ಮಾಪನ ಮ್ಯಾಪ್ ಅನಿರೀಕ್ಷಿತವಾಗಿ ನಡೆಯಬಹುದಾದ, ಎಲ್ಲರನ್ನೂ ಚಕಿತಗೊಳಿಸುವ ಪ್ರಕೃತಿ ವಿಕೋಪಗಳಲ್ಲಿ ಗಾಳಿಯೂ ಒಂದು. ಅನಿರೀಕ್ಷಿತವಾಗಿ ನಡೆಯಬಹುದಾದ, ನಮ್ಮೆಲ್ಲರನ್ನೂ ಚಕಿತಗೊಳಿಸುವ ಪ್ರಕೃತಿ ವಿಕೋಪಗಳಲ್ಲಿ ಗಾಳಿಯೂ ಒಂದು. ಇದು ಜೀವಸಂಕುಲಕ್ಕೆ ಪ್ರಮುಖ ಆಧಾರ ಅಲ್ಲದೆ ಮಾರಕ ಕೂಡ. ಗಾಳಿ ಮತ್ತು ಮಳೆಗೆ ನೇರ ನಂಟು. ಇಳೆಗೆ ಮಳೆಯನ್ನು ತರಬಲ್ಲ, ದೂರಕ್ಕೆ ಕೊಂಡೊಯ್ಯಬಲ್ಲ ಶಕ್ತಿ ಇದಕ್ಕಿದೆ. ಅಲ್ಲದೆ ತನ್ನ ಅಟ್ಟಹಾಸ ತೋರಿದರೆ ಭೂಮಿ ಮೇಲಿನ ಸಕಲ ಸಜೀವ ಮತ್ತು ನಿರ್ಜೀವಗಳನ್ನು ಬುಡಮೇಲು ಮಾಡುತ್ತದೆ. ಇಂಥ ವಿಕೋಪಗಳಿಂದ ಪಾರಾಗಲು, ಮುಂಚಿತವಾಗಿ ತಯಾರಿ ಮಾಡಿಕೊಳ್ಳಲು ಪೂರಕವಾಗುವಂತೆ ಇದರ ಬಗ್ಗೆ ಅಧ್ಯಯನ ಕೈಗೊಂಡು ಮುನ್ಸೂಚನೆ ನೀಡಬಲ್ಲ ಪರಿಣಿತರೇ ಪವನಶಾಸ್ತ್ರಜ್ಞರು. ಹಾಗಾದರೆ ಇಂಥ ಕಾರ್ಯವನ್ನು ಪವನಶಾಸ್ತ್ರಜ್ಞರು ಹೇಗೆ ಮಾಡುತ್ತಾರೆ ಎಂಬ ಪ್ರಶ್ನೆ ಬಾರದೆ ಇರದು. ಅದಕ್ಕೆ ತಜ್ಞರು ಕೆಲ ಸಾಧನಗಳನ್ನು ಕಂಡುಕೊಂಡಿದ್ದಾರೆ. ಅವುಗಳ ಆಧಾರದ ಮೇಲೆ ಕ್ಷಣಕ್ಷಣಕ್ಕೂ ಭೂಮಿಯ ಮೇಲ್ಮೈ ಮತ್ತು ಅಂತರಾಳದಲ್ಲಿನ ತಾಪಮಾನ, ಗಾಳಿಯ ವೇಗ, ಮಳೆ, ಸೌರ ವಿಕಿರಣ, ಹಿಮ, ಆರ್ದ್ರತೆಯ ಪ್ರಮಾಣ, ಬೆಳಕು ಮತ್ತು ಚಂಡಮಾರುತದ ಮಾಹಿತಿ ಪಡೆಯುತ್ತಾರೆ. ಈ ಪ್ರಮುಖ ಸಾಧನಗಳ ಮಾಹಿತಿ ಇಲ್ಲಿದೆ... ಥರ್ಮೋಮೀಟರ್ ಗಾಳಿಯಲ್ಲಿನ ತಾಪಮಾನವನ್ನು ಅಳೆಯಲು ಇದನ್ನು ಬಳಸಲಾಗುತ್ತದೆ. ಇದನ್ನು ಗೆಲಿಲಿಯೋ ಎಂಬ ವಿಜ್ಞಾನಿ 1592ರಲ್ಲಿ ಶೋಧಿಸಿದರು. ಅಂದಿನಿಂದ ಇಂದಿನವರೆಗೂ ಇದು ಬಳಕೆಯಲ್ಲಿದೆ. ಈ ಹಿಂದಿನ ಥರ್ಮೋಮೀಟರ್‌ನಲ್ಲಿ ಲಿಕ್ವಿಡ್ ಬಳಸಿ ತಾಪಮಾನ ತಿಳಿಯಲಾಗುತ್ತಿತ್ತು. ಅತ್ಯಾಧುನಿಕ ಪವನಶಾಸ್ತ್ರಜ್ಞರು ಡಿಜಿಟಲ್ ಥರ್ಮೋಮೀಟರ್ ಅನ್ನು ಬಳಕೆ ಮಾಡುತ್ತಿದ್ದಾರೆ. ಬ್ಯಾರೋಮೀಟರ್ ಈ ಸಾಧನವನ್ನು ಇವ್ಯಾಂಜಲಿಸ್ಟಾ ಟೊರಿಸೆಲ್ಲಿ 1643ರಲ್ಲಿ ಕಂಡುಹಿಡಿದರು. ಬ್ಯಾರೋಮೀಟರ್‌ಗಳಲ್ಲಿ ಹಲವು ವಿಧಗಳಿದ್ದರೂ ಅವುಗಳನ್ನು ವಾಯುವಿನ ಒತ್ತಡ ತಿಳಿಯಲು ಬಳಸಲಾಗುತ್ತದೆ. ಆಧುನಿಕ ಬ್ಯಾರೋಮೀಟರ್‌ಗಳು ಕ್ಷಣಕ್ಷಣದ ಪ್ರಮಾಣವನ್ನು ಡಿಜಿಟಲ್ ಮೂಲಕ ನಮೂದಿಸುತ್ತಿವೆ. ಇದು ಗಣಿತ ಮತ್ತು ರಸಾಯನವಿಜ್ಞಾನ ಅಧ್ಯಯನ ಹಾಗೂ ವಾಯುಮಂಡಲದ ತರಂಗಗಳ ಏರಿಳಿತವನ್ನು ಕಂಡುಕೊಳ್ಳಲು ನೆರವಾಗಿದೆ. ರೇನ್ ಗೇಜ್ ಮಳೆಯ ಪ್ರಮಾಣ ಅಳೆಯಲು ರೈನ್ ಗೇಜ್ ಅವಶ್ಯ. ಮೊದಲು ಬಯಲಲ್ಲಿ ಬಕೆಟ್ ಇಟ್ಟು ಅದರಲ್ಲಿ ಸಂಗ್ರಹವಾಗುವ ಮಳೆಯ ನೀರಿನ ಆಧಾರದ ಮೇಲೆ ಅಳೆಯಲಾಗುತ್ತಿತ್ತು. ವಿಜ್ಞಾನ- ತಂತ್ರಜ್ಞಾನ ಮುಂದುವರಿದಂತೆ ಅತ್ಯಾಧುನಿಕ ರೈನ್ ಗೇಜ್ ಯಂತ್ರಗಳು ಆವಿಷ್ಕಾರಗೊಂಡಿವೆ. ಮಳೆ ಬಿದ್ದಂತೆ ಕಂಪ್ಯೂಟರ್‌ನಲ್ಲಿ ಅಂಕಿ- ಅಂಶಗಳು ಸಂಗ್ರಹವಾಗುತ್ತಿರುತ್ತವೆ. ಮಳೆಯ ಪ್ರತಿ ವಿರಾಮಕ್ಕೊಮ್ಮೆ ಅದರ ಪ್ರಮಾಣವನ್ನು ತಿಳಿಯಲಾಗುತ್ತದೆ. ಆಮೇಲೆ ಒಟ್ಟು ಪ್ರಮಾಣವನ್ನು ಕ್ರೋಡೀಕರಿಸಲಾಗುತ್ತದೆ. ಅನಿಮೋಮೀಟರ್ ಗಾಳಿಯ ವೇಗ ಮತ್ತು ಗಾಳಿಯ ದಿಕ್ಕನ್ನು ತಿಳಿಯಲು ಇದು ಸಹಕಾರಿ. ಪ್ರತಿ ಗಂಟೆಗೆ ಗಾಳಿ ಎಷ್ಟು ಮೈಲಿ ಚಲಿಸುತ್ತದೆ ಎಂದು ಅಳೆಯಲಾಗುತ್ತದೆ. ಹೆಮಿಸ್ಪಿರಿಕಲ್ ಕಪ್ ಅನಿಮೋಮೀಟರ್ (ಅರ್ಧಗೋಳವನ್ನು ಹೋಲುವ ನಾಲ್ಕು ಕಪ್‌ಗಳಿಂದ ಸಿದ್ಧಪಡಿಸಿದ ಸಾಧನ) ಅನ್ನು 1846ರಲ್ಲಿ ಜಾನ್ ಥಾಮಸ್ ರಾಮ್ನಿ ರಾಬಿನ್‌ಸನ್ ಕಂಡುಹಿಡಿದರು. ಇದೇ ಆಧಾರದ ಮೇಲೆ ಇಂದು ಕಾರುಗಳ ವೇಗವನ್ನು ತಿಳಿಯಲಾಗುತ್ತಿದೆ. ಇತ್ತೀಚೆಗೆ ಅತ್ಯಾಧುನಿಕ ಅನಿಮೋಮೀಟರ್ ಕಂಡುಕೊಂಡಿದ್ದು, ಡಿಜಿಟಲ್ ತಂತ್ರಜ್ಞಾನದಿಂದ ಅಂಕಿ- ಅಂಶಗಳನ್ನು ಕಲೆಹಾಕಲಾಗುತ್ತದೆ. ಅಲ್ಲದೆ ಇದರಿಂದಲೂ ಗಾಳಿಯ ದಿಕ್ಕನ್ನು ತಿಳಿಯಬಹುದು. ಉಪಗ್ರಹಗಳು ಭೂಮಿಯ ಕಕ್ಷೆಯಲ್ಲಿ ಸುತ್ತುತ್ತಿರುವ ಉಪಗ್ರಹಗಳು ಜಾಗತಿಕ ತಾಪಮಾನದ ಸ್ಥಿತಿಗತಿಯ ವಿವರವನ್ನು ನೀಡುತ್ತವೆ. ಸ್ಯಾಟ್‌ಲೈಟ್ ನೀಡುವ ದತ್ತಾಂಶ ಮತ್ತು ಮಾದರಿಗಳನ್ನು ಖಗೋಳ ವಿಜ್ಞಾನಿಗಳು ಸಂಗ್ರಹಿಸಿ ಅದರ ಆಧಾರದ ಮೇಲೆ ಗಾಳಿ, ಮಳೆ ಮತ್ತು ಮಾರುತಗಳ ದಿಕ್ಕನ್ನು ಹಾಗೂ ಹವಾಮಾನದ ಬದಲಾವಣೆಯ ಭವಿಷ್ಯ ನುಡಿಯುತ್ತಾರೆ. ಜಗತ್ತಿನ ಯಾವುದೇ ಸ್ಥಳದಲ್ಲಿನ ವಾತಾವರಣ, ಮೋಡಗಳ ಚಟುವಟಿಕೆಗಳು, ಸೌರ ವಿಕಿರಣಗಳು, ಓಝೋನ್ ಮಟ್ಟ, ಮಧ್ಯಗೋಳದ ವಾತಾವರಣ, ಬಿರುಗಾಳಿಯ ವರ್ತನೆ ಮತ್ತು ಮಾಲಿನ್ಯದ ಮಟ್ಟವನ್ನು ಉಪಗ್ರಹಗಳು ಸಂಗ್ರಹಿಸುವ ದತ್ತಾಂಶಗಳಿಂದ ಅರಿಯಲಾಗುತ್ತದೆ. -ವೀರೇಶ ಜಿ. ಮಠ @.