ಹ್ಯಾಪಿ ಬರ್ತ್‌ಡೇ ಗೂಗಲ್ ಸೆಪ್ಟೆಂಬರ್ 27-ಇಂದು ಸರ್ಚ್ ಇಂಜಿನ್ ಗೂಗಲ್ ತನ್ನ 16 ನೇ ಹುಟ್ಟುಹಬ್ಬ... ನವದೆಹಲಿ: ಸೆಪ್ಟೆಂಬರ್ 27-ಇಂದು ಸರ್ಚ್ ಇಂಜಿನ್ ಗೂಗಲ್ ತನ್ನ 16 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದೆ. ತನ್ನ ಹುಟ್ಟುಹಬ್ಬಕ್ಕೆ ವಿಶೇಷವಾದ ಆ್ಯನಿಮೇಟೆಡ್ ಡೂಡಲ್ ತಯಾರಿಸಿದ ಗೂಗಲ್ ಇನ್ನಷ್ಟು ಆಕರ್ಷಣೀಯವಾಗಿ ಕಾಣಿಸಿಕೊಂಡಿದೆ. ಗೂಗಲ್ ಪೇಜ್‌ನಲ್ಲಿರುವ ಈ ಡೂಡಲ್‌ನಲ್ಲಿ ಇಂಗ್ಲಿಷ್ ಅಕ್ಷರ ಜಿ ಬರ್ತ್‌ಡೇ ಕ್ಯಾಪ್ ಧರಿಸಿಕೊಂಡು ಇನ್ನುಳಿದ ಅಕ್ಷರಗಳೆಲ್ಲ ಪಾರ್ಟಿ ಮೂಡ್‌ನಲ್ಲಿರುವಂತೆ ರಚಿಸಲಾಗಿದೆ. ಅದೇ ವೇಳೆ ಡೂಡಲ್‌ನ ಕೆಳಗೆ ವಿಶೇಷ ಟ್ಯಾಬ್ ನೀಡಿದ್ದು, ಅದನ್ನು ಕ್ಲಿಕ್ ಮಾಡಿದ ಕೂಡಲೇ ಗೂಗಲ್ ಪ್ಲಸ್, ಫೇಸ್‌ಬುಕ್ ಮತ್ತು ಟ್ವಿಟರ್‌ನಲ್ಲಿ ಶೇರ್ ಮಾಡಲಿರುವ ಆಪ್ಶನ್‌ನೊಂದಿಗೆ ವಿಂಡೋ ತೆರೆದುಕೊಳ್ಳುತ್ತಿದೆ. 1998ರಲ್ಲಿ ಕ್ಯಾಲಿಫೋರ್ನಿಯಾದ ಮೆನ್ಲೋ ಪಾರ್ಕ್‌ನಲ್ಲಿ ಲಾರಿ ಪೇಜ್ ಮತ್ತು ಸೆರ್ಗಿ ಬ್ರಿನ್ ಎಂಬವರು ಗೂಗಲ್ ಪೇಜ್‌ನ್ನು ಆರಂಭಿಸಿದ್ದರು. ಅಲ್ಲಿಂದ ಇಲ್ಲಿಯವರೆಗೆ ಜಗತ್ತಿನ ಅತೀ ದೊಡ್ಡ ಸರ್ಚ್ ಇಂಜಿನ್ ಎಂಬ ಹೆಗ್ಗಳಿಕೆಯನ್ನು ಗೂಗಲ್ ಗಳಿಸಿಕೊಂಡು ಬಂದಿದೆ. ಗೂಗಲ್ ಹುಟ್ಟಿದ್ದು ಸೆಪ್ಟಂಬರ್27 ಕ್ಕೆ ಅಲ್ಲ: ನಿಜವಾಗಿಯೂ ಗೂಗಲ್ ಆರಂಭವಾಗಿದ್ದು ಸೆಪ್ಟೆಂಬರ್ 27ಕ್ಕೆ ಅಲ್ವೇ ಅಲ್ಲ. 2005ರವರೆಗೆ ಗೂಗಲ್ ಸೆಪ್ಟೆಂಬರ್ 7ನೇ ತಾರೀಖಿಗೆ (ಕಂಪನಿ ಏಕೀಕರಣಗೊಂಡ ದಿನ) ತನ್ನ ಬರ್ತ್‌ಡೇಯನ್ನು ಆಚರಿಸಿಕೊಂಡು ಬರುತ್ತಿತ್ತು. ಅದರ ನಂತರ ತಮ್ಮ ಸರ್ಚ್ ಇಂಜಿನ್‌ನಲ್ಲಿರುವ ಪುಟಗಳ ಸಂಖ್ಯೆಯಲ್ಲಿ ದಾಖಲೆ ನಿರ್ಮಿಸಿದ ದಿನಕ್ಕೆ ತಾಳೆಯಾಗುವಂತೆ ಸೆಪ್ಟೆಂಬರ್ 27ನ್ನು ಬರ್ತ್ ಡೇ ಆಗಿ ಆಚರಿಸಿಕೊಂಡು ಬರುತ್ತಿದೆ.