ವಿಶ್ವದ ಮೊದಲ ಬಲೂನ್ ಹಾಲ್ ಜಪಾನ್‌ನಲ್ಲಿ ಸ್ಥಾಪನೆ ಭೂಕಂಪ ಹಾಗೂ ಸುನಾಮಿಯಿಂದ ಸಂತ್ರಸ್ತ ಜಪಾನ್‌ನ ಈಶಾನ್ಯ ಕರಾವಳಿಯಲ್ಲಿ ವಿಶ್ವದ ಮೊದಲ ಬಲೂನ್ ಹಾಲ್ .. ನವದೆಹಲಿ: ಭೂಕಂಪ ಹಾಗೂ ಸುನಾಮಿಯಿಂದ ಸಂತ್ರಸ್ತ ಜಪಾನ್‌ನ ಈಶಾನ್ಯ ಕರಾವಳಿಯಲ್ಲಿ ವಿಶ್ವದ ಮೊದಲ ಬಲೂನ್ ಹಾಲ್ ಅನ್ನು ಅಳವಡಿಸಲಾಗಿದೆ. ಬೇಕೆಂದರಲ್ಲಿಗೆ ವರ್ಗಾಯಿಸಬಹುದಾದ ಈ ಬಲೂನ್ ಮಾದರಿಯ ಆರ್ಕ್‌ನೋವಾ ಅನ್ನು ಭಾರತೀಯ ಮೂಲದ ಬ್ರಿಟನ್ ಶಿಲ್ಪಿ ಅನೀಶ್ ಕಪೂರ್ ಮತ್ತು ಜಪಾನ್‌ನ ವಾಸ್ತುಶಿಲ್ಪಿ ಅರಾಟ ಇಸೋಝಕೈ ನಿರ್ಮಿಸಿದ್ದಾರೆ. ಸದ್ಯ ಈ ಬಲೂನ್ ಹಾಲ್ ಅನ್ನು ಮತ್ಸುಷಿಮಾ ನಗರದ ಪಾರ್ಕ್‌ನಲ್ಲಿ ಸ್ಥಾಪಿಸಲಾಗಿದೆ. ಈ ಹಾಲ್‌ನಲ್ಲಿ ಅ.14ರಂದು ನಾಟಕ ಹಾಗೂ ಸಂಗೀತ ಕಾರ್ಯಕ್ರಮಗಳು ನಡೆಯಲಿವೆ. 2011ರ ಮಾರ್ಚ್‌ನಲ್ಲಿ ಜಪಾನ್‌ನ ಈಶಾನ್ಯ ಕರಾವಳಿಯಲ್ಲಿ ಸಂಭವಿಸಿದ 9.0 ತೀವ್ರತೆಯ ಭೂಕಂಪ ಹಾಗೂ ಬಾರಿ ಸುನಾಮಿಯಿಂದಾಗಿ 19 ಸಾವಿರ ಮಂದಿ ಮೃತಪಟ್ಟಿದ್ದರು. ಈ ವೇಳೆ ಲಕ್ಷಾಂತರ ಮಂದಿ ಮನೆ ಮಠ ಕಳೆದುಕೊಂಡಿದ್ದರು. ಫುಕುಶಿಮಾ ಅಣು ಸ್ಥಾವರ ದುರಂತ ಕೂಡ ಇದೇ ಅವಧಿಯಲ್ಲಿ ಸಂಭವಿಸಿತ್ತು. ಯಾರೀ ಅನೀಶ್ ಕಪೂರ್? ಸರ್ ಅನೀಶ್ ಕಪೂರ್ ಅವರು ಹುಟ್ಟಿದ್ದು ಮುಂಬೈನಲ್ಲಿ. 1970ರಿಂದಲೇ ಅನೀಶ್ ಲಂಡನ್‌ನಲ್ಲೇ ನೆಲೆಸಿದ್ದಾರೆ. ಹಾರ್ನ್‌ಸೆ ಕಾಲೇಜ್ ಆಫ್ ಆರ್ಟ್ಸ್ ಮತ್ತು ಚೆಲ್ಸಿಯಾ ಸ್ಕೂಲ್ ಆಫ್ ಆರ್ಟ್ ಆ್ಯಂಡ್ ಡಿಸೈನ್‌ನಲ್ಲಿ ಶಿಕ್ಷಣ ಪಡೆದಿದ್ದಾರೆ. ವಿಷುವಲ್ ಆರ್ಟ್ಸ್ ಕ್ಷೇತ್ರಕ್ಕೆ ಸಲ್ಲಿಸಿದ ಸೇವೆಗಾಗಿ ಅನೀಶ್ ಕಪೂರ್ ಅವರಿಗೆ 2013ರಲ್ಲಿ ನೈಟ್‌ಹುಡ್ ಗೌರವ ನೀಡಲಾಗಿದೆ. ವಿಶೇಷ ಏನು? -ಈ ಬಲೂನ್ ಅನ್ನು ಪಾಲಿಸ್ಟರ್ ಬಟ್ಟೆಯಿಂದ ತಯಾರಿಸಲಾಗಿದೆ. - ಈ ಬಲೂನ್‌ಗೆ ಪೂರ್ಣಗಾಳಿ ತುಂಬಿದರೆ 18 ಮೀಟರ್ ಎತ್ತರ, 35 ಮೀಟರ್ ಅಗಲದ ಆರ್ಕ್‌ನೋವಾ ಸಿದ್ಧವಾಗುತ್ತದೆ. ಇಷ್ಟು ಜಾಗದಲ್ಲಿ 500 ಮಂದಿ ಅತಿಥಿಗಳು ಕೂರಬಹುದಾಗಿದೆ.