'ಒಗ್ಗರಣೆ'ಯ ಪ್ರಕಾಶ ಮತ್ತು ಪರಿಮಳ ಅಡುಗೆಮನೆಯಲ್ಲಿ ಅಮ್ಮ ಹಾಕುವ ಒಗ್ಗರಣೆಯ ರುಚಿಗಿಂತಲೂ ಒಮ್ಮೊಮ್ಮೆ ಅದರ ಶಬ್ದವೇ ಅದ್ಭುತವಾಗಿರುತ್ತದೆ... ಅಡುಗೆಮನೆಯಲ್ಲಿ ಅಮ್ಮ ಹಾಕುವ ಒಗ್ಗರಣೆಯ ರುಚಿಗಿಂತಲೂ ಒಮ್ಮೊಮ್ಮೆ ಅದರ ಶಬ್ದವೇ ಅದ್ಭುತವಾಗಿರುತ್ತದೆ. ಸಾರಿಗೆ ಅದರ ಘಾಟು ತಟ್ಟಿದ ಮೇಲೆ ಅದನ್ನು ಕಲಕದೆ ಮೇಲಿನ ತಿಳಿಯನ್ನಷ್ಟೇ ನಾಲಿಗೆಗೆ ಸವರಿಕೊಂಡರೆ ಅದರ ರುಚಿಯೇ ಬೇರೆ. ರುಚಿ ಮಾತ್ರವಲ್ಲ, ನೋಡುತ್ತಿದ್ದಂತೆ ಬಾಯಿ ಚಪ್ಪರಿಸುತ್ತೇವೆ. ಒಗ್ಗರಣೆಯ ಮಹಿಮೆಯೇ ಅಂಥದ್ದು. ಅಡುಗೆ ಮನೆ ಯಾವುದೇ ಆಗಿರಲಿ, ಅಡುಗೆ ಭಟ್ಟ ಯಾರೇ ಆಗಿರಲಿ ಒಗ್ಗರಣೆ ಶಬ್ದ, ಅದರ ರುಚಿ, ಬಣ್ಣ ಒಮ್ಮೆ ನೋಡಿ ಸವಿಯಬೇಕು ಅನಿಸುತ್ತದೆ. ಇಂಥ ಅಪರೂಪದ ಒಗ್ಗರಣೆಯ ಘಮದಿಂದ ನೀವು ದೂರವಾಗಿದ್ದರೆ ಒಮ್ಮೆ 'ರೈ' ಕೆಫೆಯಲ್ಲಿ ಸಿದ್ಧವಾಗಿರುವ 'ಒಗ್ಗರಣೆ'ಯನ್ನು ಸವಿಯಿರಿ. ಕೇವಲ ನೋಟಕ್ಕೆ ಮಾತ್ರವಲ್ಲ, ನಿಮ್ಮ ಮನಸ್ಸಿನ ರುಚಿಗೂ ಈ 'ಒಗ್ಗರಣೆ' ದಕ್ಕುತ್ತದೆ. 'ಸಿನಿಮಾವೇ ನನ್ನ ಕನಸು, ನಾನೇ ನನ್ನ ಜಗತ್ತು' ಎಂದುಕೊಳ್ಳುವ ಪ್ರಕಾಶ್ ರೈ ಅವರ ನಿರ್ದೇಶನ ಅಲ್ಲಲ್ಲ, ಪಾಕಶಾಲೆಯಿಂದ ಮೂಡಿಬಂದಿರುವ 'ಒಗ್ಗರಣೆ' ಚಿತ್ರಕ್ಕೆ ಪ್ರೇಕ್ಷನನ್ನು ಆವರಿಸಿಕೊಳ್ಳುವ ಶಕ್ತಿ ಇದೆ. 'ಬಹುಭಾಷಾ ನಟ ಪ್ರಕಾಶ್ ರಾಜ್ ಸಿನಿಮಾ' ಎನ್ನುವುದಕ್ಕಿಂತ 'ಕನ್ನಡಿಗ ಪ್ರಕಾಶ್ ರೈ ಅವರ ಚಿತ್ರ' ಎಂದುಕೊಂಡು ಈ ಸಿನಿಮಾ ದೃಶ್ಯಗಳನ್ನು ನೋಡಿದರೆ ಖಂಡಿತ ನಿಮಗೆ ಮೆಚ್ಚಿಗೆಯಾಗುತ್ತದೆ. ಕೆಲವೊಮ್ಮೆ ಹೀಗೂ ಆಗುತ್ತದೆ. ಹಸಿವಾಗಿ ತಟ್ಟೆ ತುಂಬಾ ಊಟ ಬಡಿಸಿಕೊಂಡು ಉಣ್ಣಲು ಕೂತವನಿಗೆ ಊಟಕ್ಕಿಂತ ಅದರ ಅಕ್ಕಪಕ್ಕದ ಖಾದ್ಯಗಳೇ ಗಮನ ಸಳೆಯುತ್ತವೆ. ಒಂದು ಸೌಟು ಅನ್ನ ಉಣ್ಣುವಷ್ಟರಲ್ಲಿ ನಾಲ್ಕೈದು ಬಾರಿ ಈ ಸೈಡ್ ಪಲ್ಯಗಳೇ ನಮ್ಮ ರುಚಿಯನ್ನು ಆವರಿಸಿಕೊಂಡಿರುತ್ತವೆ. 'ಒಗ್ಗರಣೆ' ಚಿತ್ರ ನೋಡುಗನಿಗೆ ಇಂಥ ಅನುಭವ ನೀಡುತ್ತದೆ. ಇಲ್ಲಿ ಊಟ ಯಾವುದು, ಊಟದ ಜೊತೆಗೆ ಕೊಟ್ಟಿರುವ ಪಲ್ಯಗಳು ಯಾರು? ಅಂತ ಕೆದಕಬೇಡಿ. ಒಟ್ಟಿನಲ್ಲಿ ರುಚಿ ಇದೆ ಎನ್ನುವುದು ಮಾತ್ರ ಸತ್ಯ. ಚಿತ್ರದ ಕಥೆ, ನಟರ ಅಭಿನಯ, ಪಾತ್ರಗಳ ಸಂಯೋಜನೆಗಿಂತ ಪ್ರೀತಾ ಅವರ ಛಾಯಾಗ್ರಹಣದ ಬಗ್ಗೆ ಸಿನಿಮಾ ಹೆಚ್ಚು ಮಾತನಾಡುತ್ತದೆ. ಪ್ರೀತಾ ಅವರ ಕ್ಯಾಮೆರಾದಲ್ಲಿ ಪ್ರತಿ ದೃಶ್ಯವೂ ನಾವು ತಿನ್ನುವ ಖಾದ್ಯಗಳಷ್ಟೆ ಹೊಳಪು ಮತ್ತು ರುಚಿ. ಹೀಗಾಗಿ ಇಲ್ಲಿನ ತಾಂತ್ರಿಕತೆ ಬಗ್ಗೆ ಮಾತನಾಡಲು ಹೊರಟರೆ ಪ್ರೀತಾ ಅವರ ಕ್ಯಾಮೆರಾ ಕುಶಲತೆಗೆ ಹೆಚ್ಚು ಅಂಕ ಕೊಡಬೇಕು. 'ಈ ಜನುಮವೆ ಆಹಾ ದೊರಕಿದೆ ರುಚಿ ಸವಿಯಲು' ಎನ್ನುವ ಸಾಲು ಇಳಯರಾಜರ ಸಂಗೀತದಲ್ಲಿ ಮೂಡಿ ಬರುತ್ತಿದ್ದರೆ, ಅಡುಗೆ ಮನೆಯ ಒಗ್ಗರಣೆಯ ಶಬ್ದದಷ್ಟೇ ಇಂಪು. ಅವರ ರಾಗಗಳ ಬಗ್ಗೆ ಮಾತನಾಡಿದಷ್ಟು ಅದರ ತೂಕ ಕಡಿಮೆಯಾಗುತ್ತದೆ. ಇನ್ನು ಪ್ರಕಾಶ್ ರೈ ಬದಲಾಗಿದ್ದಾರೆ. 'ನಾನು ನನ್ನ ಕನಸು' ಚಿತ್ರದ ಪ್ರಕಾಶ್ ರೈ ಇಲ್ಲಿಲ್ಲ. ಈ ಬದಲಾವಣೆ ನಟನೆಯಲ್ಲಿ ಅಲ್ಲ, ನಿರ್ದೇಶನದಲ್ಲಿ ಎನ್ನುವುದು ಗಮನಿಸಬೇಕು. ತಾನು ಹೇಳುವ ವಿಷಯವನ್ನು ಯಾವ ರೀತಿ ಹೇಳಿದರೆ ಪ್ರೇಕ್ಷಕನಿಗೆ ಮುಟ್ಟುತ್ತದೆ ಎನ್ನುವ ವಿಚಾರದಲ್ಲಿ ರೈ ಮತ್ತಷ್ಟು ಪಳಗಿದ್ದಾರೆ. ನಟನೆಯಲ್ಲಿ ಎಂದೋ ಅವರು ಗೆದ್ದಾಗಿದೆ. ಅದು ಇಲ್ಲಿ ಮತ್ತಷ್ಟು ಲವಲವಿಕೆಯಿಂದ ಕೂಡಿದೆ. ಮೂವತ್ತು ವರ್ಷ ದಾಟಿದರೂ ಮದುವೆಯಾಗದ ಸ್ನೇಹಾಳ ಭಾವನೆಗಳು, ಆಕೆಯ ಮಾನಸಿಕ ವ್ಯಥೆ ನಟನೆ ಅನಿಸಲ್ಲ. ಅಚ್ಯುತ್ ಕುಮಾರ್ ಸಿಟ್ಟು ಮಾಡಿಕೊಳ್ಳುವ ಅಪ್ಪನಾಗಲಷ್ಟೇ ಸೀಮಿತವಲ್ಲ, ಅಪ್ಪಿಕೊಳ್ಳುವ ಸೆಂಟಿಮೆಂಟ್ ಗೆಳೆಯ ಅನಿಸುತ್ತಾರೆ. 