ಮಂಗಳಯಾನಕ್ಕೆ 1 ತಿಂಗಳು; ನೆನಪಿಸಿದ ಗೂಗಲ್ ಡೂಡಲ್ ಮಂಗಳನ ಅಂಗಳದಲ್ಲಿ ಭಾರತದ ಮಾರ್ಸ್.. ನವದೆಹಲಿ: ಮಂಗಳನ ಅಂಗಳದಲ್ಲಿ ಭಾರತದ ಮಾರ್ಸ್ ಆರ್ಬಿಟರ್ ಮಿಷನ್ () ಇಂದಿಗೆ ಒಂದು ತಿಂಗಳು ಪೂರೈಸಿದೆ. ವಿಶೇಷವೇನೆಂದರೆ ಈ ದಿನವನ್ನು ಗೂಗಲ್ ವಿಶೇಷ ಡೂಡಲ್ ತಯಾರಿಸಿ ಸಂಭ್ರಮಿಸಿದೆ. ಸಾಮಾನ್ಯವಾಗಿ ವಿಶೇಷ ಸಂದರ್ಭಗಳನ್ನು, ವರ್ಷಾಚರಣೆಯನ್ನು ವಿಶಿಷ್ಟ ರೀತಿಯ ಡೂಡಲ್ ರಚಿಸಿ ಆಚರಿಸುವ ಗೂಗಲ್, ಈ ಬಾರಿ ಮಂಗಳನ ಅಂಗಳದಲ್ಲಿ ಒಂದು ತಿಂಗಳು ಪೂರೈಸಿರುವ 'ಮಾಮ್‌'ನ ಯಶಸ್ಸನ್ನು ಸಂಭ್ರಮಿಸಿದ್ದು ವಿಶೇಷವಾಗಿದೆ. ಜತೆಗೆ, ಗೂಗಲ್ ತಮ್ಮ ಡೂಡಲ್ ಮೂಲಕ ಎಲ್ಲರಿಗೂ ಮಾಮ್ ನ ಒಂದು ತಿಂಗಳ ಯಶಸ್ಸನ್ನು ನೆನಪಿಸುವಂತೆ ಮಾಡಿದೆ. ತಮ್ಮ ಮೊದಲ ಪ್ರಯತ್ನದಲ್ಲೇ ಮಾಮ್‌ನ್ನು ಮಂಗಳನ ಅಂಗಳಕ್ಕೆ ಕಳುಹಿಸುವ ಮೂಲಕ ಭಾರತ ಇತಿಹಾಸವನ್ನು ಸೃಷ್ಟಿಸಿದ್ದು, ಇದು ಭಾರತೀಯರ ಪಾಲಿಗೆ ಬಹುದೊಡ್ಡ ಸಾಧನೆ. 2014 ಸೆಪ್ಟೆಂಬರ್ 24 ರಂದು ಮಂಗಳಯಾನ ಮಂಗಳನ ಕಕ್ಷೆ ತಲುಪಿತ್ತು. ಅಲ್ಲಿ ತಲುಪಿದ ಮಾಮ್, ಮಂಗಳನ ಹಲವಾರು ಫೋಟೋಗಳನ್ನು ಕಳುಹಿಸಿದ್ದು ಮಾತ್ರವಲ್ಲದೆ ಮಂಗಳ ಗ್ರಹದ ಮೇಲ್ಮೈ ಬಗ್ಗೆ ಅಧ್ಯಯನವನ್ನು ನಡೆಸಿ ಮಾಹಿತಿ ನೀಡುತ್ತಾ ಬರುತ್ತಿದೆ.