'ಚೆನ್ನಾಗಿದೆ. ಆದ್ರೆ ಸ್ವಲ್ಪ ಲ್ಯಾಗ್ ಇದೆ ಸಾರ್‌' ಸಿನಿಮಾ ಮುಗಿದು ಆಚೆ ಬರುತ್ತಿದ್ದಂತೆ ಥೇಟರ್‌ಬಾಗಿಲಲ್ಲಿ ಪ್ರೇಕ್ಷಕನ ಮುಖದ ಮುಂದೊಂದು ಮೈಕ್ ಅಡ್ಡ ಬರುತ್ತದೆ. 'ಹೇಗಿದೆ ಸರ್ ಫಿಲ್ಮ್?'... ಸಿನಿಮಾ ಮುಗಿದು ಆಚೆ ಬರುತ್ತಿದ್ದಂತೆ ಥೇಟರ್‌ಬಾಗಿಲಲ್ಲಿ ಪ್ರೇಕ್ಷಕನ ಮುಖದ ಮುಂದೊಂದು ಮೈಕ್ ಅಡ್ಡ ಬರುತ್ತದೆ. 'ಹೇಗಿದೆ ಸರ್ ಫಿಲ್ಮ್?' 'ಚೆನ್ನಾಗಿದೆ. ಆದ್ರೆ ಸ್ವಲ್ಪ ಲ್ಯಾಗ್ ಇದೆ ಸಾರ್.' 'ಹೌದಾ..? ಎಷ್ಟ್ ಲ್ಯಾಗ್ ಇದೆ?' 'ಜಾಸ್ತಿ ಏನಿಲ್ಲ ಸಾರ್.. ಎರಡು ಗಂಟೆ ಹತ್ತು ನಿಮಿಷ ಲ್ಯಾಗ್ ಇದೆ.' ಇದು ನವರಂಗಿ ನೋಡಿ ಆಚೆ ಬರುವ ಬಹುತೇಕ ಪ್ರೇಕ್ಷಕರ ರಿವ್ಯೂ. ಅಂದ ಹಾಗೆ ಚಿತ್ರದ ಒಟ್ಟು ಅವಧಿ ಎರಡು ಗಂಟೆ ಹತ್ತು ನಿಮಿಷ.!! ಈ ಥರದ ಅಭಿಪ್ರಾಯಗಳು ಟೀವಿಯಲ್ಲಿ ಪ್ರಸಾರವಾಗುವುದಿಲ್ಲ ಬಿಡಿ. ಆದರೆ ಆಚೆ ಬರುವ ಪ್ರೇಕ್ಷಕನಿಗೆ ಸುಮ್‌ಸುಮ್ನೆಯಾದರೂ 'ಸುಪರ್‌ಹಿಟ್... ಹಂಡ್ರೆಡ್ ಡೇಸ್...' ಅಂತ ಕೂಗೋ ಮಟ್ಟಿಗಿನ ನಗುಮುಖ ಇಟ್ಕೊಳೋಕ್ ಆಗಲಿಲ್ಲ ಅಂದ್ರೆ ಹೆಂಗೆ ಸಾರ್? ಸ್ಯಾಂಡಲ್‌ವುಡ್‌ನಲ್ಲಿ 'ರಂಗಿ' ಎಂಬ ಉತ್ತರಾರ್ಧನಾಮದ ಸಿನಿಮಾಗಳೆಲ್ಲ ಪಂಚರಂಗಿ, ಭಜರಂಗಿ ಥರ ಹಿಟ್, ಸುಪರ್‌ಹಿಟ್ ಆಗೋದಿಲ್ಲ ನಿಜ. ಕಡೇಪಕ್ಷ ಮದರಂಗಿಯಷ್ಟು ಆವರೇಜ್ ಆದ್ರೂ ಆಗಬೇಡ್ವೇ? ಎರಡು ಬೇರೆಬೇರೆ ಹಳ್ಳಿಯ, ಬೇರೆಬೇರೆ ಕಥೆಗಳು ದ್ವಿತೀಯಾರ್ಧದಲ್ಲಿ ಅಂತೂ ಇಂತೂ ಲಿಂಕ್ ಆದಾಗ, 'ಓಹ್ ಇವೆರಡೂ ಬೇರೆಬೇರೆ ಹಳ್ಳಿಯ ಬೇರೆ ಬೇರೆ ಕಥೆಗಳಾಗಿದ್ದವು' ಎಂಬುದು ಪ್ರೇಕ್ಷಕನಿಗೆ ಅರ್ಥವಾಗುತ್ತದೆ. ರೆಬೆಲ್‌ಸ್ಟಾರ್ ಅಂಬರೀಶ್ ಅರ್ಪಿಸಿರುವ ಈ ಚಿತ್ರದ ಆರಂಭ ಕೂಡ ಅವರ ಫೋಟೋ ಹಾಗೂ ಅವರನ್ನು ಹಾಡಿ ಹೊಗಳುವ ಡೈಲಾಗ್‌ನಿಂದಲೇ ಆಗುತ್ತದೆ. ಸಾಧುಕೋಕಿಲಾ ಪಾತ್ರಕ್ಕೆ ಅಂಬರೀಶ್ ಅವರ ಬದುಕೇ ಸ್ಪೂರ್ತಿ ಎಂಬಂತೆ ಕಥೆ ಹೆಣೆಯಲು ಪ್ರಯತ್ನಿಸಲಾಗಿದೆ. ಹಳ್ಳಿಯ ಗೌಡನೊಬ್ಬ ರಾಜಕೀಯದಲ್ಲಿ ಸೋಲುಂಡು, ನಂತರ ರಾಜಕೀಯದಲ್ಲಿ ಯಶ ಕಾಣಲು ಸಿನಿಮಾ ಒಳ್ಳೆಯ ಏಣಿ ಎಂದು ಕೆಲಸಕ್ಕೆ ಬಾರದ ಕೆಲಸದವನ ಮಾತು ಕೇಳಿ ಕಾಸು ಸುರಿದು ನಿರ್ಮಾಪಕನಾಗಿ, ಗಾಂಧಿನಗರದ 'ತಂತ್ರ'ಜ್ಞರಿಂದ ಅನುಭವಿಸುವ ಕಷ್ಟಗಳ ಚಿತ್ರಣವೇ ನವರಂಗಿ. ಚಿತ್ರಕ್ಕೊಬ್ಬ ಹೀರೋ ಥರದವನು ಬೇಕು ಹಾಗೂ ನವರಸಗಳೂ ಇರಲೇಬೇಕೆಂಬ ಕಾರಣಕ್ಕೆ ಸಾಧು ಕಥೆ ಜೊತೆಗೊಂದು ಲವ್‌ಸ್ಟೋರಿ ಕೂಡ ಇದೆ. ವಿಶೇಷವೆಂದರೆ ಸಿನಿಮಾ ಹಾಗೂ ಸಿನಿಮಾದೊಳಗಿನ ಸಿನಿಮಾ ಎರಡೂ ಮುಗಿಯುವುದಿಲ್ಲ. ಮುಗಿಸಲಾಗುತ್ತದೆ, 'ಪ್ರೇಕ್ಷಕರ ಒತ್ತಾಯದ ಮೇರೆಗೆ' ಎಂಬಂತೆ! ದೊಡ್ಡ ನಿರ್ದೇಶಕರ ಹೆಸರು ಹೇಳಿಕೊಂಡು ನಾನು ಇಂಥವರ ಶಿಷ್ಯ ಎಂದು ನಿರ್ಮಾಪಕರನ್ನು ಬಲೆಗೆ ಹಾಕಿಕೊಳ್ಳುವ ಹೊಸ ನಿರ್ದೇಶಕರ ಬಗ್ಗೆ ಎಚ್ಚರದಿಂದಿರಬೇಕೆಂಬ ಸಂದೇಶವನ್ನು ಈ ಚಿತ್ರ ನೀಡುವುದರಲ್ಲಿ ಯಶಸ್ವಿಯಾಗಿದೆ. ಚಿತ್ರದ ಕೊನೆಕೊನೆಯಲ್ಲಿ ನಿರ್ಮಾಪಕ ಜಡೇಗೌಡ (ಸಾಧು), 'ಸಿನಿಮಾ ಬೇಗ ಮುಗಿಸ್ರೋ' ಅಂತ ನಿರ್ದೇಶಕರ ಬಳಿ ಬೇಡಿಕೊಳ್ತಾ ಇದ್ರೆ ನಿಜಕ್ಕೂ ಹೊಸನಿರ್ಮಾಪಕರ ಬಗೆಗೆ ಅನುಕಂಪ ಮೂಡುತ್ತದೆ. ಚಿತ್ರದ ತಾರಾಗಣ ಮತ್ತು ತಾಂತ್ರಿಕವರ್ಗವನ್ನು ಗಮನಿಸಿದರೆ, ಕಳೆದವಾರದ ನಗೆಬಾಂಬು ತಂಡವೇ ಕಾಣಿಸುತ್ತದೆ. ಅದದೇ ಷಾಟ್‌ಗಳು ಹಾಗೂ ಸಂಭಾಷಣೆಗಳು ರಿವೈಂಡ್ ಆದಂತೆ ರಿಪೀಟ್ ಆಗಿರುವುದು ನಾಗೇಂದ್ರ ಅರಸ್ ಸಂಕಲನದ ಬೇಜವಾಬ್ದಾರಿತನ ತೋರುತ್ತದೆ. ಕೆಮರಾಮನ್‌ದು ಅನನುಭವವೋ, ನಿರಾಸಕ್ತಿಯೋ ಗೊತ್ತಿಲ್ಲ, ಕ್ಲೈಮ್ಯಾಕ್ಸ್ ಹೊತ್ತಿಗೆ ಕೆಮೆರಾ ಬಿಟ್ಟು ಓಡಿಹೋಗಿದ್ದಾರೇನೋ ಎಂಬಂತೆ, ಕೊನೆಯ ದೃಶ್ಯ ಔಟ್ ಆಫ್ ಫೋಕಸ್ಸಲ್ಲಿ ಬ್ಲರ್ರಾಗಿದೆ. ರಾಜೇಶ್ ರಾಮನಾಥ್ ಸಂಗೀತದ ಹಾಡುಗಳು ಧೂಮಪಾನಿಗಳನ್ನು ಆಚೆ ಹೋಗದಂತೆ ಕೂರಿಸಿದ್ದರೆ ಅದರಲ್ಲಿ ರೂಪಿಕಾ ಪಾತ್ರ ಹಿರಿದು. ದೃಶ್ಯವೊಂದರಲ್ಲಿ ರೂಪಿಕಾ, ಸೈಕಲ್ ಟೈರಿನ ಗಾಳಿ ತೆಗೆಯುತ್ತಿದ್ದರೆ, ಮನುಷ್ಯರಿಗೂ ಈ ಫೆಸಿಲಿಟಿ ಇದ್ದಿದ್ರೆ ಅನ್ನುವ ಆಲೋಚನೆ ಬರದಿರದು. ಹೊಸನಟ ಆಕಾಶ್‌ಗೆ ಸಿಕ್ಕ ಅವಕಾಶ ಆಕಾಶದಷ್ಟು. ಬಳಸಿಕೊಂಡಿರೋದು ಮಾತ್ರ ಅದರಲ್ಲಿ ಒಂದು ಅಂಶದಷ್ಟು. ಗೌರವನಟ ಅಂತ ಟೈಟಲ್‌ಕಾರ್ಡಲ್ಲಿ ಮೊದಲು ಬಂದು ಗೌರವ ಗಿಟ್ಟಿಸಿರುವ ರವಿಶಂಕರ್‌ಗೌಡರ ಪಾತ್ರಪರಿಚಯ ಮಾತ್ರ ಕೊನೆಯಲ್ಲಿ ಆಗುತ್ತದೆ. ಅವರ ದನಿಯನ್ನು ಫೋನಲ್ಲಿ ಡಬ್ಬಿಂಗ್ ಮಾಡಿ 'ರೆಕಾರ್ಡ್‌' ಮಾಡಿರುವಂತಿದೆ. ಚಿಕ್ಕಣ್ಣ-ಸಾಧುಕೋಕಿಲಾ ಇಬ್ಬರ ನವರಂಗಿ ಆಟಗಳನ್ನು ಬಿಟ್ಟರೆ, ಮಿಕ್ಕೆಲ್ಲ ರಂಗುಗಳೂ ರಾಂಗ್ ಆಗಿವೆ ಎಂಬುದು ನೋವಿನ ವಿಚಾರ. - ನವೀನ್ ಸಾಗರ್