ಅಬ್ಬರಿಸುತ್ತ ಬಂದಿದೆ ಕ್ಯಾನ್ವಾಸ್ 4 ದೇಶದ ಮೊಬೈಲ್ ಮಾರುಕಟ್ಟೆಯಲ್ಲಿ ಗಟ್ಟಿಯಾಗಿ ನಿಲ್ಲುವ ದೃಢ ನಿರ್ಧಾರದಿಂದ ಮೊಬೈಲ್‌ಗಳನ್ನು ಬಿಡುತ್ತಿರುವ ಮೈಕ್ರೋಮ್ಯಾಕ್ಸ್ ಸಂಸ್ಥೆ ಭರ್ಜರಿ ಪ್ರಚಾರದೊಂದಿಗೆ 'ಕ್ಯಾನ್ವಾಸ್ 4' ಮೊಬೈಲ್ ಬಿಡುಗಡೆ ಮಾಡಿದೆ. ಇತ್ತೀಚೆಗೆ ಸ್ಯಾಮ್‌ಸಂಗ್ ಸಂಸ್ಥೆ ಎಸ್ 4 ಮೊಬೈಲ್ ಬಿಡುಗಡೆ ಮಾಡಿದ್ದಕ್ಕೂ, ಮೈಕ್ರೋಮ್ಯಾಕ್ಸ್ ಸಂಸ್ಥೆ ಕ್ಯಾನ್ವಾಸ್ 4 ಬಿಡುಗಡೆ ಮಾಡಿದ್ದು ಕೇವಲ ಕಾಕತಾಳೀಯ ಎಂದು ಹೇಳುವ ಹಾಗಿಲ್ಲ. ಆದರೆ 17,999 ದರಕ್ಕೆ ಕ್ಯಾನ್ವಾಸ್ 4 ಅತ್ಯಂತ ಉತ್ತಮ ಆಯ್ಕೆ ಎಂದು ಹೇಳಲೇಬೇಕಾಗಿದೆ. ಹಿಂದಿನ ಕ್ಯಾನ್ವಾಸ್ ಮಾದರಿ ಮೊಬೈಲ್‌ಗಳು ಕೊಂಚ ದಪ್ಪವಾಗಿದ್ದವು. ಆದರೆ ಕ್ಯಾನ್ವಾಸ್ 4 ತೆಳ್ಳಗಾಗಿದೆ. ಗೆಶ್ಚರ್ ಸೆನ್ಸರ್ ವಿಭಾಗದಲ್ಲಿ ಕ್ಯಾನ್ವಾಸ್ 4 ಹೊಸ ಆಕರ್ಷಣೆಗಳನ್ನು ತಂದಿದೆ. ಪ್ರಮುಖ ಹೊಸ ಆಕರ್ಷಣೆಯೆಂದರೆ ಕೇವಲ ಗಾಳಿ ಹಾಕುವ ಮೂಲಕ ನೀವು ಮೊಬೈಲ್ ಸ್ಕ್ರೀನ್ ಅನ್‌ಲಾಕ್ ಮಾಡಬಹುದು! ಇನ್ನು ಕಿವಿಗಿಟ್ಟುಕೊಂಡರೆ ಕರೆ ಮಾಡುವುದು, ಫ್ಲಿಪ್ ಮಾಡಿದರೆ ಫೋನ್ ಸೈಲೆಂಟ್ ಆಗುವುದು, ಫ್ಲಿಪ್ ಮಾಡಿದ ತಕ್ಷಣ ಸ್ಪೀಕರ್ ಆನ್ ಆಗುವುದು ಮುಂತಾದ ಸೌಲಭ್ಯಗಳಿವೆ. 13 ಮೆಗಾಪಿಕ್ಸೆಲ್ ಹಿಂಬದಿ ಕ್ಯಾಮರಾ ಮತ್ತು 5 ಮೆಗಾಪಿಕ್ಸೆಲ್ ಮುಂಬದಿ ಕ್ಯಾಮರಾ ಹೊಂದಿದೆ. ಮುಂಬದಿಗೆ 5 ಮೆಗಾಪಿಕ್ಸೆಲ್ ಕ್ಯಾಮರಾ ಹೊಂದಿರುವುದು ಈಗಿರುವ ಮೊಬೈಲ್‌ಗಳಲ್ಲೇ ಅತ್ಯಂತ ಹೆಚ್ಚು ಮೆಗಾಪಿಕ್ಸೆಲ್ ಮುಂಬದಿ ಕ್ಯಾಮರಾವಾಗಿದೆ. ಈ ಫೋನ್ ಆ್ಯಂಡ್ರಾಯ್ಡ್ ಜೆಲ್ಲಿಬೀನ್ (4.1.2) ಆಪರೇಟಿಂಗ್ ಸಿಸ್ಟಂ ಹೊಂದಿದ್ದು, 1.2 ಗಿಗಾಹರ್ಟ್ಸ್ ಕ್ವಾಡ್‌ಕೋರ್ (4 ಕೋರ್) ಪ್ರೊಸೆಸರ್ ಹಾಗೂ 1 ಜಿಬಿ ರ್ಯಾಮ್ ಹೊಂದಿದೆ. 16 ಜಿಬಿ ಆಂತರಿಕ ಮೆಮೊರಿ ಹೊಂದಿದ್ದು, ಮೆಮೊರಿ ಕಾರ್ಡ್ ಮೂಲಕ ಮತ್ತೆ 32 ಜಿಬಿವರೆಗೆ ವಿಸ್ತರಿಸಲು ಅವಕಾಶವಿದೆ. ಆದರೆ ನಮ್ಮ ಪ್ರಕಾರ ಕ್ಯಾನ್ವಾಸ್ 4ನ ಪ್ರಮುಖ ಹಿನ್ನೆಡೆಯೆಂದರೆ ಕೇವಲ 2,000 ಎಂಎಎಚ್ ಬ್ಯಾಟರಿ ಹೊಂದಿರುವುದು. ಇಂದು ಸ್ಮಾರ್ಟ್‌ಫೋನ್‌ಗಳು ಹೆಚ್ಚಿನ ಬ್ಯಾಟರಿ ಅಪೇಕ್ಷಿಸುತ್ತವೆ. ಬೆಳಿಗ್ಗೆ ಫುಲ್ ಚಾರ್ಜ್ ಮಾಡಿದರೆ ಮಧ್ಯಾಹ್ನ ಹೊತ್ತಿಗೆಲ್ಲ ಶೇ.50ರಷ್ಟು ಬ್ಯಾಟರಿ ಖಾಲಿಯಾಗಿರುತ್ತದೆ. ಇದನ್ನು ಗಮನಿಸಿದರೆ 2000 ಎಂಎಎಚ್ ಬ್ಯಾಟರಿ 5 ಇಂಚು ಸ್ಕ್ರೀನಿನ ಕ್ಯಾನ್ವಾಸ್ 4 ಸ್ಮಾರ್ಟ್‌ಫೋನ್‌ಗೆ ಅತ್ಯಂತ ಕಡಿಮೆಯಾಯಿತು ಅನಿಸುತ್ತದೆ.