ಬೆಳಕಿನ ಗಿಡ ಹೀಗೊಂದು ಬ್ರೈಟ್ ಐಡಿಯಾ... ಮುಂದೊಂದು ದಿನ ರಸ್ತೆ ಬದಿಯಲ್ಲಿ ದೀಪಗಳ ಬದಲಾಗಿ ಬೆಳಕುಕೊಡುವ ಮರಗಳನ್ನೇ ನೆಟ್ಟರೆ!!? ಹೇಗಿರುತ್ತೆ ಅಲ್ವಾ...? ಆ ಊಹೆ ನಿಜವಾಗುವ ದಿನಗಳು ಇನ್ನು ಜಾಸ್ತಿ ದೂರವಿಲ್ಲ. ಕ್ಯಾಲಿಫೋರ್ನಿಯಾದ ವಿಜ್ಞಾನಿಗಳು ಸಂಶೋಧನೆ ಮೂಲಕ ಇಂಥದ್ದೊಂದು ಅಚ್ಚರಿಯನ್ನು ಜಗತ್ತಿಗೆ ಪರಿಚಯಿಸಿದ್ದಾರೆ. ದೊಡ್ಡದಾಗಿ ಬೆಳೆಯುವಂಥ ಈ ಗಿಡಗಳನ್ನು ರಸ್ತೆ ಬದಿಯಲ್ಲಿ ನೆಟ್ಟು ಬೆಳಕನ್ನು ನೀಡುವಂಥ ವ್ಯವಸ್ಥೆಯನ್ನು ಮಾಡಬಹುದಂತೆ. ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದ ಸ್ಟ್ಯಾಮ್‌ಫೋರ್ಡ್ ಅವರ ನೇತೃತ್ವದ ತಂಡ ಈ ಸಂಶೋಧನೆ ನಡೆಸಿದೆ. ಕಗ್ಗತ್ತಲಲ್ಲಿ ಮಿರಿ ಮಿರಿ ಮಿಂಚುವ ಈ ಗಿಡಗಳು ಬಹಳಷ್ಟು ಬೆಳಕನ್ನು ನೀಡಬಲ್ಲವು ಎಂದು ಈ ತಂಡ ಹೇಳಿದೆ. ಇವರ ಈ ಸಂಶೋಧನೆಗೆ ಉತ್ತೇಜನ ಮಿಂಚುಹುಳುಗಳಂತೆ. ರಾತ್ರಿ ವೇಳೆ ಮಿಂಚುಹುಳುಗಳು ಬೆಳಕು ನೀಡುವುದನ್ನೇ ಸ್ಫೂರ್ತಿಯಾಗಿ ತೆಗೆದುಕೊಂಡಿರುವ ಇವರು, ಇದೇ ರೀತಿಯಲ್ಲೇ ಮರಗಳಿಂದ ಏಕೆ ಬೆಳಕನ್ನು ಬಯಸಬಾರದು ಎಂಬ ಆಶಾಭಾವದೊಂದಿಗೆ ಸಂಶೋಧನೆಗಿಳಿದರಂತೆ. ಈ ಗಿಡಗಳು ಬಯೋವುನ್ ಸೈನ್ಸ್‌ನಂತೆ ತಮ್ಮ ದೇಹದಿಂದಲೇ ನೈಸರ್ಗಿಕವಾಗಿ ಬೆಳಕನ್ನು ಉತ್ಪಾದಿಸಿ, ರಾತ್ರಿ ಬೆಳಕನ್ನು ಹೊರಸೂಸುತ್ತವೆ. ಈ ಬೆಳಕಿಗೆ ಕಾರಣ ಲುಸಿಫೆರಾಸ್ ಎಂಬ ಎಂಜಿಮೋಗಳು. ಈ ಎಂಜಿಮೋಗಳನ್ನು ಗಿಡಗಳ ದೇಹದೊಳಗೆ ಸೇರಿಸಿ ಬೆಳೆಸುವ ಮೂಲಕ ಹೀಗೆ ಬೆಳಕನ್ನು ಪಡೆಯಬಹುದಂತೆ. ಈ ಲುಸಿಫೆರಾಸ್ ಅನ್ನು ಲಿಕ್ವಿಡ್ ರೂಪದ ಆಗ್ರೋ ಬ್ಯಾಕ್ಟೀರಿಯಾಗಳನ್ನಾಗಿ ಮಾಡಿ ಗಿಡದೊಳಗೆ ಹಾಯಿಸಲಾಗುತ್ತದೆ. ಈ ಆಗ್ರೋ ಬ್ಯಾಕ್ಟೀರಿಯಾಗಳು ಲುಸಿಫೆರಾಸ್ ಅನ್ನು ಗಿಡದೊಳಗೆ ಸೇರಿಸಿ ಬೆಳೆಯುವಂತೆ ಮಾಡುತ್ತವೆ ಎಂದು ಈ ಸಂಶೋಧನೆ ಹೇಳಿದೆ. ಈಗಾಗಲೇ ಬೆಳಕನ್ನು ನೀಡುವ ಚಿಕ್ಕ ಗಿಡಗಳನ್ನು ರೂಪಿಸುವಲ್ಲಿ ಯಶಸ್ವಿಯಾಗಿರುವ ವಿಜ್ಞಾನಿಗಳು, ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದ ಮರಗಳನ್ನು ಬೆಳೆಸುವ ಗುರಿಹೊಂದಿದ್ದಾರೆ. ಆದರೆ, ಹೊಗೆಯಾಡುತ್ತಿರುವ ಪ್ರಶ್ನೆ ಅದಲ್ಲ... ಹಸಿರು ಹಸಿರಾಗಿರುವ ಮರಗಳನ್ನೇ ರಸ್ತೆ ಅಗಲೀಕರಣದ ನೆಪವೊಡ್ಡಿ ಕಡಿಯುತ್ತಿರುವ ನಾವು ಆ ಬೆಳಕಿನ ಗಿಡವನ್ನು ಉಳಿಸುತ್ತೇವಾ ಅಥವಾ ಬೆಳೆಸುತ್ತೇವಾ? - ಮಂಜುನಾಥ್ ಎಸ್.