ಮಕ್ಕಳ ಪತ್ತೆಗೆ ಕಿಝ್ ಆನ್ ಸಿನಿಮಾ, ಪಾರ್ಕು, ಜಾತ್ರೆ, ಜಾಲಿರೈಡು... ಹೀಗೆ ಮಕ್ಕಳು ಎಲ್ಲಿಗೆ ಹೋಗ್ತಾರೆ ಅನ್ನೋ ಸಣ್ಣಸೂಚನೆಯೂ ಇವತ್ತಿನ ಪೋಷಕರಿಗೆ ಸಿಗುವುದಿಲ್ಲ. ಆದರೆ ಇನ್ನು ಮುಂದೆ ಹಣವೊಂದಿದ್ದರೆ ಮಕ್ಕಳು ಎಲ್ಲಿ ಹೋದರು ಎನ್ನಿಸಿದ ತಕ್ಷಣ ನಿಮ್ಮ ಮೊಬೈಲ್ ತೆಗೆದು ನೋಡಬಹುದು! ಎಲ್‌ಜಿ ಕಂಪನಿ ಕೊರಿಯಾದಲ್ಲಿ ಕಿಝ್‌ಆನ್ ಎಂಬ ಬ್ಯಾಂಡ್ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಮೂಲತಃ ಇದು ಜಿಪಿಎಸ್ ಹೊಂದಿರುವ ಕೈಗೆ ಕಟ್ಟಿಕೊಳ್ಳುವಂಥ ಬ್ಯಾಂಡ್. ಇದನ್ನು ನಿಮ್ಮ ಮೊಬೈಲ್‌ಗೆ ಲಿಂಕ್ ಮಾಡಬಹುದು. ಇಷ್ಟು ಮಾಡಿಬಿಟ್ಟರೆ ಯಾವುದೇ ವೇಳೆ ಮಕ್ಕಳು ಎಲ್ಲಿದ್ದಾರೆಂಬುದನ್ನು ತಕ್ಷಣ ನಿಮ್ಮ ಮೊಬೈಲ್‌ನಲ್ಲಿ ತಿಳಿಯಬಹುದು. ಮಕ್ಕಳ ಶಾಲಾಕಾಲೇಜಿನ ಲೊಕೇಶನ್ ಅನ್ನು ಇದರಲ್ಲಿ ಅಳವಡಿಸಿ, ಸಮಯವನ್ನೂ ನಿಗದಿಪಡಿಸಿದರೆ, ನಿಗದಿತ ಸಮಯದಲ್ಲಿ ಮಕ್ಕಳು ಆ ಸ್ಥಳದಲ್ಲಿ ಇಲ್ಲದಿದ್ದರೂ ಈ ಬ್ಯಾಂಡ್ ಪಾಲಕರನ್ನು ಎಚ್ಚರಿಸುತ್ತದೆ. ಈ ಬ್ಯಾಂಡ್ ಮೂಲಕ ಮಕ್ಕಳ ಜತೆ ಪಾಲಕರು ಮಾತನಾಡಲೂ ಅವಕಾಶವಿದೆ. ಮಕ್ಕಳು 10 ಸೆಕೆಂಡ್‌ನಲ್ಲಿ ಕರೆ ಸ್ವೀಕರಿಸದಿದ್ದಲ್ಲಿ ಅಥವಾ ಕರೆ ಸ್ವೀಕರಿಸಲು ಅವರಿಗೆ ತಿಳಿಯದಿದ್ದಾಗ ಈ ಬ್ಯಾಂಡ್ ತನ್ನಿಂದ ತಾನೇ ಕರೆ ಸ್ವೀಕರಿಸುತ್ತದೆ. ಅಂಥ ವೇಳೆ ಮಕ್ಕಳು ಎಲ್ಲಿದ್ದಾರೆ ಮತ್ತು ಅವರ ಸುತ್ತಲು ಏನು ನಡೆಯುತ್ತಿದೆ ಎಂಬ ಶಬ್ದವನ್ನು ಪಾಲಕರು ಕೇಳಿಸಿಕೊಳ್ಳಬಹುದು. ಈ ಮೂಲಕ ಮಕ್ಕಳು ಸುರಕ್ಷಿತವಾಗಿದ್ದಾರೋ ಇಲ್ಲವೋ ಎಂಬುದನ್ನು ತಿಳಿಯಬಹುದು. ಮಕ್ಕಳಿಗಾಗಿ ಈ ಬ್ಯಾಂಡ್ ತಯಾರಿಸಲಾಗಿದ್ದರೂ ಕೆಲವರು ಗಂಡನಿಗೂ ಅಳವಡಿಸುವ ಆಸಕ್ತಿ ತೋರಿಸಿದರೂ ಅಚ್ಚರಿಯಿಲ್ಲ. ಆದರೆ ಮಕ್ಕಳಾಗಲಿ ಗಂಡನಾಗಲಿ ಬ್ಯಾಂಡ್ ಹಾಕಿಕೊಳ್ಳದೇ ಮನೆಯಲ್ಲೇ ಬಿಟ್ಟುಹೋದರೆ ಅಥವಾ ಶಾಲಾಕಾಲೇಜಿನಲ್ಲೇ ಗೆಳಯನಿಗೆ ಕೊಟ್ಟು, ಕಚೇರಿಯಲ್ಲೇ ಇಟ್ಟು ಹೊರಹೋದರೆ ಮಾತ್ರ ಅವರು ಇರುವ ನಿಜವಾದ ಸ್ಥಳ ಪತ್ತೆ ಮಾಡುವುದು ಕಷ್ಟ!