ಎಲ್ ಜಿ ಪ್ರೊ ಗಡಿಯಲ್ಲಿ ಗುಂಡಿನ ದಾಳಿಯಾಗುತ್ತಿರುವ ಪ್ರಮಾಣದಲ್ಲಿಯೇ ಮಾರುಕಟ್ಟೆಗಳಿಗೆ ನೂತನ ಸ್ಮಾರ್ಟ್‌ಫೋನ್‌ಗಳ ಲಗ್ಗೆ ಪ್ರಾರಂಭವಾಗಿದೆ.... ಗಡಿಯಲ್ಲಿ ಗುಂಡಿನ ದಾಳಿಯಾಗುತ್ತಿರುವ ಪ್ರಮಾಣದಲ್ಲಿಯೇ ಮಾರುಕಟ್ಟೆಗಳಿಗೆ ನೂತನ ಸ್ಮಾರ್ಟ್‌ಫೋನ್‌ಗಳ ಲಗ್ಗೆ ಪ್ರಾರಂಭವಾಗಿದೆ. ಇಂದು ನಾವು ತೆಗೆದುಕೊಂಡ ಸ್ಮಾರ್ಟ್‌ಫೋನ್ ಬಗ್ಗೆ ಬಹಳಷ್ಟು ದಿನಗಳ ಕಾಲ ಹೆಮ್ಮೆಪಡುವಂತಿಲ್ಲ. ಒಂದೆರಡು ತಿಂಗಳೊಳಗೆ ಅದಕ್ಕಿಂತ ಉತ್ತಮ ಫೋನ್ ಬಂದಿರುತ್ತದೆ. ಎಲ್‌ಜಿ ಜಿ ಪ್ರೋ ಕೂಡ ಹಾಗೆಯೇ ಇದೆ. ಎಲ್‌ಜಿ ಫೋನ್ ಎಂದಾಕ್ಷಣ ಮೂಗು ಮುರಿದು ಮತ್ತೊಂದು ಬ್ರಾಂಡ್ ಕಡೆ ಮುಖಮಾಡಲು ಸಾಮಾನ್ಯವಾಗಿ ಎರಡು ಕಾರಣಗಳಿರುತ್ತವೆ. ಮೊದಲನೆಯದಾಗಿ ವಿನ್ಯಾಸ, ಎರಡನೆಯದಾಗಿ ಬ್ಯಾಟರಿ ಸಾಮರ್ಥ್ಯ. ಎರಡೂ ವಿಭಾಗಗಳಲ್ಲಿ ಕೊಂಚ ಸುಧಾರಿಸಿಕೊಂಡು ಎಲ್‌ಜಿ ಜಿ ಪ್ರೋ ಮಾರುಕಟ್ಟೆಗೆ ಬಂದಿದೆ. ಆದರೆ ಇದೇ ದರಗಳಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿರುವ ಅಥವಾ ಸ್ಪರ್ಧೆ ನೀಡುತ್ತಿರುವ ಸ್ಯಾಮ್‌ಸಂಗ್ ಎಸ್-4 ಹಾಗೂ ಎಚ್‌ಟಿಸಿ ಒನ್ ಅನ್ನು ಹೋಲಿಸಿದಾಗ ಎಲ್‌ಜಿ ಜಿ ಪ್ರೋ ತುಸು ಮಂಕಾಗಿ ಕಾಣುತ್ತದೆ. ಹಾಗಂದ ಮಾತ್ರಕ್ಕೆ ಬಳಕೆಗೆ ಯೋಗ್ಯವಾಗಿಲ್ಲ ಎಂದಲ್ಲ. ಜಿ ಪ್ರೋವನ್ನು ಕೈನಲ್ಲಿ ಹಿಡಿದಾಗ ಖುಷಿ ಪಡಲು ಕೆಲ ಕಾರಣಗಳಿವೆ. ಮೊಬೈಲ್‌ಗೆ ಬಳಸಿರುವ ಗೋರಿಲ್ಲಾ ಗ್ಲಾಸ್ ಮುದ ನೀಡುತ್ತದೆ. ಇದೇ ಕಾರಣದಿಂದ ಮೊಬೈಲ್ ತುಸು ತೂಕವಾಗಿಯೂ ಇದೆ. ಆದರೆ, ಸ್ಕ್ರೀನ್ ಮೇಲೆ ಬೆರಳಾಡಿಸುವಾಗ ಖುಷಿ ನೀಡುತ್ತದೆ. ಅಂದಹಾಗೆ ಮೊಬೈಲ್ ಗಾತ್ರವು 4 ಇಂಚಿನಿಂದ ನಿಧಾನವಾಗಿ 5 ಇಂಚಿಗೆ ಶಿಫ್ಟ್ ಆಗುತ್ತಿದೆ. ಆದರೆ ಎಲ್‌ಜಿ ಜಿ-ಪ್ರೋನಲ್ಲಿ 5.5 ಇಂಚಿನ ಸ್ಕ್ರೀನ್ ನೀಡಲಾಗಿದೆ. ತುಸು ದುಬಾರಿಯಾಯಿತು... ಮಾರುಕಟ್ಟೆಯಲ್ಲಿ ಇಂದು ಲಭ್ಯವಿರುವ ರು. 