'ಶೇಷಾದ್ರಿ'ಪುರಕ್ಕೆ ಒಮ್ಮೆಯಾದರೂ ಹೋಗಿ ಇದು 'ಶೇಷಾದ್ರಿ'ಪುರ', ಅನಂತಮೂರ್ತಿಯವರು 'ಭಾರತೀಪುರ'ದಲ್ಲಿ.. ಇದು 'ಶೇಷಾದ್ರಿ'ಪುರ', ಅನಂತಮೂರ್ತಿಯವರು 'ಭಾರತೀಪುರ'ದಲ್ಲಿ ಎತ್ತಿದ ರಾಜಕೀಯ ಪ್ರಶ್ನೆಗಳು ಬೇರೆ. ಆ ಕೃತಿಯಲ್ಲಿ ಒಂದು ಸ್ವಯಂಪೂರ್ಣವಾದ ಜಗತ್ತನ್ನು ಸೃಜಿಸಿ, ಅಲ್ಲಿನ ಸಮಸ್ಯೆಗಳನ್ನು ಹೊರಜಗತ್ತಿನೊಂದಿಗೆ ಸಮೀಕರಿಸಲು ಅನಂತಮೂರ್ತಿ ಪ್ರಯತ್ನಿಸಿದ್ದರು. ಆದರೆ 'ಡಿಸೆಂಬರ್1'ರಲ್ಲಿ ಶೇಷಾದ್ರಿ ಅವರು 'ಇಂದಿನ ಅದೇ ಜಗತ್ತನ್ನು' ನಮ್ಮ ಕಣ್ಣೆದುರು ಇಡುವಾಗ ಸಾಮಾಜಿಕ ರಾಜಕೀಯ ಅರ್ಥಪೂರ್ಣತೆಯನ್ನು ಸಾಧಿಸಲು ಪ್ರಯತ್ನ ಪಟ್ಟಿದ್ದಾರೆ. ಜೀವನ ಸನ್ನಿವೇಶವನ್ನು ಕಣ್ತೆರೆದುನೋಡುವ 'ಶ್ರೇಷ್ಠ ಕಲೆ' ಈ ಚಿತ್ರದಿಂದ ಅವರಿಗದು ಸಿದ್ಧಿಸಿದೆ. ಕಲಾತ್ಮಕ ನಿರ್ದೇಶಕ ಕೂಡ ಇತಿಹಾಸಕಾರನೇ, ಇತಿಹಾಸದ ಭಾಗವಾಗಿ ಬರೆಯುವುದು, ಚಿತ್ರಿಸುವುದು ಅವನ ಎರಡು ಮುಖಗಳು. ಚಿತ್ರದ ಪರಿಶುದ್ಧತೆಗಾಗಿ ಕಥನಕಲೆಯನ್ನು ತಮ್ಮ ಕಲೆ, ಪ್ರತಿಭೆ, ಉತ್ಕೃಷ್ಟತೆಯ ಗುಚ್ಛವಾಗಿಸುವಲ್ಲಿ ಶೇಷಾದ್ರಿ ಈ ಸಂವಹನದಲ್ಲಿ ಒಂದಾಗಿದ್ದಾರೆ. ಇದು ಕಲಾತ್ಮಕ ಚಮತ್ಕಾರವಲ್ಲ. ಅಂತಃಕರಣದಿಂದ ಸ್ಪರ್ಶಿಸಿ, ಅದನ್ನು ತೀವ್ರತೆಗೆ ಒಯ್ಯದೆ ಲೋಕದ ಚಹರೆಗಳನ್ನು ತೆರೆದಿಡುವ ಹೊಸ ದಾರಿ ಕಂಡು ಹಿಡಿದಿದ್ದಾರೆ ಶೇಷಾದ್ರಿ. ಸಾಕ್ಷ್ಯಚಿತ್ರ ಮಾದರಿಯ ವಾಸ್ತವವಾದದ ಚಿತ್ರ 'ಡಿಸೆಂಬರ್ ೧' ಕಿರುಪ್ರದೇಶವೊಂದರ ಪ್ರಾದೇಶಿಕ ಅಧ್ಯಯನ. ಇಲ್ಲಿ ಅನುಸರಿಸಿರುವುದು ವಾಸ್ತವವಾದದ ತಂತ್ರ. 'ಡಿಸೆಂಬರ್ ೧' : ಮಾನವ ಶಾಸ್ತ್ರೀಯ ರಾಜಕೀಯ ಚಿತ್ರ. ರಾಜಕಾರಣಿಗಳ ಬಲೆಯಲ್ಲಿ ಸಿಲುಕಿ 'ಮನೆ ಮತ್ತು ಮನಸ್ಸು' ಪರದೇಸಿಯಾಗುವ ಕಥನ. ಸಿನೆಮಾ ನೆರಳಿನ ಆಟ. ಡಿಸಿಕಾನ 'ಬೈಸಿಕಲ್ ಥೀವ್ಸ್ ' ನಟರೇ ಇಲ್ಲದೆ ಸ್ಟುಡಿಯೋಗಳ ಸಹವಾಸವಿಲ್ಲದೆ ನಿರ್ಮಿತ ಬೀದಿ ಚಿತ್ರ. ಹಾಗೆ ನೋಡಿದರೆ ಸತ್ಯಜಿತ್ ರೇ ನಿರ್ದೇಶಿಸಿದ 'ಪಥೇರ್ ಪಾಂಚಾಲಿ' ಕೂಡ ಹಳ್ಳಿ ಬದುಕಿನ ಸಾಕ್ಷ್ಯಚಿತ್ರವೇ. ರಾಬರ್ಟ್ ಫ್ಲಾಹರ್ಟಿಯ 'ನಾನೂಕ್ ಆಫ್ ದಿ ನಾರ್ತ್' 'ಲುಯಿಸಿಯಾನ ಸ್ಟೋರಿ' ನೋಡಿದಾಗ ಸಂಪೂರ್ಣ ಸಾಕ್ಷ್ಯಚಿತ್ರಗಳಂತೆ ಭಾಸವಾಗುತ್ತವೆ. ವಾಸ್ತವವನ್ನು ಹಸಿಯಾಗಿ ಹಿಡಿಯುವ ಕಠಿಣ ತಪಸ್ಸದು. ಫ್ಲಾಹರ್ಟಿ ನಟರ ಅಥವಾ ನಿರ್ಮಾಣದ ಗೊಡವೆಗೆ ಹೋಗಲಿಲ್ಲ. ಆಯಾ ಜಾಗಗಳಿಗೆ ಕ್ಯಾಮೆರಾ ಹೊತ್ತೊಯ್ದು ಅವರ ಜೊತೆಗೇ ಬದುಕಿ, ಅಲ್ಲಿನ ಸತ್ಯ ಘಟನೆಗಳನ್ನು ತುಣುಕುಗಳನ್ನು ಜೋಡಿಸಿ ಅವನ ಕೃತಿ ಕಟ್ಟಿದ. ಗ್ರಿಫಿಥ್, ಐಸೆನ್ ಸ್ಟೈನ್, ಚಾಪ್ಲಿನ್, ಬರ್ಗ್ಮನ್, ಡಿಸಿಕಾ, ಫೆಲಿನಿ, ಡ್ರೈಯರ್, ಕ್ಲೇರ್, ಕುರಸೋವ, ತ್ರೂಫೋ, ಸತ್ಯಜಿತ್ ರೇ, ಗೊಡಾರ್ಡ್, ಅಂತೋನಿಯೋನಿ- ಸಾಕ್ಷ್ಯಚಿತ್ರದ ವಾಸ್ತವವಾದದ ಚಿತ್ರ ನಿರ್ದೇಶಿಸಿದರು. ನಮ್ಮ ದೇಶದಲ್ಲಿ ಬಿಮಲ್ ರಾಯ್, ಋತ್ವಿಕ್ ಘಟಕ್, ಸತ್ಯಜಿತ್ ರೇ, ಅಡೂರು ಗೋಪಾಲಕೃಷ್ಣನ್ ಸಾಕ್ಷ್ಯಚಿತ್ರದ ವಾಸ್ತವವಾದದ ಚಿತ್ರ ನಿರ್ದೇಶಿಸಿದರು. ಈ ಚಿತ್ರವನ್ನು ಸಾಕ್ಷ್ಯಚಿತ್ರದ ವಾಸ್ತವವಾದದ ಚಿತ್ರ ಎಂದು ಪರಿಗಣಿಸಬಹುದೆನ್ನಿಸುತ್ತದೆ. ಶೇಷಾದ್ರಿಯವರು 'ಡಿಸೆಂಬರ್ ೧' ಚಿತ್ರದಲ್ಲಿ ನಮ್ಮ ಮುಖ್ಯ ನಿರ್ದೇಶಕರ ಪರಂಪರೆಯನ್ನು ಸಮರ್ಥವಾಗಿ ಮುಂದುವರೆಸಿದ್ದಾರೆ. ಚಲನಚಿತ್ರ ಒಂದು ಚಿತ್ರಕೂಟದ ಕೌಶಲ್ಯ. ಈ ಚಿತ್ರದಲ್ಲಿ ಆ ಅಪರೂಪದ ಕೌಶಲ್ಯ ಮಿಲಿತವಾಗಿದೆ. ಎಲ್ಲಾ ಕೂಟಗಳು ಪರಿಣಾಮಕಾರಿಯಾಗಿ ಕೆಲಸ ಮಾಡಿರುವುದರಿಂದ ಚಿತ್ರದ ಆಂತರಿಕ ಮತ್ತು ಬಾಹ್ಯಚೈತನ್ಯವು, ಹತ್ತಾರು ರೂಪಕಗಳಿಂದ ಪ್ರಭಾವಶಾಲಿಯಾಗಿ ಅರಳುತ್ತದೆ. ಒಂದೊಂದಾಗಿ ನೋಡುವುದಾದರೆ.... 1. ಅಜ್ಜಿಯ ದೂರದೃಷ್ಟಿ 'ಪಥೇರ್ ಪಾಂಚಾಲಿ' ಮುದುಕಿಯ ಪಾತ್ರಕ್ಕೆ ಅಲೆದು, ಅಲೆದು ಚುನ್ನಿಬಾಲಾ ಸತ್ಯಜಿತ್ ರೇ ಅವರಿಗೆ ಸಿಕ್ಕಳು. 'ಡಿಸೆಂಬರ್ ೧' ಚಿತ್ರದಲ್ಲಿರುವ ಅಜ್ಜಿಯನ್ನು ನೋಡಿದಾಗ ಶೇಷಾದ್ರಿಯವರು ಕೂಡಾ ಇದೆ ಬಗೆಯಲ್ಲಿ 'ಅಲೆ'ದಾಟ ನಡೆಸಿ ಸಮುದ್ರದಂತಿರುವ ಅಜ್ಜಿಯನ್ನು ಹುಡುಕಿದ್ದಾರೆ ಎನ್ನಿಸುತ್ತದೆ. ಅಜ್ಜಿಯ ಅಭಿನಯ (ಶಾಂತಾಬಾಯಿ ಜೋಷಿ) ಮತ್ತು ಆ ಪಾತ್ರಕ್ಕೆ ಬರೆದ ಸಂಭಾಷಣೆ (ಚಂದ್ರಶೇಖರ ವಸ್ತ್ರದ) ನೋಡುಗನನ್ನು ತಿಳಿಹಾಸ್ಯದ ಅಲೆಯಲ್ಲಿ ಮುಳುಗಿಸುತ್ತದೆ. ಈ ಪಾತ್ರಕ್ಕೆ ಶ್ರೇಷ್ಠ ಪೋಷಕ ನಟಿ ಪ್ರಶಸ್ತಿ ಸಿಕ್ಕರೆ ಅದು ಪ್ರೇಕ್ಷಕರಿಗೆ ಸಿಹಿ ಹಂಚಿದಂತೆ. ಸಂಭಾಷಣೆಯಲ್ಲಿ ಎಚ್ಚರಿಕೆ, ಹೊಣೆಗಾರಿಕೆ ಮತ್ತು ಹಾಸ್ಯ ಬೆರೆತ ಶೈಲಿಯಿದೆ. ಸುತ್ತಲಿನ ಜಗತ್ತನ್ನು ಸರಿಯಾಗಿ ನೋಡಲಾಗದ ಅಜ್ಜಿ ಮುಖ್ಯಮಂತ್ರಿ ಮನೆಗೆ ಬಂದಾಗಲೂ ತನ್ನ ದೃಷ್ಟಿಯ ದುರಾದೃಷ್ಟವನ್ನೇ ಹೇಳುವಳು. 2. ಸ್ಮಿತಾ ಪಾಟೀಲ್ ಮತ್ತು ಸ್ಮಿತಾ (ನಿವೇದಿತಾ)ಳ ಚಿಲ್ಲಿ ನೋಟ ಮಿರ್ಚ್ ಮಸಾಲಾ ಚಿತ್ರದ ಕೊನೆಯಲ್ಲಿ ಸ್ಮಿತಾ ಪಾಟೀಲ್, ಕಾಮುಕ ವ್ಯಾಘ್ರ ನಾಸಿರುದ್ದೀನ್ ಷಾನ ಕಣ್ಣಿಗೆ ಮೆಣಸಿನ ಪುಡಿಯನ್ನು ಕಣ್ಣಿಗೆರಚಿ ಕೆಂಗಣ್ಣಿನಿಂದ ನೋಡಿದಂತೆಯೇ ರೊಟ್ಟಿಯನ್ನು ಜಿಲ್ಲಾಧಿಕಾರಿಯ ಮುಂದೆ ಕುಕ್ಕುವ, ಕೆಂಗಣ್ಣಿನಿಂದ ಕೋಪ ಉಕ್ಕುವ ಹೆಣ್ಣಾಗಿ ನಟಿ ನಿವೇದಿತಾ (ಸ್ಮಿತಾ) ಅಭಿನಯ ಇಷ್ಟವಾಗುತ್ತದೆ. ಕನ್ನಡದ ಅತ್ಯಂತ ಪ್ರತಿಭಾವಂತ ನಟಿ ಎಂಬುದನ್ನು ಇಡೀ ಚಿತ್ರದುದ್ದಕ್ಕೂ ಸಾರುವಲ್ಲಿ ಅವರು ಯಶಸ್ವಿಯಾಗಿದ್ದಾರೆ. ಅವರನ್ನು ಅಷ್ಟೇ ಸುಂದರವಾಗಿ ಸೆರೆ ಹಿಡಿದ ಛಾಯಾಗ್ರಾಹಕರ ಕೈ ಚಳಕ ಮತ್ತು ಹಿಂದಿನ ಎಲ್ಲಾ ಚಿತ್ರಗಳಿಗಿಂತ ಉತ್ತಮ ಅಭಿನಯವನ್ನು ಆಕೆಯಿಂದ ಸಮರ್ಥವಾಗಿ ಹೊರತಂದ ನಿರ್ದೇಶಕರಿಗೆ ಅಭಿನಂದಿಸಲೇಬೇಕು. ರೊಟ್ಟಿಯ ದೇವಕ್ಕನಾಗಿ 3. ಅಶೋಕ್ ರಾಮನ್ ಕ್ಯಾಮೆರಾಕೋಶದಿಂದ ಒಂದು ಚಿತ್ರದ ಅರ್ಥವಂತಿಕೆಗೆ ಕ್ಯಾಮೆರಾಮನ್ ಈ ಎರಡು ಅಂಶವನ್ನು ಗಮನದಲ್ಲಿಡುತ್ತಾನೆ. 1. 'ವಸ್ತು'ವನ್ನು ಯಾವ ಹಿನ್ನೆಯಲ್ಲಿಟ್ಟು ನೋಡಬೇಕು? 2. ಕ್ಯಾಮೆರಾವನ್ನು ಯಾವ ನೆಲೆಯ ಯಾವ ಬಿಂದುವಿನಲ್ಲಿಟ್ಟು ಗ್ರಹಿಸಬೇಕು? ಒಂದು ಚಿತ್ರವನ್ನು ಧ್ವನಿಪೂರ್ಣ ಮತ್ತು ಸೃಜನಶೀಲ ಆಗುವಂತೆ ಛಾಯಾಗ್ರಾಹಕನ ಪಾತ್ರ ದೊಡ್ಡದು. ಈ ನಿಟ್ಟಿನಲ್ಲಿ ಹಿರಿಯ ಛಾಯಾಗ್ರಾಹಕರಾದ ಜಿ.ಎಸ್.ಭಾಸ್ಕರ್, ಹೆಚ್.ಎಂ. ರಾಮಚಂದ್ರರ ಗರಡಿಯಲ್ಲಿ ತಯಾರಾದ ಅಶೋಕ ವಿ. ರಾಮನ್ ಕಲಾತ್ಮಕ ಚಿತ್ರಗಳ ಪಾಲಿಗೆ 'ಜೀವಕೋಶ' ಆಗುವ ಎಲ್ಲಾ ಮುನ್ಸೂಚನೆಯನ್ನು ಈ ಚಿತ್ರದಲ್ಲಿ ಕೊಟ್ಟಿದ್ದಾರೆ. ವಿ.ಕೆ.