ರೊಬೊ ಫ್ಯಾಮಿಲಿ! ಬೂಮ್ ಬೂಮ್ ರೊಬೊ ಡಾ, ರೊಬೊ ಡಾ, ರೊಬೊ ಡಾ ಝೂಮ್ ಝೂಮ್ ರೊಬೊ ಡಾ, ರೊಬೊ ಡಾ, ರೊಬೊ ಡಾ! ರಜನೀಕಾಂತ್ ಅಭಿನಯದ ರೊಬೊ ಚಿತ್ರದ ಖ್ಯಾತ ಹಾಡಿದು. ರೊಬೊ ಜಗತ್ತಿನ ಹಲವು ವಿಸ್ಮಯಗಳನ್ನು ಅಲ್ಲಿ ಅನಾವರಣ ಮಾಡಲಾಗಿತ್ತು. ಈಗ ರೊಬೊಟ್‌ಗಳ ಬೂಮ್ ಆಟಿಕೆಗಳ ಸಾಮ್ರಾಜ್ಯಕ್ಕೆ ಮುಂದಡಿಯಿಡುತ್ತಿದೆ. ಲಾಸ್ ವೆಗಾಸ್‌ನಲ್ಲಿ ನಡೆದ ವಿಶ್ವ ಎಲೆಕ್ಟ್ರಾನಿಕ್ ಯಂತ್ರಗಳ ಸಮಾವೇಶದಲ್ಲಿ ರೊಬೊಟ್ ಆಟಿಕೆಗಳು ಎಲ್ಲರ ಗಮನ ಸೆಳೆದಿವೆ. ಜಪಾನ್‌ನಲ್ಲಿ ಹುಟ್ಟುವ ಪ್ರತಿ ಮಗುವೂ ತಾಯಿಯ ಕೈ ಹಿಡಿಯುವುದರ ಜತೆಜತೆಗೆ ರೊಬೊಟ್ ನೆರಳಲ್ಲೇ ಮಗು ಬೆಳೆಯುತ್ತದೆ ಎಂಬ ಮಾತಿದೆ. ಅಲ್ಲಿಯ ಮಕ್ಕಳು ಯಂತ್ರಮಾನವರೊಂದಿಗೆ ಆಟವಾಡುತ್ತಾರೆ. ಈ ಆಟಿಕೆಗಳು ಸಾಮಾನ್ಯರ ಕೆಗೆಟಕುವುದಿಲ್ಲ. ಆದರೆ, ಇದನ್ನು ನೋಡಿದಾಗ ಒಮ್ಮೆ ರೋಮಾಂಚನ ಆಗದೇ ಇರಲಾರದು. ಇಂಥ 7 ರೊಬೊಟ್ ಆಟಿಕೆಗಳ ಪರಿಚಯ ನಿಮಗಾಗಿ. ಸೇವಿಂಗ್ಸ್ ಅಕೌಂಟ್‌ನಲ್ಲಿ ದುಡ್ಡು ಕೊಳೆಯುತ್ತಿದ್ದರೇ ನೀವು ಈ ಟಾಯ್ಸ್‌ಗಳಲ್ಲಿ ಆಟವಾಡಬಹುದು. ಸ್ಪೆರೋ 2ಬಿ ಈ ಆಟಿಕೆಯ ವಿಡಿಯೋವನ್ನು 10 ನಿಮಿಷ ನೋಡಿದರೆ ಖರೀದಿಸಬೇಕೆಂದು ಹುಚ್ಚು ಹಿಡಿಯದೇ ಇರದು. ಕ್ರಿಕೆಟ್ ಚೆಂಡಿನ ಗಾತ್ರದಲ್ಲಿರುವ ರೊಬೊಟಿಕ್ ಆಟಿಕೆಯಿದು. ಮೊಬೈಲ್ ಮೂಲಕ ಆ ಚೆಂಡನ್ನು ನಿಯಂತ್ರಿಸಬಹುದು. ಬ್ಲ್ಯೂಟೂತ್ ಮೂಲಕ ಮೊಬೈಲ್ ಹಾಗೂ ಸ್ಪೆರೊಗೆ ಸಂಪರ್ಕ ಸಾಧ್ಯವಾಗುತ್ತದೆ. ಒಮ್ಮೆ ಸಂಪರ್ಕವಾದ ಬಳಿಕ ಸ್ಮಾರ್ಟ್‌ಪೋನ್‌ನಲ್ಲಿರುವ ಸ್ಪೆರೊ ಅಪ್ಲಿಕೇಷನ್ ಮೂಲಕ ಈ ಆಟಿಕೆಯೊಂದಿಗೆ ಮೋಜು ಮಸ್ತಿ ಮಾಡಬಹುದು. ನಿಮ್ಮ ಮೊಬೈಲ್ ಅಕ್ಷರಶಃ ರಿಮೋಟ್ ಆಗುತ್ತದೆ. ಬೌಲಿಂಗ್, ಜಂಗೀಕುಸ್ತಿ, ರೇಸಿಂಗ್ ಸೇರಿದಂತೆ ನಾನಾ ಆಟವನ್ನು ಆಡಬಹುದು. ಒಂದೇ ಆಟಿಕೆಯಿದ್ದರೆ ಸ್ವಲ್ಪ ಮಟ್ಟಿಗೆ ಬೋರ್ ಹಿಡಿಸಬಹುದು. ಆದರೆ ಹತ್ತಾರು ಸ್ಪೆರೊಗಳಿದ್ದರೇ ಮಜಾ ಉಡಾಯಿಸಬಹುದು. ನಾವಾಡುವ ಮುಟ್ಟಾಟವನ್ನು ಈ ರೊಬೊ ಆಟಿಕೆ ಮೂಲಕ ಆಡಬಹುದು. ಆದರೆ ಮೊಬೈಲ್ ಸ್ಕ್ರೀನ್‌ನ ಕೈಚಳಕ ಅರಿತಿರಬೇಕಷ್ಟೆ. ಇಷ್ಟು ದಿನ ಚೆಂಡಿನ ಆಕಾರದ ಸ್ಪೆರೋ ಮಾತ್ರ ಮಾರುಕಟ್ಟೆಯಲ್ಲಿತ್ತು. ಈಗ ಬಾಟಲ್‌ಗಳ ಆಕಾರದಲ್ಲೂ ಮಾರುಕಟ್ಟೆಗೆ ತರಲಾಗಿದ್ದು ಇದು ಜಂಪ್ ಮಾಡುತ್ತದೆ. ಇದರಿಂದ ಮಕ್ಕಳು ಇನ್ನಷ್ಟು ಮೋಜಿನ ಆಟವಾಡಬಹುದು. ವಾವ್ ವೀ ಮಿಪ್ ರೊಬೊಟ್ ನಿಮ್ಮ ಮನೆಯ ಪುಟಾಣಿಗೆ ಈ ರೊಬೊಟ್ ಒಳ್ಳೆಯ ಜತೆಗಾರನಾಗಬಹುದು. ಅರ್ಧ ಅಡಿಯ ಈ ರೊಬೊ ಮಗುವಿಗೆ ಸಹಾಯಕನಾಗಿ ಕೆಲಸ ಮಾಡಲಿದೆ. ಈ ರೊಬೊವನ್ನೂ ಮೊಬೈಲ್ ಅಪ್ಲಿಕೇಷನ್ ಮೂಲಕವೇ ಹ್ಯಾಂಡಲ್ ಮಾಡಲಾಗುತ್ತದೆ. ಈ ಸಣ್ಣ ರೊಬೊವು ಮಗುವಿನಂತೆ ಕಿರು ಹೆಜ್ಜೆ ಇಡುತ್ತಾ ನಡೆದಾಡುತ್ತದೆ. ಇದಲ್ಲದೆ, ಪೆಪ್ಸಿಯ ಸಣ್ಣ ಟಿನ್‌ಗಳನ್ನೂ ಕೈನಲ್ಲಿ ಹಿಡಿಸಿಕೊಂಡು ನಾವಿದ್ದಲ್ಲಿಗೆ ಕರೆಯಿಸಿಕೊಳ್ಳಬಹುದು. ಮನೆಯ ಮಟ್ಟಿಗೆ ಸಣ್ಣ ಸರ್ವರ್ ಆಗಿಯೂ ಕೆಲಸಮಾಡಲಿದೆ. ಇವೆಲ್ಲ ಕೆಲಸಗಳನ್ನು ಅಟೋಮೆಟಿಕ್ ಆಗಿ ಮಾಡುವುದಿಲ್ಲ, ಬದಲಾಗಿ ಮೊಬೈಲ್ ಅಪ್ಲಿಕೇಷನ್‌ಗಳ ಮೂಲಕ ಅದರ ಮಾತು ಕಲಿಸಬೇಕು. ಪೇಪರ್ ಏರೋಪ್ಲೇನ್ ಶಾಲೆ, ಕಾಲೇಜಿನಲ್ಲಿ ನೋಟ್ಸ್ ಪೇಪರ್‌ಗಳನ್ನು ಹರಿದು ರಾಕೆಟ್ ಮಾಡಿ ಹಾರಿಸಿದ್ದು ನೆನಪಿದೆ ಅಲ್ವಾ? ಅದೆಷ್ಟೋ ಶಿಕ್ಷಕರು ಹಾಗೂ ಹುಡುಗಿಯರಿಗೆ ಈ ಪೇಪರ್ ರಾಕೆಟ್ ಮೂಲಕ ಕಾಡಿಸಿರುತ್ತೇವೆ. ಇಂಥದ್ದೇ ಪೇಪರ್ ಏರೋಪ್ಲೇನ್‌ಗೆ ಸಣ್ಣ ರೊಬೊಟಿಕ್ ಯಂತ್ರ ಕೂರಿಸಿ ಮೊಬೈಲ್ ಮೂಲಕ ನಿಯಂತ್ರಿಸಿದರೆ ಹೇಗಿರುತ್ತದೆ. ಪ್ಲಾಸ್ಟಿಕ್ ಹಾಳೆಯನ್ನು ವಿಮಾನದ ಮಾದರಿಯಲ್ಲಿ ಕತ್ತರಿಸಿ ಅದರ ತುದಿಗೆ ರೊಬೊಟಿಕ್ ಯಂತ್ರ ಕೂರಿಸಲಾಗುತ್ತದೆ. ಈ ಯಂತ್ರಕ್ಕೆ ಅಪ್ಲಿಕೇಷನ್ ಹಾಗೂ ಬ್ಲ್ಯೂಟೂತ್ ಮೂಲಕ ಸಂಪರ್ಕ ಜೋಡಿಸಲಾಗುತ್ತದೆ. ಆ ಬಳಿಕ ಮೊಬೈಲ್ ಮೂಲಕವೇ ವಿಮಾನವನ್ನು ಹಾರಿಸಬಹುದು. ಪ್ಯಾರಟ್ ಮಿನಿಡ್ರೋನ್ ಇದು ನೋಡಲು ಪಕ್ಕಾ ಏರೋಪ್ಲೇನ್ ಹುಳುವಿನಂತಿರುತ್ತದೆ. ಇದೇ ವಿನ್ಯಾಸದಲ್ಲಿ ಯಂತ್ರವನ್ನು ರೂಪಿಸಿ ಎರಡು ಬದಿಗೆ ಒಂದೊಂದು ಚಕ್ರ ಫಿಕ್ಸ್ ಮಾಡಲಾಗಿದೆ. ಇದು ಗಾಳಿಯಲ್ಲಿ ಹಾರಾಡುತ್ತದೆ, ಹಾಗೆಯೇ ಲ್ಯಾಂಡ್ ಆದಾಗ ಚಕ್ರದ ಮೂಲಕ ಚಲಿಸುತ್ತದೆ. ಈ ಚಕ್ರವು ಅತಿಯಾಗಿ ದೊಡ್ಡದಿರುವುದರಿಂದ ತುಸು ಚೆಂದವಾಗಿಯೇ ಕಾಣುತ್ತದೆ. ಈ ರೊಬೊಗೆ 3 ಪ್ರತ್ಯೇಕ ನಿಯಂತ್ರಕಗಳಿವೆ. ಒಂದೇ ಸ್ಮಾರ್ಟ್‌ಫೋನ್‌ನಿಂದ ಇದನ್ನು ನಿಯಂತ್ರಿಸಬಹುದು. ಪ್ಯಾರಟ್ ಜಂಪಿಂಗ್ ಸುಮೋ ಇದೊಂಥರ ರೊಬೊ ಜಂಪಿಂಗ್ ಸ್ಟಾರ್. ಎರಡು ಚಕ್ರವಿರುವ ಸಣ್ಣ ರೊಬೊ ಇದು. ಇವೆರಡು ಚ್ಕರಗಳ ಮಧ್ಯ ಕ್ಯಾಮೆರಾ ಹಾಗೂ ರೊಬೊಟಿಕ್ ಯಂತ್ರವನ್ನು ಕೂರಿಸಲಾಗಿದೆ. ಈ ಯಂತ್ರದಿಂದ 150 ಅಡಿ ದೂರದಲ್ಲಿದ್ದುಕೊಂಡು ಮೊಬೈಲ್ ಮೂಲಕವೇ ನಿಯಂತ್ರಿಸಬಹುದು. ರೇಸಿಂಗ್‌ನ ಜತೆಗೆ 3 ಅಡಿ ಎತ್ತರಕ್ಕೆ ಇದು ಜಂಪ್ ಕೂಡ ಮಾಡುತ್ತದೆ. ಇದೇ ಸಂದರ್ಭದಲ್ಲಿ 180 ಡಿಗ್ರಿಯಲ್ಲಿ ತಿರುಗುತ್ತದೆ. ಆದರೆ ಇದರ ಬ್ಯಾಟರಿ ಕಾಲಾವಧಿ ಕೇವಲ 20 ನಿಮಿಷ. ಓಝೋಬಾಟ್ ಇದು ಜಗತ್ತಿನ ಅತಿ ಸಣ್ಣ ರೊಬೊಟಿಕ್ ಯಂತ್ರ. ಬಿಳಿ ಹಾಳೆಯ ಮೇಲೆ ಲೈನ್ ಎಳೆಯಬಹುದು. ಈ ಡಿವೈಸ್ ಜತೆ ಇನ್ನು 4 ಗೇಮ್‌ಗಳನ್ನು ಉಚಿತವಾಗಿ ಕೊಡಲಾಗುತ್ತದೆ. ಗೆರೆ ಎಳೆಯುವದರ ಜತೆಗೆ ಒಟ್ಟು 7 ಫಂಕ್ಷನ್‌ಗಳನ್ನು ಇದಕ್ಕೆ ಫೀಡ್ ಮಾಡಬಹುದು. ಪ್ರತ್ಯೇಕ ಬಣ್ಣಗಳಲ್ಲಿ ಗೆರೆ ಎಳೆಯುವರ ಜತೆಗೆ ಇದಕ್ಕೆ ಸಂಬಂಧಿಸಿ ಸರಿಸುಮಾರು 1 ಸಾವಿರ ಸಲಹೆ ನೀಡಬಹುದು. ಆ್ಯಪಲ್‌ಗೆ ಸಫೈರ್ ಗ್ಲಾಸ್ ಇನ್ನು ಮುಂದೆ ಆ್ಯಪಲ್ ಫೋನ್‌ನಲ್ಲಿ ಗೋರಿಲ್ಲ ಗ್ಲಾಸ್ ಬದಲು ಸಫೈರ್ ಗ್ಲಾಸ್ ಕಾಣಿಸಿಕೊಳ್ಳಲಿದೆ! ಗೋರಿಲ್ಲ ಗ್ಲಾಸ್‌ಗಿಂತ ಹೆಚ್ಚು ಗಟ್ಟಿ ಹಾಗೂ ಸ್ಕ್ರ್ಯಾಚ್ ಪ್ರೂಫ್ ಆಗಿ ಇದು ಕಾರ್ಯನಿರ್ವಹಿಸಲಿದೆ. ಅರಿಝೋನಾದಲ್ಲಿರುವ ಸಫೈರ್ ಮೇಕರ್ ಜತೆ 578 ಅಮೆರಿಕನ್ ಡಾಲರ್ ಒಪ್ಪಂದವನ್ನು ಆ್ಯಪಲ್ ಮಾಡಿಕೊಂಡಿದೆ. ಇದಲ್ಲದೇ ಈ ಗ್ಲಾಸ್‌ನ ಪೇಟೆಂಟ್ ಅನ್ನೂ ಆ್ಯಪಲ್ ಖರೀದಿಸಿದೆ. ದುಬಾರಿ ವಾಚ್‌ಗಳಿಗೆ ಈ ಗ್ಲಾಸ್ ಬಳಸಲಾಗುತ್ತಿದ್ದು, ಇದಕ್ಕೆ ಜಿಟಿ ತಂತ್ರಜ್ಞಾನ ಎಂದು ಕರೆಯಲಾಗುತ್ತದೆ. ಮೊಬೈಲ್ ಮಾರುಕಟ್ಟೆಯಲ್ಲಿ ಇದೇ ಮೊದಲ ಬಾರಿಗೆ ಸಫೈರ್ ಗ್ಲಾಸ್ ಅನ್ನು ಐಫೋನ್ 5ನ ಕ್ಯಾಮೆರಾಗೆ ಬಳಸಲಾಗಿತ್ತು. ಆ್ಯಪಲ್‌ನ ಮುಂದಿನ ಆವೃತ್ತಿಯ ಫೋನ್‌ನಲ್ಲಿ ಸಂಪೂರ್ಣ ಸ್ಕ್ರೀನ್ ಹಾಗೂ ಮೊಬೈಲ್‌ಗೆ ಸಫೈರ್ ಗ್ಲಾಸ್ ಬಳಸಲು ಆ್ಯಪಲ್ ನಿರ್ಧರಿಸಿದೆ. ಈ ಗ್ಲಾಸ್‌ನ ತೂಕವು ತುಸು ಕಡಿಮೆ ಇರುವುದರಿಂದ ಆ್ಯಪಲ್ ಮೊಬೈಲ್‌ನ ತೂಕವೂ ಕಡಿಮೆಯಾಗುವ ಸಾಧ್ಯತೆಯಿದೆ.