ಮುಂದಿನ ಕ್ಯಾಮೆರಾ ದಿನಗಳು ಮಂಗಳಯಾನ ಅಥನಾ ಚಂದ್ರ ಯಾನ ಕನಸು ನನಸಾಗಿ ಮನುಷ್ಯ ಅಲ್ಲಿ ಕಾಲಿಟ್ಟರೆ ಮಂಗಳಯಾನ ಅಥನಾ ಚಂದ್ರ ಯಾನ ಕನಸು ನನಸಾಗಿ ಮನುಷ್ಯ ಅಲ್ಲಿ ಕಾಲಿಟ್ಟರೆ ಆತ ಮೊದಲು ಮಾಡುವ ಕೆಲಸ ತನ್ನದೊಂದು ಸೆಲ್ಫಿ. ಹೌದು, ಇಂದು ಸೆಲ್ಫಿ ಕ್ರೇಜ್ ಅಷ್ಟೊಂದು ಹೆಚ್ಚಾಗಿದೆ. ರೇರ್ ಕ್ಯಾಮರಾವೇ ಪ್ರೈಮರಿ ಕ್ಯಾಮೆರಾ ಆಗುತ್ತಿದೆ. ಇದರಿಂದ ಸ್ಮಾರ್ಟ್‌ಫೋನ್ ಕಂಪನಿಗಳು ಕೂಡ ಸ್ಮಾರ್ಟ್ ಆಗುತ್ತಿವೆ. ಸೆಲ್ಫಿಯಲ್ಲಿಯೂ ಉತ್ತಮ ಕ್ಯಾಮೆರಾ ಬಯಸುವ ಗ್ರಾಹಕರ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ಪ್ರತಿಷ್ಠಿತ ಎಚ್‌ಟಿಸಿ ಸಂಸ್ಥೆಯು 13 ಮೆಗಾ ಪಿಕ್ಸಲ್ ಲೆನ್ಸ್ ನ ಫ್ರಂಟ್ ಕ್ಯಾಮೆರಾ ಇರುವ ಸ್ಮಾರ್ಟ್ ಫೋನ್‌ನ್ನು ಮಾರುಕಟ್ಟೆಗೆ ಬಿಡುತ್ತಿದೆ. ಮೊಬೈಲ್ ದುಬಾರಿ ಎನಿಸಿದರೂ ಆಕರ್ಷಕವಾಗಿದೆ. ಅದರಲ್ಲೂ ಅತಿ ಹೆಚ್ಚು ಮೆಗಾ ಪಿಕ್ಸಲ್ ಇರುವ ಫ್ರಂಟ್ ಕ್ಯಾಮರಾ ಮೊಬೈಲ್ ಇದಾಗಿದೆ. ಇದರ ಪರಿಣಾಮವಾಗಿ ಉಳಿದ ಕಂಪನಿಗಳು ಫ್ರಂಟ್ ಕ್ಯಾಮೆರಾದ ಮೆಗಾ ಪಿಕ್ಸಲ್ ಹೆಚ್ಚಿಸಬೇಕಾದ ಅನಿವಾರ್ಯ ಎದುರಾಗಿದೆ. ಈಗಿನ ದುಬಾರಿ ಸ್ಮಾರ್ಟಿಗಳಲ್ಲಿನ ಕ್ಯಾಮೆರಾಗಳು ಕೂಡ 5ಮೆಗಾ ಪಿಕ್ಸಲ್ ದಾಟಿರುವುದಿಲ್ಲ. ಬಹುತೇಕ ಸ್ಮಾರ್ಟ್ ಫೋನ್‌ಗಳ ಫ್ರಂಟ್ ಕ್ಯಾಮೆರಾ 2 ಎಂಪಿ ಒಳಗಿರುತ್ತದೆ. ಆದರೆ ಎಟ್‌ಟಿಸಿ ಹೊಸ ಮೊಬೈಲ್ ಡಿಸೈರ್ ಐಯ್ ಉಳಿದ ಮೊಬೈಲ್ ಕಂಪನಿಗಳ ಕಣ್ಣು ತೆರೆಸಬಹುದು. ಜತೆಗೆ ಮೊಬೈಲ್ ಪ್ರಿಯರ ಕಣ್ಣನ್ನು ತಂಪುಗೊಳಿಸಬಹುದು. ಆಟೋಫೋಕಸ್ ಹಾಗೂ ಎಲ್‌ಇಡಿ ಫ್ಲ್ಯಾಶ್ ಸೌಲಭ್ಯದ ಜತೆಗೆ 13 ಮೆಗಾ ಪಿಕ್ಸಲ್‌ನ್ನು ಪ್ರೈಮರಿ ಹಾಗೂ ಸೆಕೆಂಡರಿ ಕ್ಯಾಮೆರಾಕ್ಕೂ ನೀಡಲಾಗಿದೆ. ಇದರಿಂದ ಕ್ಯಾಮೆರಾವನ್ನು ಹೇಗೆ ಹಿಡಿದುಕೊಂಡು ಫೋಟೋ ತೆಗೆದರೂ ವ್ಯತ್ಯಾಸವಿರುವುದಿಲ್ಲ. ಫ್ರಂಟ್ ಕ್ಯಾಮೆರಾದಲ್ಲಿಯೂ ಮೊದಲ ಬಾರಿಗೆ ಫ್ಲ್ಯಾಶ್ ಸೌಲಭ್ಯವೂ ಸಿಗಲಿದೆ. ಅಂದಹಾಗೆ ತಾಂತ್ರಿಕವಾಗಿ ಇದು ಉತ್ತಮ ಎನಿಸಿದರೂ ಇದು ಮೊದಲ ಪ್ರಯತ್ನವಲ್ಲ. ಈ ಹಿಂದೆ ಒಪ್ಪೊ-1ನಲ್ಲಿಯೂ ಫ್ರಂಟ್ ಹಾಗೂ ರೇರ್ ಕ್ಯಾಮೆರಾವನ್ನು 13 ಎಂಪಿ ನೀಡಲಾಗಿತ್ತು. ಆದರೆ ಫ್ರಂಟ್ ಕ್ಯಾಮೆರಾದ ಗುಣಮಟ್ಟದ ಬಗ್ಗೆ ಕೆಲ ಆರೋಪಗಳು ಕೇಳಿ ಬಂದಿದ್ದವು. ಮತ್ತೊಂದು ವಿಶೇಷವೆಂದರೆ ಯಾವುದೇ ಬ್ರಾಂಡೆಡ್ ಕಂಪನಿಗಳು ಹೆಚ್ಚಿನ ಮೆಗಾ ಪಿಕ್ಸಲ್ ಇರುವ ಫ್ರಂಟ್ ಕ್ಯಾಮೆರಾ ನೀಡಿರಲಿಲ್ಲ. ಕ್ಯಾಮೆರಾ ಹೊರತುಪಡಿಸಿ ಉಳಿದ ಫೀಚರ್ಸ್ ಅಷ್ಟೊಂದು ಆಕರ್ಷಕ ಎಂದು ಹೇಳುವಂತಿಲ್ಲ. ವಿನ್ಯಾಸದಲ್ಲಿ ಕ್ಲಾಸ್ ಎನಿಸಿಕೊಂಡಿದ್ದ ಎಚ್‌ಟಿಸಿ ಕೊಂಚ ಎಡವಿದಂತೆ ಭಾಸವಾಗುತ್ತದೆ. ಉಳಿದಂತೆ 2.3ಗಿಗಾ ಹರ್ಟ್ಸ್ ಕ್ವಾಡ್‌ಕೋರ್ ಪ್ರಾಸೆಸರ್ ಹಾಗೂ 2 ಜಿಬಿ ರ್ಯಾಮ್ ಹೊಂದಿದೆ. 