'ನಿನಗೇನ್ ಕಣ್ಲಾ, ನೋಡಕ್ಕೆ ಚಿಕ್ ವಯಸ್ನ ಅಂಬರೀಷಣ್ಣನ ಥರಾ ಕಾಣ್ತಿಯಾ' ಎನ್ನುವ ಮಂಡ್ಯ ರಮೇಶ್ರ ಪಾತ್ರ, ಮೃಷ್ಟಾನ್ನದಲ್ಲಿ ಆಗಾಗ ಸಿಗುವ ಕಾಯಿ ಪಲ್ಯದಂತೆ. ಸಂಯುಕ್ತ ಹೊರನಾಡು, ತೇಜಸ್ ಜೋಡಿ ಕಥೆ 'ಯಂಗ್' ಲುಕ್ ಕೊಟ್ಟಿದೆ. ಅಬ್ಬರದ ತಿರುವುಗಳಿಲ್ಲದ ನಿರೂಪಣೆ, ನಿಧಾನಗತಿ, ಕೆಲವೇ ಪಾತ್ರಗಳು, ಸಂಕಲನಕಾರನ ಕತ್ತರಿ ಮತ್ತಷ್ಟು ಶಾರ್ಪ್ ಆಗಬೇಕಿತ್ತು, ಕಾಡಿನ ಎಪಿಸೋಡ್ ಯಾಕೆ? ಎಂಬಿತ್ಯಾದಿ ಪ್ರಶ್ನೆಗಳು ಇದ್ದರೂ, ಅವು 'ಒಗ್ಗರಣೆ'ಯನ್ನು ಸವಿಯಲು ಮಾತ್ರ ಅಡ್ಡಿ ಮಾಡಲ್ಲ. ಕಥೆ ಏನು? ಅಂತ ಕೇಳಬೇಡಿ. ಯಾಕೆಂದರೆ ನಿಜವಾದ ಸಿನೆಮಾ ಎನಿಸಿಕೊಳ್ಳಬೇಕಾದರೆ ಅದು ಏನನ್ನೂ ಹೇಳಬಾರದು, ಎಲ್ಲವನ್ನೂ ತೋರಿಸಬೇಕಂತೆ. ಹೌದು, ಪ್ರಕಾಶ್ ರೈ ಇಲ್ಲಿ ಎಲ್ಲವನ್ನೂ ತೋರಿಸಿದ್ದಾರೆ. ಅಡುಗೆ, ಹೊಟ್ಟೆ ತುಂಬಿಸಿಕೊಳ್ಳುವ ಕ್ರಿಯೆ ಅಲ್ಲ, ರುಚಿಯನ್ನು ಅನುಭವಿಸುವ ಕಲೆ, ಅಡುಗೆ ಮನೆ, ಕಾಫಿ ಡೇ, ಬೆಟ್ಟ, ವಠಾರದಂತ ಮನೆ, ಫಾರ್ಟಿ ಪ್ಲಸ್ ದಾಟಿದವರ ಪ್ರೀತಿ, ಪ್ರೇಮ, ಮನಸಿನ ತಲ್ಲಣಗಳು, ಒಂಚೂರು ಕೀಳರಿಮೆ... ಹೀಗೆ ಎಲ್ಲವೂ ಬಂದು ಹೋಗುತ್ತವೆ. ಆ ಬಂದು ಹೋಗುವ ಕಥೆಗಳಲ್ಲಿ ನಾವೂ ಇರುತ್ತೇವೆ ಎನ್ನುವುದು 'ಒಗ್ಗರಣೆ' ಚಿತ್ರದ ನಿಜವಾದ ಶಕ್ತಿ. ಆದರೆ, ಅಭಿರುಚಿ ಚಿತ್ರ, ಅತ್ಯುತ್ತಮ ಸಿನಿಮಾ ಎನಿಸಿಕೊಳ್ಳುವ ಚಿತ್ರಗಳು ಸಾಕಷ್ಟು ಸಂದರ್ಭಗಳಲ್ಲಿ ಒಂದು ವರ್ಗಕ್ಕೆ ಸೀಮಿತವಾಗಿಬಿಡುವುದು ಕನ್ನಡ ಚಿತ್ರಗಳಿಗೆ ಅಂಟಿಕೊಂಡಿರುವ ಶಾಪ. ಆದರೆ, ಈ ಶಾಪ 'ರೈ ಚಿತ್ರಾ'ನ್ನಕ್ಕೆ ತಟ್ಟದಿರಲಿ. -ಆರ್.ಕೇಶವಮೂರ್ತಿ