ಲೋಗೋ ಭಿನ್ನರುಚಿ ಲೋಗೋ! ಎಷ್ಟೋ ಕಂಪನಿಗಳು ಜನರಿಗೆ ಚಿರಪರಿಚಿತವಾಗಿರುವುದೇ ಅವುಗಳ ಲೋಗೊದಿಂದ. ಕಾಲುಭಾಗ ಯಾರೋ ತಿಂದಂತಿರುವ ಆ್ಯಪಲ್‌ನ ಚಿತ್ರ ನೋಡಿದರೆ ಸಾಕು ಯಾರು ಬೇಕಾದರೂ ಥಟ್ಟನೆ ಆ್ಯಪಲ್ ಕಂಪನಿ ಎಂದು ಹೇಳಿಬಿಡುತ್ತಾರೆ. ಹಾಗೇ ವಿಶ್ವದ ಏಷ್ಟೋ ಕಂಪನಿಗಳನ್ನು ಜನರು ಅವುಗಳ ಅಕರ್ಷಕ ಅಥವಾ ಪ್ರಸಿದ್ಧ ಲೋಗೋ ಮೂಲಕವೇ ಗುರುತಿಸುತ್ತಾರೆ. ಬ್ರ್ಯಾಂಡ್ ನೇಮ್ ಅಥವಾ ಕಂಪನಿ ಹೆಸರು ಒಂದು ಉತ್ಪನ್ನವನ್ನು ಮಾರುಕಟ್ಟೆಯಲ್ಲಿ ಸ್ಥಾಪಿಸಲು ಎಷ್ಟು ಮುಖ್ಯವೋ ಲೋಗೊ ಕೂಡ ಅಷ್ಟೇ ಮುಖ್ಯ. ಲೋಗೊ ನಿರ್ಮಾಣಕ್ಕೆ ಸಾಕಷ್ಟು ಪ್ರಾಮುಖ್ಯ ನೀಡುತ್ತವೆ. ಆರಂಭದಲ್ಲಿ ಕಂಪನಿಗಳು ಲೋಗೊ ಬಗ್ಗೆ ಅಷ್ಟೇನೂ ಪ್ರಾಮುಖ್ಯ ನೀಡದಿರಬಹುದು. ಆದರೆ ಕಂಪನಿ ಸ್ವಲ್ಪ ಜನಪ್ರಿಯತೆ ಪಡೆಯುತ್ತಿದ್ದಂತೆ, ಬ್ರ್ಯಾಂಡಿಂಗ್ ಬಗ್ಗೆ ಗಮನಹರಿಸುತ್ತಿದ್ದಂತೆ ಲೋಗೊ ದಿಢೀರನೆ ಮಹತ್ವ ಪಡೆದುಕೊಳ್ಳುತ್ತದೆ. ಮಾರುಕಟ್ಟೆಯಲ್ಲಿ ಗ್ರಾಹಕರು ಮತ್ತು ಜನ ಒಂದು ಕಂಪನಿ ಅಥವಾ ಉತ್ಪನ್ನವನ್ನು ಅತ್ಯಂತ ಸುಲಭವಾಗಿ ಗುರುತಿಸಲೂ ಈ ಲೋಗೊ ಸಹಾಯಮಾಡುತ್ತದೆ. ನೈಕ್ ಕಂಪನಿ ತನ್ನ ಲೋಗೊ ಮಾಡಲೆಂದು 1975ರಲ್ಲಿ ಡೆವಿಡ್‌ಸನ್ ಎಂಬವರಿಗೆ ಕೇವಲ 35 ಡಾಲರ್ ನೀಡಿತ್ತು. ಅಚ್ಚರಿಯೆಂದರೆ ಅಂದಿನಿಂದ ಇಂದಿನವರೆಗೆ ಕಂಪನಿ ಅದೇ ಲೋಗೊ ಬಳಸಿಕೊಳ್ಳುತ್ತಿದೆ. ಪೆಪ್ಸಿ ಕಂಪನಿ 2008ರಲ್ಲಿ ತನ್ನ ಹೊಸ ಲೋಗೊ ತಯಾರಿಸಲೆಂದು ಆರ್ನೆಲ್ ಗ್ರೂಪ್‌ಗೆ 10 ಲಕ್ಷ ಡಾಲರ್ ನೀಡಿತ್ತು! ಇಷ್ಟು ದೊಡ್ಡ ಮೊತ್ತ ನೀಡಬೇಕಾದರೆ ಕಂಪನಿಗೆ ಲೋಗೊ ಎಷ್ಟು ಮುಖ್ಯ ಎಂಬುದು ಅರ್ಥವಾಗುತ್ತದೆ. ಇಂದು ಕೆಲವು ಪ್ರಸಿದ್ಧ ಕಂಪನಿಗಳು ಆರಂಭಗೊಂಡಾಗ ಎಂತಹ ಲೋಗೊ ಹೊಂದಿದ್ದವು ಎಂಬುದನ್ನು ಗಮನಿಸಿದರೆ ಅಚ್ಚರಿ ಕಾದಿದೆ. ಈಗಿರುವ ಮತ್ತು ಆರಂಭದಲ್ಲಿದ್ದ ಲೋಗೊಗಳನ್ನು ಗಮನಿಸಿದರೆ ನಿಜಕ್ಕೂ ಹಾಗಿತ್ತಾ ಎಂದು ಯೋಚನೆ ಮಾಡುವಂತಾಗುತ್ತದೆ. ಆರಂಭದಲ್ಲಿ ಕಂಪನಿಗಳು ಲೋಗೊಗೆ ಅಷ್ಟೇನೂ ಮಹತ್ವ ನೀಡಿರಲಿಲ್ಲ ಎಂಬುದೂ ಅರಿವಾಗುತ್ತದೆ. ಇಂದು ಪ್ರಸಿದ್ಧವಾಗಿರುವ ಕೆಲವು ಕಂಪನಿಗಳ ಲೋಗೊಗಳು ಆರಂಭದಲ್ಲಿ ಹೇಗಿದ್ದವು ಎಂಬುದನ್ನು ನಿಮ್ಮ ಮಾಹಿತಿಗಾಗಿ ಇಲ್ಲಿ ನೀಡುತ್ತಿದ್ದೇವೆ. ಆ್ಯಪಲ್ ಈ ಕಂಪನಿ ತನ್ನ ಲೋಗೊವನ್ನು ಮೊದಲು ನಿರ್ಮಿಸಿದ್ದು 1976ರಲ್ಲಿ. ಐಸಾಕ್ ನ್ಯೂಟನ್ ಸೇಬು ಮರದ ಕೆಳಗೆ ಕುಳಿತಿದ್ದು ಚಿತ್ರದ ಜತೆಗೆ ಆ್ಯಪಲ್ ಕಂಪ್ಯೂಟರ್ ಕೊ ಎಂಬ ಹೆಸರು ಬರೆದಿರುವುದನ್ನು ಕಾಣಬಹುದು. ವಿಚಿತ್ರ ಮತ್ತು ಹೊಸ ಯೋಚನೆಗಳಿಂದ ತುಂಬಿದ ನ್ಯೂಟನ್‌ನ ಚಿತ್ರವನ್ನೇ ಆಧಾರವಾಗಿರಿಸಿಕೊಂಡು, ಕಂಪನಿಗಳ ಅಂತಹ ಹೊಸ ಚಿಂತನೆಗೆ ನಾಂದಿ ಹಾಡಲಿದೆ ಎಂಬುದನ್ನು ಆಗಲೇ ಲೋಗೊದಲ್ಲಿ ಸೂಚಿಸಲಾಗಿತ್ತು. ಈ ಲೋಗೊ ನಿರ್ಮಾಣಕ್ಕಾಗಿ ಕಂಪನಿ ಸ್ಥಾಪಕರಲ್ಲಿ ಒಬ್ಬರಾದ ರೊನಾಲ್ಡ್ ವ್ಯಾನೆ ಎಂಬವರು ಇದನ್ನು