128 ಜಿಬಿವರೆಗೂ ಮೈಕ್ರೋ ಎಸ್‌ಡಿ ಕಾರ್ಡ್ ಹಾಕಲು ಅವಕಾಶವಿದ್ದು, 16 ಜಿಬಿ ಇಂಟರ್ನಲ್ ಮೆಮೊರಿಯಿದೆ. ಅಮೆರಿಕದಲ್ಲಿ ಈ ಮೊಬೈಲ್ ಬಿಡುಗಡೆಯಾಗಿದ್ದು, ಈ ತಿಂಗಳಾಂತ್ಯಕ್ಕೆ ಭಾರತೀಯ ಮಾರುಕಟ್ಟೆಗೆ ಬರಲಿದೆ. ಮೊಬೈಲ್ ಬೆಲೆ 45 ಸಾವಿರದ ಆಸುಪಾಸಿನಲ್ಲಿರಬಹುದು. ಇದರ ಜತೆಗೆ ಮತ್ತೊಂದು ಆಕರ್ಷಖ ಕ್ಯಾಮೆರಾವೊಂದನ್ನು ಎಚ್‌ಟಿಸಿ ಮಾರುಕಟ್ಟೆಗೆ ಬಿಟ್ಟಿದೆ. ಈ ಮೂಲಕ ಕ್ಯಾಮೆರಾ ಜಗತ್ತಿಗೆ ಎಚ್‌ಟಿಸಿ ಕಂಪನಿಯೂ ಅಧಿಕೃತವಾಗಿ ಕಾಲಿಡುತ್ತಿದೆ. ವಿಚಿತ್ರ ಹಾಗೂ ಆಕರ್ಷಕ ರೀತಿಯಲ್ಲಿ ಈ ಕ್ಯಾಮೆರಾ ವಿನ್ಯಾಸಗೊಳಿಸಲಾಗಿದೆ. ಆದರೆ ಈ ಕ್ಯಾಮೆರಾಕ್ಕೆ ಬ್ಲೂಟೂತ್, ವೈ-ಫೈ ಹಾಗೂ ಯುಎಸ್‌ಬಿ ಸಂಪರ್ಕ ಸಾಧಿಸಲು ಅವಕಾಶವಿದೆ. ಆದರೆ ನೀವು ತೆಗೆದ ಫೋಟೊ ಅಥವಾ ವಿಡಿಯೋ ನೋಡಲು ಇಲ್ಲಿ ಯಾವುದೇ ಸ್ಕ್ರೀನ್ ಇಲ್ಲ. ಬದಲಾ ಕೊಳವೆ ಆಕೃತಿಯ ಒಂದು ಸಣ್ಣ ಗೆಜೆಟ್ ಇದು. ಕ್ಯಾಮೆರಾವನ್ನು ಗೆಜೆಚ್ ಮೇಲಿರುವ ಒಂದು ಬಟನ್ ಮೂಲಕ ನಿಯಂತ್ರಿಸಬೇಕು. 16 ಮೆಹಾ ಪಿಕ್ಸಲ್ ಲೆನ್ಸ್ ಹೊಂದಿರುವ ಇದರಲ್ಲಿ ಎಚ್‌ಡಿ ವಿಡಿಯೋ ಕೂಡ ಮಾಡಬಹುದು. 8 ಜಿಬಿ ಇಂಟರ್ನಲ್ ಮೆಮೊರಿ ಯಿದ್ದು, ಸಿಮ್ ಹಾಕಲು ಅವಕಾಶವಿರುವುದರಿಂದ ವಿಶೇಷ ಆ್ಯಂಡ್ರಾಯ್ಡ್ ಹಾಗೂ ಐಒಎಸ್ ಅಪ್ಲಿಕೇಶನ್ ಮೂಲಕ ಕ್ಲೌಡ್‌ಗೂ ಫೈಲ್‌ಗಳನ್ನು ವರ್ಗಾಯಿಸಬಹುದು. ಇದರ ಬೆಲೆ 10 ಸಾವಿರ. ಸ್ಯಾಮ್‌ಸಂಗ್ ಗದ್ದಲದಲ್ಲಿ ಕಳೆದುಹೋಗಿದ್ದ ಎಚ್‌ಟಿಸಿಗೆ ಇದು ವರವಾಗಲಿದೆಯೇ ಎಂದು ಕಾದು ನೋಡಬೇಕು. ರಾಜೀವ ಹೆಗಡೆ.