ಮೂರ್ತಿ ವಹೀದಾ ರೆಹಮಾನ್ ರನ್ನು ಝಗಮಗಿಸುವ ಹಾಗೆ ಕಾಣಿಸಿದಂತೆ, ಅಶೋಕ್ ವಿ ರಾಮನ್ ನಾಯಕಿ ನಿವೇದಿತಾರನ್ನು ಅತಿ ಸುಂದರವಾಗಿ ಸೆರೆ ಹಿಡಿದಿರುವುದು ವಿಶೇಷ. ಚಿತ್ರದ ಹಲವು ಕಂಪೋಸಿಷನ್ ಗಳು 'ಕಂಪು' ಬೀರುತ್ತವೆ. ಬರಡು ಬಂಜರು ಭೂಮಿಯ ಚಿತ್ರಣವಂತೂ ಕನ್ನಡದ ಮಟ್ಟಿಗೆ ಅತ್ಯಂತ ಕ್ಲಾಸಿಕ್ ಎನ್ನುವಂಥ ದೃಶ್ಯವ್ಯಾಮೋಹ ತೋರಿದೆ. ಕಲಾತ್ಮಕ ಅಭಿವ್ಯಕ್ತಿಯಲ್ಲಿ ಕಥೆಗೆ ಧಕ್ಕೆ ಬಾರದಂತೆ, ನಿರ್ದೇಶಕರ ಕ್ಯಾನ್ವಾಸ್ ಗೆ ಕನಸುಗಳಿಗೆ ರೂಪ ಕೊಡುವಲ್ಲಿ ಅಶೋಕ್ ಸೃಜನಾತ್ಮಕವಾಗಿದ್ದಾರೆ. ಈ ಚಿತ್ರದ ಛಾಯಾಗ್ರಹಣದಿಂದ ಅವರಿಗೆ ರಾಜ್ಯಪ್ರಶಸ್ತಿ ಬಂದರೆ ಅಚ್ಚರಿಯಿಲ್ಲ. 4. ಸಂತೋಷ ಉಪ್ಪಿನ ನಟಿಸಿದಾಗ ದೇವಕ್ಕನ ಕುಂಟ ಗಂಡನಾಗಿ ಅಭಿನಯಿಸಿರುವ ಸಂತೋಷ ಉಪ್ಪಿನ ಈ ಚಿತ್ರದ ಪ್ರಮುಖ ಸ್ಥಂಭ. ಗಿರಣಿಯ ಸದ್ದಿನಲ್ಲಿ, ಆಫೀಸರ್ ಗಳ ಕಚೇರಿಯಲ್ಲಿ ಮೌನವಾಗೇ ಗೆಲ್ಲುವ ಸಂತೋಷ ಉಪ್ಪಿನರಿಗೆ ಹೆಚ್ಚೆಚ್ಚು ಚಿತ್ರಗಳು ಸಿಕ್ಕಾಗ ಮುಂದೊಂದು ದಿನ ಅತ್ಯಂತ ಸಂವೇದನಾಶೀಲ ನಟ ಎನ್ನಿಸಿಕೊಳ್ಳುವುದರಲ್ಲಿ ಅನುಮಾನವಿಲ್ಲ. ಹಾಗೆಯೇ ದೇವಕ್ಕನ ಮಗನಾಗಿ ಪುಟ್ಟಬಾಲಕನ ಅಭಿನಯ ಕೂಡಾ ಪ್ರೀತಿ ಹುಟ್ಟಿಸುತ್ತದೆ. 5. ದತ್ತಣ್ಣ ಮತ್ತು... ಪುಟ್ಟಪಾತ್ರಗಳಲ್ಲಿ ಕಾಣಿಸಿದರೂ ದತ್ತಣ್ಣ (ಮತ್ತೊಮ್ಮೆ ಮುಖ್ಯಮಂತ್ರಿ), ಪ್ರೀತಿ ನಾಗರಾಜ್, ಲಿಂಗಾಯತ ಖಾನಾವಳಿಯ ಮಾಲೀಕನ ಪಾತ್ರಧಾರಿ ಮತ್ತು ಪತ್ರಕರ್ತನಾಗಿ ನಟರಾಜ್ ಪ್ರಿಯರಾಗುತ್ತಾರೆ. ನಟರಾಜ್ ಈ ಚಿತ್ರದ ಸಹನಿರ್ದೇಶಕರೂ ಹೌದು. ವಿ. ಮನೋಹರ್ ಸಂಗೀತ, ಕೆಂಪರಾಜ್ ಅರಸ್ ರ ಸಂಕಲನ ಮತ್ತು ಕಲಾತ್ಮಕ ಚಿತ್ರಕ್ಕೆ ಹೆಲಿಕಾಪ್ಟರ್, ಹತ್ತಾರು ಗಾಡಿಗಳನ್ನು ಪೂರೈಸಿದ ನಿರ್ಮಾಪಕ ಬಸಂತಕುಮಾರ್ ಪಾಟೀಲ್ ರ ಈ ಪ್ರಯತ್ನ ಅರ್ಥಪೂರ್ಣವಾಗಿದೆ. 6. ಶೇಷಾದ್ರಿ ಮತ್ತವರ ಮಾನವನಶಾಸ್ತ್ರ ನಮ್ಮಲ್ಲಿ ಸಿಕ್ಕಾಪಟ್ಟೆ ಶ್ರೇಷ್ಠರೆನ್ನಿಸಿಕೊಂಡ ಚಿತ್ರ ನಿರ್ದೇಶಕರು ಎಷ್ಟಿರಬಹುದು? ಐದೋ ಆರೋ ಮಂದಿ ಇರಬಹುದು. ನಿರ್ದೇಶಕ ಮತ್ತು ನೋಡುಗನ ನಡುವೆ ಆಪ್ತತೆಯಿದ್ದಾಗ ವೈಯಕ್ತಿಕ ನಿರೂಪಣೆ, ನಿಲುವು ಸಲ್ಲುತ್ತದೆ. ಶೇಷಾದ್ರಿ ಇದು ನನ್ನದು, ಆದರೆ ನನ್ನದು ಮಾತ್ರವಲ್ಲ, ಎಂದು ಯೂನಿವರ್ಸಲ್ ಆಗುವರು. ಈ ಹಿಂದಿನ ಚಿತ್ರಗಳಲ್ಲಿ ಶೇಷಾದ್ರಿಯವರು ಅನುಸರಿಸಿದ ಮಾರ್ಗಕ್ಕಿಂತ ಹೊಸ ದಾರಿ ಅನುಸರಿಸಿದ ಚಿತ್ರವಿದು. ದೃಶ್ಯಾನುಭವ ಮೂಡಿಸದೆ, ಕೆಲವೊಮ್ಮೆ ನೀರಸ ಎನ್ನಿಸುವಂಥ, ನಾಟಕೀಯ ಗುಣಗಳೇ ಹೆಚ್ಚಾದ, ಸೂಕ್ಷ್ಮವಾಗಿ 'ಸಂದೇಶ' ಅಥವಾ 'ಸಮಸ್ಯೆಗಳು' ಅಡಕವಾಗಿದ್ದ ಒಂದೆರಡು ಚಿತ್ರಗಳನ್ನು ಅವರು ಮಾಡಿದ್ದಿದೆ. ಆದರೆ 'ಡಿಸೆಂಬರ್1' ತನ್ನ ಆತ್ಮದಿಂದಲೂ, ದೇಹದಿಂದಲೂ ಎದೆಯೊಳಗಿನ ಕ್ಯಾಲೆಂಡರ್ ನಲ್ಲಿ 'ಅಂಕ'ಗಳಿಸುತ್ತದೆ. ಒಂದು 'ಜೀವಂತ ಚಿತ್ರ'ದಲ್ಲಿ ತಮ್ಮದೇ ಆದ ದೃಷ್ಟಿಕೋನ, ಭಿನ್ನ ಒಲವು-ನಿಲುವು, ತಾತ್ವಿಕ ಬೇಧಗಳಿದ್ದೂ ಒಂದೇ ಆದ ಚಿತ್ರವೊಂದನ್ನು ಕಟ್ಟಿಕೊಡಲು ಶೇಷಾದ್ರಿಯಂತ ಸಮರ್ಥರು ನಿರತರಾಗಿರುತ್ತಾರೆ. ಜಾಗತೀಕರಣದ ರಾಕ್ಷಸೀ ಆಕ್ರಮಣ, ಧನ ಕನಕಗಳ ವ್ಯಾಮೋಹವನ್ನು ಮೀರಿದ ಪ್ರಯೋಗಶೀಲತೆಗೆ ಅವರು