ಗಾಳಿ ಸಂದೇಶ! ಸಂದೇಶ... ಮೇಘ ಸಂದೇಶ... ಪ್ರೇಮ ಸಂದೇಶ... 1970ರ ದಶಕದಲ್ಲೇ ಕನ್ನಡದ ಖ್ಯಾತ ಗಾಯಕಿ ಸುಶೀಲಾ ಅವರು ಈ ಹಾಡನ್ನು ಹೇಳಿದ್ದರು. ಮೋಡಗಳ ಮೂಲಕವೇ ಪ್ರೇಮ ಸಂದೇಶಗಳನ್ನು ಕಳಿಸುವ ಕಲ್ಪನೆ ಮಾಡಿದ್ದರು. ಈಗ ಜರ್ಮನಿಯ ವಿಜ್ಞಾನಿಯೊಬ್ಬರು ಗಾಳಿಯಲ್ಲಿಯೇ ಸಂದೇಶಗಳನ್ನು ಬರೆದು ಕಳುಹಿಸುವ ತಂತ್ರಜ್ಞಾನ ಅಭಿವೃದ್ಧಿಪಡಿಸಿದ್ದಾರೆ. ಗಾಳಿಯಲ್ಲಿ ನೀವು ಗೀಚಿದ ಅಕ್ಷರಗಳು ಇ-ಮೇಲ್ ಅಥವಾ ಚಾಟ್ ಬಾಕ್ಸ್‌ನಲ್ಲಿನ ಸಂದೇಶವಾಗಿ ಮಾರ್ಪಡಬಲ್ಲದು. ಈ ತಂತ್ರಾಂಶವು ಸುಮಾರು 8 ಸಾವಿರ ಅಕ್ಷರಗಳನ್ನು ಗುರುತಿಸಬಲ್ಲದು. ಹಾಗಾಗಿ ಇನ್ನು ಕಲ್ಪನೆಗಾಗಿಯೂ ಗಾಳಿಯಲ್ಲಿಯೂ ಗೀಚುವಂತಿಲ್ಲ! ಜರ್ಮನಿಯ ಕ್ರಿಸ್ಟೋಫ್ ಆಮ್ ಎಂಬ ವಿಜ್ಞಾನಿ ಕಂಡುಹಿಡಿದಿರುವ ಗ್ಲೌಸ್ ಟಚ್ ಸ್ಕ್ರೀನ್ ಯುಗದಿಂದ 'ಏರ್ ಸ್ಕ್ರೀನ್‌' ಯುಗಕ್ಕೆ ಕೊಂಡೊಯ್ಯುವ ಸೂಚನೆ ನೀಡಿದೆ. ಗ್ಲೌಸ್‌ನಲ್ಲಿನ ಸೆನ್ಸಾರ್ ತಂತ್ರಜ್ಞಾನವು ಈ ಅಕ್ಷರಗಳನ್ನು ಗುರುತು ಹಿಡಿಯಲಿದೆ. ಗ್ಲೌಸ್ ಧರಿಸಿದ ವ್ಯಕ್ತಿಯು ಗಾಳಿಯಲ್ಲಿ ಏನಾದರು ಬರೆದರೆ ಅದು ಕೋಡಿಂಗ್ ತಂತ್ರಜ್ಞಾನದ ಮೂಲಕ ಡಿವೈಸ್‌ಗೆ ಬರುತ್ತದೆ. ಅಲ್ಲಿ ಬಳಕೆದಾರರು ಸೂಚಿಸಿದ ವಾಹಕದ ಮೂಲಕ ಸಂದೇಶ ರವಾನೆಯಾಗುತ್ತದೆ. ಈ ತಂತ್ರಜ್ಞಾನವು ಸದ್ಯಕ್ಕೆ ಹ್ಯಾಂಡ್ ಗ್ಲೌಸ್‌ಗೆ ಸೀಮಿತವಾಗಿದೆ. ಇದನ್ನು ಸ್ಮಾರ್ಟ್‌ಫೋನ್‌ನಲ್ಲಿಯೂ ಬಳಸುವ ಬಗ್ಗೆ ಸಂಶೋಧನೆ ನಡೆಸಲಾಗುತ್ತಿದೆ. ಸ್ಮಾರ್ಟ್‌ಫೋನ್‌ನಲ್ಲಿ ಇದೇ ಸೆನ್ಸಾರ್ ತಂತ್ರಜ್ಞಾನ ಬಳಸಿ ಅಭಿವೃದ್ಧಿಪಡಿಸಲಾಗುತ್ತಿದೆ. ಆದರೆ ಸ್ಮಾರ್ಟ್‌ಫೋನ್ ಡಿವೈಸ್ ಸಂಖ್ಯೆ ಹೆಚ್ಚಾದಾಗ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬ ಬಗ್ಗೆ ವಿಜ್ಞಾನಿಗಳು ತಲೆಕೆಡಿಸಿಕೊಂಡಿದ್ದಾರೆ.