ಬಂಗಾರಕ್ಕೂ ಗುನ್ನ! ಭೂಮಿ ಮೇಲೆ ಬಂಗಾರ ಎಷ್ಟಿದ್ದರೂ ಸಾಲದು ಬಿಡಿ. ಎಲ್ಲರಿಗೂ ಬಂಗಾರದ ಮೇಲೆ ಭಾರಿ ಆಸೆ. ಆದರೆ ಈ ಕ್ಷುದ್ರಗ್ರಹಗಳಲ್ಲಿ ಅಪಾರ ಪ್ರಮಾಣದ ಬಂಗಾರ ಇದೆಯಂತೆ. ಇದನ್ನು ತರಲಿಕ್ಕೆ ಎಂದೇ ಸಂಶೋಧಕರು ಭಾರಿ ಸಂಶೋಧನೆಯನ್ನೇ ನಡೆಸಿದ್ದಾರೆ. ಒಂದಲ್ಲ ಒಂದು ದಿನ ಭೂಮಿಯಲ್ಲಿನ ಬಂಗಾರ ಖಾಲಿಯಾಗಿಬಿಡಬಹುದು. ಅಂಥ ದಿನ ಈ ಬಂಗಾರ ಬಳಕೆಗೆ ಬರುತ್ತೆ ಎಂಬುದು ಸಂಶೋಧಕರ ವಾದವಿರಬಹುದು. ಕ್ಷುದ್ರಗ್ರಹ ಗಣಿಗಾರಿಕೆ ನಡೆಸಲೆಂದೇ ಹುಟ್ಟಿಕೊಂಡಿರುವ ಡಿಎಸ್ಐ ಮತ್ತು ಪ್ಲಾನೆಟರಿ ರಿಸೋರ್ಸಸ್ ಎಂಬ ಸಂಸ್ಥೆಗಳು ಈ ಬಗ್ಗೆ ಸಂಶೋಧನೆಗೆ ಒತ್ತು ನೀಡಿವೆ. ಇವರ ಪ್ರಕಾರ ಕ್ಷುದ್ರಗ್ರಹಗಳಲ್ಲಿ ಭಾರಿ ಪ್ರಮಾಣದ ಬಂಗಾರದ ನಿಕ್ಷೇಪವಿದೆಯಂತೆ. ಹೀಗಾಗಿ ಅವರು ಇದನ್ನು ತರಲು ಬೇಕಾದ ಅಗತ್ಯ ಸೌಲಭ್ಯ, ಸಲಕರಣೆಗಳನ್ನು ಹುಡುಕುತ್ತಿದ್ದಾರೆ. ಅವರು ಇದಕ್ಕಾಗಿಯೇ ಎಲ್ಇಓ ಎಂಬ ಕಡಿಮೆ ಬೆಲೆಯ ಟೆಲಿಸ್ಕೋಪ್ ಅನ್ನು ಸಂಶೋಧಿಸಿದ್ದಾರೆ. ಕ್ಷುದ್ರಗ್ರಹಗಳು ಭೂಮಿ ಮತ್ತು ಚಂದ್ರನ ನಡುವೆ ಬಂದಾಗ ಅವುಗಳ ಒಳಹೊಕ್ಕು ಬಂಗಾರ ತೆಗೆಯುವ ಚಿಂತನೆ ಅವರದ್ದು. ಆದರೆ ಇದು ಹೇಗೆ ಎಂಬುದು ಮುಂದಷ್ಟೇ ಗೊತ್ತಾಗಬೇಕು. ಕುತೂಹಲ ಕಡಿಮೆಯಾಗಿಲ್ಲ ಅಂಗಾರಕನ ಅಂಗಳದಲ್ಲಿರುವ ಕ್ಯೂರಿಯಾಸಿಟಿ ನೌಕೆ ಇನ್ನೂ ಅಂಗಳ ಕೊರೆಯುವ ಕೆಲಸ ಆರಂಭಿಸಿಲ್ಲ. ನಾಸಾ ವಿಜ್ಞಾನಿಗಳ ಪ್ರಕಾರ ಅದು ಇನ್ನಷ್ಟೇ ಈ ಕೆಲಸಕ್ಕೆ ಮುಂದಾಗಬೇಕು. ಇದು ಆರಂಭವಾದ ಬಳಿಕವಷ್ಟೇ ಅಲ್ಲಿ ನೀರಿದೆಯೋ ಅಥವಾ ಜೀವಿಗಳೇನಾದರೂ ಇವೆಯೇ ಎಂಬ ಬಗ್ಗೆ ಗೊತ್ತಾಗುತ್ತದೆ ಎಂಬುದು ವಿಜ್ಞಾನಿಗಳ ಅಂಬೋಣ. ಸೈಕಲ್ ತುಳೀರಿ! ಈ ಸೈಕಲ್ ಹೊಡೆಯೋದು ಯಾವಾಗಿಂದ ಆರಂಭವಾಯ್ತು ಎಂಬುದು ನಿಮಗೇನಾದರೂ ಗೊತ್ತಾ? ಬೈಸಿಕಲ್ ಹಿಂದೆ ಬಹುದೊಡ್ಡ ಕಥೆಯೇ ಇದೆ ಬಿಡಿ. 1791ರಲ್ಲಿ ಬೈಸಿಕಲ್ ಕಂಡು ಹಿಡಿಯಲಾಗಿತ್ತು. ಇದಕ್ಕಿದ್ದಿದ್ದು ಎರಡು ಗಾಲಿ, ಆದ್ರೆ ಬೇಕಾದ ಪೆಡಲ್ ಇರಲೇ ಇಲ್ಲ! ಇದನ್ನು ಕಂಡು ಹಿಡಿದವರು ಫ್ರಾನ್ಸ್ನ ಕಾಮ್ಟೆ ಮೆಡೆ ಡೆ ಸಿರ್ವಾಕ್ ಎಂಬಾತ. ಇದಕ್ಕೆ ಎತ್ತರದಲ್ಲಿ ಸೀಟು ಇದ್ದಿದ್ದರಿಂದ ಕಷ್ಟವಾಗುತ್ತಿತ್ತು. ಅಲ್ಲದೆ ಎರಡು ಕಾಲುಗಳನ್ನು ನೆಲಕ್ಕೆ ತಾಗಿಸಿ ಮುಂದಕ್ಕೆ ತೆವಳಿಸಿಕೊಂಡು ಹೋಗಬೇಕಾಗುತ್ತಿತ್ತು. 1817ರಲ್ಲಿ ಜರ್ಮನಿಯ ಬ್ಯಾರೋನ್ ಕಾರ್ಲ್ ವಾನ್ ಡ್ರೈಸ್ ಎಂಬಾತ ಸುಧಾರಿತ ಬೈಸಿಕಲ್ ಕಂಡು ಹಿಡಿದವರು. ಇದರಲ್ಲೂ ಕೆಲವೊಂದು ಲೋಪದೋಷಗಳಿದ್ದುದರಿಂದ ಅಷ್ಟೇನೂ ಜನಪ್ರಿಯವಾಗಲಿಲ್ಲ. 1870ರಲ್ಲಿ ಸಂಪೂರ್ಣವಾಗಿ ಮೆಟಲ್ನಿಂದ ಸೈಕಲ್ ತಯಾರಿಸಲಾಗಿತ್ತು. ಆದರೆ ಇದರಲ್ಲೂ ಲೋಪಗಳಿದ್ದವು. 1880ರಲ್ಲಿ ಬ್ರಿಟನ್ನ ಜೇಮ್ಸ್ ಎಂಬಾತ ಕಂಡು ಹಿಡಿದ ಸೈಕಲ್ ಸಂಪೂರ್ಣವಾಗಿ ಸುಧಾರಿತವಾಗಿತ್ತು. ಎರಡೂ ಗಾಲಿಗಳು ಸಮಾನವಾಗಿದ್ದವು. ಪೆಡಲ್, ಸರಿಯಾದ ಪ್ರಮಾಣದಲ್ಲಿ ಸೀಟು ಅಳವಡಿಸಲಾಗಿತ್ತು.