ಬದ್ಧರು. ಈ ಚಿತ್ರದಲ್ಲಿ ಅವರ ದುಃಖ, ಅನುಕಂಪ, ಪ್ರಾಮಾಣಿಕ ಸಿಟ್ಟು ಇವೆಲ್ಲ ಒಟ್ಟಿಗೇ ಅಭಿವ್ಯಕ್ತವಾಗಿವೆ. ಈ ಕಥೆಗೆ ಎಂದಿನಂತೆ 'ಪತ್ರಿಕಾಮಾರ್ಗ' ಹಿಡಿದಿದ್ದಾರೆ ಶೇಷಾದ್ರಿ. ವೃತ್ತಪತ್ರಿಕೆಯ ಸುದ್ದಿರೂಪವೊಂದು ('ಅಸ್ತವ್ಯಸ್ತವಾಗಿದ ಗ್ರಾಮವಾಸ್ತವ್ಯ' ಪತ್ರಿಕೆಯಲ್ಲಿ ಕಂಡ ಶೀರ್ಷಿಕೆ) ಅವರ ಕಥನಕಲೆಯನ್ನು ಜಾಗೃತಗೊಳಿಸಿದೆ. ಅದರ ಒಳಪ್ರಪಂಚಕ್ಕೆ 'ಇಣುಕಿನೋಡಲು ಮಾನವೀಯ ನೆಲೆಯಲ್ಲಿ ಸನ್ನಿವೇಶ ತಯಾರಾಗಿದೆ. ಕಥೆಗಾರನ ಮನಸ್ಸಿನ ಒಳಬಾಗಿಲುಗಳು ತೆರೆದ ತಕ್ಷಣವೇ ತೆರೆಗೆ ಬರಲು ಸಿದ್ಧವಾಗಿದೆ 'ಡಿಸೆಂಬರ್1' 'ವಿಮುಕ್ತಿ'ಯಲ್ಲಿ ಸರಳತೆಯಿಲ್ಲದೆ (ಈಡಿಪಸ್ ಕಾಂಪ್ಲೆಕ್ಸ್ ಇತ್ಯಾದಿ)ಗೊಂದಲಮಯವಾಗಿಸಿದ್ದ, 'ಬೆಟ್ಟದಜೀವ'ದಲ್ಲಿ ಸಂದಿಗ್ಧವಾಗಿದ್ದ ಶೇಷಾದ್ರಿ ಇಲ್ಲಿ ಜೀವಂತ ಭಾವಕೋಶವಾಗಿರುವರು. ಇಲ್ಲಿನ ಕಥೆಗೆ ಒಂದು ಉಸಿರಾಡುವ ವಾತಾವರಣವಿದೆ, ಸಜೀವವಾಗಿರುವ, ನಿರ್ದೇಶಕನ ಕೈಗೊಂಬೆ ಎನಿಸದ ಪಾತ್ರಗಳಿವೆ. ನಾಟಕೀಯವಾಗಿರದೆ ಸಹಜ ಎನ್ನಿಸುವಂತೆ ಆ ಪಾತ್ರಗಳಲ್ಲಿ ಆಮ್ಲಜನಕವಿದೆ. ಕಮರ್ಷಿಯಲ್ ಚಿತ್ರಗಳಲ್ಲಾಗುವಂತೆ 'ಕರುಣಾಜನಕ' ಸ್ಥಿತಿಗೆ ಪ್ರೇಕ್ಷಕನನ್ನು ಅವರು ದಬ್ಬುವುದಿಲ್ಲ. ಆಸಕ್ತಿಕರವೆಂದರೆ, ಈ ಚಿತ್ರದ ವೇಗ-ಈ ನಿರ್ದೇಶಕರು ಕಂಡುಕಂಡ ಹೊಸ ವಿನ್ಯಾಸದಂತಿದೆ. ಇಲ್ಲಿ ಹುಸಿ ಬೌದ್ಧಿಕತೆ ಖಂಡಿತ ಇಲ್ಲ. ಭಾವುಕತೆ ಹುಡುಕಿದರೂ ದಕ್ಕುವುದಿಲ್ಲ. ಗಿರೀಶ ಕಾಸರವಳ್ಳಿಯವರಿಗೆ ಮಾತ್ರ ಇದುವರೆಗೆ ಸಾಧ್ಯವಾಗಿದ್ದ ಚಿತ್ರದ ತಿಳಿಹಾಸ್ಯ (ಜೊತೆಗೆ ಕಾಮಿಡಿ ಟೈಮಿಂಗ್) ಚಿತ್ರವನ್ನು ಆಪ್ತವಾಗಿಸುತ್ತದೆ. ಮೊದಲೇ ಹೇಳಿದಂತೆ ಇದು ಕಲಾತ್ಮಕ ಚಮತ್ಕಾರವಲ್ಲ, ಪ್ರತಿಯೊಬ್ಬರಿಗೂ ಇಷ್ಚವಾಗಬಲ್ಲ ವೇಗದ ಆದರೆ ಆವೇಗವಿರದ ಮಾನವಶಾಸ್ತ್ರ. -ಡಾವೆಂಕಿ (ಕನ್ನಡಪ್ರಭ ಡಾಟ್ ಕಾಂ) ಕಥಾವಸ್ತು ಅದೊಂದು ಉತ್ತರಕರ್ನಾಟಕದ ಒಂದು ಪುಟ್ಟ ಹಳ್ಳಿ. ಅಲ್ಲಿ ರೊಟ್ಟಿ ಮಾರಿ ಜೀವನ ಸಾಗಿಸುತ್ತಿರುವ ದೇವಕ್ಕನದ್ದು ಒಂದು ಪುಟ್ಟ ಕುಟುಂಬ. ಗಂಡ ಮಾದೇವಪ್ಪ ಟ್ರಕ್ ಓಡಿಸುತ್ತಾ ಸೀಮೆ ಸುತ್ತುತ್ತಿದ್ದವನು, ಅಪಘಾತದಲ್ಲಿ ಕಾಲು ಊನ ಮಾಡಿಕೊಂಡು ಈಗ ಹಿಟ್ಟಿನ ಗಿರಣಿಯಲ್ಲಿ ಚಿಕ್ಕಾಸಿಗೆ ದುಡಿಯುತ್ತಿದ್ದಾನೆ. ಗ್ರಾಮವಾಸ್ತವ್ಯದ ಹಿನ್ನೆಲೆಯಲ್ಲಿ ಡಿಸೆಂಬರ್ ಒಂದರಂದು ರಾಜ್ಯದ ಮುಖ್ಯಮಂತ್ರಿಗಳು ಆ ಮನೆಯಲ್ಲಿ ತಂಗುವ ನಿರ್ಧಾರ ಮಾಡುತ್ತಾರೆ. ದಿಢೀರನೆ ಮಾದೇವಪ್ಪ ದಂಪತಿಗಳಿಗೆ ಎಲ್ಲಿಲ್ಲದ ಪ್ರಾಮುಖ್ಯತೆ ಬರುತ್ತದೆ. ದೇವಕ್ಕನ ರೊಟ್ಟಿಗೆ ಡಿಮ್ಯಾಂಡ್ ಸೃಷ್ಟಿಯಾಗುತ್ತದೆ. ಮುಖ್ಯಮಂತ್ರಿಗಳ ಹೆಸರಿನಲ್ಲಿ ಕರೆಂಟು, ಟೀವಿ, ಫ್ರಿಜ್ಜು, ಸೋಫಾ ಬಂದು ಕೂರುತ್ತವೆ. ಆದರೆ ಸಿಎಂ ಉಳಿಯಲು ದೇವಕ್ಕನ ಮನೆಯನ್ನು ಆಯ್ಕೆ ಮಾಡಿಕೊಂಡಿರುವುದಕ್ಕೆ ಬಡತನವನ್ನು ಮೀರಿದ ಕಾರಣಗಳಿರುತ್ತವೆ. ಯಾವಾಗಲೂ ಬ್ರೇಕಿಂಗ್ ನ್ಯೂಸ್‍ಗೆ ಹಸಿದಿರುವ ಮಾಧ್ಯಮದ ಪ್ರತಿನಿಧಿಯೊಬ್ಬ ಆ ಕಾರಣವನ್ನು ಪತ್ತೆ ಮಾಡುತ್ತಾನೆ. ಸಿಎಂ ಬಂದು ಹೋದಮೇಲೆ ಅದು ಮಾಧ್ಯಮಗಳಲ್ಲಿ ರಟ್ಟಾದಾಗ ಇಡೀ ಹಳ್ಳಿ ಬೆಚ್ಚಿಬೀಳುತ್ತದೆ. ಈ ಕುಟುಂಬದ ಬದುಕು ಛಿದ್ರವಾಗುತ್ತದೆ!