ನಾನೇ ನಾನೇ ಅಮ್ಮಾವ್ರ ಗಂಡ ನಾನೆ! ಅದು ಶೂಟಿಂಗ್ ಸ್ಪಾಟ್. ಅಲ್ಲಿಗೆ ಅತ್ಯಂತ ರಭಸವಾಗಿ ಟೊಯೋಟ ಕಾರೊಂದು ಬಂದು ಇಡೀ ಸೆಟ್‌ಗೆ ಇನ್ನೇನು ಡಿಕ್ಕಿ ಹೊಡೆಯಬೇಕೆಂಬ ಹಂತದಲ್ಲಿ ನಿಲ್ಲುತ್ತದೆ. ಅದರ ರಭಸ ಅಲ್ಲಿದ್ದವರ ಗಮನ ಸೆಳೆಯುತ್ತದೆ. ಯಾರು ಬಂದಿರಬಹುದು? ಎಲ್ಲರಿಗೂ ಅಚ್ಚರಿ. ಒಬ್ಬರು ಶಿವರಾಜ್‌ಕುಮಾರ್ ಅಂತಾರೆ. 'ನಮ್ ಶಿವಣ್ಣ ಆದ್ರೆ ಕಾರಿನ ಗ್ಲಾಸ್ ಒಡೆದುಕೊಂಡು ಹೊರಗೆ ಬರ್ತಾರೆ' ಅಂತಾರೆ. ಮತ್ತೊಬ್ಬರು ಸುದೀಪ್ ಇರಬಹುದು ಎಂದಿದ್ದಕ್ಕೆ, ಇನ್ನೊಬ್ಬ 'ನಮ್ ಕಿಚ್ಚ ಆದ್ರೆ ಡೋರ್ ಚಿಂದಿ ಮಾಡಿಕೊಂಡು ಹೊರ ಬರ್ತಾರೆ' ಅಂತಾನೆ. ಮಗದೊಬ್ಬರಿಗೆ ದರ್ಶನ್ ಇರಬಹುದೇ ಎನ್ನುವ ಅನುಮಾನ. 'ಚಾಲೆಂಜಿಂಗ್ ಸ್ಟಾರ್ ಆಗಿದ್ದರೆ ಕಾರಿನ ಟಾಪ್ ಉಡೀಸ್!' ಎನ್ನುತ್ತಾನೆ. ಹೋಗ್ಲಿ, ಪವರ್‌ಸ್ಟಾರ್ ಪುನೀತ್‌ರಾಜ್‌ಕುಮಾರ್ ಬಂದಿರಬಹುದೇ? ಎನ್ನುವ ಪ್ರಶ್ನೆಯ ಹಿಂದೆ 'ಪವರ್‌ಸ್ಟಾರ್ ಬಂದಿದ್ದರೆ ಕಾರನ್ನು ಗಾಳಿಯಲ್ಲೇ ಹಾರಿಸಿಕೊಂಡು ಬರುತ್ತಿದ್ದರು' ಎನ್ನುವ ಸಮರ್ಥನೆ. ಅಷ್ಟರಲ್ಲಿ ಕಾರಿನಲ್ಲಿರುವವರು ಇಳಿಯುತ್ತಾರೆ. ಮೈ ತುಂಬಾ ಕಾಸ್ಮೆಟಿಕ್ಸ್ ಮೆತ್ತಿಕೊಂಡು, ತಲೆಗೊಂದು ಛತ್ರಿ ಸಿಗಿಸಿಕೊಂಡು 'ಮೇಕ್ ಬಾಯ್‌'ನ ಹಾಗೆ ಕಾರಿನಿಂದ ಇಳಿಯುವ ನಟ ಕೋಮಲ್‌ರನ್ನು ನೋಡಿ ಪ್ರೇಕ್ಷಕ ನಗೆಗಡಲಲ್ಲಿ ತೇಲುತ್ತಾನೆ. ಯಾರನ್ನೂ ಹಿಂಬಾಲಿಸದೆ ಅವರನ್ನು ಅವರೇ ಫಾಲೋ ಮಾಡಿಕೊಂಡು ಕಾಮಿಡಿ ಕಿಕ್ ಕೊಡುತ್ತಾರೆ. ಅಲ್ಲಿಗೆ ಕೋಮಲ್ ಹೀರೋ ಆಗಿದ್ದರೂ ಬೇರೊಬ್ಬರ ಸ್ಟಾರ್ ನೇಮ್‌ಪ್ಲೇಟ್‌ನ್ನು ತನ್ನ ಕೊರಳಿಗೆ ಹಾಕಿಕೊಂಡಿಲ್ಲ ಎನ್ನುವ ಸಂದೇಶ ರವಾನೆಯಾಗುತ್ತದೆ. ಹಾಸ್ಯ ನಟರು 'ಸೋಲೊ' ಹೀರೋಗಳಾಗುತ್ತಿದ್ದಂತೆ ಬಿಲ್ಡ್‌ಅಪ್ ದೃಶ್ಯಗಳಲ್ಲಿ ಮಿಂಚುವುದು ಹೆಚ್ಚು. ಆದರೆ ಕೋಮಲ್ ಇಲ್ಲಿ ಬೇರೊಬ್ಬರನ್ನು ಅನುಸರಿಸದೆ ಇನ್ನೂ ತನ್ನತವನ್ನು ಉಳಿಸಿಕೊಂಡಿದ್ದಾರೆಂಬ ಕುರುಹು 'ರಾಧಿಕಾನ ಗಂಡ' ಚಿತ್ರದಲ್ಲಿದೆ. ಚಿತ್ರದ ಕ್ಲೈಮ್ಯಾಕ್ಸ್‌ನಲ್ಲಿ 'ಇಲ್ಲಿವರೆಗೂ ನನ್ ಕಾಮಿಡಿ ಮುಖ ಮಾತ್ರ ನೋಡಿದ್ದೀರಿ. ನನ್ನ ಮತ್ತೊಂದು ಮುಖ ನೋಡಿಲ್ಲ' ಎನ್ನುತ್ತಾ ಅಡ್ಡ ಬಂದ ರೌಡಿಗಳನ್ನು ಹೊಡೆದು ಅಡ್ಡಡ್ಡ ಮಲಗಿಸಿ ತನ್ನವಳನ್ನು ರಕ್ಷಿಸಿಕೊಳ್ಳುತ್ತಾನೆ. ಇಲ್ಲಿ ಕಾಮಿಡಿ ಕಿಕ್ಕು, ಆ್ಯಕ್ಷನ್ ಟಚ್ಚೂ ಎರಡೂ ಇದೆ. ನಗುವಿನ ಆಚೆಗೆ ಕೋಮಲ್‌ರನ್ನು ತೋರಿಸುವ ಪ್ರಯತ್ನಕ್ಕೆ ನಿರ್ದೇಶಕ ಮುರುಗನ್ ಕೈ ಹಾಕಿದಂತಿದೆ. ಅಂದಹಾಗೆ 'ರಾಧಿಕಾನ ಗಂಡ' ಚಿತ್ರ ಮಲೆಯಾಳಂ ಚಿತ್ರದಿಂದ ಸ್ಫೂರ್ತಿಗೊಂಡಿದ್ದರೂ ಇದರ ಮೂಲ ಫ್ರೆಂಚ್‌ನ 'ಮೈ ವೈಫ್ ಈಸ್ ಆ್ಯನ್ ಆ್ಯಕ್ಟ್ರಸ್‌' ಚಿತ್ರದ್ದು. ಮೂಲದಲ್ಲಿ ಹಾಸ್ಯ ಮತ್ತು ರೋಮ್ಯಾಟಿಕ್ ಮೂಡ್ ಉಂಟು. ಆದರೆ ಅದು ಕನ್ನಡಕ್ಕೆ ಬರುವಷ್ಟರಲ್ಲಿ ಕೋಮಲ್‌ರಿಗೆ ಅಂತಲೇ ಮಾಡಿರುವ ಸಿನಿಮಾ ಎನ್ನಿಸಿಕೊಳ್ಳುತ್ತದೆ. ಚಿತ್ರದಲ್ಲಿ ಎದುರಾಗುವ ತಿರುವುಗಳು, ಅದು ಸಾಗುವ ಹಾದಿ, ಕುಣಿಸುವಂಥ ಹಾಡುಗಳು, ಒಂಚೂರು ನಗು, ನಾಯಕಿಯ ಕ್ಯೂಟ್ ಲುಕ್ ಇಂಥ ಬದಲಾವಣೆಯ ಪಟ್ಟಿ. ಇಲ್ಲಿ 'ರಾಧಿಕಾ' ಎನ್ನುವ ಹೆಸರು ನೋಡಿ ಬೇರೆನೂ ಊಹಿಸಬೇಡಿ. ನಿಮ್ಮ ಊಹೆಯ ಆ ರಾಧಿಕಾಗೂ ಈ ರಾಧಿಕಾಗೂ ಯಾವುದೇ ಸಂಬಂಧವಿಲ್ಲ. ದಿಕ್ಕಿಲ್ಲದೇ ಹಳ್ಳಿಯಿಂದ ಬಂದವನೊಬ್ಬ ನಗರದಲ್ಲಿ ಮೈ ತುಂಬಾ ಸಾಲ ಮಾಡಿಕೊಂಡು ವಾಸವಿದ್ದ ಮನೆಗೂ ಬಾಡಿಗೆ ಕೊಡದೆ ಕಳ್ಳನಂತೆ ತಪ್ಪಿಸಿಕೊಂಡು ಓಡಾಡಿಕೊಂಡಿರುವವನ ಹಿಂದೆ ಒಂದು ಲವ್ ಸ್ಟೋರಿ. ಆದರೆ ಈತನ ಪ್ರೇಯಸಿಗೆ ಅಗ್ನಿ ಸಾಕ್ಷಿಯಾಗಿ ಬೇರೊಬ್ಬನೊಂದಿಗೆ ಮಧುವೆ ನಿಶ್ಚಯವಾಗಿದೆ. ಪ್ರೀತಿಸಿದವನನ್ನು ಬಿಟ್ಟಿರಲಾಗದ ಈ ಹಳ್ಳಿ ಹುಡುಗಿ ಗಂಟು ಮೂಟೆ ಕಟ್ಟಿಕೊಂಡು ನೇರವಾಗಿ ನಗರಕ್ಕೆ ಬರುತ್ತಾಳೆ. ಮೊದಲೇ ಅಬ್ಬೆಪ್ಪಾರಿಯಾಗಿರುವ ಈತನಿಗೆ ಪ್ರೇಯಿಸಿ ಬೇರೆ ಕೇಡು! ಎಂದುಕೊಳ್ಳುವಾಗಲೇ, ಯಾರೂ ಇಲ್ಲದ ಊರಿನ ಸಂತೆಯಲ್ಲಿ ಸಿಕ್ಕ 'ಕುರಿ'ಯ ಬೆನ್ನತ್ತುವ ಕೃಷ್ಣ ಮತ್ತು ರಾಧಿಕಾ ಅದರ 'ಪ್ರತಾಪ'ದ ಬುದ್ಧಿಯಿಂದ ಮೂರು ಗಂಟು ಹಾಕಿಸಿಕೊಂಡು ಸತಿಪತಿಗಳಾಗುತ್ತಾರೆ. ಆದರೆ ಆಕಸ್ಮಿಕವಾಗಿ ಸತಿ ಚಿತ್ರರಂಗದಲ್ಲಿ ನಾಯಕಿಯಾಗಿ, ಪತಿ ಆಕೆಗೆ ಮೇಕ್‌ಪ್‌ಮ್ಯಾನ್ ಆದ ಮೇಲೆ ಚಿತ್ರ ಮತ್ತೊಂದು ತಿರುವು ಪಡೆದುಕೊಳ್ಳುತ್ತದೆ. ಈ ನಡುವೆ ರೌಡಿಗಳ ತಂಡ ಏನನ್ನೋ ಹುಡುಕುತ್ತಿರುತ್ತದೆ. ಅದು