ಎಂಥಾ ಮರುಳಯ್ಯ ಇದು...? 1993ರಲ್ಲಿ 'ಪುದಿಯ ಮೂಗಂ' ಎಂಬ ತಮಿಳು ಚಿತ್ರ ತೆರೆಕಂಡಿತ್ತು. ಅದೇ ಹೆಸರಿನಲ್ಲಿ 2009ರಲ್ಲಿ ಮಲೆಯಾಳಂ ಚಿತ್ರ ತೆರೆಕಂಡಿತು. ಆದರೆ ಆ ಎರಡೂ ಚಿತ್ರಗಳ ಹೆಸರು ಮಾತ್ರ ಕಾಮನ್ ಆಗಿತ್ತು. ಮಲೆಯಾಳಂನ 'ಪುದಿಯ ಮೂಗಂ' ಚಿತ್ರದ ಮೋಸ್ಟ್ ಕಾಮನ್ ಕಥೆಯನ್ನಿಟ್ಟುಕೊಂಡು ಈಗ ಕನ್ನಡದಲ್ಲಿ ಪ್ರಜ್ವಲ್ ಅಭಿನಯದ 'ಜಿದ್ದಿ' ತಯಾರಾಗಿದೆ. 'ಪುದಿಯ ಮೂಗಂ' 2009ರಲ್ಲಿ ಬಿಡುಗಡೆಯಾಗಿದ್ದರೂ ಅದು ಕೂಡ ಕಾಲಕ್ಕೆ ತಕ್ಕಂಥ ಸಿನಿಮಾ ಏನೂ ಆಗಿರಲಿಲ್ಲ. ಹಾಗಾಗಿ, ಅನಂತರಾಜು ನಿರ್ದೇಶನದ ಚಿತ್ರ ಎಂದಾಕ್ಷಣ ಅದು ರಿಮೇಕ್ ಎಂದು ಊಹಿಸುವುದು ಎಷ್ಟು ಸುಲಭವೋ ಈ ಚಿತ್ರ ಶುರುವಾಗುತ್ತಿದ್ದಂತೆ, ಇದರ ಕಥೆಯನ್ನು ಊಹಿಸುವುದೂ ಅಷ್ಟೇ ಸುಲಭ. ಜ್ಯಾದಾ ನಖರಾ ಮಾಡದ ಒಬ್ಬ ಸಾದಾ ಸೀದಾ ಹುಡುಗ ಪ್ರಜ್ವಲ್, ಹಳ್ಳಿಯಿಂದ ಸಿಟಿಗೆ ಓದಲು ಬರುತ್ತಾನೆ. 'ಓದೋ ಸಮಯದಲ್ಲಿ ಲವ್ ಮಾಡಬಾರದು' ಎಂಬ ಸದುದ್ದೇಶದಿಂದಲೋ ಏನೋ ಅವನು ಮೊದಲೇ ಲವ್ ಮಾಡಿಕೊಂಡು ಓದಲು ಬರುತ್ತಾನೆ. ಅದೇ ಕಾಲೇಜಿನಲ್ಲಿ 'ಓದಿ ಯಾರು ಉದ್ಧಾರ ಆಗಿದ್ದಾರೆ' ಎಂಬ ಧೋರಣೆಯಿರುವಂಥ ಒಬ್ಬ ವಿಲನ್ ತಿಲಕ್. ಜೊತೆಗೆ ಅವನು ಮದುವೆಯಾಗಬೇಕೆಂದಿರುವ 'ಓದಿ ಏನಾಗ್‌ಬೇಕಾಗಿದೆ ಬಿಡಿ' ಎನ್ನುವಂಥ ಹುಡುಗಿ ಐಂದ್ರಿತಾ ರೇ. ಆದರೆ ಇವರ ಮಧ್ಯೆ ನಾಯಕ 'ಮರುಳಾಗುವುದು' 'ಓದಿ ಓದಿ ಅಲ್ಲ' ಎಂಬುದು ವಿಶೇಷ. ಈ ಹಳ್ಳಿ ಹುಡುಗ, ಪ್ಯಾಟೆ ಹುಡುಗಿಯ ಫೇಸ್ ರೀಡಿಂಗ್ ಮಾಡಿದಾಗ ಅವರಿಬ್ಬರು ಲವ್ ಮಾಡ್ತಿದ್ದಾರೆ ಎಂಬ ಅನುಮಾನ ವಿಲನ್‌ಗೆ. ಹಾಗಾಗಿ, 'ನನ್ನ ಮುದ್ದು ತಾರೆ, ಐಂದ್ರಿತಾ ರೇ' ಎಂದು ಹಾಡುವ ತಿಲಕ್, ನಾಯಕ ಪ್ರಜ್ವಲ್ ಮೇಲೆ ಮತ್ತೆ ಮತ್ತೆ ರೇಗುತ್ತಾನೆ. ಈ ಹೊಡೆದಾಟದಲ್ಲಿ ತಲೆಗೆ ಪೆಟ್ಟು ತಿನ್ನುವ ನಾಯಕನ ಮಾನಸಿಕ ಪರಿಸ್ಥಿತಿ ಹದಗೆಡುತ್ತದೆ. ಅವನ ಮನೆಯವರಿಗೆಲ್ಲಾ ಈ ಬಗ್ಗೆ ದೊಡ್ಡ ಆತಂಕವಾದರೂ ಪ್ರೇಕ್ಷಕನಿಗೆ ಅದೇನೂ ವ್ಯತ್ಯಾಸ ಮಾಡುವುದಿಲ್ಲ. ಅದಕ್ಕೊಂದು ಸಣ್ಣ ಫ್ಲ್ಯಾಷ್‌ಬ್ಯಾಕ್ ಹೇಳಲಾಗಿದ್ದರೂ, ನಾಯಕ ನಾರ್ಮಲ್ ಆಗಿಯೇ ಇರುವುದನ್ನು ಕಂಡು, ಪ್ರೇಕ್ಷಕ ಎಂಥಾ 'ಮರುಳಯ್ಯ' ಇದು ಎಂದು ಅಚ್ಚರಿಗೊಳ್ಳುತ್ತಾನೆ. ತಲೆಗೆ ಪೆಟ್ಟು ಬಿದ್ದು, ಮಾನಸಿಕ್ ಆಗಿ, ಒಂದೆರಡು ದಿನಗಳ ಸಿಕ್‌ಲೀವ್‌ನ ನಂತರ ಮತ್ತೆ ಕಾಲೇಜಿಗೆ ಎಂಟ್ರಿ ಕೊಡುವ ನಾಯಕ ಮತ್ತು ವಿಲನ್‌ನ ಗುದ್ದಾಟ ಮುಂದುವರೆಯುತ್ತದೆ. ನಾಯಕಿ ತನಗೆ ಸಿಕ್‌ಲಿಲ್ಲ ಎಂಬ ವಿಲನ್‌ನ ಕಿರಿಕ್‌ಗಳು, ಅವರಣ್ಣನ ಸಪೋರ್ಟು, ನಾಯಕ, ನಾಯಕಿ, ಎಲ್ಲೆಲ್ಲಿ ಏನೇನು ಮಾಡ್ತಿದಾರೆ ಎಂದು ವಿಲನ್‌ನ ಸ್ನೇಹಿತರು ಕೊಡುವ ರಿಪೋರ್ಟು, ಪೊಲೀಸ್ ಆಗಿರುವ ನಾಯಕಿಯ ಅಪ್ಪ ಸುಚೇಂದ್ರ ಪ್ರಸಾದ್ ಕುಮ್ಮಕ್ಕು, ಈ ಎಲ್ಲವೂ ಚಿತ್ರವನ್ನು ಕ್ಲೈಮ್ಯಾಕ್ಸ್‌ನ ಕಡೆಗೆ ಯಶಸ್ವಿಯಾಗಿ ಕರೆದೊಯ್ಯುತ್ತವೆ. ಈ ಮಧ್ಯೆ ವಿಲನ್‌ನ ಕಿರಿಕ್‌ನಿಂದಾಗಿ ನಾಯಕ ತನ್ನ ಹಳೆಯ ಪ್ರೀತಿಯನ್ನು ಕಳೆದುಕೊಂಡು ಹೊಸ ಹುಡುಗಿಗೆ ಶಿಫ್ಟ್ ಆಗುತ್ತಾನೆ. ಅತ್ತ ಸುಚೇಂದ್ರಪ್ರಸಾದ್ ಕೂಡ ಪಾರ್ಟಿ ಸ್ವಿಚ್ ಮಾಡಿ ಸ್ವಿಚ್ಚೇಂದ್ರಪ್ರಸಾದ್ ಆಗುತ್ತಾರೆ. ಚಿತ್ರದುದ್ದಕ್ಕೂ ವಿಲನ್ ಆಗಿಯೇ ಇರುವ ತಿಲಕ್ ಕ್ಲೈಮ್ಯಾಕ್ಸ್‌ನ ಒಂದು ದೃಶ್ಯದಲ್ಲಿ ಹೀರೋನಂತೆ ಮಾತನಾಡಿ ನೆಮ್ಮದಿಯ ನಿಟ್‌'ಉಸಿರು ಬಿಡುತ್ತಾರೆ'. ಇಲ್ಲಿ ಜಿದ್ದಿ ಬಡಿಸುವ ಊಟ ರುಚಿಕಟ್ಟಾಗಿದೆ, ಶುಚಿಯಾಗಿಯೂ ಆಗಿದೆ, ಆರೋಗ್ಯಕರವಾಗಿಯೂ ಇದೆ. ಆದರೆ ಹೊಸರುಚಿ ಅಪೇಕ್ಷಿಸಿದರೆ ಮಾತ್ರ ನಿರಾಶೆ. 'ನೀವೇ ಗೆಸ್ ಮಾಡ್ಕೊಳಿ ಸಾರ್‌' ಎನ್ನುವ ಕಥೆ, ಅದೇ ಮಾಮೂಲಿ ಶೈಲಿಯ ಚಿತ್ರಕತೆಯಲ್ಲಿ ಒಂದಿಷ್ಟು ಹೊಸತನ ಕಂಡರೆ ಅದು ಚಿತ್ರದ ಹಾಡುಗಳು ಮತ್ತು ಆ್ಯಕ್ಷನ್ ಸನ್ನಿವೇಶಗಳಲ್ಲಿ ಮಾತ್ರ. ಥ್ರಿಲ್ಲರ್ ಮಂಜು, ರವಿವರ್ಮ, ಕೇಡಿ ವೆಂಕಟೇಶ್ ತಮ್ಮ ಪಟ್ಟುಗಳಿಂದ ಗಮನಸೆಳೆದರೆ, ಕುಹು, ಕುಹೂ, ಆಂಖ್ ಮಾರೇ, ಕಾಲೇಜ್ ಹಾಡುಗಳ ಹೊಸರೀತಿ ಸಂಗೀತದ ಮಟ್ಟುಗಳಿಂದ ಗಿರಿಧರ್ ದಿವಾನ್, ಜಿದ್ದಿಗೆ ಗುದ್ದು ನೀಡಿದ್ದಾರೆ. ಮುದ್ದಾಡುವ, ಗುದ್ದಾಡುವ ಹುಡುಗನಾಗಿ ಪ್ರಜ್ವಲ್ ಅವರದ್ದು ಗಂಭೀರ ಅಭಿನಯ. ತಿಲಕ್ ಬೆವರು, ರಕ್ತ ಎರಡೂ ಸುರಿಸಿ ಅಭಿನಯಿಸಿದ್ದಾರೆ. ಐಂದ್ರಿತಾ ರೇ, ಐಶ್ವರ್ಯಾ ನಾಗ್ ತಮ್ಮ ಗ್ಲಾಮರ್ ಕಾಣಿಕೆ ಸಲ್ಲಿಸಿದರೆ, ಶರತ್ ಲೋಹಿತಾಶ್ವ, ಮುನಿ ವಿಲನ್‌ಗಳಾಗಿ ತಮ್ಮ ಕರ್ತವ್ಯ ನಿಭಾಯಿಸಿದ್ದಾರೆ. ಸುಚೇಂದ್ರ ಪ್ರಸಾದ್ ಅಪರೂಪಕ್ಕೆ ಕಡಿಮೆ ಮಾತಾಡಿದ್ದಾರೆ ಎಂಬುದು 'ಜಿದ್ದಿ'ಯ ವಿಶೇಷ. - ಹರಿ