ನಿರ್ಮಿಸಿದ್ದು, ಇದಕ್ಕಾಗಿ 800 ಡಾಲರ್‌ಗಳನ್ನು ಕಂಪನಿಯ ಶೇರ್ ರೂಪದಲ್ಲಿ ಪಡೆದಿದ್ದರು. ಆದರೆ ಎರಡೇ ವಾರಕ್ಕೆ ಕಂಪನಿ ತೊರೆದರು. ಐಬಿಎಂ ನೌಕರರ ಸಮಯ ಪಾಲನೆ ವ್ಯವಸ್ಥೆಯಿಂದ ಪ್ರಸಿದ್ಧವಾಗಿದ್ದು ಐಬಿಎಂ ಕಂಪನಿ. ತೂಕದ ಯಂತ್ರ, ಮಾಂತ ಕತ್ತರಿಸುವ ಯಂತ್ರಗಳನ್ನು ಕೂಡ ಕಂಪನಿ ತಯಾರಿಸುತ್ತಿತ್ತು. 1888ರಲ್ಲಿ ಇಂಟರ್‌ನ್ಯಾಷನಲ್ ಟೈಮ್ ರೆಕಾರ್ಡಿಂಗ್ ಕಂಪನಿ ಎಂಬ ಹೆಸರಿನಲ್ಲಿ ಅಸ್ತಿತ್ವಕ್ಕೆ ಬಂದಿದ್ದರೂ, 1924ರಲ್ಲಿ ಇಂಟರ್ ನ್ಯಾಷನಲ್ ಬಿಸಿನೆಸ್ ಮೆಷೀನ್ ಎಂದು ಹೆಸರು ಬದಲಾಯಿಸಿಕೊಂಡಿತು. ಅಂದೇ ಈ ಲೋಗೊ ಹುಟ್ಟಿಕೊಂಡಿತು. ಆದರೆ ಐಬಿಎಂ ಎಂದೇ ಜನರಿಗೆ ಪರಿಚಿತ. ಕೆನನ್ ಕ್ಯಾಮರಾಗಳಲ್ಲಿ ಪರಿಚಿತ ಮತ್ತು ಪ್ರಸಿದ್ಧ ಹೆಸರು ಕೆನನ್ ಕಂಪನಿಯದ್ದು. 1934ರಲ್ಲಿ ಇಬ್ಬರು ಜಪಾನಿ ಸಂಶೋಧಕರು ಕ್ಯಾಮರಾ ನಿರ್ಮಿಸಿದರು. ಪ್ರಿಸಿಷನ್ ಆಪ್ಟಿಕಲ್ ಇನ್‌ಸ್ಟ್ರುಮೆಂಟ್ಸ್ ಲ್ಯಾಬರೇಟರಿ ಎಂಬ ಹೆಸರಿನ ಕಂಪನಿ ಹೆಸರಿನಲ್ಲಿ ಇದನ್ನು ನಿರ್ಮಿಸಿದ್ದರು. ಕ್ವಾನನ್ ಎಂಬ ಹೆಸರು ನೀಡಿದ್ದರು. ಅವರ ಭಾಷೆಯಲ್ಲಿ ಬೌದ್ಧ ಧರ್ಮ ಬೋಧಿಸತ್ವದ ಹೆಸರನ್ನೇ ಇದಕ್ಕೆ ಇಡಲಾಗಿತ್ತು. ಹಲವು ಆಯುಧಗಳನ್ನು ಹಿಡಿದ ಕ್ವಾನನ್ ಚಿತ್ರವನ್ನೇ ಲೋಗೊದಲ್ಲಿ ಬಳಸಲಾಗಿತ್ತು. ಕಂಪನಿಯ ಟ್ರೇಡ್‌ಮಾರ್ಕ್ ಪ್ರಶ್ನೆ ಬಂದಾಗ ಮೂಲ ಹೆಸರಿಗಿಂತ ಕೊಂಚ ಸರಳವಾದ ಕೆನಾನ್ ಹೆಸರನ್ನು ಆರಿಸಿಕೊಳ್ಳಲಾಯಿತು. ನೋಕಿಯಾ ಇತ್ತೀಚೆಗೆ ಕೆಟ್ಟ ಕಾರಣಗಳಿಗೇ ಅತ್ಯಂತ ಹೆಚ್ಚು ಸುದ್ದಿಯಾದ ಕಂಪನಿ ಎಂಬ ಹೆಸರು ಬಂದಿದ್ದು ದುರಾದೃಷ್ಟ. ಆದರೂ ಮೈಕ್ರೋಸಾಫ್ಟ್ ಕಂಪನಿ ನೋಕಿಯಾವನ್ನು ಖರೀದಿಸಿದ್ದು ಒಂದು ರೀತಿಯಲ್ಲಿ ಶುಭಸುದ್ದಿಯೇ. ನೋಕಿಯಾ ಎಂಬುದು ಜನರಿಗೆ ಪರಿಚಿತವಾಗಿದ್ದೇ ಮೊಬೈಲ್‌ನಿಂದ. ಆದರೆ 1967ರಲ್ಲಿ ಇದು ಆರಂಭವಾದಾಗ ಇದು ವುಡ್ ಪಲ್ಪ್ ತಯಾರಿಸುವ ಕಂಪನಿಯಾಗಿತ್ತು ಎಂದರೆ ಅಚ್ಚರಿಯಾಗುತ್ತದೆ. ಫೆಡ್ರಿಕ್ ಇಸ್ಟಮ್ ಅವರು ಈ ಕಂಪನಿ ಆರಂಭಿಸಿದಾಗ ಹತ್ತಿರದ ಹಳ್ಳಿಯೊಂದ ನೋಕಿಯಾ ಎಂಬ ಹೆಸರನ್ನೇ ಕಂಪನಿಗೆ ಇಟ್ಟಿದ್ದರು. ಅದು ಫಿನಿಶ್ ಭಾಷೆಯಲ್ಲಿ ಒಂದು ಪ್ರಾಣಿಯ ಹೆಸರೂ ಹೌದು. ಅದನ್ನೇ ತನ್ನ ಲೋಗೊವಾಗಿ ಕಂಪನಿ ಮಾಡಿಕೊಂಡಿತ್ತು. 1967ರಲ್ಲಿ 3 ಕಂಪನಿಗಳ ಜೋಡಣೆ ನಡೆಯಿತು. ಅದರ ನಂತರ ಕಂಪನಿ ತನ್ನ ಮೂಲ ಉತ್ಪಾದನೆಯನ್ನು ಬಿಟ್ಟು ದೂರಸಂಪರ್ಕ ಕ್ಷೇತ್ರದಲ್ಲಿ ಕೆಲಸ ಆರಂಭಿಸಿತು. ಕ್ಸೆರಾಕ್ಸ್ ಇದು ಒಂದು ಕಂಪನಿಯ ಹೆಸರಾದರೂ ಎಲ್ಲವೂ ಕ್ಸೆರಾಕ್ಸ್ ಎಂದೇ ಪ್ರಸಿದ್ಧ. ನಕಲು ಪ್ರತಿಗೇ ಕ್ಸೆರಾಕ್ಸ್ ಎಂಬ ಹೆಸರುಬಿದ್ದುಬಿಟ್ಟಿದೆ. 1906ರಲ್ಲಿ ಆರಂಭವಾದ ಈ ಕಂಪನಿ ಆರಂಭದಲ್ಲಿ ಫೋಟೊಗ್ರಾಫಿಗೆ ಬಳಸುವ ಪೇಪರ್ ಮತ್ತು ಸಾಧನಗಳನ್ನು ತಯಾರಿಸುತ್ತಿತ್ತು. ಚೆಸ್ಟರ್ ಕಾರ್ಲ್‌ಸನ್ ಎಂಬಾತ ಹೊಸ ಸಂಶೋಧನೆಯೊಂದಿಗೆ ಈ ಕಂಪನಿಯನ್ನು ಹಣ ತೊಡಗಿಸುವಂತೆ ಕೋರಿಕೊಂಡ. ಇದರ ಪರಿಣಾಮವಾಗಿ 1959ರಲ್ಲಿ ಮೊದಲು ನಕಲು ತಯಾರಿಕಾ ಯಂತ್ರ ಬಿಡುಗಡೆಯಾಯಿತು. ಅದರ ಹೆಸರು ಹಾಲಾಯ್ಡ್ ಕ್ಸೆರಾಕ್ಸ್ 914 ಎಂದಾಗಿತ್ತು. ಯಂತ್ರ ಎಷ್ಟು ಪ್ರಸಿದ್ಧವಾಯಿತೆಂದರೆ ಕಂಪನಿ ಹಲಾಯ್ಡ್ ಹೆಸರನ್ನು ಕೈಬಿಟ್ಟು ಕ್ಸೆರಾಕ್ಸ್ ಎಂದೇ ಕಂಪನಿ ಹೆಸರನ್ನೂ ಇರಿಸಿಕೊಂಡಿತು. ಮೊಟೊರೊಲಾ ಇಂದು ಮೊಟೊರೊಲಾ ಕಂಪನಿ ಮೊಬೈಲ್‌ನಿಂದ ಪರಿಚಿತವಾಗಿರಬಹುದು. ಆದರೆ 1930ರಲ್ಲಿ ಅದು ಆರಂಭವಾದಾಗ ಅದು ಕಾರ್ ರೇಡಿಯೊ ಮೂಲಕ ಪ್ರಸಿದ್ಧವಾಗಿತ್ತು. ಆ ಸಂದರ್ಭದಲ್ಲಿ ಪ್ರಸಿದ್ಧವಾಗಿದ್ದ ಮೋಟರ್ ಮತ್ತು ಓಲಾ ಎಂಬ ಸಂಗೀತ ಸಾಧನದ ಹೆಸರು ಸೇರಿಸಿ ಹೆಸರು ಮಾಡಲಾಗಿತ್ತು. ರೇಡಿಯೊ ಬಾರೀ ಪ್ರಸಿದ್ಧವಾದ ಮೇಲೆ ಸ್ಥಾಪಕ ಪೌಲ್ ಗಾಲ್ವಿನ್ ಕಂಪನಿ ಹೆಸರನ್ನು 'ಮೋಟೊರೊಲಾ' ಎಂದು ಬದಲಾಯಿಸಲು ನಿರ್ಧರಿಸಿದರು. ಅದೇರೀತಿ ಕಂಪನಿಯ ಉತ್ಪನ್ನಗಳು ಕೂಡಾ ಕಾಲದಿಂದ ಕಾಲಕ್ಕೆ ಬದಲಾಗಿವೆ. ಮೈಕ್ರೋಸಾಫ್ಟ್ ಮುಂಬಯಿನಲ್ಲಿ ಡಿಸ್ಕೋ ಥೆಕ್‌ಗಳ ಎದುರು ದೊಡ್ಡದಾಗಿ ವಿದ್ಯುತ್ ಬಲ್ಬ್‌ಗಳ ಸಹಾಯದಿಂದ ಬೋರ್ಡ್ ಹಾಕಿರುತ್ತಾರಲ್ಲಾ ಥೇಟ್ ಹಾಗೇ ಕಾಣುತ್ತಿತ್ತು ಮೈಕ್ರೋಸಾಫ್ಟ್ ಲೋಗೊ. ಮೇಕ್ರೋ ಕಂಪ್ಯೂಟರ್ ಮತ್ತು ಸಾಫ್ಟ್‌ವೇರ್ ಎಂಬ ಎರಡು ಕಂಪನಿಗಳನ್ನು ಸೇರಿಸಿ 'ಮೈಕ್ರೋಸಾಫ್ಟ್‌' ಎಂಬ ಹೆಸರು ಕೊಡಲಾಗಿತ್ತು. ಆ ಹೆಸರನ್ನೇ ಬರೆದು ಕಂಪನಿ ಲೋಗೊವಾಗಿ ಬಳಸಲಾಗಿತ್ತು. = ವಕ್ರದಂತ