ಇಸುಜು ಅಡ್ಡಕಸುಬು ಭಾರತೀಯ ಮಾರುಕಟ್ಟೆಗೆ ಇತ್ತೀಚೆಗಷ್ಟೇ ಬಸ್ ಮತ್ತು ಎಸ್‌ಯುವಿಗಳನ್ನು ಮಾರುಕಟ್ಟೆಗೆ ಬಿಟ್ಟು ಸುದ್ದಿ ಮಾಡಿದ್ದ ಇಸುಜು ಕಂಪನಿ ಈಗ ಡಿ-ಮ್ಯಾಕ್ಸ್ ಹೆಸರಿನ ಪಿಕ್‌ಅಪ್ ಟ್ರಕ್ ಬಿಡುಗಡೆ ಮಾಡಿದೆ. ಈ ವಾಹನ 2 ಕ್ಯಾಬಿನ್ ಮತ್ತು 2 ಡೆಕ್ ಮಾದರಿಯಲ್ಲಿ ಲಭ್ಯವಿದೆ. ಡಿ-ಮ್ಯಾಕ್ಸ್ ಸಿಂಗಲ್ ಕ್ಯಾಬಿನ್ ಬೆಲೆ 5.99 ಲಕ್ಷ (ಎಕ್ಸ್ ಶೋರೂಂ ಬೆಂಗಳೂರು), ಡಿ-ಮ್ಯಾಕ್ಸ್ ಸ್ಪೇಸ್ ಕ್ಯಾಬಿನ್ ಬೆಲೆ 6.19 ಲಕ್ಷ, ಆರ್ಚ್‌ಡ್ ಮಾದರಿಯ ಬೆಲೆ 7.09 ಲಕ್ಷ. ಈ ವಾಹನ 2499 ಸಿಸಿ ಶಕ್ತಿಯ 4 ಸಿಲೆಂಡರ್‌ನ ಟರ್ಬೋಚಾರ್ಜ್ ಡೀಸೆಲ್ ಎಂಜಿನ್ ಹೊಂದಿದ್ದು, 5 ಸ್ಪೀಡ್ ಮ್ಯಾನುವಲ್ ಗೇರ್ ಹೊಂದಿದೆ. ಚಾಲಕರಿಗೆ ಮುದನೀಡುವಂತಹ ಆಂತರಿಕ ವಿನ್ಯಾಸ ಹೊಂದಿದೆ ಎಂದು ಕಂಪನಿ ಹೇಳಿದೆ. ಆಸನಗಳನ್ನು ವಿಶೇಷವಾಗಿ ದೀರ್ಘ ಪ್ರಯಾಣಕ್ಕೆ ಅನುಕೂಲವಾಗುವಂತೆ ನಿರ್ಮಿಸಲಾಗಿದೆ. ಪವರ್ ಸ್ಟೇರಿಂಗ್, ಸೆಂಟಲ್ ಲಾಕ್, ಎಸಿ ಮತ್ತು ಹೀಟರ್ ಸೌಲಭ್ಯವೂ ಇದೆ. ಆಲ್ಪೈನ್ ಬಿಳಿ, ಸ್ಟರ್ಲಿಂಗ್ ಮೆಟಾಲಿಕ್ ಸಿಲ್ವರ್ ಮತ್ತು ನಾಟಿಲಸ್ ನೀಲಿ ಬಣ್ಣದಲ್ಲಿ ಡಿ-ಮ್ಯಾಕ್ಸ್ ಲಭ್ಯವಿದೆ. ಆದರೆ ವಿದೇಶಗಳಲ್ಲಿ ಲಭ್ಯವಿರುವ ಡಿಮ್ಯಾಕ್ಸ್‌ಗೂ ಭಾರತದಲ್ಲಿ ಬಿಡುಗಡೆ ಮಾಡಿರುವ ವಾಹನಕ್ಕೂ ಭಾರೀ ವ್ಯತ್ಯಾಸವಿದೆ. ಭಾರತಕ್ಕೆಂದು ತಯಾರಿಸಿದ ಡಿಮ್ಯಾಕ್ಸ್‌ನಲ್ಲಿ ಗುಣಮಟ್ಟ ಕಡಿತ ಮಾಡಿರುವುದು ಕಾಣುತ್ತಿದೆ. ಇದರಿಂದಾಗಿಯೇ ವಾಹನ ಅದರ ಆಕರ್ಷಕ ವಿನ್ಯಾಸವನ್ನೂ ಕೊಂಚಮಟ್ಟಿಗೆ ಕಳೆದುಕೊಂಡಿದೆ. ಕೆಲವು ತಿಂಗಳ ಹಿಂದಷ್ಟೇ ಕಂಪನಿ ಎಂಯು-7 ಎಂಬ ಎಸ್‌ಯುವಿ ಮಾರುಕಟ್ಟೆಗೆ ಬಿಡುಗಡೆ ಮಾಡಿತ್ತು. ಆದರೆ ಗ್ರಾಹಕರನ್ನು ಸೆಳೆಯುವಲ್ಲಿ ಸಂಪೂರ್ಣ ವಿಫಲವಾಗಿದೆ. ಎಂಯು-7 ಕಾರು ಬೆಲೆಗೆ ತಕ್ಕ ಪ್ರತಿಫಲವಿಲ್ಲ ಎಂದೇ ಗ್ರಾಹಕರು ಭಾವಿಸುವಂತಾಗಿದೆ. ಹೆಚ್ಚು ಕಡಿಮೆ 5 ಮೀಟರ್ ಉದ್ದವಿರುವ ಈ ವಾಹನದಲ್ಲಿ ಎಕರೆಗಟ್ಟಲೆ ಜಾಗವಿದೆ. ಆದರೆ ಪ್ರಯಾಣದ ಸುಖದ ದೃಷ್ಟಿಯಿಂದ ಉತ್ತಮವಾಗಿಲ್ಲ ಎಂದೇ ಪರೀಕ್ಷೆಗಳು ಹೇಳುತ್ತಿವೆ. ಅದಕ್ಕಿಂತ ಹೆಚ್ಚಾಗಿ ಬಾಹ್ಯ ಮತ್ತು ಆಂತರಿಕ ವಿನ್ಯಾಸದಲ್ಲಿ ಭಾರತೀಯ ಗ್ರಾಹಕರನ್ನು ಸೆಳೆಯಲು ಎಂಯು7 ವಿಫಲವಾಗಿದೆ ಎಂದೇ ಹೇಳಬಹುದು. ಇಸುಜು ಕಂಪನಿ ಎಂಜಿನ್‌ಗಳು ಆಗಲೇ ಅಂಬಾಸಿಡರ್ ಸೇರಿದಂತೆ ವಿವಿಧ ವಾಹನಗಳಲ್ಲಿ ಬಳಕೆಯಾಗುತ್ತಿದ್ದವು. ಎಂಜಿನ್ ದೃಷ್ಟಿಯಿಂದ ಎಂಯು7 ಉತ್ತಮವಾಗಿದೆ. ಆದರೆ ಎಂಜಿನ್ ಶಬ್ದ ಜಾಸ್ತಿ. ಎಂಜಿನ್ನನ್ನು ಪರಿಷ್ಕರಿಸುವಲ್ಲಿ ಕಂಪನಿ ಎಡವಿದೆ.