ಈ ಭೂತಕ್ಕೆ ಭವಿಷ್ಯವಿಲ್ಲ..!! ಚಂದ್ರಲೇಖ ಲೆಕ್ಕದ ಪ್ರಕಾರ ಪ್ರೇಮಚಿತ್ರಕಥೆ. ತೆಲುಗಿನ 'ಪ್ರೇಮಕಥಾ ಚಿತ್ರಂ' ರೀಮೇಕು. ಚಂದ್ರಲೇಖ ಲೆಕ್ಕದ ಪ್ರಕಾರ ಪ್ರೇಮಚಿತ್ರಕಥೆ. ತೆಲುಗಿನ 'ಪ್ರೇಮಕಥಾ ಚಿತ್ರಂ' ರೀಮೇಕು. ಆದರೆ ಇಂಥ ಕಥೆಗೊಸ್ಕರ ತೆಲುಗಿನ ಮೊರೆ ಹೋಗಬೇಕಿತ್ತಾ ಅನ್ನೋದು ಓಂಪ್ರಕಾಶ್ರಂಥ ಹಿರಿಯ ನಿರ್ದೇಶಕರು ಕೇಳಿಕೊಳ್ಳಬೇಕಾದ ಪ್ರಶ್ನೆ. ಡಿಟಿಎಸ್ ಸೌಂಡು ಹಾಗೂ ಕ್ಯಾಮರಾ ಕೈಚಳಕ ನಂಬಿಕೊಂಡು ಜನರನ್ನು ಹೆದರಿಸಲು ಸಾಧ್ಯವಾಗೋದು ಹಾಗೂ ಚಿತ್ರಕ್ಕೆ ಒಂದಷ್ಟು ಹಾಡು, ಅಸಂಬದ್ಧ ಸಂಭಾಷಣೆಗಳ ತಮಾಷೆಗಳನ್ನು ಬೆರೆಸಿಬಿಟ್ಟರೆ ಅದು ಹಿಟ್ ಆಗೋದು ತೆಲುಗಿನಲ್ಲಿ ಮಾತ್ರ. ರಿಮೇಕು 'ಕಲ್ಪನಾ'ಳ ಭೂತಕಾಲ ನೆನಪಿಸಿಕೊಂಡಿದ್ದರೆ ಚಂದ್ರಲೇಖ ಕನ್ನಡಕ್ಕೆ ಬರುತ್ತಿರಲಿಲ್ಲ. ಕಾರಣಾಂತರಗಳಿಂದ ಬದುಕಿನಲ್ಲಿ ಬೇಸರಗೊಂಡು ಸಾಯಲು ನಿರ್ಧರಿಸಿ ಹೊರಡುವ ನಾಯಕ-ನಾಯಕಿ- ಮತ್ತೆರಡು ಪಾತ್ರಗಳು ಸಾಯಲು ಒಂದು ಫಾರ್ಮ್ ಹೌಸನ್ನು ಆಯ್ಕೆ ಮಾಡಿಕೊಳ್ಳುತ್ತವೆ. ಅಲ್ಲಿ ನಾಯಕನಿಗೆ ನಾಯಕಿಯ ಮೇಲೆ ಲವ್ವಾಗುತ್ತದೆ. ನಾಯಕನಿಗಿಂತ ಮೊದಲೇ ನಾಯಕಿಗೆ ಲವ್ವಾಗಿರುತ್ತದೆ. ಅಲ್ಲಿಗೆ ಸಾಯೋ ಪ್ರೋಗ್ರಾಮ್ ಕ್ಯಾನ್ಸಲ್ ಆಗುತ್ತದೆ. ಆದರೆ ಚಂದ್ರಲೇಖ ಎಂಬ ಭೂತ ನಾಯಕಿಯನ್ನು ಆವಾಹಿಸಿಕೊಂಡು ಎಲ್ಲರನ್ನೂ ಬದುಕಲೂ, ಸಾಯಲೂ ಆಗದಂತೆ ಇನ್ನಿಲ್ಲದ ತೊಂದರೆ ಕೊಡುತ್ತದೆ. ನಾಯಕಿಯ ಮೈಮೇಲೆ ಬಂದಿರುವ ಆತ್ಮಕ್ಕೆ ಮುಕ್ತಿ ದೊರಕಿಸಿ ಪ್ರೇಮಿಗಳು ಒಂದಾಗುವ ಮೂಲಕ ಸುಖಾಂತ್ಯವಾಗುವುದು ಚಿತ್ರದ ಒಟ್ಟಾರೆ ಕಥೆ. ಫ್ರೇಮ್ ಟು ಫ್ರೇಮ್ ರೀಮೇಕ್ ಮಾಡಿರುವ ಓಂಪ್ರಕಾಶ್ ರಿಮಿಕ್ಸ್ ನಿರ್ದೇಶಕ ಎಂಬ ಪಟ್ಟದಿಂದ ಹೊರಬರಲು ಹರಸಾಹಸ ಮಾಡಿದಂತಿದೆ. ಹಾಗಾಗಿ ಮೂಲ ಚಿತ್ರದಲ್ಲಿ ಆಗಿರುವ ತಪ್ಪುಗಳನ್ನು ಇಲ್ಲಿಯೂ ಉಳಿಸಿಕೊಂಡಿದ್ದಾರೆ. ಚಿತ್ರದ ಪ್ರಥಮಾರ್ಧ ಮುಗಿದಾಗ 'ಡೈರೆಕ್ಟೆಡ್ ಬೈಓಂಪ್ರಕಾಶ್' ಎಂದು ತೆರೆಮೇಲೆ ಅಕ್ಷರಗಳು ಮೂಡುತ್ತವೆ. ಇತ್ತ ನೋಡುಗರಲ್ಲಿ ಚಿತ್ರವೇ ಮುಗೀತೋ ಎಂಬಂತೆ ನಿಟ್ಟುಸಿರು ಮೂಡುತ್ತದೆ. ಚಿರು, ಹಾರರ್ ಚಿತ್ರದಲ್ಲಿ ಮತ್ತೆ ಹಾಜರ್ ಆಗಿರುವುದರಿಂದ, ಇದು ವಿಜ್ಹಲ್ ಚಿತ್ರದ ಮುಂದಿನ ಭಾಗವೇನೋ ಎನಿಸಲೂಬಹುದು. ಅಭಿನಯದಲ್ಲಿ ಚಿರು ಸುಧಾರಣೆ ತೋರಿದ್ದಾರೆ. ಆದರೆ ಭಯದ ಸನ್ನಿವೇಶಗಳಲ್ಲಿ ಮಾತ್ರ ಚಿರಂಜೀವಿ 'ಚೀರಂ'ಜೀವಿ ಆಗುತ್ತಾರೆ. ಕೆಲವು ಸಂಭಾಷಣೆಗಳಿಂದ ಸಾಧುಕೋಕಿಲಾ ನಗಿಸೋದು ಹೌದಾದರೂ ನಾಗಶೇಖರ್ ಕಾಂಬಿನೇಶನ್ನಲ್ಲಿ ಸಾಧುವಿನ ಕಾಮಿಡಿ ಟೈಮಿಂಗ್ ಕೂಡ ಕೈ ಕೊಟ್ಟಿದೆ. ಹೊಸಮುಖ ಸಾನ್ವಿ ಶ್ರೀವಾಸ್ತವ್ಗೆ ಮೊದಲ ಚಿತ್ರ ಎಂಬ ಅನುಕಂಪ ಇಲ್ಲದೆಯೂ ಅಂಕಗಳನ್ನು ಕೊಡಬಹುದು. ಗ್ಲಾಮರ್ ಹಾಗೂ ಅಭಿನಯ ಎರಡರಲ್ಲೂ ತೇರ್ಗಡೆಯಾಗಿರುವ ಸಾನ್ವಿಯ ಯಶಸ್ಸಿಗೆ ಕಂಠದಾನ ಕಲಾವಿದೆ ಹಾಗೂ ಸ್ಪೆಶಲ್ ಎಫೆಕ್ಟ್ ತಜ್ಞರ ಕೊಡುಗೆ ದೊಡ್ಡದು. ಸಂಭಾಷಣೆ ವಿಷಯಕ್ಕೆ ಬಂದರೆ '' ವರ್ಡಲ್ಲಿ ಎಕ್ಸೆಲೆಂಟ್ ಅನ್ನೋದಾಗ್ಲೀ ಪವರ್ಫುಲ್ ಅನ್ನೋ ಪಾಯಿಂಟ್ಸ್ ಆಗಲೀ ಕಾಣುವುದಿಲ್ಲ. ವರ್ಡ್ ಆದಷ್ಟು ಬೇಗ ಅಪ್ ಗ್ರೇಡ್ ಆಗಬೇಕಿದೆ. ಸಂಗೀತ ನಿರ್ದೇಶಕ ಜೇಬಿಯವರ ಟ್ಯೂನ್ಸ್ ಕೂಡ ರಿಮೇಕ್ ಆಗಿದ್ದು, ಎರಡು ಹಾಡುಗಳು ಹಾಗೂ ಅವುಗಳ ಚಿತ್ರಣ ಖುಷಿಕೊಡುತ್ತದೆ. 'ಪ್ರೀತಿ ಮೈನಾ ..' ಹಾಡು ಎಂಬತ್ತರ ದಶಕದ 'ಪ್ಯಾರ್ ಜುಕ್ತಾ ನಹೀ' ಚಿತ್ರದ 'ತುಮ್ಸೆ ಮಿಲ್ ಕರ್.. ನಾ ಜಾನೆ ಕ್ಯೂಂ..' ಹಾಡಿನ ನವೀಕರಣವಷ್ಟೇ. ಓಂಪ್ರಕಾಶ್ರಿಗೆ ರಾಜಕೀಯ ಹಾಗೂ ಸಾಹಸಮಯ ರಿಮಿಕ್ಸು ಚಿತ್ರಗಳಲ್ಲೇ ತಾವು ಬೆಸ್ಟು ಎಂದು ಹೇಳಲು ಹೀಗೊಂದು ರೀಮೇಕ್ ಕಾಮಿಡಿ ಹಾರರ್ ಪ್ರೇಮಕತೆ ಮಾಡುವ ಅಗತ್ಯ ಇರಲಿಲ್ಲ. ಈ ಭೂತಕ್ಕೆ ಭವಿಷ್ಯವಿಲ್ಲ ಎಂಬುದು ವರ್ತಮಾನದ ಸತ್ಯ. -ಎನ್ನೆಸ್