ಬೆಟ್ಟದ ಬಾಲೆ! 1995. ದಕ್ಷಿಣ ಪೆರುವಿನ ಮೌಂಟ್ ಅಂಪೆಟೊ ಹಿಮ ಪರ್ವತವನ್ನೇರುತ್ತಿದ್ದ ಜೋಹನ್ ರೀಯ್ನಾರ್ಡ್ ಮತ್ತಾತನ ಗೆಳೆಯ... 1995. ದಕ್ಷಿಣ ಪೆರುವಿನ ಮೌಂಟ್ ಅಂಪೆಟೊ ಹಿಮ ಪರ್ವತವನ್ನೇರುತ್ತಿದ್ದ ಜೋಹನ್ ರೀಯ್ನಾರ್ಡ್ ಮತ್ತಾತನ ಗೆಳೆಯ ಮಿಗುವಲ್ ಜೌರ್ತೆಗೆ ಅನಿರೀಕ್ಷಿತವಾಗಿ ಮಾನವ ನಿರ್ಮಿತ ಗುಹೆಯೊಂದು ಎದುರಾಯಿತು. ಅದೂ 22,000 ಅಡಿ ಎತ್ತರದಲ್ಲಿ! ಗುಹೆಯ ಒಳಹೊಕ್ಕಾಗ ಇವರಿಗೆ ಮೂರು ಚೀಲಗಳು ಕಣ್ಣಿಗೆ ಬಿದ್ದವು. ಕುತೂಹಲ ತಡೆಯಲಾರದೆ ರೀಯ್ನಾರ್ಡ್ ಚೀಲವೊಂದನ್ನು ಬಿಚ್ಚಿ ನೋಡಿದ. ಥರಗುಟ್ಟುವ ಚಳಿಯಲ್ಲೇ ಒಂದು ಕ್ಷಣ ಬೆವೆತುಬಿಟ್ಟ. ಅದರಲ್ಲಿ 'ಜುವನಿತಾ' ಕುಳಿತಿದ್ದಳು! ಸುಮಾರು 13-15 ವರ್ಷದ ಬಾಲೆಯವಳು. ಚಕ್ಕಳಮಕ್ಕಳ ಹಾಕಿಕೊಂಡು ಕುಳಿತಲ್ಲೇ ನಿದ್ದೆಹೋಗಿದ್ದಳು. ಅಲ್ಲಲ್ಲ. ನಿದ್ದೆ ಮಾಡುವಂತೆ ಕಾಣಿಸುತ್ತಿದ್ದಳಷ್ಟೆ. ವೈಜ್ಞಾನಿಕ ಲೋಕ ಆಕೆಯನ್ನು ಪ್ರೀತಿಯಿಂದ ಜುವನಿತಾ ಎಂದು ಕರೆಯುತ್ತದೆ. ಜುವನಿತಾ ಅಂದರೆ ಬೆಟ್ಟದ ಹುಡುಗಿ! ಸತ್ತಾಗ ಆಕೆಗೆ 15 ವರ್ಷವಿರಬಹುದು ಎಂಬ ರೀಯ್ನಾರ್ಡ್‌ನ ಕ್ಯಾಲುಕುಲೇಶನ್ ಸರಿಯಾಗಿಯೇ ಇತ್ತು. ಆದರೆ ಆಕೆ ಸತ್ತು ಅದಾಗಲೇ 500 ವರ್ಷವಾಗಿದೆ ಎಂಬುದು ತಿಳಿದಾಗಆತನಿಗಷ್ಟೇ ಅಲ್ಲ, ಖುದ್ದು ವಿಜ್ಞಾನಿಗಳಿಗೂ ಆಶ್ಚರ್ಯವಾಗಿತ್ತು. ಡ್ರೆಸ್ ಒಂದಿಷ್ಟೂ ಹರಿದಿರಲಿಲ್ಲ. ತಲೆಗೂದಲು ಒಂದಿಷ್ಟೂ ಕೆದರಿರಲಿಲ್ಲ. ಈಜಿಪ್ತ್‌ನ ಮಮ್ಮಿಗಳಂತೆ ಕೃತಕವಾಗಿ ಆಕೆಯ ದೇಹವನ್ನು ಸಂರಕ್ಷಿಸಿಡಲಾಗಿರಲಿಲ್ಲ, ಬದಲಾಗಿ ನೈಸರ್ಗಿಕವಾಗಿಯೇ ಆಕೆಯನ್ನು ಸಂರಕ್ಷಿಸಿಕೊಂಡು ಬಂದಿತ್ತು ಹಿಮಪರ್ವತ. ಮೊದಲ ಬಾರಿಗೆ ಅಳೆದಾಗ ಆಕೆಯ ತೂಕ 40.82 ಕೆ.ಜಿ.ಯಷ್ಟಿತ್ತು! ಒಂದಿಷ್ಟೂ ಹಾಳಾಗದ ಆಕೆಯ ಚರ್ಮ, ಅಂಗಗಳು, ಅಂಗಾಶಗಳು, ರಕ್ತ, ಕೂದಲು, ಉದರದಲ್ಲಿನ ಪದಾರ್ಥಗಳ ಪರೀಕ್ಷೆ ಮಾಡಿದ ವಿಜ್ಞಾನಿಗಳಿಗೆ, 'ಇಂಕಾ ನಾಗರಿಕತೆ'ಯ ಚಿತ್ರವೊಂದು ಸ್ಪಷ್ಟವಾಗಿ ಎದುರಾಯಿತು. ಇಂಕಾ ಜನರು ತಮ್ಮ ಮಕ್ಕಳನ್ನು ದೇವಲೋಕಕ್ಕೆ (ದೇವರಿಗೆ) ತುಸು ಹತ್ತಿರವಿರುವ ಪರ್ವತಕ್ಕೆ ಕರೆದೊಯ್ದು ಬಲಿಕೊಡುತ್ತಿದ್ದರು. ದೇವರನ್ನು ಮೆಚ್ಚಿಸಲು ಅಥವಾ ಯಾವುದೋ ರೋಗ ಪರಿಹಾರಕ್ಕಲ್ಲ. ಬದಲಾಗಿ ಆ ಮಕ್ಕಳು ದೇವರ ಬಳಿ ಹೋಗಿ ಶಾಶ್ವತವಾಗಿ ಸುಖವಾಗಿರುತ್ತಾರೆ ಎನ್ನುವ ಕಾರಣಕ್ಕೆ. ಜುವನಿತಾಳನ್ನೂ ಅದೇ ಕಾರಣಕ್ಕೆ ಬಲಿಕೊಡಲಾಯಿತು. ದೇವರ ಬಳಿ ಕಳಿಸುವ ದಿನ ಆಕೆಯನ್ನು ಸಿಂಗರಿಸಿದ ಮನೆಯವರು, ಆಕೆಗೆ ಹೊಟ್ಟೆತುಂಬಾ ತರಕಾರಿ, ಹಣ್ಣು ತಿನ್ನಿಸಿದ್ದರು. ಆಕೆ ಮತ್ತು ಇನ್ನೂ ಎರಡು ಮಕ್ಕಳನ್ನು ಪರ್ವತಕ್ಕೆ ಕರೆದೊಯ್ದ ಪೂಜಾರಿಯೊಬ್ಬ, ಸಾಯುವಾಗ ನೋವಾಗದಿರಲಿ ಎಂದು ಮೂವರಿಗೂ ಅಫೀಮಿನಂಥ ಮಾದಕ ಪದಾರ್ಥವೊಂದನ್ನು ತಿನ್ನಿಸಿದ್ದ. ಜುವನಿತಾ ಮೆಲ್ಲಗೆ ನಿದ್ದೆಗೆ ಜಾರಿದಾಗ. ಸಲಾಕೆಯೊಂದರಿಂದ ಆಕೆಯ ತಲೆಗೆ ಬಲವಾಗಿ ಹೊಡೆದ! - ರಾಘವೇಂದ್ರ ಆಚಾರ್ಯ