40 ಸಾವಿರ ಆಸುಪಾಸಿನ ದರಗಳ ಮೊಬೈಲ್‌ಗಳ ಫೀಚರ್‌ಗಳನ್ನು ನೋಡಿದಾಗ ಎಲ್‌ಜಿ ಜಿ ಪ್ರೋ ಸ್ವಲ್ಪ ದುಬಾರಿಯಂತೆ ಅನಿಸುತ್ತದೆ. ಎಸ್-4ಗೆ 2600 ಎಂಎಎಚ್ ಸಾಮರ್ಥ್ಯದ ಬ್ಯಾಟರಿ ನೀಡಲಾಗಿದೆ. ಇನ್ನು ಎಚ್‌ಟಿಸಿ ಒನ್‌ನಲ್ಲಿ 2300 ಎಂಎಎಚ್ ಸಾಮರ್ಥ್ಯದ ಬ್ಯಾಟರಿಯಿದೆ. ಎಲ್‌ಜಿಗಿಂತಲೂ ಈ ಸ್ಕ್ರೀನ್‌ಗಳು ಕಡಿಮೆಯಿರಬಹುದು, ಹಾಗೆಯೇ ಬ್ಯಾಟರಿ ಸಾಮರ್ಥ್ಯ ಕೂಡ ಕಡಿಮೆಯಿದೆ. ಆದರೆ ಒಂದು ಹಗಲಿನ ಬಳಕೆಗೆ ಈ ಬ್ಯಾಟರಿಗಳು ಲಭ್ಯವಿರುತ್ತವೆ. ಆದರೆ, ಎಲ್‌ಜಿ ಜಿ ಪ್ರೋನಲ್ಲಿ 3140 ಎಂಎಎಚ್ ಬ್ಯಾಟರಿ ನೀಡಿದ್ದರೂ ಅಷ್ಟೊಂದು ಪರಿಣಾಮಕಾರಿಯಾಗಿಲ್ಲ. ಆದರೆ ಎಲ್‌ಜಿಯ ಹಿಂದಿನ ಆಪ್ಟಿಮಸ್ ಸೀರಿಸ್‌ನ ಮೊಬೈಲ್‌ಗಳಿಗೆ ಹೋಲಿಸಿದರೆ ಇದು ಎಷ್ಟೋ ವಾಸಿ. ಇನ್ನು ಮೊಬೈಲ್‌ನಲ್ಲಿನ ವಿಶೇಷ ಗುಣಗಳ ಬಗ್ಗೆ ಮಾತನಾಡುವುದಾದರೆ ಕ್ವಿಕ್ ರಿಮೋಟ್ ಎಂಬ ಒಂದು ಅದ್ಭುತವಿದೆ. ಅದರೊಡನೆ ಕ್ವಿಕ್ ಟ್ರಾನ್ಸಲೇಟರ್ ಎನ್ನುವ ಅಪ್ಲಿಕೇಷನ್ ಕೂಡ ಇದೆ. ಇವೆರಡು ಅಪ್ಲಿಕೇಷನ್‌ಗಳು ಎಸ್-4ನಲ್ಲಿಯೂ ಸಿಗುತ್ತವೆ. ಆದರೆ ಎಲ್‌ಜಿಯಲ್ಲಿರುವಷ್ಟು ಪರಿಪೂರ್ಣವಾಗಿ ಮತ್ತೊಂದು ಮೊಬೈಲ್‌ನಲ್ಲಿ ಸಿಗುವುದಿಲ್ಲ. ಕನ್ನಡಿಗರೂ ಖುಷಿ ಪಡುವ ವಿಚಾರವೆಂದರೆ ಇಂಗ್ಲಿಷ್ ಶಬ್ದಗಳನ್ನು ಕನ್ನಡಕ್ಕೆ ಭಾಷಾಂತರ ಮಾಡುವ ಕ್ವಿಕ್ ಟ್ರಾನ್ಸಲೇಟರ್ ಉತ್ತಮವಾಗಿದೆ. ಸಂಪೂರ್ಣ ವಾಕ್ಯವನ್ನೇ ಭಾಷಾಂತರಿಸುವುದು ಸಾಧ್ಯವಿಲ್ಲ. ಆದರೆ ಗೂಗಲ್ ಟ್ರಾನ್ಸಲೇಟರ್‌ನಂತೆ ಶಬ್ದಗಳ ಭಾಷಾಂತರವನ್ನು ಮಾಡುತ್ತದೆ. ಇದಕ್ಕೆ ಕ್ಯಾಮೆರಾದ ನೆರವು ಪಡೆಯಬೇಕು. ಇನ್ನು ಕ್ವಿಕ್ ರಿಮೋಟ್‌ನಲ್ಲಿ ವಿಶ್ವದಲ್ಲಿ ಲಭ್ಯವಿರುವ ಎಲ್ಲ ಎಲೆಕ್ಟ್ರಾನಿಕ್ ಡಿವೈಸ್‌ಗಳ ರಿಮೋಟ್ ಲಭ್ಯವಿದೆ. ಎಲ್‌ಜಿ ಫೋನ್ ಎಂದಾಕ್ಷಣ ಅದೇ ಪಕ್ಕಾ ಆಯತಾಕಾರದ ಮೊಬೈಲ್ ಎಂದು ಬೇರೆ ಬ್ರಾಂಡ್‌ನತ್ತ ಮುಖಮಾಡುತ್ತಿದ್ದರು. ವಿನ್ಯಾಸದ ಬಗ್ಗೆ ಸಾಕಷ್ಟು ಗ್ರಾಹಕರು ಬೇಸರ ವ್ಯಕ್ತಪಡಿಸಿದ್ದರು. ಈಗ ಅಲ್ಪಮಟ್ಟಿಗೆ ವಿನ್ಯಾಸ ಬದಲಾಯಿಸಿರುವ ಎಲ್‌ಜಿ, ತುಸು ಆಕರ್ಷಣೀಯವಾಗಿ ಕಾಣುತ್ತದೆ. ಆದರೆ ಗೋರಿಲ್ಲಾ ಗ್ಲಾಸ್ ಬಳಸಿರುವ ಕಾರಣದಿಂದ ತೂಕವೂ ಹೆಚ್ಚಾಗಿದೆ.