ಧನಿಕನ 'ಸಿನಿಕ'ನಸು 'ನಂಗ್ಯಾಕೋ ಡೌಟು, ಇದು ನಿಜವಾಗ್ಲೂ ಕನಸೇ ತಾನೇ' ಈ ಸಾಲು ಲೂಸಿಯಾ ಚಿತ್ರದ ಸರಳ ವಿಮರ್ಶೆ ಆಗಬಹುದು. ಬಹುಷಃ ಈ ಸಾಲಿನಿಂದಲೇ ಲೂಸಿಯಾದ ಚಿತ್ರಕಥೆ ಆರಂಭವಾಗಿದ್ದರೂ ಅಚ್ಚರಿಯಿಲ್ಲ. ಮರಸುತ್ತುತ್ತ ಮುತ್ತು ಕೊಡುವ ಪ್ರೇಮಿಗಳ ಕಥೆಗಿಂತ ಭಿನ್ನವಾಗಿ ನಿರೂಪಣೆಗೆ ಒತ್ತು ಕೊಡುವ ಸಿನಿಮಾ ಪ್ರಯತ್ನ ನಿರ್ದೇಶಕ ಪವನ್‌ರದ್ದು. ಈ ಹಾದಿಯಲ್ಲಿ ಪವನ್ ನಿಜಕ್ಕೂ ವಿಭಿನ್ನ ಎನಿಸುವ ಚಿತ್ರವನ್ನಂತೂ ನೀಡಿದ್ದಾರೆ. ನಿರೂಪಣೆ, ಕಥನ ಶೈಲಿ, ದೃಶ್ಯ ಸಂಯೋಜನೆ ಎಲ್ಲದರಲ್ಲೂ ಹೊಸತನವಿದೆ. ತಾನು ಕಾಣುವ ಕನಸಲ್ಲಿ ತನಗೆ ಬೇಕಾದ ಬದುಕು ಬಾಳುವ ವ್ಯಕ್ತಿಯೊಬ್ಬನ ಕಥೆ ಲೂಸಿಯಾ. ಆ ಲೆಕ್ಕದಲ್ಲಿ ನಿರ್ದೇಶಕರಿಗೆ ಡ್ರೀಮ್ ಕಮ್ ಟ್ರೂ ಎನಿಸುವ ಅನುಭವ. ಇಲ್ಲಿ, ಕನಸುಗಳು ಕಲರ್‌ಫುಲ್, ವಾಸ್ತವ ಬ್ಲ್ಯಾಕ್ ಅಂಡ್ ವೈಟ್‌ನಂತೆ ನೀರಸ ಎನ್ನುವ ತಂತ್ರ ಪವನ್ ಅವರದ್ದು. ಬೇರೆ ಟ್ರ್ಯಾಕ್‌ನ ಬೇರೆ ಬೇರೆ ದೃಶ್ಯಗಳಲ್ಲೂ ಒಂದೇ ಕಥೆ ಹೇಳುವ ಪವನ್ ನಿರ್ದೇಶಕರಾಗಿ ಹೊಸ ಲೋಕ ತೋರಿಸುತ್ತಾರೆ. ಆದರೆ, ಚಿತ್ರದ ನಾಟ್ ಚೆನ್ನಾಗಿದ್ದರೂ ಅದು ಎಲ್ಲ ವರ್ಗದ ಪ್ರೇಕ್ಷಕರ ಮನಸ್ಸಿಗೆ ನಾಟುತ್ತಾ ಅಂದ್ರೆ ನಾಟ್ ರಿಯಲೀ ಎನ್ನಬಹುದು. ಒಂದು ಕಥೆಯನ್ನು ಆದಷ್ಟು ಸರಳವಾಗಿ ಹೇಳಬೇಕು ಎನ್ನುವುದು ವಾಡಿಕೆ. ಆದರೆ ಅಟ್‌ಲೀಸ್ಟ್ ಇಂಥ ಸಂಕೀರ್ಣ ಕಥೆ ಇದ್ದಾಗಲಾದರೂ ಅದನ್ನು ಸರಳವಾಗಿ ಹೇಳುವ ಅನಿವಾರ್ಯತೆ ಇತ್ತು. ಸಂಕೀರ್ಣವಾಗಿಯೇ ಹೇಳಿದರೆ ಮಾತ್ರ ಅದು ಒಳ್ಳೆಯ ಸಿನಿಮಾ ಆಗುತ್ತದೆ ಎಂಬ ಅಭಿಪ್ರಾಯ ಇದ್ದಿದ್ದರೆ ಸರಳ ಕಥೆಯನ್ನೇ ಆಯ್ಕೆ ಮಾಡಿಕೊಳ್ಳಬಹುದಿತ್ತು. ಚಿತ್ರವನ್ನು ಕಷ್ಟಪಟ್ಟು ಅರ್ಥ ಮಾಡಿಕೊಳ್ಳಬಹುದು, ಆದ್ರೆ ಎಂಜಾಯ್ ಮಾಡೋದು?. ಪವನ್ ಅಂಡ್ ಟೀಮ್ ಈ ಚಿತ್ರಕಥೆಯನ್ನು ಹಲವಾರು ಬಾರಿ ಓದಿ ಅರೆದು ಕುಡಿದಿರುವುದರಿಂದ ಅವರಿಗೆ ಎಲ್ಲವೂ ಸ್ಪಷ್ಟ ಎನಿಸಬಹುದು. ಆದರ ಮೊದಲ ಬಾರಿಯ ಪ್ರೇಕ್ಷಕನಿಗೆ? ಝೆನ್ ಕಥೆಯೊಂದು ಲೂಸಿಯಾ ಚಿತ್ರಕಥೆಗೆ ನಾಂದಿ ಹಾಡುವ 'ಇನ್‌ಸೆಪ್ಶನ್‌' ಆಗಿದೆ ಎಂದರೆ ಅದು ಮಿಸ್ ಕನ್ಸೆಪ್ಶನ್ ಅಲ್ಲ. ಲೂಸಿಯಾ ಝೆನ್ ಕಥೆಯ ಚಿಟ್ಟೆಯೊಂದಿಗೆ ಹಾರಿದರೂ ಇದು ಎಲ್ಲಿಂದಲೋ ಹಾರಿಸಿದ ಕಥೆಯೇನೂ ಅಲ್ಲ. ಒಂದು ವೇಳೆ ಹಾಗಂದು ಬಿಟ್ಟರೆ ಒಂದು 'ಫೈಟ್ ಕ್ಲಬ್‌' ಶುರುವಾಗಬಹುದು. ಹೆಚ್ಚೆಂದರೆ ಇದು ಹಗಲೊತ್ತಲ್ಲೇ ಕನಸು ಬಿತ್ತು ಎನ್ನುವ ಆ್ಯಕ್ಷನ್ ಹೀರೋನ ಕನಸು. ಅವನು ಕನಸಿನಲ್ಲಿ ಕಳೆದುಹೋಗುವುದರಿಂದ 'ಲಾಸ್ಟ್‌' ಆ್ಯಕ್ಷನ್ ಹೀರೋ ಎನ್ನಲಡ್ಡಿಯಿಲ್ಲ. ಅಥವಾ 'ಸಿನಿಮಾ ಥಿಯೇಟರ್ರು ಎಂದರೆ ಪ್ಯಾರಡೈಸು' ಎಂದುಕೊಂಡ ಮಾಲೀಕ ಮತ್ತು ಬ್ಯಾಟರಿ ಬುಡುವ ಹುಡುಗನ ಕಥೆಯೂ ಆಗಬಹುದು. ಕೊನೆಯ ಕ್ಷಣದ ಬದಲಾವಣೆಯಾಗಿರಬಹುದಾದ ಕ್ಲೈಮ್ಯಾಕ್ಸ್‌ನಲ್ಲಿ, ಅಟ್‌ಲೀಸ್ಟ್ ಕೆಲವು ಪ್ರೇಕ್ಷಕರ ಊಹೆಯಂತೆ ಇದು ಸಿನಿಮಾ ನಾಯಕನ ಕನಸು ಎನ್ನುವ ಟ್ವಿಸ್ಟ್ ಇದೆ. ಆದರೆ ಅಲ್ಲಿಯವರೆಗೆ ತೋರಿಸಿದ ಕತೆ ಅದನ್ನು ಸಪೋರ್ಟ್ ಮಾಡುತ್ತದೆಯೇ ಎಂಬ ಪ್ರಶ್ನೆ ನಿರ್ದೇಶಕರಿಗೆ ಬಂದಂತಿಲ್ಲ. ಅದು ಸಿನಿಮಾ ನಾಯಕನ ಕನಸಾದರೆ ಟಾಕೀಸ್‌ನಲ್ಲಿ ಟಾರ್ಚ್ ಬಿಡುವ ಹುಡುಗ ನಿದ್ದೆ ಬಾರದೆ ರಸ್ತೆ ಬದಿಯ ಹುಡುಗರ ಗೂಡಿನೊಳಗೆ ಹೋಗಿ ಟ್ಯಾಬ್ಲೆಟ್ ತಗೊಂಡು ಮಲಗಿ ಕಾಣುವ ಕನಸಿಗೆ ಅರ್ಥವೇನು?, ಅವನ ಆ ಕನಸು ಎಲ್ಲಿಗೆ ಲೀಡ್ ಆಗುತ್ತೆ? ನಾಯಕಿ ಎರಡು ಬಾರಿ ಕೊಲೆ ಪ್ರಯತ್ನ ಮಾಡಲು ಕಾರಣ ಏನು? ಎಂಬ ಪ್ರಶ್ನೆಗಳಿಗೆ ನಿರ್ದೇಶಕರ ಬಳಿ ಉತ್ತರಗಳಿರಬಹುದು. ಆದರೆ ಸಿನಿಮಾ ನೋಡಿದ ಪ್ರತಿಯೊಬ್ಬ ಪ್ರೇಕ್ಷಕನೂ ನಿರ್ದೇಶಕರನ್ನು ಹುಡುಕಿಕೊಂಡು ಹೋಗಲು ಸಾಧ್ಯವೇ. ಹೀಗಾಗಿ, ರಾತ್ರಿ ಕಂಡ ಕನಸನ್ನು ಬೆಳಗ್ಗೆ ಎದ್ದು ನೆನಪಿಸಿಕೊಳ್ಳುವ ಅಸ್ಪಷ್ಟ ಅನುಭವ ಕೊಡುತ್ತದೆ ಲೂಸಿಯಾ. ಸಿನಿಮಾ ನೋಡಿ ಹೊರಬಂದ ಪ್ರೇಕ್ಷಕರು ಆಗ ತಾನೇ ಎಕ್ಸಾಮ್ ಮುಗಿಸಿಬಂದ ವಿದ್ಯಾರ್ಥಿಗಳು ಆ ಕ್ವೆಶ್ಚನ್‌ಗೆ 'ಏನ್ ಬರೆದೆ, ಈ ಕ್ವೆಶ್ಚನ್‌ಗೆ ಈ ಉತ್ರ ಸರೀನಾ?' ಎಂದು ಮಾತಾಡಿಕೊಳ್ಳುವಂತೆ ಲೂಸಿಯಾ ಚಿತ್ರದ ಬಗ್ಗೆಯೂ ಕ್ರಾಸ್ ಚೆಕ್ ಮಾಡಿಕೊಳ್ಳುತ್ತಾರೆ. ಬಿ.ಸಿ.ಪಾಟೀಲ್‌ರ ರೂರಲ್ ಸ್ಟಾರ್ ಎಂಬ ಬಿರುದು ಸತೀಶ್ ನೀನಾಸಂ ಪಾಲಾದರೆ ಅಚ್ಚರಿಯಿಲ್ಲ. ಸತೀಶ್ ಅಭಿನಯ ಚಿತ್ರದ ನಿರೂಪಣೆಯಷ್ಟೇ ಸಟಲ್. ಅವಶ್ಯಕತೆಗೆ ತಕ್ಕಷ್ಟು ಅಸ್ಪಷ್ಟತೆ, ಗೊಂದಲ ಎಲ್ಲವೂ ಅಲ್ಲಿದೆ. ಓವರ್ ಆ್ಯಕ್ಟಿಂಗ್ ಆಗಬಾರದು ಎಂಬ ಎಚ್ಚರಿಕೆಯಲ್ಲೋ ಏನೋ ಶೃತಿ ಮೊದಲ ಚಿತ್ರದಲ್ಲಿ ಅಭಿನಯಿಸಲು ಒಂದಿಷ್ಟು ಚೌಕಾಸಿ ಮಾಡಿದ್ದರೂ ನಟಿಯಾಗಿ ಅವರಿಗೆ ಒಳ್ಳೆಯ ಮಾರ್ಕೆಟ್ ಸಿಗಬಹುದು. ಅಚ್ಯುತ್ ಅಭಿನಯ ಒಂದು ಸಿಹಿ ಕನಸು. ರಿಶಬ್ ಶೆಟ್ಟಿ ತಮ್ಮಲ್ಲಿ ಕಸುವಿದೆ ಎಂದು ತೋರಿಸಿದ್ದಾರೆ. ಸಿದ್ಧಾರ್ಥ್ ನುನಿ ಛಾಯಾಗ್ರಹಣದಲ್ಲಿ ಪವನ್‌ಗೆ ಬೇಕಾದುದೆಲ್ಲಾ ಸಿಕ್ಕಿದೆ. ಪೂರ್ಣಚಂದ್ರ ತೇಜಸ್ವಿ ಹಾಡುಗಳು ಚಿತ್ರದಲ್ಲಿ 'ಮಗದೊಂದು ಕನಸಿನ ಲೋಕ'ವನ್ನೇ ಸೃಷ್ಟ ಮಾಡುತ್ತವೆ. ತನ್ನ ಎಲ್ಲ ಮಿತಿಗಳ ನಡುವೆಯೂ, ಇಂಗ್ಲಿಷ್‌ನವರ ಜೊತೆ ಇದ್ರೆ ಕನ್ನಡಿಗರು ಇಂಗ್ಲಿಷ್ ಕಲೀತಾರೆ ಎನ್ನುವುದಕ್ಕೆ ವಿರುದ್ಧವಾಗಿ ಅವರಿಗೇ ಲೋಕಲ್ ಕನ್ನಡದ ಫ್ಲೇವರ್ ತೋರಿಸುವ ನಾಯಕನ 'ಮಣ್ಣಿನ ವಾಸನೆ' ಮತ್ತು ಸಿನಿಮಾ ನಾಯಕನಿಗೂ ಟಾಕೀಸಲ್ಲಿ ಟಾರ್ಚ್ ಬಿಡುವವನ ಲೈಫ್ ಬೇಕು ಎನ್ನುವ 'ಮನಸ್ಸಿನ ಭಾವನೆ' ಇರುವ ಪವನ್‌ರ 'ಲೂಸಿಯಾ' ಕುತೂಹಲಕ್ಕಾಗಿಯಾದರೂ ಒಮ್ಮೆ ನೋಡಿದರೆ ಲಾಸಿಲ್ಲ ಎನ್ನುವಂಥ ಚಿತ್ರ. - ಹರಿ