ಪ್ರೇಮಕ್ಕೆ ಕಣ್ಣಿಲ್ಲ, ಆದರೆ ಪ್ರೇಕ್ಷಕನಿಗೆ ಉಂಟಲ್ಲ! ಪ್ರೀತಿ, ಪ್ರೇಮದ ಕಥೆಗಳಲ್ಲಿ ಹುಡುಗನೇ 'ತ್ಯಾಗಜೀವಿ'ಯಾಗಬೇಕೆಂದು ನಿಯಮ ಮಾಡಿದ್ದು ಯಾರು ಅಂತ ಗೊತ್ತಿಲ್ಲ. ಆದರೆ, ಬಹುತೇಕ ಲವ್‌ಸ್ಟೋರಿ ಚಿತ್ರಗಳಲ್ಲಿ ನಾಯಕನೇ ಕೊನೆಯಲ್ಲಿ 'ತ್ಯಾಗ'ಕ್ಕೆ ಜೈ ಎನ್ನುತ್ತಾನೆ. ಪ್ರೇಮಮಯ ಚಿತ್ರಗಳಲ್ಲಿ ಟ್ರ್ಯಾಜಿಡಿ ಕ್ಲೈಮ್ಯಾಕ್ಸ್ ಇದ್ದರೆ ಅಲ್ಲಿ 'ತ್ಯಾಗ' ಎನ್ನುವ ಪದಕ್ಕೆ ನಾಯಕ ಒಂಥರಾ ಗುತ್ತಿಗೆದಾರ! ಇರಲಿ, ಹೀಗೊಂದು ದುಃಖಾಂತ್ಯ ಕೊಟ್ಟು ತ್ಯಾಗ ಪ್ರೇಮಿಯ ಕಥೆಯನ್ನು ಹೇಳುವ ಚಿತ್ರ 'ಐ ಯಾಮ್ ಇನ್ ಲವ್‌'. ಯಾವುದೇ ಏರಿಳಿತ, ತಿರುವು- ಮುರುವುಗಳಿಲ್ಲದೆ ಸೀದಾ ಸಾದ ಕಥೆಯನ್ನಿಟ್ಟುಕೊಂಡು ಪತ್ರಕರ್ತ ನಂದಕುಮಾರ್ ನಿರ್ದೇಶಿಸಿರುವ ಚಿತ್ರವಿದು. ಕಥೆ, ಪಾತ್ರಗಳಿಗೆ ಗಟ್ಟಿ ನೆಲೆ ಇಲ್ಲದಿದ್ದರೂ ಸರಿ, ಒಂದು ಸಿನಿಮಾ ಮಾಡಬೇಕು. ಅದನ್ನು ಜನ ನೋಡಲಿ, ಬಿಡಲಿ ಆ್ಯಕ್ಷನ್ ಕಟ್ ಹೇಳಬೇಕು ಎಂದುಕೊಳ್ಳುವವರಿಗೆ ಅತ್ಯುತ್ತಮ ಪಠ್ಯವಿದು. 'ಕಣ್ಣಲ್ಲಿ ಕಣ್ಣಿಟ್ಟು ಪ್ರೀತಿ ಮಾಡಿದವನು. ಈಗ ತನ್ನ ಕಣ್ಣುಗಳನ್ನೇ ದಾನ ಮಾಡಿ ಐ ಯಾಮ್ ಇನ್ ಲವ್ ಎಂದಿದ್ದಾನೆ' ಚಿತ್ರದ ಕೊನೆಗೆ ಬರುವ ಈ ಒಂದು ಸಾಲಿನ ಸಂಭಾಷಣೆಗಾಗಿ ಇಡೀ ಚಿತ್ರ ನೋಡಬೇಕು. 'ನೇತ್ರದಾನ ಮಾಡಿ, ಅಂಧರಿಗೆ ಬೆಳಕಾಗಿ' ಎನ್ನುವ ಸರ್ಕಾರಿ ಘೋಷಣೆಯನ್ನು ಚಿತ್ರದಲ್ಲಿ, 'ಕಣ್ಣು ದಾನ ಮಾಡಿ, ತ್ಯಾಗ ಪ್ರೇಮಿಗಳಾಗಿ' ಎಂದು ಬದಲಿಸಿದ್ದಾರೆ ನಂದಕುಮಾರ್. ಆ ಮೂಲಕ ಅದಕ್ಕೆ ಮಾತ್ರವಲ್ಲ, ಪ್ರೇಮಕ್ಕೂ ಕಣ್ಣಿಲ್ಲ ಎಂದಿದ್ದಾರೆ ನಿರ್ದೇಶಕರು. ಹುಡುಗ ಫೋಟೋಗ್ರಾಫರ್. ಹುಡುಗಿ ಕಾಲೇಜು ಕುವರಿ. ಆಕಸ್ಮಿಕವಾಗಿ ಇಬ್ಬರ ಭೇಟಿ. ಮೊದಲ ನೋಟದಲ್ಲೇ ನಾಯಕನಿಗೆ ನಾಯಕಿ ಮೇಲೆ ಲವ್ವು. ಇವನ ಒನ್‌ಸೈಡ್ ಲವ್ ನಾಯಕಿಗೆ ತಿಳಿಯುವಷ್ಟರಲ್ಲಿ ಒಂದೆರಡು ಸಾಂಗು. ಆ ಮೇಲೆ ಇಬ್ಬರೂ ಡ್ಯುಯೆಟ್‌ಗೆ ಇಳಿದು ಪ್ರೇಮ ಪಕ್ಷಿಗಳಂತೆ ವಿಹರಿಸುತ್ತಿದ್ದಾಗ ನಾಯಕಿಯ ಅಣ್ಣನೇ ವಿಲನ್ ಆಗುವುದು. ಮುಂದೆ ಏಟಿಗೆ ಎದುರೇಟು, ಸವಾಲಿಗೆ ಪ್ರತಿ ಸವಾಲು. ನಾಯಕಿಗಾಗಿ ಮನಸ್ಸು ಬೀಳಿಸಿಕೊಂಡ ಆಕೆಯ ಅಣ್ಣನ ಸ್ನೇಹಿತ, ನಾಯಕನ ಲವ್ ಸೈಕಲ್‌ಗೆ ಪಂಪ್ ಹೊಡೆಯುವ ಮೂವರು ಗೆಳೆಯರು. ಕಣ್ಣೀರು, ಒಂದೆರಡು ಫೈಟು. ನಾಯಕನ ಸಾವು. ಕೊನೆಗೆ ಶುಭಂ ಅಲ್ಲ!