100ರ ಒಗಟು ನಿಜಕ್ಕೂ ದೀರ್ಘಾಯಸ್ಸಿನ ಹಿಂದಿನ ರಹಸ್ಯವೇನು? ಈ ಪ್ರಶ್ನೆಗೆ ಇನ್ನೂ ಸೂಕ್ತ ಉತ್ತರ ಸಿಕ್ಕಿಲ್ಲ. ಆದರೆ, ಉತ್ತರಕ್ಕಾಗಿ... 106 ವಯಸ್ಸಿನ ಅಜ್ಜ. ಈ ಸಂಜೆಯಲ್ಲೂ ಜೀವನೋತ್ಸಾಹ ಕುಗ್ಗಿಲ್ಲ. ಇಟಲಿಯ ಮೊಲೋಖಿಯೋ ಗ್ರಾಮದಲ್ಲಿ ಬಿಸಿಲಿಗೆ ಕುಳಿತು ತನ್ನ ಮೂಳೆಗಳನ್ನು ಗಟ್ಟಿಗೊಳಿಸುತ್ತಿದ್ದ ಸಾಲ್ವಟೋರ್ ಕರುಸೋ ಅವರೊಡನೆ 'ನಿಮ್ಮ ದೀರ್ಘಾಯುಷ್ಯದ ಗುಟ್ಟೇನು' ಎಂದು ಕೇಳಿದರೆ ಏನು ಉತ್ತರ ಕೊಡುತ್ತಾರೆ ಗೊತ್ತಾ? 'ನೋ ಡ್ರಿಂಕಿಂಗ್, ನೋ ಸ್ಮೋಕಿಂಗ್, ನೋ ವಿಮೆನ್‌'. ಹೀಗೆ ಎಷ್ಟೋ ಶತಾಯುಗಳ ಬಳಿ ಹೋಗಿ ನೀವು ಇದೇ ಪ್ರಶ್ನೆ ಕೇಳಿದರೆ ಅವರಿಂದಲೂ ಒಂದೊಂದು ಉತ್ತರ ಹೊರಬೀಳಬಹುದು. ನಾನು ನಾನ್‌ವೆಜ್ ತಿನ್ನೋದೇ ಇಲ್ಲ, ಡಯೆಟ್ ಮಾಡುತ್ತೇನೆ, ಪೌಷ್ಟಿಕಾಂಶಯುಕ್ತ ಆಹಾರ ಮಾತ್ರ ಸೇವಿಸುತ್ತೇನೆ, ಯೋಗ ಮಾಡುತ್ತೇನೆ.... ಹೀಗೆ. ಆದರೆ, ನಿಜಕ್ಕೂ ಅವರ ದೀರ್ಘಾಯಸ್ಸಿನ ಹಿಂದಿನ ರಹಸ್ಯವೇನು? ಈ ಪ್ರಶ್ನೆಗೆ ಇನ್ನೂ ಸೂಕ್ತ ಉತ್ತರ ಸಿಕ್ಕಿಲ್ಲ. ಆದರೆ, ಉತ್ತರಕ್ಕಾಗಿ ರಾತ್ರಿಹಗಲೆನ್ನದೆ ಹುಡುಕುತ್ತಿದ್ದಾರೆ ವಿಜ್ಞಾನಿಗಳು. ಇದರ ನಡುವೆಯೇ ಮಾನವನ ಜೀನ್‌ಗಳಿಗೂ, ದೀರ್ಘಾಯುಸ್ಸಿಗೂ ಸಂಬಂಧವಿದೆಯೇ ಎಂಬ ಕುತೂಹಲ ಮೂಡಿದೆ. ಐನ್‌ಸ್ಟೀನ್ ಪ್ರಾಜೆಕ್ಟ್ ಇಸ್ರೇಲ್‌ನ ವೈದ್ಯ ನಿರ್ ಬರ್ಜಿಲಾಯ್ ಅವರು 1998ರಲ್ಲಿ ನ್ಯೂಯಾರ್ಕ್‌ನ ಮೂವರು ಶತಾಯುಗಳ ಅಧ್ಯಯನ ನಡೆಸಿದರು. ನಂತರ ಈ ಸಂಖ್ಯೆ 500 ದಾಟಿತು. ನ್ಯೂಯಾರ್ಕ್ ಸುತ್ತಮುತ್ತಲಿನ ನಗರ, ಗ್ರಾಮಗಳ ದೀರ್ಘಾಯುಷಿಗಳನ್ನೂ ಅಧ್ಯಯನದಲ್ಲಿ ಬಳಸಿಕೊಳ್ಳಲಾಯಿತು. ಇವರಲ್ಲಿ ಅಶ್‌ಕೆನಾಜಿ ಯೆಹೂದಿಗಳೂ ಇದ್ದರು. ಈ ಯೆಹೂದಿಗಳ ಸಮುದಾಯದಲ್ಲಿನ ಜನರಲ್ಲಿರುವ ವಂಶವಾಹಿಯು ದೀರ್ಘಾಯುಷ್ಯಕ್ಕೆ ಸಂಬಂಧಪಟ್ಟಿದೆ ಎಂಬುದು ತಿಳಿದುಬಂತು. ಈ ಸುಳಿವು ಸಿಕ್ಕಿದ್ದೇ ತಡ ಐನ್‌ಸ್ಟೀನ್ ಸಂಶೋಧಕರು ಇವರ ಬಗ್ಗೆ ಹೆಚ್ಚಿನ ಆಸ್ಥೆ ವಹಿಸಿ ಹೆಚ್ಚೆಚ್ಚು ಮಾಹಿತಿ ಸಂಗ್ರಹಿಸತೊಡಗಿದರು. ಗೊತ್ತಾಗಿದ್ದೇನು? ಅಶ್‌ಕೆನಾಜಿ ಯೆಹೂದಿ ಶತಾಯುಗಳಲ್ಲಿ ಅತ್ಯಂತ ಹೆಚ್ಚಿನ ಪ್ರಮಾಣದ ಎಚ್‌ಡಿಎಲ್ ಅಂದರೆ ಉತ್ತಮ ಮಟ್ಟದ ಕೊಲೆಸ್ಟ್ರಾಲ್ ಇರುವುದು ಬೆಳಕಿಗೆ ಬಂತು. ಅವರಷ್ಟೇ ಅಲ್ಲ, ಅವರ ಮಕ್ಕಳಲ್ಲೂ ಎಚ್‌ಡಿಎಲ್ ಮಟ್ಟ ಇತರರಿಗಿಂತ ಹೆಚ್ಚಿತ್ತು. ಕೊಲೆಸ್ಟ್ರಾಲ್ ಜೀವರಾಸಾಯನಿಕ ಕ್ರಿಯೆಯಲ್ಲಿ ತೊಡಗಿಕೊಂಡ ಸುಮಾರು 100 ವಂಶವಾಹಿಗಳ ಡಿಎನ್‌ಎ ಪರೀಕ್ಷೆ ಮಾಡಲಾಯಿತು. ಇದರಿಂದ ಸಿಇಟಿಪಿ (ಕೊಲೆಸ್ಟೆರೈಲೆಸ್ಟರ್ ಟ್ರಾನ್ಸ್‌ಫರ್ ಪ್ರೊಟೀನ್) ಎಂಬ ವಿಭಿನ್ನವಾದ ಆನುವಂಶಿಕ ವಂಶವಾಹಿಯು ಈ ಶತಾಯುಗಳಲ್ಲಿ ಇತರರಿಗಿಂತ ಹೆಚ್ಚಿದೆ ಎಂಬುದು ತಿಳಿದುಬಂತು. ಅವರಲ್ಲಿರುವ ಈ ವಿಭಿನ್ನತೆಯು ಅವರನ್ನು ಹೃದಯ ಸಂಬಂಧಿ ಸಮಸ್ಯೆಗಳಿಂದ ರಕ್ಷಿಸುತ್ತದೆ. ಜತೆಗೆ, ಅವರು 'ವಾಕಿಂಗ್ ವೈಲ್ ಟಾಕಿಂಗ್‌'ನಂಥ ಮುನ್ನರಿವಿನ ಕಾರ್ಯಗಳನ್ನು ಯಶಸ್ವಿಯಾಗಿ ಪೂರೈಸುವ ಸಾಮರ್ಥ್ಯ ಹೊಂದಿರುತ್ತಾರೆ. ಮೈಟೋಕಾಂಡ್ರಿಯಾ ಮ್ಯಾಜಿಕ್ 90, 100ರ ಆಸುಪಾಸಿನಲ್ಲಿರುವ ವ್ಯಕ್ತಿಗಳ ಮೈಟೋಕಾಂಡ್ರಿಯಲ್ ಪ್ರೊಟೀನ್‌ಗಳ ಪರೀಕ್ಷೆಯತ್ತಲೂ ಇದೇ ತಂಡ ಮುಖಮಾಡಿತು. ಈ ಕಣಗಳಲ್ಲಿ ಒಂದಾದ ಹ್ಯುಮನಿನ್ ಮೂಲಕ ನಡೆಸಿದ ಸಂಶೋಧನೆಯು ಅಚ್ಚರಿಯ ಫಲಿತಾಂಶ ನೀಡಿತು. ಡಯಾಬಿಟಿಸ್ ಹೊಂದಿದ್ದ ಇಲಿಯೊಂದಕ್ಕೆ ಅಲ್ಪಪ್ರಮಾಣದ ಹ್ಯುಮನಿನ್‌ನ ಅಂಶವನ್ನು ನೀಡಿದ್ದೇ ತಡ ಇಲಿಯ ಗ್ಲುಕೋಸ್ ಮಟ್ಟ ಒಮ್ಮೆಗೇ ಸಹಜ ಸ್ಥಿತಿಗೆ ಬಂತು. ಅಷ್ಟೇ ಅಲ್ಲ, ಕೆಲವೇ ಗಂಟೆಗಳಲ್ಲಿ ಅದರಲ್ಲಿದ್ದ ಡಯಾಬಿಟಿಕ್ ರೋಗಲಕ್ಷಣ ದೂರವಾಯಿತು. ಅಂದರೆ ದೀರ್ಘಾಯುಷ್ಯದ ಗುಟ್ಟಿರುವುದು ಮಾನವನ ಜೀನ್‌ಗಳಲ್ಲಿ. ಇದು ಗೊತ್ತಾದ ಬಳಿಕ ರೋಗ, ವಯಸ್ಸು ಹೆಚ್ಚಲು ಕಾರಣವಾಗುವ ಜೀನ್‌ಗಳ ಮೇಲೆ ಸವಾರಿ ಮಾಡಬಲ್ಲಂಥ ಸುರಕ್ಷತಾ ಜೀನ್‌ಗಳ ಹುಡುಕಾಟದಲ್ಲಿ ತೊಡಗಿದ್ದಾರೆ ಹಲವು ಸಂಶೋಧಕರು. ಜೀನ್‌ಗಳ ಹುಡುಕಾಟದಲ್ಲಿ... ಮತ್ತೊಂದೆಡೆ ಕ್ಯಾಲಿಫೋರ್ನಿಯಾದ ಸ್ಕ್ರಿಪ್ಸ್ ಟ್ರಾನ್ಸ್‌ಲೇಷನಲ್ ಸೈನ್ಸ್ ಇನ್‌ಸ್ಟಿಟ್ಯೂಟ್‌ನ ವಿಜ್ಞಾನಿಗಳೂ ಜೀನ್‌ಗಳತ್ತ ಕಣ್ಣಿಟ್ಟಿದ್ದಾರೆ. 80 ವಯಸ್ಸು ದಾಟಿದ್ದರೂ ಅಧಿಕ ರಕ್ತದೊತ್ತಡ, ರಕ್ತನಾಳ ಸಂಬಂಧಿ ರೋಗ, ಡಯಾಬಿಟೀಸ್‌ನಂಥ ಯಾವುದೇ ಗಂಭೀರ ಕಾಯಿಲೆ ಹೊಂದಿರದ ಸಾವಿರಕ್ಕೂ ಅಧಿಕ ಮಂದಿಯ ಡಿಎನ್‌ಎಗಳನ್ನು ಪರೀಕ್ಷಿಸುತ್ತಿದ್ದಾರೆ. ಬರ್ಜಿಲಾಯ್ ಮನಸ್ಸಲ್ಲಿ ಮೂಡಿದ ಮತ್ತೊಂದು