ನೀವು ಹ್ಞೂಂ ಅಂತಿರಿ, ನಾನ್ ಕಥೆ ಹೇಳ್ತೀನಿ ಮುಂದೊಂದು ದಿನ, ವೀರಪ್ಪನ್ ಹೇಗಿದ್ದ? ಅವನ ಬಾಲ್ಯ ಹೇಗಿತ್ತು? ಅಂತ ನಮ್ಮ ಮಕ್ಕಳು ಕೇಳಿ ತಿಳಿದುಕೊಳ್ಳಲು, ವೀರಪ್ಪನ್ ಮಹಾತ್ಮನೇನೂ ಅಲ್ಲದಿದ್ದರೂ, ಅವನ ಕಥೆ ಹೇಳಲೇಬೇಕೆಂದು ನಿರ್ಧರಿಸಿ ಅಟ್ಟಹಾಸದ ಚರಿತ್ರೆ ಬಿಚ್ಚಿಟ್ಟಿದ್ದಾರೆ ನಿರ್ದೇಶಕ ಎ.ಎಂ.ಆರ್.ರಮೇಶ್. ಆರಂಭದ ದಿನಗಳ ಘಟನಾವಳಿಗಳು, ಅಂತ್ಯದವರೆಗೂ ನಡೆದ ಅವನ ಹಾವಳಿಗಳು, ಡಾ.ರಾಜ್‌ಕುಮಾರ್ ಅಪಹರಣ ಮಾಡಿದ್ದು, ಅವರನ್ನು ಬಿಡಿಸಿದ ಎಪಿಸೋಡನ್ನು ಕೌತುಕಪೂರ್ಣವಾಗಿ ಬಿಡಿಸಿಟ್ಟಿದ್ದಾರೆ ನಿರ್ದೇಶಕರು. ಇದನ್ನು ವೀರಪ್ಪನ್‌ನ ಬಗೆಗಿನ ಡಾಕ್ಯುಮೆಂಟರಿ ಎನ್ನುವಂತಿಲ್ಲ ಎಂದರೆ ಅದಕ್ಕೆ ಕಾರಣ ರೋಚಕ ಎನಿಸುವಂಥ ಘಟನೆಗಳು, ವಿಜಯ್ ಛಾಯಾಗ್ರಹಣ ಮತ್ತು ಸಂದೀಪ್ ಚೌಟರ ಹಿನ್ನೆಲೆ ಸಂಗೀತ. ಈ ಎಲ್ಲದರ ಸಹಾಯದಿಂದ, ವೀರಪ್ಪನ್ ಕತೆಯನ್ನೂ ಬ್ಯೂಟಿಪುಲ್ ಆಗಿಸಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ ರಮೇಶ್. ಆದರೆ, ಡಾ.ರಾಜ್ ಎಪಿಸೋಡ್ ಸೇರಿದಂತೆ, ಚಿತ್ರದಲ್ಲಿ ಹೇಳಬೇಕಾಗಿದ್ದ ಹಲವು ಅಂಶಗಳು ಮಿಸ್ ಆಗಿವೆ ಎನಿಸಿದರೆ 'ಹೇಳುವುದಕ್ಕೂ ಕೇಳುವುದಕ್ಕೂ ಇದು ಸಮಯವಲ್ಲ' ಎಂಬ ನಿರ್ದೇಶಕರ ನಿಲುವು ಅದಕ್ಕೆ ಉತ್ತರ. ಒಂದು ದೃಶ್ಯದಲ್ಲಿ ವೀರಪ್ಪನ್, ತನ್ನ ಚಿಕ್ಕಂದಿನ ಬೇಟೆಯ ಸಾಹಸಗಾಥೆಗಳನ್ನು ಹೇಳುತ್ತಾ ಹೋಗುತ್ತಾನೆ, ಕೇಳಿ ಕೇಳಿ ಬೋರಾದ ಡಾ.ರಾಜ್, ತಮ್ಮ ಪಕ್ಕದಲ್ಲಿದ್ದವನಿಗೆ ಹೇಳುತ್ತಾರೆ, 'ಅವನು ಹೇಳಿದ್ದಕ್ಕೆಲ್ಲಾ, ನೀನು ಹ್ಞೂಂ ಅಂತಿರಪ್ಪ, ನಾನು ಮಲಕ್ಕೊತೀನಿ'. ಚಿತ್ರದ ಕೆಲವು ವಿಷಯಗಳಲ್ಲಿ ನಿರ್ದೇಶಕ ರಮೇಶ್ ಅವರದ್ದೂ ಇದೇ ಧೋರಣೆ. 'ನೀವು ಹ್ಞೂಂ ಅಂತಿರಿ, ನಾನ್ ವೀರಪ್ಪನ್ ಕಥೆ ಹೇಳ್ತೀನಿ' ಎನ್ನುತ್ತಾರೆ ಅವರು. ಹಾಗಾಗಿ, 'ಅಟ್ಟಹಾಸ' ಒಮ್ಮೊಮ್ಮೆ ವೀರಪ್ಪನ್‌ನ ಉದ್ದನೆಯ ಮೂಗಿನ ನೇರಕ್ಕೆ, ಆಗಾಗ, ತಿರುವುವ ಅವನ ಮೀಸೆಯ ನೇರಕ್ಕೆ ತಕ್ಕಂತೆ ಸಾಗುತ್ತದೆ ಎನಿಸಬಹುದು. ಡಾ. ರಾಜ್‌ಕುಮಾರ್ ಎಪಿಸೋಡಿಗೆ ಪೋಸ್ಟರ್‌ಗಳಲ್ಲಿ ಕೊಟ್ಟಿರುವಷ್ಟು ಪ್ರಾಮುಖ್ಯತೆ ಚಿತ್ರದಲ್ಲಿಲ್ಲ. ಸುರೇಶ್ ಒಬೆರಾಯ್ ಅಣ್ಣಾವ್ರಂತೆ ಕಂಡರೂ ಅವರ ಪಾತ್ರ ಅಂದುಕೊಂಡಷ್ಟು ಪರಿಣಾಮಕಾರಿಯಾಗಿಲ್ಲ. ಅಲ್ಲದೆ, ಅಣ್ಣಾವ್ರ ಅಪಹರಣ ಮತ್ತು ಬಿಡುಗಡೆ ಮಧ್ಯದ ಕೋಲಾಹಲ, ಆತಂಕ ಚಿತ್ರದಲ್ಲಿ ಕಾಣುವುದಿಲ್ಲ. ಇಡೀ ಎಪಿಸೋಡ್ ಒಂದು ರೀತಿ ಕ್ಯಾಮರಾವನ್ನು ಕರ್ನಾಟಕದಲ್ಲಿಟ್ಟು ಕೇವಲ ಹೊರಗೆ ಮಾತ್ರ ನೋಡಿದಂತಿದೆ. ತನ್ನ ಮೇಲೆ ಮುನಿಸಿಕೊಂಡ ತನ್ನ ಸಹಚರನ ಪ್ರೇಯಸಿಯನ್ನು 'ನಂಗೂ ಒಂಚೂರು ಹಾಕು ತಾಯಿ' ಎಂದು ಊಟದ ತಟ್ಟೆ ಹಿಡಿದು ಬೇಡಿಕೊಳ್ಳುವ ವೀರಪ್ಪನ್, ಸದಭಿರುಚಿಯ ಕನ್ನಡ ಚಿತ್ರಗಳ ನಾಯಕನಂತೆ ಕಾಣುವುದು ಅವನ ಇಮೇಜ್‌ಗೆ ಅಷ್ಟೊಂದು ಹೊಂದುವುದಿಲ್ಲ. ಆದರೆ, ಫ್ಯಾಕ್ಟ್‌ಗಳನ್ನು ಬದಿಗಿಟ್ಟು ನೋಡಿದರೆ, ಕೆಲವೊಂದು ವಿಷಯಗಳ ಹೊರತಾಗಿ, ಒಂದು ಕಮರ್ಷಿಯಲ್ ಸಿನಿಮಾ ಆಗಿ 'ಅಟ್ಟಹಾಸ' ವೀರಪ್ಪನ್‌ನಷ್ಟೇ ಚುರುಕಾಗಿದೆ. ಆರಂಭದ ದೃಶ್ಯದಲ್ಲೇ ತಮ್ಮ ಬ್ಯಾಕ್ ಗ್ರೌಂಡ್ ಮ್ಯೂಸಿಕ್‌ನಿಂದ ಪ್ರೇಕ್ಷಕರನ್ನು ಇನ್‌ವಾಲ್ವ್ ಮಾಡಿಸುತ್ತಾರೆ ಸಂದೀಪ್ ಚೌಟ. ವಿಜಯ್ ಮೆಲ್ಟನ್‌ರ ಛಾಯಾಗ್ರಹಣ ಚಿತ್ರದ ಪ್ರಮುಖ ಶಕ್ತಿ. ಕ್ರೌರ್ಯ ತುಂಬಿದ ಚಿತ್ರವನ್ನೂ ಪ್ಲೆಸೆಂಟ್ ಆಗಿಸಿರುವ ಅವರಿಗೆ ಹ್ಯಾಟ್ಸ್ ಆಫ್. ಆದರೆ, ಅನವಶ್ಯಕವಾಗಿ ಕ್ಯಾಮೆರಾ ಆಗಾಗ ಎತ್ತರೆತ್ತರಕ್ಕೆ, ಛಾವಣಿಯ ಮೇಲೆ ಹೋಗುವ ಕಾರಣಕ್ಕೆ ಅದನ್ನು 'ಟಾಪ್ ಲೆವೆಲ್‌' ಛಾಯಾಗ್ರಹಣ ಎನ್ನಲು ಕಷ್ಟ. ವೀರಪ್ಪನ್ ಆಗಿ ಕಿಶೋರ್ ನಿರೀಕ್ಷಿತ ಮಟ್ಟದಲ್ಲಿ ವಿಜೃಂಭಿಸಿಲ್ಲ. ಈ ವಿಷಯದಲ್ಲಿ ರಮೇಶ್ ಅವರ ನಿಲುವು ಅಭಿನಂದನಾರ್ಹ. ಎಲ್ಲೂ ವೀರಪ್ಪನ್‌ನ ವಿಶೇಷ ಮ್ಯಾನರಿಸಂಗಳು, ಚಪ್ಪಾಳೆ ಹೊಡೆಯುವಂಥ ಡೈಲಾಗುಗಳನ್ನು ಸೇರಿಸದೆ ವೀರಪ್ಪನ್ ಹೀರೋ ಅಲ್ಲ ಎಂಬುದನ್ನು ಸೂಚ್ಯವಾಗಿ ಹೇಳಿದ್ದಾರೆ ರಮೇಶ್. ಅದಕ್ಕೆ ಕಿಶೋರ್‌ರಿಂದ ತಕ್ಕ ಬೆಂಬಲ ಸಿಕ್ಕಿದೆ. ಆದರೆ, ಕೆಲವೊಂದು ದೃಶ್ಯಗಳಲ್ಲಿ ಹೀರೋಯಿಸಂ ಇಣುಕುತ್ತದೆ; ವೀರಪ್ಪನ್, ಪೊಲೀಸರನ್ನು ಟ್ರ್ಯಾಪ್ ಮಾಡಿ ಸಾಯಿಸುವ ದೃಶ್ಯಕ್ಕೆ ಕೆಲವು ಪ್ರೇಕ್ಷಕರು ಸಿಳ್ಳೆ ಹೊಡೆಯುವ ಮಟ್ಟಿಗೆ. ಅರ್ಧ ಚಿತ್ರದ ನಂತರ ಕಾಣಿಸಿಕೊಂಡರೂ, ಅರ್ಜುನ್ ಸರ್ಜಾ ಪ್ರೇಕ್ಷಕರನ್ನು ಪೂರ್ತಿಯಾಗಿ ಆವರಿಸಿಕೊಳ್ಳುತ್ತಾರೆ. ರವಿಕಾಳೆ ನಿಜವಾದ ಅರ್ಥದಲ್ಲಿ ಅರ್ಜುನ್ ಸರ್ಜಾಗೆ 'ಸಹಾಯಕ'ರಾಗಿದ್ದಾರೆ. ಆದರೆ, ಭಾವನಾ ರಾವ್, ಲಕ್ಷ್ಮೀ ರೈ ಅವರದ್ದು 'ಬಂದೆ ಪುಟ್ಟಿ, ಹೋದೆ ಪುಟ್ಟಿ' ಎನ್ನುವಂಥ ಪಾತ್ರ ಮತ್ತು ಅಭಿನಯ. ಸುಚೇಂದ್ರ ಪ್ರಸಾದ್ ಅವರ ಅತಿ ಮಾತುಗಳು ಅವರ ಅಭಿನಯವನ್ನು ಮಬ್ಬಾಗಿಸಿದೆ. ವಿಜಯಲಕ್ಷ್ಮೀ ಅವರ ಪಾತ್ರವನ್ನು ನಿರ್ದೇಶಕರೇ ಮಬ್ಬಾಗಿಸಿರುವುದರಿಂದ ಅದರ ಬಗ್ಗೆ ಏನೂ ಹೇಳಲಾಗುವುದಿಲ್ಲ. - ಹರಿ