ಕಣ್ಣು ಮಿಟುಕಿಸುವುದರಲ್ಲಿ ಮೂವೀ ಡೌನ್‌ಲೋಡ್! 1 ಸೆಕೆಂಡ್‌ಗೆ 43 ಟಿಬಿ ಡೌನ್‌ಲೋಡ್.. - 43 ಟಿಬಿ 1 ಸೆಕೆಂಡ್‌ಗೆ ವರ್ಗಾಯಿಸಬಹುದಾದ ಡಾಟಾ - 0.2 ಮಿ.ಸೆ. 1 ಜಿಬಿ ಡೌನ್‌ಲೋಡ್ ಮಾಡಲು ಬೇಕಾಗುವ ಸಮಯ ಕೊಪನ್‌ಹೇಗ್: ಅಂತರ್ಜಾಲದಲ್ಲಿ ಸಿನಿಮಾ ಡೌನ್‌ಲೋಡ್ ಮಾಡುವವರಿಗೆ ಸಂತಸದ ಸುದ್ದಿ ಇಲ್ಲಿದೆ. ಕಣ್ಣು ಮುಚ್ಚಿತೆಗೆಯುವುದರೊಳಗೇ ನೀವು ಬಯಸಿದ ಸಿನಿಮಾ ಡೌನ್‌ಲೋಡ್ ಮಾಡುವುದು ಈಗ ಸಾಧ್ಯ! ನಂಬಿ. ಖಂಡಿತವಾಗಿಯೂ ಇದು ರಜನಿ ಸ್ಟಂಟ್ ಅಲ್ಲ. ನೈಜ ವಿಚಾರ. ಮೂವೀ ಡೌನ್‌ಲೋಡ್‌ಗೆ ಹಾಕಿ, ಗಂಟೆಗಟ್ಟಲೆ (ಕೆಲವೊಮ್ಮೆ ದಿನವೆಲ್ಲಾ) ಕಾಯುವುದು, ಆಗಾಗ ಪ್ರೋಗ್ರೆಸ್ ಬಾಸ್ ಅನ್ನು ಚೆಕ್ ಮಾಡುವುದು ಇನ್ನು ಮುಂದೆ ಹಳೆ ವಿಚಾರಗಳೆನಿಸಲಿವೆ. ತಂತ್ರಜ್ಞಾನದ ವಿಶೇಷ ಡೆನ್ಮಾರ್ಕ್‌ನ ತಾಂತ್ರಿಕ ವಿಶ್ವವಿದ್ಯಾಲಯದ 'ಎಕ್ಸ್‌ಟ್ರೀಮ್ ಟೆಕ್‌' ಪ್ರಯೋಗಾಲಯದ ವಿದ್ಯಾರ್ಥಿಗಳು ನೂತನ ತಂತ್ರಜ್ಞಾನವನ್ನು ಆವಿಷ್ಕರಿಸಿದ್ದು, ಇದು ಡೌನ್‌ಲೋಡ್‌ನ ವೇಗವನ್ನು ಗಣನೀಯ ಪ್ರಮಾಣದಲ್ಲಿ ಹೆಚ್ಚಿಸಲಿದೆ. ಇದರ ಪ್ರಕಾರ, 0.2 ಮಿಲಿಸೆಕೆಂಡ್‌ಗಳಲ್ಲಿ ಸುಮಾರು 1 ಟೆರಾಬೈಟ್‌ನಷ್ಟು ಮಾಹಿತಿ ವರ್ಗಾಯಿಸಬಹುದು. ಒಂದು ಸೆಕೆಂಡ್‌ನಲ್ಲಿ 4 ಟೆರಾಬೈಟ್ಸ್‌ನಷ್ಟು ಮಾಹಿತಿ ವರ್ಗಾವಣೆ ಮಾಡಬಹುದು. ಹೇಗೆ ಸಾಧ್ಯ? ಜಪಾನ್ ವಿಜ್ಞಾನಿಗಳು ವಿಶೇಷವಾಗಿ ವಿನ್ಯಾಸಗೊಳಿಸಲಾಗಿರುವ ಮಲ್ಟಿ-ಕೋರ್ ಆಪ್ಟಿಕಲ್ ಫೈಬರ್ ಅನ್ನು ಈ ತಂತ್ರಜ್ಞಾನದಲ್ಲಿ ಉಪಯೋಗಿಸಿಕೊಳ್ಳಲಾಗಿದೆ. ಟೆಲಿಗ್ರಾಫ್ ಹಾಗೂ ಟೆಲಿಫೋನ್ (ಎನ್‌ಎನ್‌ಟಿ) ಸಂವಹನಕ್ಕಾಗಿಯೇ ವಿನ್ಯಾಸಗೊಳಿಸಲ್ಪಟ್ಟಿರುವ ಈ ಆಪ್ಟಿಕಲ್ ಫೈಬರ್‌ನಲ್ಲಿ, ಗಾಜಿನಿಂದ ತಯಾರಿಸಲಾದ ಏಳು ಎಳೆಗಳಿವೆ. ಈ ಎಳೆಗಳು ಟೊಳ್ಳಾಗಿದ್ದು, ಇದರಲ್ಲಿ ಬೆಳಕಿನ ಕಿರಣಗಳನ್ನು ಹಾಯಿಸುವ ಮೂಲಕ ವೇಗವಾಗಿ ಡಾಟಾ ವರ್ಗಾವಣೆ ಮಾಡಬಹುದು. ಮುಂದೇನು? ಟೊಳ್ಳಿರುವ ಗಾಜಿನಿಂದ ತಯಾರಿಸಲ್ಪಟ್ಟ ಆಪ್ಟಿಕಲ್ ಫೈಬರ್‌ನ ಮೂಲಕ ಭೂಮಿಯ ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ಇನ್ನು ಅತಿ ಕನಿಷ್ಠ ಸಮಯದಲ್ಲಿ ಮಾಹಿತಿ ರವಾನಿಸಬಹುದು ಎಂದು ವಿಜ್ಞಾನಿಗಳು ಹೇಳಿದ್ದಾರೆ. ಅಲ್ಲದೇ, ಅಂತರಿಕ್ಷದಲ್ಲೂ ಒಂದು ಕಡೆಯಿಂದ ಮತ್ತೊಂದು ಕಡೆಗೆ ನಿರಾಯಾಸವಾಗಿ, ಕ್ಷಿಪ್ರವಾಗಿ ಮಾಹಿತಿ ರವಾನಿಸಬಹುದು. ಮುಂದೆ ಮಾಹಿತಿ ಸಂವಹನ ಕ್ಷೇತ್ರದಲ್ಲಿ ಭಾರೀ ಕ್ರಾಂತಿ ಉಂಟಾಗಲಿದೆ ಎಂಬುದು ವಿಜ್ಞಾನಿಗಳ ಅಂಬೋಣ. ಬಳಕೆದಾರರಿಗೆ ವರದಾನ ಜಾಗತಿಕ ಮಟ್ಟದಲ್ಲಿ ಡೇಟಾ ಡೌನ್‌ಲೋಡ್ ಎಂಬುದು ಅತಿ ಬೇಡಿಕೆಯ ತಂತ್ರಜ್ಞಾನವಾಗಿದೆ. ದಿನೇ ದಿನೇ ಹೆಚ್ಚುತ್ತಿರುವ ಈ ಬೇಡಿಕೆಯಿಂದಾಗಿ, ಅತಿ ಕಡಿಮೆ ಸಮಯದಲ್ಲಿ, ಅತ್ಯಂತ ವೇಗವಾಗಿ, ಅಪೇಕ್ಷಿತ ಡೇಟಾವನ್ನು ಸಂಗ್ರಹಿಸುವ ಬಗ್ಗೆ ಸಾಕಷ್ಟು ಸಂಶೋಧನೆಗಳು ಸಾಗಿವೆ. ಈ ನಿಟ್ಟಿನಲ್ಲಿ, ಹೊಸ ಆವಿಷ್ಕಾರ ಮಾಡಲು ಕಂಪನಿಗಳ ನಡುವೆ ತೀವ್ರ ಸ್ಪರ್ಧೆಯೂ ನಡೆಯುತ್ತಿದೆ. ಇದೀಗ, ಡೆನ್ಮಾರ್ಕ್‌ನ ವಿದ್ಯಾರ್ಥಿಗಳು ಅಭಿವೃದ್ಧಿಪಡಿಸಿರುವ ನೂತನ ತಂತ್ರಜ್ಞಾನ ಇಂಟರ್ನೆಕ್ ಟ್ರಾಫಿಕ್ ಕ್ಷೇತ್ರದಲ್ಲಿ ಹೊಸ ಕ್ರಾಂತಿಯನ್ನುಂಟು ಮಾಡಲಿವೆ ಎಂಬ ನಿರೀಕ್ಷೆಗಳು ಹುಟ್ಟಿಕೊಂಡಿವೆ.