ಕಥೆ ಇಷ್ಟೇ. ಇಲ್ಲಿ ಯಾವುದೂ ಹೊಸದಲ್ಲ. ಲವ್ ಫಾರ್ಮುಲಾ ಒಳಗೊಂಡ ಸಾವಿರ ಸಾವಿರ ಚಿತ್ರಗಳಲ್ಲಿ ನೋಡಿದ್ದನ್ನೇ ನಿರ್ದೇಶಕ ನಂದಕುಮಾರ್ 'ಮತ್ತೆ ನೋಡಿ' ಎಂದಿದ್ದಾರೆ. ನಾಯಕ ಮಹೇಶ್, ನಾಯಕಿ ಕಾವ್ಯ ಶೆಟ್ಟಿ ಇಲ್ಲಿ ಹೊಸಬರು. ಹೀಗಾಗಿ ಅವರಿಂದ ಅಭಿನಯ ನಿರೀಕ್ಷೆ ಮಾಡುವುದು ಪ್ರೇಕ್ಷಕನದ್ದೇ ದೊಡ್ಡ ತಪ್ಪು! ಮಾಲತಿ ಸರದೇಶ್ ಪಾಂಡೆ, ರಮೇಶ್ ಭಟ್, ಧರ್ಮ, ಕುರಿ ರಂಗ, ನೇಹಾ ಅವರದ್ದು ಅಗತ್ಯಕ್ಕೆ ತಕ್ಕ ಪಾತ್ರ ಮತ್ತು ಅಭಿನಯ. ಎಂದಿನಂತೆ ಕಂಡೋರ ಪ್ರೇಯಸಿಯರ ಮೇಲೆ ಕಣ್ಣು ಹಾಕುವತಿಲಕ್ ಮತ್ತೊಮ್ಮೆ ಹೇಳಿಮಾಡಿಸಿದಂಥ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಯಾವುದರಲ್ಲೂ ಹೊಸತನವಿಲ್ಲದ, ನಾಯಕ, ನಾಯಕಿಯ ರಿಹರ್ಸಲ್‌ನಂತೆ ಇಡೀ ಚಿತ್ರ ಕಾಣುತ್ತದೆ. ಪಿ.ಕೆ.ಎಚ್. ದಾಸ್ ಅವರ ಕ್ಯಾಮೆರಾ ಕೂಡ ಹೆಚ್ಚು ಶ್ರಮ ತೆಗೆದುಕೊಂಡಿಲ್ಲ. ತನ್ನಪಾಡಿಗೆ ಫೋಕಸ್ ಮಾಡುತ್ತದೆ ಅಷ್ಟೇ. ಸಾಯಿ ಕಾರ್ತಿಕ್‌ರ ಸಂಗೀತ ಆಗಾಗ್ಗೆ ಇಷ್ಟವಾದರೆ, ಹಿನ್ನೆಲೆ ಸಂಗೀತ ಬೇಸರ ಮೂಡಿಸುತ್ತದೆ. 'ಸ್ಪಂಜಿನಂತಿರುವ ಶ್ವಾಸಕೋಶವನ್ನು ಕೆಲವರು ಗುಟ್ಕಾ, ಸಿಗರೇಟು, ಬೀಡಿ, ಹೊಗೆಸೊಪ್ಪು, ಪಾನ್ ಮಸಾಲ...' ಮುಖ ಮುಚ್ಚಿಕೊಂಡು ಕೇಳುವಂಥ ಜಾಹೀರಾತಿಲ್ಲದೆ ತೆರೆದುಕೊಳ್ಳುವ 'ಐ ಯಾಮ್ ಇನ್ ಲವ್‌' ಚಿತ್ರ, ಪ್ರೇಕ್ಷಕನಿಗೆ ಮುಖ ಮುಚ್ಚುಕೊಳ್ಳುವಂತೆ ಮಾಡದಿದ್ದರೂ 'ರಿಲ್ಯಾಕ್ಸ್ ಪ್ಲೀಸ್‌' ಎನ್ನುತ್ತದೆ. ಹೀಗಾಗಿ ಕೆಲಸದ ಮೇಲೆ ಬೆಂಗಳೂರಿಗೆ ಬರುವವರು ಅಥವಾ ಸ್ನೇಹಿತರಿಗಾಗಿ ಕಾಯುವವರು ಟೈಮ್ ಪಾಸ್ ಮಾಡಲು ಏನು ಮಾಡಬೇಕು? ಎನ್ನುವ ಪ್ರಶ್ನೆ ಬಂದರೆ ಸೀದಾ 'ಐ ಯಾಮ್ ಇನ್ ಲವ್‌' ಚಿತ್ರಕ್ಕೆ ಹೋಗಿ. ದುಡ್ಡು ಖರ್ಚಾದರೂ ಪರ್ವಾಗಿಲ್ಲ, ಕೂರಕ್ಕೊಂದು ಜಾಗ ಸಿಗುತಲ್ಲ! - ಕೇಶು