹೊಸ ಚಿತ್ರ ಕೊಡಬೇಕೆಂಬ ಉಮೇದು ಪ್ರೀತಂರ ಮಾತಿನಲ್ಲಿ ವ್ಯಕ್ತವಾದರೂ ಅದು ಕಾರ್ಯಗತವಾಗುತ್ತಿಲ್ಲ. ತಮ್ಮ ಹಿಂದಿನ ಚಿತ್ರಗಳಲ್ಲಿ ಮಾಡಿದ ತಪ್ಪುಗಳನ್ನೇ ಇಲ್ಲೂ ಮುಂದುವರಿಸಿದ್ದಾರೆ. ಗಟ್ಟಿಯಾದ ಕಥೆ ಮಾಡಿಕೊಳ್ಳದೆ, ಕೇವಲ ಪಾತ್ರಧಾರಿಗಳ ಔಟ್ ಲುಕ್ ನೋಡಿ, ಒಂದಿಷ್ಟು ದೃಶ್ಯಗಳನ್ನು ಜೋಡಿಸಿದಂತೆ ಕಾಣುವ 'ನಮ್ ದುನಿಯಾ ನಮ್ ಸ್ಟೈಲ್‌' ಚಿತ್ರಕ್ಕೆ ಒಂದು ಮಟ್ಟಕ್ಕಾದರೂ ಲಿಫ್ಟ್ ಕೊಡುವುದು ವೇಣು ಅವರ ಕ್ಯಾಮೆರಾ, ಕಾಶ್ಮಿರದ ಹಾಡು. ಇದರ ನಡುವೆ ಯೋಗಿ (ಕೃಷ್ಣ) ಹಾಗೂ ಮಿಲನ ಗಮನ ಸೆಳೆಯುತ್ತಾರೆ. ಉಳಿದಂತೆ ಲಿಖಿತ್, ವಿನಾಯಕ್ ಜೋಷಿ, ಸೋನಿಯಾ ಗೌಡ, ಕಾವ್ಯ ಶೆಟ್ಟಿ ಚಿತ್ರದಲ್ಲಿ ಇದ್ದಾರೆ. ನೋಡಕ್ಕೆ ಚೆನ್ನಾಗಿರುವ ಕಲಾವಿದರು ಸಿಕ್ಕರೆ ಸಾಕು, ಎಂಥಾ ಚಿತ್ರ ಬೇಕಾದರೂ ಮಾಡಬಹುದೆಂಬ ಯೋಚನೆಯಿಂದ ಪ್ರೀತಂ ಹೊರಬಂದರೆ ಗುಬ್ಬಿ ಗೂಡಿನಲ್ಲಿ ಮತ್ತೆ 'ಮುಂಗಾರು ಮಳೆ'ಯಾಗುವ ಸಾಧ್ಯತೆಗಳಿವೆ. - ಆರ್. ಕೇಶವಮೂರ್ತಿ