ಪ್ರಶ್ನೆಯೆಂದರೆ, ವ್ಯಕ್ತಿ ಹುಟ್ಟುವುದಕ್ಕೂ ಮೊದಲೇ ಅಂದರೆ ಭ್ರೂಣಾವಸ್ಥೆಯಲ್ಲೇ ಆತನ ವಯಸ್ಸಿನ ದರ ನಿಗದಿಯಾಗುತ್ತದೆಯೇ? ಜೀನ್‌ಗಳಿಗೆ ಸಂಬಂಧಿಸಿದ ಯಾಂತ್ರಿಕ ವ್ಯವಸ್ಥೆಯ ಮೇಲೆ ಪರಿಣಾಮ ಬೀರುವ ಗರ್ಭಾಶಯದಲ್ಲೇ ಯಾವುದೋ ಪ್ರಭಾವ ಈ ಕೆಲಸ ಮಾಡುತ್ತದೆಯೇ? ಗೊತ್ತಿಲ್ಲ. ಆದರೆ ಈ ಬಗ್ಗೆ ಸಂಶೋಧನೆಗಳು ಪ್ರಗತಿಯಲ್ಲಿವೆ. ಕುಳ್ಳರ ಅದೃಷ್ಟ ವಯಸ್ಸು 18 ಆದರೂ ಇರುವುದು ಮೂರೇ ಅಡಿ. ಅಂದರೆ ವಯಸ್ಸಿಗೆ ತಕ್ಕಂತೆ ದೇಹದ ಬೆಳವಣಿಗೆ ಆಗದೇ ಇರುವುದು. ಇಂಥ ವ್ಯಕ್ತಿಗಳನ್ನು ನೀವು ನೋಡಿರುವಿರಿ. ಒಂದು ಜೀನ್‌ನಲ್ಲಾಗುವ ರಿಸೆಸ್ಸಿವ್ ಮ್ಯೂಟೇಷನ್ (ಆನುವಂಶಿಕ ಲಕ್ಷಣಗಳಲ್ಲಿ ಆಗುವ ಹಠಾತ್ ಬದಲಾವಣೆ)ನಿಂದ ಇಂಥ ಸ್ಥಿತಿ ತಲೆದೋರುತ್ತವೆ. ಹಾಗಾಗಿ ಅವರಿಗೆ ವಯಸ್ಸಾದರೂ ದೇಹದ ಬೆಳವಣಿಗೆ ಕುಂಠಿತಗೊಂಡಿರುತ್ತದೆ. ಆದರೆ ಸಂಶೋಧಕರು ಕಂಡುಕೊಂಡ ಪ್ರಕಾರ, ವಯಸ್ಸಾದಂತೆ ಸಾಮಾನ್ಯ ಜನರಲ್ಲಿ ಕಾಣಿಸಿಕೊಳ್ಳುವ ರೋಗಗಳು ಈ ರೀತಿಯ ಸಮಸ್ಯೆಯುಳ್ಳವರಿಗೆ ಕಾಣಿಸಿಕೊಳ್ಳುವುದಿಲ್ಲ. ಅಂದರೆ ಅವರು ಆರೋಗ್ಯಶಾಲಿಗಳಾಗಿರುತ್ತಾರೆ. ಇಲಿ ಮೇಲೆ ನಡೆಸಿದ ಅಧ್ಯಯನದಿಂದಲೂ ಈ ವಿಚಾರ ಬಹಿರಂಗಗೊಂಡಿದೆ. ಇಲಿಯ ಬೆಳವಣಿಗೆಗೆ ಕಾರಣವಾಗುವ ಹಾರ್ಮೋನುಗಳನ್ನು ತಡೆಹಿಡಿದಾಗ ಆ ಇಲಿಯ ಬೆಳವಣಿಗೆ ಕುಂಠಿತಗೊಂಡಿತು. ಅಚ್ಚರಿಯೆಂದರೆ, ಈ ಕುಳ್ಳ ಇಲಿಯು ಇತರೆ ಇಲಿಗಳಿಗಿಂತ ಶೇ.40ರಷ್ಟು ಹೆಚ್ಚು ಕಾಲ ಬದುಕಿತು. - ದಿಯಾ