ಭಾರತದ ಸ್ಪೇಸ್ ಶಟಲ್ ಬಗ್ಗೆ ನೀವು ತಿಳಿದಿರಬೇಕಾದ ಅಂಶಗಳು ದೇಶದ ಮೊದಲ ಮರುಬಳಕೆಯ ಉಪಗ್ರಹ ಉಡ್ಡಯನ ವಾಹಕ (ರೀ ಯೂಸಬಲ್‌ ಲಾಂಚ್‌ ವೆಹಿಕಲ್‌- ಟೆಕ್ನಾಲಜಿ ಡೆಮನ್‌ಸ್ಟ್ರೇಟರ್‌) ಅಥವಾ "ಸ್ಪೇಸ್‌ ಶಟಲ್‌' ಅನ್ನು... ಭಾರತದ ಸ್ಪೇಸ್ ಶಟಲ್ ಬಗ್ಗೆ ನೀವು ತಿಳಿದಿರಬೇಕಾದ ಅಂಶಗಳು ದೇಶದ ಮೊದಲ ಮರುಬಳಕೆಯ ಉಪಗ್ರಹ ಉಡ್ಡಯನ ವಾಹಕ (ರೀ ಯೂಸಬಲ್‌ ಲಾಂಚ್‌ ವೆಹಿಕಲ್‌- ಟೆಕ್ನಾಲಜಿ ಡೆಮನ್‌ಸ್ಟ್ರೇಟರ್‌) ಅಥವಾ "ಸ್ಪೇಸ್‌ ಶಟಲ್‌' ಅನ್ನು ಇಸ್ರೋ( ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ) ಸೋಮವಾರ ಯಶಸ್ವಿಯಾಗಿ ಉಡಾಯಿಸಿದೆ. ಆ ಮೂಲಕ ಉಪಗ್ರಹ ಉಡಾವಣೆ ಕ್ಷೇತ್ರದಲ್ಲಿ ಹೊಸ ಇತಿಹಾಸ ಬರೆದಿದೆ. ಇದರ ಬಗ್ಗೆ ತಿಳಿದುಕೊಳ್ಳಬೇಕಾದ ಕೆಲವು ಅಂಶಗಳು ಇಂತಿವೆ: ಏನಿದು ರೀ ಯೂಸಬಲ್ ಲಾಂಚ್ ವೆಹಿಕಲ್?: ಭಾರತದ ಮೊದಲ ಅಂತರಿಕ್ಷ ವಾಹಕ ವಾತಾವರಣಕ್ಕೆ ಮರು ಪ್ರವೇಶ ಮಾಡಬಹುದು. ಅದು ಆಕಾಶಕ್ಕೆ ಹಾರುವಾಗ ರಾಕೆಟ್ ತರಹ ಟೇಕ್ ಆಫ್ ಆಗಿ ವಿಮಾನದ ರೀತಿಯಲ್ಲಿ ಇಳಿಯಬಹುದು. ಅಮೆರಿಕದಲ್ಲಿ ಇದು ನಾಲ್ಕು ದಶಕಗಳ ಹಿಂದೆಯೇ ಕಂಡುಹಿಡಿಯಲಾಗಿತ್ತು, ಆದರೆ ಭಾರತಕ್ಕೆ ಇದೇ ಮೊದಲು. ಸೋಮವಾರ ಬೆಳಗ್ಗೆ ಇಸ್ರೋದ "ಸ್ಪೇಸ್‌ ಶಟಲ್‌' ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರದಿಂದ ನಭೋಮಂಡಲದತ್ತ ಯಶಸ್ವಿಯಾಗಿ ಚಿಮ್ಮಿದೆ. ಶಬ್ದಕ್ಕಿಂತ 5 ಪಟ್ಟು ವೇಗವಾಗಿ ಹಾರುವ ಈ ರಾಕೆಟ್‌ 70 ಕಿ.ಮೀ. ದೂರ ಕ್ರಮಿಸಿದ ಬಳಿಕ ಬಂಗಾಲ ಕೊಲ್ಲಿಯಲ್ಲಿ ಬಿದ್ದು ನಾಶವಾಗಲಿದೆ. ಒಟ್ಟಾರೆ 10 ನಿಮಿಷಗಳಲ್ಲಿ ಪ್ರಯೋಗ ಮುಗಿದಿತ್ತು. ಹಣ ಉಳಿತಾಯವಾಗಲಿದಿಯೇ? ಸಂಪೂರ್ಣ ಸ್ವದೇಶಿ ನಿರ್ಮಿತ ಮರು ಬಳಕೆಯ ತಂತ್ರಜ್ಞಾನ ಮುಂದಿನ 15 ವರ್ಷಗಳಲ್ಲಿ ಇಸ್ರೋ ಕೈಗೆ ಸಿಗಲಿದ್ದು, ಅದರಿಂದ ಉಪಗ್ರಹ ಉಡಾವಣೆ ಖರ್ಚು 10 ಪಟ್ಟು ತಗ್ಗಲಿದೆ. ಪ್ರತಿ ಕೆಜಿಗೆ 2 ಸಾವಿರ ಅಮೆರಿಕನ್ ಡಾಲರ್ ಗೆ ಇಳಿಕೆಯಾಗಲಿದೆ. ಜತೆಗೆ ಮಾನವಸಹಿತ ಬಾಹ್ಯಾಕಾಶ ಯಾನಗಳಿಗೆ ಭಾರೀ ಉಪಯೋಗವಾಗಲಿದೆ. ಎಂಟು ವರ್ಷದಲ್ಲಿ 750 ಎಂಜಿನಿಯರ್ ಗಳು ಸೇರಿ 95 ಕೋಟಿ ರೂಪಾಯಿ ವೆಚ್ಚದಲ್ಲಿ ತಯಾರಿಸಲಾಗಿದೆ. ಭವಿಷ್ಯದಲ್ಲಿ ಸ್ಪೇಸ್‌ ಶಟಲ್‌ ಅನ್ನು ವಿಮಾನದ ರೀತಿ ಇಳಿಸುವ ಪ್ರಯೋಗ ನಡೆಯಬೇಕಿದೆ. ಶ್ರೀಹರಿಕೋಟಾದಲ್ಲೇ ಸ್ಪೇಸ್‌ ಶಟಲ್‌ ಅನ್ನು ಇಳಿಸಲಾಗುತ್ತದೆ ಎಂದು ಇಸ್ರೋ ಅಧ್ಯಕ್ಷ ಕಿರಣ್‌ ಕುಮಾರ್‌ ತಿಳಿಸಿದ್ದಾರೆ. ಅಮೆರಿಕ 1980ರ ನಂತರ ಅನೇಕ ಸ್ಪೇಸ್ ಷಟಲ್ ಗಳನ್ನು ಉಡಾಯಿಸಿತ್ತು. 2011ಕ್ಕೆ ಮೊದಲು ಅಮೆರಿಕ 135 ಕಾರ್ಯಾಚರಣೆ ನಡೆಸಿತ್ತು. ರಷ್ಯಾ 1989ರಲ್ಲಿ ಬುರನ್ ಎಂಬ ಸ್ಪೇಷ್ ಶಟಲ್ ನ್ನು ಉಡಾಯಿಸಿತ್ತು. ಫ್ರಾನ್ಸ್, ಜಪಾನ್ ಕೆಲವು ಪ್ರಯೋಗಾರ್ಥ ವಿಮಾನಗಳನ್ನು ಹಾರಿಸಿತ್ತು. ಚೀನಾ ಈ ಕ್ಷೇತ್ರದಲ್ಲಿ ಕೈ ಹಾಕಿರಲಿಲ್ಲ.