ಹಣದ ಹಿಂದಿನ ಟ್ರ್ಯಾಜಿಡಿ ಜರ್ನಿ ಮೂರು ಮುಖಗಳು. ಪ್ರತಿ ಮುಖದ ಹಿಂದೆಯೂ ಒಂದೊಂದು ಕಥೆ. ಪ್ರತಿ ಸ್ಟೋರಿಗೂ ಒಂದು ಫ್ಲ್ಯಾಷ್ ಬ್ಯಾಕ್. ಮೂರು ಮುಖಗಳು. ಪ್ರತಿ ಮುಖದ ಹಿಂದೆಯೂ ಒಂದೊಂದು ಕಥೆ. ಪ್ರತಿ ಸ್ಟೋರಿಗೂ ಒಂದು ಫ್ಲ್ಯಾಷ್ ಬ್ಯಾಕ್. ಮೂರು ಪಾತ್ರಗಳ ನೆಲೆ, ವರ್ತನೆ ಒಂದರಂತಿಲ್ಲ. ಆದರೆ ಉದ್ದೇಶ ಒಂದೇ. ಹಣ ಮಾಡುವುದು. 'ಇದು ಮೈಂಡ್ ಗೇಮ್ ಚಿತ್ರನಾ?' ಗೊತ್ತಿಲ್ಲ. ಆದರೆ ಅಲ್ಲಲ್ಲಿ ತುಂಬಾ ಚೆನ್ನಾಗಿ ತಲೆ ಖರ್ಚು ಮಾಡಿ ಕಥೆ ಕಟ್ಟುವ ನಿರ್ದೇಶಕ ಅರುಣ್, ಇನ್ನಷ್ಟು ಕುಶಲತೆ ತೋರಿಸಿದ್ದರೆ 'ಲೂಜ್‌ಗಳು' ಕನ್ನಡಕ್ಕೊಂದು ವಿಭಿನ್ನ ಚಿತ್ರವಾಗುತ್ತಿತ್ತು. ಹಾಗಂತ ಚಿತ್ರ ಪೂರ್ತಿ 'ಲೂಜ್‌' ಆಗಿಲ್ಲ. ಟೈಟ್ ಆಗಿದೆ. ಆದರೆ ಲಾಂಗ್ ಇಲ್ಲದ ದೀರ್ಘ ದೃಶ್ಯಗಳು ಪ್ರೇಕ್ಷಕನ ತಾಳ್ಮೆ ಜೊತೆ ತಾಳ ಹಾಕುತ್ತವೆ. ಹೀಗಾಗಿ ಸಂಕಲನಕಾರನ ಕತ್ತರಿ ಪಾದರಸವಾಗಬೇಕಿತ್ತು. 'ದುಡ್ಡೇ ದೊಡ್ಡಪ್ಪ' ಎನ್ನುವ ಪಾತ್ರಗಳು ಹಿಂದಿಯ ಕೆಲ ಚಿತ್ರಗಳನ್ನು ಹಾಗೂ ಹಣ, ಶ್ರೀಮಂತಿಕೆಯ ಜೀವನ ಬಿಟ್ಟು ನೆಮ್ಮದಿ ಹುಡುಕ ಹೊರಟ ಪಾತ್ರ ಇಂಗ್ಲಿಷಿನ 'ಇನ್ ಟು ದಿ ವೈಲ್ಡ್‌' ಚಿತ್ರವನ್ನು ನೆನಪಿಸುತ್ತದೆ. ಆದರೆ ನಿರ್ದೇಶಕ ಅರುಣ್ ತಮ್ಮ ಚೊಚ್ಚಲ ಪ್ರಯತ್ನದಲ್ಲೇ 'ಏನಾರ ಹೊಸತನ ಮಾಡಬೇಕು' ಎನ್ನುವ ತುಡಿತ ಕಾಣುತ್ತದೆ. ಆದರೆ ಪ್ರೇಕ್ಷಕ ಯಾವುದರ ಬಗ್ಗೆ ಕುತೂಹಲದಿಂದ ಕಾಯುತ್ತಾನೋ, ಅದನ್ನು ಹೇಳದೆ ಲ್ಯಾಂಡ್ ಆಗುತ್ತಾರೆ. ಉದಾ: ಬುಜ್ಜಿ ಹಣ ತರುತ್ತಿರುವಾಗ ತನ್ನ ಗೆಳತಿಗೆ ಪೋನ್ ಮಾಡಿ ಇಂಥ ಕಡೆ ಬರ ಹೇಳುತ್ತಾನೆ. ಬುಜ್ಜಿ ಆಕೆಯನ್ನು ಭೇಟಿಯಾಗಲ್ಲ. ಅವನಿಗಾಗಿ ಕಾಯುವ ಹುಡುಗಿಯ ಸ್ಥಿತಿಯನ್ನು ನಿರ್ದೇಶಕ ಹೇಳಲ್ಲ. ವಿಲಾಸಿ ಜೀವನಕ್ಕಾಗಿ ಬ್ಯಾಂಕ್ ದರೋಡೆ ಮಾಡುವ ವ್ಯಕ್ತಿ, ಮತ್ತೊಬ್ಬನಿಗೆ ಹಣದ ಅವಶ್ಯಕತೆ ಇದ್ದರೂ ಟ್ಯಾಕ್ಸಿ ಓಡಿಸಿಕೊಂಡು ದುಡಿಯುವ ಪ್ರಾಮಾಣಿಕ, ಮತ್ತೊಬ್ಬ ದುಡ್ಡಿಗಾಗಿ ಬೆಟ್ಟಿಂಗ್ ಮಾಫಿಯಾವನ್ನು ಮ್ಯಾನೇಜ್ ಮಾಡಿ ಜೈಲಿಗೆ ಹೋದ ಮೇಲೆ ದುಡ್ಡು ಇದ್ದರ ನೆಮ್ಮದಿ ಸಿಗಲ್ಲ, ದುಡ್ಡು ಬೇಡವೆಂದು ಹೊರಡುವ ಪಾತ್ರ. ಹೀಗೆ ಮೂರು ಭಿನ್ನ ಕ್ಯಾರೆಕ್ಟರ್‌ಗಳ ಸುತ್ತ ಸಾಗುವ ಕಥೆಗೆ ಅಗತ್ಯಕ್ಕಿಂತ ಹೆಚ್ಚು ಫ್ಲ್ಯಾಷ್ ಬ್ಯಾಕ್ ಇದೆ. ತೆರೆ ಹಿಂದೆ ಕೆಲಸ ಮಾಡಿರುವ ಬಹುತೇಕರಿಗೆ ಇದು ಮೊದಲ ಚಿತ್ರ ಎಂಬುದು ವಿಶೇಷ. ಪ್ರತಿ ದೃಶ್ಯವನ್ನು ಛಾಯಾಗ್ರಹ ಚಿದಾನಂದ್ ಸುಂದರವಾಗಿಸಿದ್ದಾರೆ. 'ರಬ್ಬಾ ರಬ್ಬಾ' ಹಾಡು ಮತ್ತು ಕೇಳುವಂಥ ಸಂಗೀತ ಕೊಟ್ಟ ವಾಣಿ ಹರಿಕೃಷ್ಣ ಸಂಗೀತ ನಿರ್ದೇಶಕರಾಗಿ ಭರವಸೆ ಮೂಡಿಸುತ್ತಾರೆ. ಮುರಳಿ-ರೇಖಾ, ಶ್ರೀಕಿ-ಶ್ರಾವ್ಯ, ಅಕುಲ್ ಬಾಲಾಜಿ-ಐಶ್ವರ್ಯ ನಾಗ್ ಈ ಮೂರು ಜೋಡಿಗಳ ಮೂಲಕ 'ದುಡ್ಡಿಗಿಂತ ಬದುಕು ದೊಡ್ಡದು' ಎನ್ನುವ ಸಂದೇಶವನ್ನು ಅರುಣ್ ಕೊಟ್ಟಿದ್ದಾರೆ. ತೀರಾ ಭಿನ್ನ ಕಥೆಯನ್ನು ಆಯ್ಕೆ ಮಾಡಿಕೊಂಡಿರುವುದೇ ನಿರ್ದೇಶಕನ ಮೊದಲ ಗೆಲವು. ಕ್ಲೈಮ್ಯಾಕ್ಸ್ ದೃಶ್ಯ ಹಾಗೂ ಹಣದ ಬ್ಯಾಗ್ ಕಂಡಾಗಲೆಲ್ಲ ಅದರ ಬಳಿ ಕಂಡು ಕಾಣದಂತೆ ಲಕ್ಷ್ಮಿ ಅವತಾರದ ಪುಟ್ಟ ಹುಡುಗಿ ಪಾತ್ರ ಅರುಣ್‌ರ ಕ್ರೀಯಾಶೀಲತೆಗೆ ಸಾಕ್ಷಿ. ಆದರೆ ಕಾಫಿಯಲ್ಲಿ ಎಂಜಲು ಉಗಿಸಿಕೊಂಡು ಕುಡಿಯುವ ದೃಶ್ಯ ಅಸಹ್ಯ ಹುಟ್ಟಿಸುತ್ತದೆ. ಅಭಿನಯದಲ್ಲಿ ನಟಿ ರೇಖಾದಾಸ್ ಪುತ್ರಿ ಶ್ರಾವ್ಯ, ಅಕುಲ್ ಬಾಲಾಜಿಗೆ ಹೆಚ್ಚು ಮಾರ್ಕ್ಸ್. ಐಶ್ವರ್ಯ ನಾಗ್ ಮುದ್ದಾಗಿ ಇದ್ದಾರಷ್ಟೆ. ಮುರಳಿ, ಶ್ರೀಕಿ ಡೈಲಾಗ್ ಡೆಲವರಿಯಲ್ಲಿ ಕೃತಕ ಎನಿಸುತ್ತಾರೆ. ಹೊಸತನ ಬಯಸುವ, ಗಂಭೀರ ವೀಕ್ಷಕರಿಗೆ ಮೆಚ್ಚಿನ ಚಿತ್ರವಿದು. - ಆರ್. ಕೇಶವಮೂರ್ತಿ