ಜಿಡಿ ಬಂತು ದಾರಿಬಿಡಿ! ಮೊಬೈಲ್ ಎಂಬ ಮಾಯಾಲೋಕಕ್ಕೆ ಇಂದು ಅದೆಷ್ಟೋ ಕಂಪನಿಗಳು ಲಗ್ಗೆ ಇಟ್ಟಿವೆ. ಪ್ರತಿ ಬಾರಿ ಹೊಸತನವನ್ನೇ ನಿರೀಕ್ಷಿಸುವ ಗ್ರಾಹಕರ ಅಗತ್ಯ ಪೂರೈಸಲು ಕಂಪನಿಗಳು ದಶಕಗಳಿಂದ ಪೈಪೋಟಿ ನಡೆಸುತ್ತಲೇ ಬಂದಿವೆ. ಅಂಥ ನಿರೀಕ್ಷೆಗಳಿಗೆ ಉತ್ತರಿಸುವ ನಿಟ್ಟಿನಲ್ಲಿ ಪ್ಯಾನಾಸೊನಿಕ್ ಇಂಡಿಯಾ ನೂತನ ಮಾದರಿಯ ಜಿಡಿ31 ಮತ್ತು ಜಿಡಿ21 ಫೋನ್ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಮುಖ್ಯವಾಗಿ ಸುರಕ್ಷತೆಗೆ ಈ ಸಲ ಒತ್ತು ನೀಡಿರುವ ಪ್ಯಾನಾಸೊನಿಕ್ ಮೊಬೈಲ್ ಟ್ರ್ಯಾಕರ್ ಸೌಲಭ್ಯ ಒದಗಿಸುವ ಮೂಲಕ ಗ್ರಾಹಕರನ್ನು ಕೈಬೀಸಿ ಕರೆಯುತ್ತಿದೆ. ಕಳುವಾದ ಮೊಬೈಲ್ ಕ್ಷಣ ಮಾತ್ರದಲ್ಲಿ ಹುಡುಕಿಕೊಡುವ ಸೌಲಭ್ಯವೇ ಈ ಮೊಬೈಲ್ ಟ್ರ್ಯಾಕರ್. ಇದಿಷ್ಟೇ ಅಲ್ಲದೇ ದೈನಂದಿನ ಚಟುವಟಿಕೆಗಳಾದ ಫೇಸ್ಬುಕ್, ಆಡಿಯೋ ಹಾಗೂ ವಿಡಿಯೋ ಪ್ಲೇಯರ್ನಂಥ ಸೌಲಭ್ಯಗಳನ್ನು ಈ ಮೊಬೈಲ್ ಒದಗಿಸುತ್ತಿದೆ. ಜಪಾನ್ ತಂತ್ರಜ್ಞಾನ ಮತ್ತು ವಿನ್ಯಾಸದ ಮೊಬೈಲ್ ಇದಾಗಿದ್ದು ಯುವಕರನ್ನು ಆಕರ್ಷಿಸುತ್ತದೆ. ಆರಂಭಿಕ ಬೆಲೆ ಆದ 1790ರಿಂದ ರು. 2190ರ ಕಡಿಮೆ ದರದಲ್ಲಿ ಅಗತ್ಯವಿರುವ ಎಲ್ಲ ಅಪ್ಲಿಕೇಷನ್ನೊಂದಿಗೆ ಪ್ಯಾನಾಸೊನಿಕ್ ಮೊಬೈಲ್ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಟಚ್ ಕೀಪ್ಯಾಡ್ಗಳಲ್ಲಿ ಕೇವಲ ಇಂಗ್ಲಿಷ್ ಅಲ್ಲದೇ ಹಿಂದಿ ಭಾಷೆಯೂ ಅಚ್ಚಾಗಿರುವ ಈ ಮೊಬೈಲ್ನಲ್ಲಿ, ಮೆಸೇಜ್, ಮೇಲ್ಗಳನ್ನು ಹಿಂದಿಯಲ್ಲೂ ರವಾನಿಸಲು ಸಹಕಾರಿ ಆಗಲಿದೆ.