ಗ್ರೀನ್ ವಿಚ್ ಮೀನ್ ಟೈಂ ಕಾಲವನ್ನು ಅಳೆಯಲು ಒಂದು ನಿಗದಿಯಾದ ಸರ್ವಮಾನ್ಯ ಮಾನವನ್ನು ನಿರ್ಧರಿಸಲು ಅನೇಕ ಶತಮಾನಗಳವರೆಗೂ ಸಾಧ್ಯವಾಗಿರಲಿಲ್ಲ. ಜಗತ್ತು ಅಭಿವೃದ್ಧಿ ಮಾರ್ಗದಲ್ಲಿ ತ್ವರಿತವಾಗಿ ಮುಂದುವರಿದಂತೆ, ರಾಷ್ಟ್ರಗಳನಡುವೆ ಸಂಬಂಧಗಳು ನಿಕಟವಾದಂತೆ, ಕಾಲದ ಮಾನದಲ್ಲಿ ಒಂದು ಸರ್ವಮಾನ್ಯ ಗಣನೆ ಅತ್ಯವಶ್ಯವಾಯಿತು. ಇಂತಹ ಒಂದು ಅವಶ್ಯಕತೆಯನ್ನು ಮನಗಂಡ ಅಮೆರಿಕ ಸಂಯುಕ್ತ ಸಂಸ್ಥಾನಗಳ ಕಾಂಗ್ರೆಸ್ 1884ರಲ್ಲಿ ಪ್ರಪಂಚದ ಎಲ್ಲಾ ಪ್ರಮುಖ ರಾಷ್ಟ್ರಗಳಿಗೂ ಒಂದು ಆಹ್ವಾನ ನೀಡಿತು. ಆ ವೇಳೆಗೆ ಬ್ರಿಟನ್ ಸುಸಜ್ಜಿತ ಸುಸಂಘಟಿತ ನೌಕಾಸೇನೆಯಿಂದಾಗಿ ಸಮುದ್ರಯಾನದಲ್ಲಿ ಅಗ್ರಮಾನ್ಯ ಸ್ಥಾನ ಪಡೆದಿದ್ದಿತು. ನೌಕಾ ಚಾಲನೆ ಮತ್ತು ನಿಯಂತ್ರಣಗಳ ಅಧ್ಯಯನಕ್ಕಾಗಿ 'ಗ್ರೀನ್‌ವಿಚ್‌' ಎಂಬ ಹಳ್ಳಿಯಲ್ಲಿ ಒಂದು ದೊಡ್ಡ ಸುಸಜ್ಜಿತ ಖಗೋಳ ವಿಜ್ಞಾನ ಮಂದಿರವನ್ನು ನಿರ್ಮಿಸಿದ್ದಿತು. ಅಮೆರಿಕದಲ್ಲಿ ನಡೆದ ನಾನಾ ರಾಷ್ಟ್ರಗಳ ಸಮ್ಮೇಳನದಲ್ಲಿ, ಇಂಗ್ಲೆಂಡಿನ ಸಲಹೆ ಮೇರೆಗೆ ಭೂಗೋಳದ ಮೇಲೆ ಉತ್ತರದಿಂದ ದಕ್ಷಿಣಾಭಿಮುಖವಾಗಿ ಗೋಳವನ್ನು 360 ಡಿಗ್ರಿ ಎಂದು ವಿಭಜಿಸಿ ಕಲ್ಪನಾ ರೇಖೆಗಳನ್ನು (ರೇಖಾಂಶಗಳನ್ನು) ಎಳೆಯಲಾಯಿತು. ಈ ರೇಖೆಗಳು ಗ್ರೀನ್‌ವಿಚ್ ಖಗೋಳ ವೀಕ್ಷಣಾಲಯದಿಂದ ಪ್ರಾರಂಭವಾಗಿ ಪೂರ್ವ ಪಶ್ಚಿಮಕ್ಕೆ 15 ಡಿಗ್ರಿ ಅಂತರದಲ್ಲಿವೆ. ಗ್ರೀನ್‌ವಿಚ್‌ನ ಮಧ್ಯಾಹ್ನ 12 ಗಂಟೆಯನ್ನು ಆಧಾರವಾಗಿಟ್ಟುಕೊಂಡು, ಅಲ್ಲಿಂದ ಪಶ್ಚಿಮಕ್ಕೆ ಹೋದಂತೆ ಪ್ರತಿ 15 ಡಿಗ್ರಿಗಳಿಗೆ 1 ಗಂಟೆ ಸಮಯವನ್ನು ಕಡಿಮೆ ಮಾಡಬೇಕೆಂದು, ಪೂರ್ವಕ್ಕೆ ಹೋದಂತೆ ಪ್ರತಿ 15 ಡಿಗ್ರಿ, 1 ಗಂಟೆಯನ್ನು ಹೆಚ್ಚುಮಾಡುತ್ತಾ ಹೋಗಬೇಕೆಂದೂ ನಿರ್ಧರಿಸಲಾಯಿತು. ಪೂರ್ವ, ಪಶ್ಚಿಮಕ್ಕೆ ಪ್ರತಿ 20 ಡಿಗ್ರಿಗೆ 1 ವಲಯ, 1 ಗೋಳ ಎಂದು ಭೂಪಟಗಳ ಮೇಲೆ ಗುರುತಿಸಲಾಯಿತು. ಕಾಲವನ್ನು ಲೆಕ್ಕಿಸುವ ಈ ವಿಧಾನವನ್ನು ಎಲ್ಲಾ ರಾಷ್ಟ್ರಗಳು ಒಪ್ಪಿಕೊಂಡವು. ಹೀಗೆ ಗ್ರೀನ್‌ವಿಚ್‌ನಿಂದ ಪ್ರಾರಂಭವಾಗಿ ರೇಖಾಂಶಗಳಿಗೆ ಸಂಬಂಧಿಸಿದಂತೆ, ಪೂರ್ವ, ಪಶ್ಚಿಮ ವಲಯಗಳು ಸಂಧಿಸುವ ಸ್ಥಳಕ್ಕೆ 'ಅಂತಾರಾಷ್ಟ್ರೀಯ ದಿನಾಂಕ ರೇಖೆ' ಎಂದು ಹೆಸರಿಸಲಾಯಿತು. ಗ್ರೀನ್‌ವಿಚ್‌ನಿಂದ ಪ್ರಾರಂಭಿಸಿ ಪಶ್ಚಿಮಾಭಿಮುಖವಾಗಿ ಪಯಣಿಸುವರು. ಈ ರೇಖಾಂಶಕ್ಕೆ ಬಂದಾಗ ತಮ್ಮ ಗಡಿಯಾರದಲ್ಲಿ 24 ಗಂಟೆಗಳಷ್ಟು ಹಿಂದೆ ತಿರುಗಿಸಿ ಒಂದು ದಿನವನ್ನು ಹಿಂದೆ ಹಾಕಬೇಕು. ಅದೇ ಪೂರ್ವಾಭಿಮುಖವಾಗಿ ಪ್ರಯಾಣ ಮಾಡುವವರು ತಮ್ಮ ಗಡಿಯಾರವನ್ನು 24 ತಾಸುಗಳನ್ನು ಮುಂದೂಡಿ ಒಂದು ದಿನವನ್ನು ಹೆಚ್ಚಿಸಬೇಕು. 1884ರಲ್ಲಿ ಇಡೀ ಜಗತ್ತಿನ ಕಾಲಗಣನೆಯ ಅಧಿಕೃತ ನಿರ್ದಿಷ್ಟ ಮಾನವು ಹೀಗೆ ಜಾರಿಗೆ ಬಂದಿತು. ಇದನ್ನೆ 'ಗ್ರೀನ್‌ವಿಚ್ ಮೀನ್ ಟೈಂ' ಎಂದು ಕರೆಯುತ್ತಾರೆ. -ಎಂ.ಎಸ್. ಚಂದ್ರಶೇಖರ ಅಯ್ಯರ್