ಆಕೆಯ ಮುಖಾ'ಮುಖಿ' ಬಹಿರಂಗಗೊಂಡಾಗ... ನಾವು ಎಷ್ಟೇ ಮುಂದುವರೆದಿದ್ದರೂ ಅಂಥವರೊಂದಿಗೆ ಮುಖಾ'ಮುಖಿ'ಯಾಗಲು ಹಿಂಜರೆಯುತ್ತೇವೆ. ಅವರ ಸ್ನೇಹ ನಮಗೆ ಬೇಕಿಲ್ಲ. ಅವರು ಈ ಸಮಾಜಕ್ಕೂ ಬೇಕಿಲ್ಲ ಎನ್ನುತ್ತಿರುವಾಗಲೇ ಅಂಥವರ ಸಂಖ್ಯೆ ಹೆಚ್ಚುತ್ತಿದೆ. ಆಧಾರ್ ಕಾರ್ಡ್, ಮತದಾನದ ಹಕ್ಕು ಸಿಗುತ್ತಿದ್ದರೂ ಅವರು ನಮಗೆ 'ಮಂಗಳ'ವಲ್ಲ! ಈ ಸಮಾಜ ಅ'ಮಂಗಳ'ವೆಂದು ಕೀಳಾಗಿ ನೋಡುವವಳೇ ಇಲ್ಲಿ ಪ್ರೇಕ್ಷಕನಿಗೆ ಮುಖಾ'ಮುಖಿ'ಯಾಗುತ್ತಾಳೆ. ನಿರ್ದೇಶಕರು ಹೇಳಿದಂತೆ ನಿಜಕ್ಕೂ ಕ್ಲೈಮ್ಯಾಕ್ಸ್ ಯಾರೂ ಊಹಿಸದಂತೆ ಸಂಯೋಜಿಸಿದ್ದಾರೆ. ಚಿತ್ರದ ಮುಹೂರ್ತ ಸಮಾರಂಭಗಳಿಗೆ ಮಾತ್ರ ಆಶೀರ್ವಾದ ಮಾಡುವ ವರ್ಗದವಳನ್ನೇ ನಾಯಕಿಯನ್ನಾಗಿಸಿದ ನಿರ್ದೇಶಕ ಕೃಷ್ಣಲೇಖನ್ ಶಾಕ್ ಕೊಟ್ಟಿದ್ದಾರೆ. ಹೊಸಬರ ಪರಿಶ್ರಮದಿಂದ ಮೂಡಿಬಂದಿರುವ 'ಚತುರ್ಭುಜ' ಚಿತ್ರದ ಒಂದು ಸಾಲಿನ ವಿಶೇಷತೆಯನ್ನು ಹೇಳುವ ನಾಲ್ಕಾರು ಸಾಲುಗಳಿವು. ನಾಯಕನ ಹಿನ್ನೆಲೆ ಏನು? ಗೊತ್ತಿಲ್ಲ, ನಾಯಕಿ ಯಾಕೆ ಯಾವಾಗಲೂ ತುಂಡು ಚಡ್ಡಿ ಹಾಕೊಂಡೇ ಇರ್ತಾಳೆ? ಅದೂ ಗೊತ್ತಿಲ್ಲ, ಮನೆಮಠ ಇಲ್ಲದವರಂತೆ ಹುಡುಗ- ಹುಡುಗಿಯರು ನೀಲಗಿರಿ ತೋಪಿನಲ್ಲಿ ಟೆಂಟ್ ಹಾಕಿರುವುದು ಯಾಕೆ? ಅಯ್ಯೋ ಅದಕ್ಕೂ ಉತ್ತರ ಇಲ್ಲ. ನಾಯಕನಿಂದ ಹಿಡಿದು ಖಳನಾಯಕನ ತನಕ ಯಾವ ಪಾತ್ರಕ್ಕೂ ಇಲ್ಲಿ ಮನೆ-ಮಠ ಇಲ್ಲ. ಎಲ್ಲರೂ ಕೇರಾಫ್ ಫುಟ್ಪಾತ್. ಅಷ್ಟರ ಮಟ್ಟಿಗೆ ಚಿತ್ರದ ಪಾತ್ರಧಾರಿಗಳು 'ರಸ್ತ ಚಿತ್ರ'ಗಳು! ನಿರ್ದೇಶಕ ಕೃಷ್ಣಲೇಖನ್, ಚಿತ್ರದ ಕ್ಲೈಮ್ಯಾಕ್ಸ್ ದೃಶ್ಯವನ್ನೂ ಮಾತ್ರ ಗುರಿಯಲ್ಲಿಟ್ಟುಕೊಂಡು ಸಾಗುವುದರಿಂದ ಒಂದಕ್ಕೊಂದು ಸಂಬಂಧ ಇಲ್ಲದಂತೆ ಬರುವ ದೃಶ್ಯಗಳು, ನೆಲದ ಪಾತ್ರಗಳು, ಬೇಕೋ ಬೇಡವೋ ಆಗಾಗ ಉದುರುವ ಯೋಗರಾಜ್ ಭಟ್ಟರ ಶೈಲಿನ ಭಗ್ನ ಪ್ರೇಮ ಕವಿತೆಗಳಿಂದ ಚಿತ್ರ ನೋಡುಗ ಗೊಂದಲಕ್ಕೊಳಗಾಗುವುದು ಸಹಜ. ಕ್ಲೈಮ್ಯಾಕ್ಸ್ಗಾಗಿ ಚಿತ್ರ ನೋಡಬೇಕು. ಇದರ ನಡುವೆ 'ಶಾಪಗ್ರಸ್ತ ಜಿಲ್ಲೆ ಚಾಮರಾಜನಗರದಿಂದ ಬಂದು ರಿಕ್ಷಾ ಓಡಿಸುತ್ತಿದ್ದರೂ ರಿಚ್ ಆಗಿ ಸಾಕ್ತೀನಿ ಕಣವೋ' ಎನ್ನುವಂಥ ಕೆಲ ಸಂಭಾಷಣೆಗಳು ಮನಸ್ಸಿಗೆ ನಾಟುತ್ತವೆ. ಆದರೆ, ಪ್ರತಿ ದೃಶ್ಯದಲ್ಲೂ ನಿರೂಪಣೆಯ ಗಟ್ಟಿತನವಿಲ್ಲದೆ ಜಾಳು ಜಾಳಾಗಿ ಸಾಗುವುದು ಚಿತ್ರದ ಮುಖ್ಯ ಕೊರತೆ. ದೃಶ್ಯ ಸಂಯೋಜನೆ ಕಡೆ ಗಮನ ಕೊಟ್ಟಿದ್ದರೆ ನಿಜಕ್ಕೂ 'ಚತುರ್ಭುಜ' ಗಾಂಧಿನಗರ ದಾರಿಯಿಂದ ಆಚೆಗೆ ನಿಲ್ಲುವ ಭಿನ್ನ ಚಿತ್ರವಾಗುತ್ತಿತ್ತು. ಹಳ್ಳಿಯಿಂದ ಬರುವ ಮುಗ್ಧ ಯುವಕ. ನಗರದ ಹೈವೆ ಬದಿಯಲ್ಲಿ ಟೆಂಟ್ ಹಾಕಿರುವ ಯುವ ಜೋಡಿಗಳು. ಇವರಲ್ಲಿ ಜವಾಬ್ದಾರಿ ಇಲ್ಲದ ಹುಡುಗಿಯರ ಪೈಕಿ ಹಳ್ಳಿ ಹುಡುಗನನ್ನು ಪ್ರೀತಿಸುವ ಹುಡುಗಿ. ಅವಳನ್ನು ಬೆನ್ನತ್ತುವ ಖಳನಾಯಕ. ಈ ಹುಡುಗಿಯ ಪ್ರೀತಿ ಯಾರಿಗೆ ಎಂದುಕೊಳ್ಳುವಾಗಲೇ, ಅವಳು 'ಅವನು' ಎಂದು ಗೊತ್ತಾಗುವಷ್ಟರಲ್ಲಿ ಚಿತ್ರ ಮುಕ್ತಾಯವಾಗುತ್ತದೆ. ಕಿರಣ್ ಹಂಪಾಪುರ ಕ್ಯಾಮೆರಾ, ಪೂರ್ಣಚಂದ್ರ ತೇಜಸ್ವಿ ಸಂಗೀತದಲ್ಲಿ ಹೇಳಿಕೊಳ್ಳುವಂಥದ್ದೇನು ಇಲ್ಲ. ನಾಯಕ ಆರ್ವನ ಭಾಷೆಗೂ ವೇಷಕ್ಕೂ ಸಂಬಂಧವೇ ಇಲ್ಲ ಎನ್ನುವುದು ಅವರ ನಟನೆಯ ಮೈನಸ್. ನಾಯಕಿ ಶ್ರೇಯಾ ಕೊನೆಯಲ್ಲಿ ಭರವಸೆ ಮೂಡಿಸುತ್ತಾರೆ. ಬಾದಲ್ಗೆ ಸರಿಯಾಗಿ ತರಬೇತಿ ಕೊಟ್ಟು ಬಳಸಿಕೊಂಡರೆ ಕನ್ನಡಕ್ಕೊಬ್ಬ ಟಿಪಿಕಲ್ ಖಳನಟ ಸಿಕ್ಕಂತೆಯೇ. ಚಂದ್ರಿಕಾ ಐಟಂ ಹಾಡಿಗೆ ಹೆಜ್ಜೆ ಹಾಕಿ ಹೋಗುತ್ತಾರೆ. ತಬಲಾ ನಾಣಿ ಆಗಾಗ ನಗಿಸುತ್ತಾರೆ. ಡಬಲ್ ಮೀನಿಂಗ್ ಮಾತುಗಳೇ ಸಂಭಾಷಣೆಗಳು ಎಂದುಕೊಂಡರೆ ಚಿತ್ರ ಕಳಪೆಯಾಗುತ್ತದೆ ಎನ್ನುವುದಕ್ಕೆ ಈ ಚಿತ್ರ ಸಾಕ್ಷಿ. - ಆರ್. ಕೇಶವಮೂರ್ತಿ