ಬರೊಬ್ಬರಿ ಸಾವಿರ ಪ್ರೊಸೆಸರ್‌ ನ ಮೈಕ್ರೋಚಿಪ್ ಆವಿಷ್ಕರಿಸಿದ ವಿಜ್ಞಾನಿಗಳು ಬರೊಬ್ಬರಿ ಒಂದು ಸಾವಿರ ಪ್ರೊಸೆಸರ್ ಗಳುಳ್ಳ ಜಗತ್ತಿನ ಮೊದಲ ಮೈಕ್ರೋ ಚಿಪ್ ಅನ್ನು ಅಮೆರಿಕದ ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ... ಲಾಸ್‌ ಏಂಜಲೀಸ್: ಬರೊಬ್ಬರಿ ಒಂದು ಸಾವಿರ ಪ್ರೊಸೆಸರ್ ಗಳುಳ್ಳ ಜಗತ್ತಿನ ಮೊದಲ ಮೈಕ್ರೋ ಚಿಪ್ ಅನ್ನು ಅಮೆರಿಕದ ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ. ಯುನಿವರ್ಸಿಟಿ ಆಫ್‌ ಕ್ಯಾಲಿಫೋರ್ನಿಯಾದ ವಿಜ್ಞಾನಿಗಳು ಈ ವಿಶೇಷ ಮೈಕ್ರೋ ಚಿಪ್ ಅನ್ನು ಅಭಿವೃದ್ಧಿ ಪಡಿಸಿದ್ದು, ಇದು ಪ್ರತೀ ಸೆಕೆಂಡಿಗೆ ಲಕ್ಷ ಕೋಟಿ ಸೂಚನೆಗಳನ್ನು ನಿರ್ವಹಿಸುವ ಸಾಮರ್ಥ್ಯ ಹೊಂದಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ‘ಕಿಲೊಕೋರ್’ ಚಿಪ್ ಎಂದು ಕರೆಯಲಾಗುವ ಈ ಚಿಪ್ ನಲ್ಲಿ 62.1 ಕೋಟಿ ಟ್ರಾನ್ಸಿಸ್ಟರ್‌ಗಳಿದ್ದು, ಆಧುನಿಕ ಲ್ಯಾಪ್‌ಟಾಪ್‌ಗಳಿಗಿಂತ 100 ಪಟ್ಟು ಹೆಚ್ಚು ವೇಗವಾಗಿ ಮತ್ತು ದಕ್ಷತೆಯಿಂದ ಸೂಚನೆಗಳನ್ನು ನಿರ್ವಹಿಸಬಲ್ಲವು ಎಂದು ಹೇಳಲಾಗುತ್ತಿದೆ. ಈ ವಿಶಿಷ್ಟ ಮೈಕ್ರೋ ಚಿಪ್ ಅಭಿವೃದ್ಧಿ ಪಡಿಸಿದ ತಂಡದ ಸದ್ಯಸ್ಯರಾದ ಬೆವೆನ್ ಬಾಸ್ ಅವರು ಹೇಳಿರುವಂತೆ, ಅತ್ಯಂತ ವೇಗವಾಗಿ ಕಾರ್ಯ ನಿರ್ವಹಿಸಬಲ್ಲ ಸಾಮರ್ಥ್ಯ ಹೊಂದಿದೆ. ಅಂತೆಯೇ ಸೆಕೆಂಡ್ ಗೆ ಲಕ್ಷ ಕೋಟಿ ಸೂಚನೆ ನಿರ್ವಹಿಸುವ ಚಿಪ್ ಇದಕ್ಕೇ ಕೇವಲ 0.7 ವ್ಯಾಟ್ ವಿದ್ಯುತ್ ಮಾತ್ರ ತೆಗೆದುಕೊಳ್ಳುತ್ತದೆ ಎಂದು ಅವರು ತಿಳಿಸಿದ್ದಾರೆ. ಅಂತೆಯೇ ಈ ವಿಶಿಷ್ಟ ಚಿಪ್ ವೈರ್ ಲೆಸ್ ಕೋಡಿಂಗ್ ಮತ್ತು ಡಿಕೋಡಿಂಗ್ ವ್ಯವಸ್ಥೆ ಹೊಂದಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಇಂತಹ ಚಿಪ್ ಗಳನ್ನು ಸಾಮಾನ್ಯವಾಗಿ ವೈಜ್ಞಾನಿಕ ಸಂಶೋಧನೆಗಳಿಗೆ ಮತ್ತು ವಾಣಿಜ್ಯಾತ್ಮಕ ಬಳಕೆ ಗೆ ಉಪಯೋಗಿಸಲಾಗುತ್ತಿದೆ.