ಹೃದಯ ಗಟ್ಟಿ ಮಾಡ್ಕಳಿ! ಸಾಫ್ಟ್ ಲೋಕದ ಜನ ಹೃದಯ ಗಟ್ಟಿ ಮಾಡಿಕೊಳ್ಳಬೇಕು. ಈಗೊಂದೆರಡು ವರ್ಷದಿಂದ ಹಣದುಬ್ಬರ ಮತ್ತು ತೈವಾನ್, ಚೀನಾದಂತಹ ದೇಶಗಳ ಪೈಪೋಟಿಯಿಂದಾಗಿ ನಮ್ಮ ದೇಶದ ಸಾಫ್ಟ್‌ವೇರ್ ಮಾರುಕಟ್ಟೆ ಕುಸಿದಿದೆ. ಪರಿಣಾಮವಾಗಿ ಸಾಕಷ್ಟು ಕಂಪನಿಗಳು ಸಾಫ್ಟ್‌ವೇರ್ ಉದ್ಯೋಗಿಗಳನ್ನು ಕೆಲಸದಿಂದ ತೆಗೆದಿದ್ದರೆ, ಇನ್ನು ಕೆಲವು ಕಂಪನಿಗಳು ಉತ್ತಮ ಅನ್ನುವಂತಹ ವೇತನ ಹೆಚ್ಚಳ ಮಾಡಿಲ್ಲ. ಸದ್ಯದ ಸುದ್ದಿಯೆಂದರೆ 2013ರಲ್ಲೂ ಸಾಫ್ಟ್‌ವೇರ್ ಕಂಪನಿಗಳು ಆಕರ್ಷಕ ವೇತನ ಹೆಚ್ಚಳ ಮಾಡುವ ಉದ್ದೇಶ ಹೊಂದಿಲ್ಲವಂತೆ! ನಮ್ಮ ದೇಶದ ಅಭಿವೃದ್ಧಿಯ ದರ ಶೇ.5ರ ಆಸುಪಾಸಿನಲ್ಲಿರುವುದರಿಂದ ಈ ಬಾರಿಯ ಸರಾಸರಿ ವೇತನ ಹೆಚ್ಚಳ ಶೇ.10.3ರಷ್ಟು ಮಾತ್ರ ಇರಲಿದೆ ಎಂದು ಹೆವಿಟ್ ಸಂಸ್ಥೆ ವರದಿ ಮಾಡಿದೆ. ಇದು 2012ಕ್ಕಿಂತ ಕಡಿಮೆಯಾಗಲಿದೆ ಎಂಬುದು ಐಟಿ ಉದ್ಯೋಗಿಗಳಿಗೆ ಶಾಕಿಂಗ್ ನ್ಯೂಸ್. ರುಪಾಯಿ ಅಪಮೌಲ್ಯ ಮತ್ತು ಕೆಲವು ವಿದೇಶಿ ರಾಷ್ಟ್ರಗಳು ಆರ್ಥಿಕ ಸಂಕಷ್ಟ ಎದುರಿಸುತ್ತಿರುವುದು ಇದಕ್ಕೆ ಮೂಲ ಕಾರಣ ಎನ್ನಲಾಗಿದೆ. ವಿಶೇಷವಾಗಿ ಹೊರ ದೇಶದ ಕಂಪನಿಗಳಿಗೆ ಸೇವೆ ಒದಗಿಸುತ್ತಿದ್ದ ಕಂಪನಿಗಳು ಈ ವರ್ಷ ಕೇವಲ ಶೇ.8.9ರಷ್ಟು ಮಾತ್ರ ವೇತನ ಹೆಚ್ಚಳ ಮಾಡುವ ಸಾಧ್ಯತೆಯೂ ಇದೆ ಎಂದು ಸಮೀಕ್ಷೆ ಹೇಳಿದೆ. ಇದರ ಪರಿಣಾಮವಾಗಿ ಉತ್ತಮವಾಗಿ ಕೆಲಸ ಮಾಡುವವರಿಗೆ ಉತ್ತಮವಾದ ಮತ್ತು ಸಾಧಾರಣ ಕೆಲಸಗಾರರಿಗೆ ತೀರ ಕಡಿಮೆ ಎನ್ನುವಂತಹ ವೇತನ ಹೆಚ್ಚಳ ನಿರೀಕ್ಷಿಸಲಾಗಿದೆ.