ಕೊನೆವರೆಗೂ ಸಸ್ಪೆನ್ಸ್. ಆದರೆ ಕೃಷ್ಣಗೆ ಪೂರ್ಣ ಪ್ರಮಾಣದಲ್ಲಿ 'ಮೈ ವೈಫ್ ಈಸ್ ಆ್ಯನ್ ಆ್ಯಕ್ಟ್ರಸ್‌' ಆಗುತ್ತಿದ್ದಾಳೆ ಎಂದುಕೊಳ್ಳುವ ಸಂದರ್ಭದಲ್ಲೇ 'ಮೈ ವೈಫ್ ಈಸ್ ಎ ಗ್ಯಾಂಗ್‌ಸ್ಟರ್‌' ಆಗಿ ಕಾಣುತ್ತಾಳೆ. ಈ ಕಾರಣಕ್ಕೆ ಆ ಗ್ಯಾಂಗ್‌ಗೆ ಕಲ್ಲು ಹೊಡೆಯುವ ಕೆಲಸಕ್ಕಿಳಿಯುತ್ತಾನೆ. ನಿರ್ದೇಶಕ ಮುರುಗನ್ ಸೆಂಟಿಮೆಂಟ್, ಕಾಮಿಡಿ ಟಾಕ್, ಗಂಡ- ಹೆಂಡತಿಯ ನಡುವಿನ ಅಪನಂಬಿಕೆ, ಚಿತ್ರರಂಗದೊಳಗಿನ ವಿಲಕ್ಷಣತೆಯನ್ನು ಹದವಾಗಿ ಬೆರಸಿದ್ದಾರೆ. ಕೋಮಲ್‌ರ ಡ್ಯಾನ್ಸ್, ಸಂಕಲಕಾರನ ಕತ್ತರಿ, ಸೆಲ್ವಂರ ಛಾಯಾಗ್ರಹಣ ಈ ಮೂರು ಸ್ಪರ್ಧೆಗೆ ಇಳಿಯುತ್ತವೆ. 'ನಾನೇ ರಾಧಿಕಾಳ ಗಂಡ' ಎನ್ನುವಾಗಿನ ನಾಯಕನ ಎಮೋಷನಲ್ ನೋಡುಗನಿಗೂ ಸನಿಹವಾಗುತ್ತದೆ. ಕುರಿಪ್ರತಾಪ್, ಕೋಮಲ್‌ರ ಕಾಂಬಿನೇಷನ್ ವರ್ಕ್‌ಔಟ್ ಆಗಿದೆ. ಆದರೆ ಹಾಗೆ ಬಂದು ಹೀಗೆ ಇದ್ದಕ್ಕಿದ್ದಂತೆ ಮಾಯವಾಗುವ ಸರ್ಕಾರ್ ಎಪಿಸೋಡ್ ನಿಜಕ್ಕೂ ಕಾಮಿಡಿ ಪೀಸು. ನಟಿ ಪೂರ್ಣಳ ಅಭಿನಯ ಓಕೆ. ಸಿನಿಮಾದಲ್ಲಿ ನಿರ್ದೇಶಕನಾಗಿ ಬರುವ ಆರ್ಯ, ನಿರ್ಮಾಪಕನ ಪಾತ್ರಧಾರಿ ಸುದರ್ಶನ್ ಗಮನ ಸೆಳೆಯುತ್ತಾರೆ. ಸಂಗೀತ ನಿರ್ದೇಶಕ ಮಣಿಕಾಂತ್ ಕದ್ರಿಯ ಅಬ್ಬರ ಜೋರಾಗಿದೆ. ಟಿವಿ ರೈಟ್ಸ್‌ಗಾಗಿ ಸಿನಿಮಾ ಮಾಡುವ ಕಿಂಗ್ ರವಿಕುಮಾರ್ ಈ ಬಾರಿ ಚಿತ್ರಮಂದಿರದಲ್ಲೂ ನೋಡಬಹುದಾದ ಚಿತ್ರ ಮಾಡಿದ್ದಾರೆ. -ಆರ್. ಕೇಶವಮೂರ್ತಿ