ಸೂರ್ಯ ಕಣ್ತೆರೆದರೆ ಮೊಬೈಲ್ ಚಾರ್ಜಾಗುತ್ತೆ! ಮೊಬೈಲ್ ಫೋನ್ ಬ್ಯಾಟರಿಗೆ ಸೂರ್ಯದೇವನೇ ಶಕ್ತಿ ತುಂಬಬಲ್ಲನು! ಸೋಲಾರ್ ಪ್ಲೇಟ್‌ಗಳನ್ನು ತಲೆಗೆ ಕಟ್ಟಿಕೊಳ್ಳದೆ ನಿಮ್ಮ ಮೊಬೈಲ್.. ಮೊಬೈಲ್ ಫೋನ್ ಬ್ಯಾಟರಿಗೆ ಸೂರ್ಯದೇವನೇ ಶಕ್ತಿ ತುಂಬಬಲ್ಲನು! ಸೋಲಾರ್ ಪ್ಲೇಟ್‌ಗಳನ್ನು ತಲೆಗೆ ಕಟ್ಟಿಕೊಳ್ಳದೆ ನಿಮ್ಮ ಮೊಬೈಲ್ ಬ್ಯಾಟರಿಗಳನ್ನು ಸೌರಶಕ್ತಿಯಿಂದ ತುಂಬಿಸಿಕೊಳ್ಳಬಹುದು, ಸಣ್ಣ ಡಿವೈಸ್ ಮೂಲಕವೇ ಹಗಲಿಡೀ ಯಾವುದೆ ಖರ್ಚಿಲ್ಲದೇ ಮೊಬೈಲ್ ಚಾರ್ಜ್ ಮಾಡಬಹುದು, ಇದಲ್ಲದೇ ನೇರವಾಗಿ ಮೊಬೈಲ್ ಸ್ಕ್ರೀನ್‌ನಿಂದಲೇ ಬ್ಯಾಟರಿ ಚಾರ್ಜ್ ಆಗುತ್ತದೆ. ಆದರೆ ಈ ಸೋಲಾರ್ ತಂತ್ರಜ್ಞಾನದಿಂದ ಮೊಬೈಲ್ ಚಾರ್ಜ್ ಮಾಡಬಹುದು ಎಂಬ ವಿಚಾರದ ಬಗ್ಗೆ ನಾವಷ್ಟು ತಲೆಕೆಡಿಸಿಕೊಂಡೇ ಇಲ್ಲ. ಬಿಸಿಲು ಹೆಚ್ಚಾದಾಗ ಸೂರ್ಯನಿಗೆ ಬಯ್ಯುತ್ತೇವೆ, ಚಳಿ ಹೆಚ್ಚಾದಾಗ ಮತ್ತಷ್ಟು ಪರಿತಪಿಸುತ್ತೇವೆ. ಮಳೆ ಹೆಚ್ಚಾದಾಗ ಶಪಿಸುತ್ತೇವೆ ಇದು ನಮ್ಮೆಲ್ಲರ ಜೀವನ ಶೈಲಿಯಾಗಿಹೋಗಿದೆ. ಆದರೆ ಈ ಸೂರ್ಯನ ತಾಪ ಹಾಗೂ ಜಲಧಾರೆಯನ್ನು ಶಕ್ತಿಯನ್ನಾಗಿ ಬಳಸುವ ಬಗ್ಗೆ ಗಂಭೀರವಾಗಿ ತಲೆಕೆಡಿಸಿಕೊಳ್ಳಲೇ ಹೋಗುವುದಿಲ್ಲ. ವರ್ಷದ ನಾಲ್ಕು ತಿಂಗಳು ಮಳೆ ಸುರಿದರೂ ಅದನ್ನು ಚರಂಡಿಯಲ್ಲಿ ಹರಿಯಬಿಟ್ಟು ಬೇಸಿಗೆಯಲ್ಲಿ ಕುಡಿಯಲು ನೀರಿಲ್ಲ ಎಂದು ಪ್ರತಿಭಟಿಸಲು ಮರೆಯುವುದಿಲ್ಲ. ವರ್ಷದ 320 ದಿನ ಪ್ರಕಾಶಮಾನ ಸೂರ್ಯನಿದ್ದರೂ ಜನವರಿಯ ನಂತರ ಕತ್ತಲಲ್ಲಿ ಬೆವರೊರೆಸಿಕೊಂಡು ಕಾಲ ಕಳೆಯುವುದನ್ನೇ ನಾವು ಇಷ್ಟಪಡುತ್ತೇವೆ. ಆದರೆ, ಪರ್ಯಾಯ ವಿದ್ಯುತ್ ಶಕ್ತಿಗಳತ್ತ ಗಮನ ನೀಡಲೇಬೇಕು, ಅದರ ಜತೆಗೆ ಉಚಿತವಾಗಿ ದೊರೆಯುವ ವಿದ್ಯುತ್‌ಗಳತ್ತ ಗಮನ ನೀಡಿದರೆ ಒಂದೆಡೆ ದೇಶದ ಖಜಾನೆ ಉಳಿಸುವುದರ ಜತೆಗೆ ಒಂದು ಉದ್ಯಮಕ್ಕೆ ಪುಷ್ಠಿ ನೀಡಿದಂತಾಗುತ್ತದೆ. ಮೊಬೈಲ್ ಚಾರ್ಜ್ ಮಾಡಲು ಸಾಮಾನ್ಯವಾಗಿ ನಾವೆಲ್ಲರೂ ಸಾದಾ ವಿದ್ಯುತ್ ಆಧಾರಿತ ಚಾರ್ಜರ್‌ಗಳನ್ನೇ ಬಳಸುತ್ತಿದ್ದೇವೆ. ಇದಕ್ಕೆ ಕಾರಣವಿಲ್ಲದಿಲ್ಲ, ಮೊದಲನೆಯದಾಗಿ ಈ ಚಾರ್ಜರ್ ಅಷ್ಟು ದುಬಾರಿಯಲ್ಲ, ಎರಡನೆಯದಾಗಿ ಲಭ್ಯತೆ ಹೆಚ್ಚಿದೆ. ಇದರ ಜತೆಗೆ ಮಾರುಕಟ್ಟೆಯಲ್ಲಿ ಲಭ್ಯವಿರುವ ಸೋಲಾರ್ ಚಾರ್ಜರ್‌ಗಳಿಗೆ ಅಷ್ಟೊಂದು ಪ್ರಚಾರವೂ ದೊರಕಿಲ್ಲ ಹಾಗೂ ಮಾರುಕಟ್ಟೆಯ ಗಾತ್ರಕ್ಕೆ ತಕ್ಕ ಸಂಶೋಧನೆಗಳು ನಡೆದಿಲ್ಲ. ತಂತ್ರಜ್ಞಾನದ ಲಭ್ಯತೆ, ದುಬಾರಿ ಉತ್ಪನ್ನಗಳ ಕಾರಣದಿಂದ ಸೌರಶಕ್ತಿಯು ಭಾರತದ ಮಧ್ಯಮ ವರ್ಗಗಳ ಮನೆಯ ಬಾಗಿಲು ತುಳಿದಿಲ್ಲ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಎಲ್ಲ ವಸ್ತುಗಳ ಬೆಲೆಯಲ್ಲಿ ಇಳಿಕೆಯಾದರೂ ಸೋಲಾರ್ ತಂತ್ರಜ್ಞಾನವಿನ್ನೂ ಗಗನಕುಸಮವಾಗಿಯೇ ಉಳಿಯುತ್ತಿದೆ. ಇಂತಹುದೇ ಪಟ್ಟಿಯಲ್ಲಿ ಮೊಬೈಲ್ ಚಾರ್ಜರ್ ಕೂಡ ಇದೆ. ಇಂದು ಮಾರುಕಟ್ಟೆಯಲ್ಲಿ ಸಾಕಷ್ಟು ಮೊಬೈಲ್ ಸೋಲಾರ್ ಚಾರ್ಜರ್‌ಗಳು ಲಭ್ಯವಿವೆ. ಸ್ಯಾಮ್‌ಸಂಗ್, ಆ್ಯಪಲ್, ನೋಕಿಯಾ ಸೇರಿದಂತೆ ಎಲ್ಲ ಥರದ ಮೊಬೈಲ್‌ಗಳಿಗೆ ಚಾರ್ಜರ್ ಲಭ್ಯವಿದೆ. ಮೊಬೈಲ್‌ಗಿಂತಲೂ ಸಣ್ಣ ಗಾತ್ರದ ಈ ಚಾರ್ಜರ್‌ಗಳು ಸೋಲಾರ್ ಪ್ಲೇಟ್‌ಗಳಂತೆಯೇ ವರ್ತಿಸುತ್ತವೆ. ಸೂರ್ಯನ ಬೆಳಕು ಇರುವಲ್ಲಿ ಈ ಚಾರ್ಜರನ್ನಿಟ್ಟು ಮೊಬೈಲ್‌ಗೆ ಪ್ಲಗ್ ಮಾಡಿ ಚಾರ್ಜ್ ಮಾಡಬಹುದು. ಮತ್ತೊಂದು ವಿಶೇಷತೆಯೆಂದರೆ, ಇದು ಯುನಿವರ್ಸಲ್ ಚಾರ್ಜರ್ ಆಗಿರುವುದರಿಂದ ಮೊಬೈಲ್ ಬ್ರಾಂಡ್‌ಗಳ ಕಿತ್ತಾಟದ ಸಮಸ್ಯೆ ಇಲ್ಲಿ ಬರುವುದಿಲ್ಲ. ಆದರೆ, ಇವುಗಳ ದರವೂ ಅಷ್ಟೇ ತುಟ್ಟಿಯಾಗಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಲಭ್ಯವಿರುವ ಎಲ್ಲ ಚಾರ್ಜರ್‌ಗಳು ಎರಡು ಸಾವಿರ ರುಪಾಯಿಯ ಆಸುಪಾಸಿನಲ್ಲಿದೆ. ಈಬೇ, ಅಮೆಝಾನ್, ಹೋಮ್‌ಶಾಪ್-18 ಸೇರಿದಂತೆ ಹತ್ತಾರು ಇ-ಶಾಪಿಂಗ್ ವೆಬ್‌ಸೈಟ್‌ಗಳಲ್ಲಿ ಮೊಬೈಲ್ ಅಸೆಸರಿಗೆ ಹೋಗಿ ತಡಕಾಡಿದರೆ ಸೋಲಾರ್ ಚಾರ್ಜರ್‌ಗಳು ದೊರೆಯುತ್ತವೆ. ಮೊಬೈಲ್‌ನಲ್ಲೇ ನೇರ ಚಾರ್ಜ್ ಟ್ಯಾಗ್ ಹ್ಯೂವರ್ ಎಂಬ ಕಂಪನಿಯು ಇದೇ ಮೊದಲ ಬಾರಿಗೆ ನೇರವಾಗಿ ಸೌರಶಕ್ತಿಯಿಂದಲೇ ಕಾರ್ಯನಿರ್ವಹಿಸುವ ಮೊಬೈಲ್ ಅನ್ನು ತಯಾರಿಸಿದೆ. ಮೊಬೈಲ್ ಸ್ಕ್ರೀನ್ ಮತ್ತು ಅದರ ಮೇಲಿನ ಗ್ಲಾಸ್ ನಡುವೆ ಫೋಟೋವಾಲ್ಟಿಕ್ ಲೇಯರ್ ಅಳವಡಿಸಲಾಗಿದೆ. ಅಲ್ಲಿರುವ ಸೆಲ್‌ಗಳು ಮೊಬೈಲ್ ಬ್ಯಾಟರಿಗೆ ವಿದ್ಯುತ್ ಶಕ್ತಿ ಪೂರೈಸುತ್ತದೆ. ಅಂದಹಾಗೆ ಸೌರಶಕ್ತಿ ಮಾತ್ರವಲ್ಲದೇ ಕೃತಕ ಬೆಳಕಿನಲ್ಲೂ ಮೊಬೈಲ್ ಬ್ಯಾಟರಿ ಚಾರ್ಜ್ ಆಗುವಂಥ ತಂತ್ರಜ್ಞಾನವನ್ನು ಇದರಲ್ಲಿ ಅಳವಡಿಸಲಾಗಿದೆ. ಈ ಮೊಬೈಲ್‌ನ ವೈಶಿಷ್ಟ್ಯ ಹಾಗೂ ದರವು ಇನ್ನೂ ನಿಗದಿಯಾಗಿಲ್ಲ. ಜೂನ್ ಅಂತ್ಯದೊಳಗೆ ಮಾರುಕಟ್ಟೆಗೆ ಬರುವ ಸಾಧ್ಯತೆಯಿದೆ. ಪ್ರತಿಷ್ಠಿತ ಹುವೈ ಕಂಪನಿಯೂ ಕಳೆದೊಂದು ವರ್ಷದಿಂದ ಈ ನಿಟ್ಟಿನಲ್ಲಿ ಸಂಶೋಧನೆ ನಡೆಸುತ್ತಿದ್ದು, ಸೋಲಾರ್ ಆಧಾರಿತ ಸ್ಮಾರ್ಟ್‌ಫೋನನ್ನು ಮಾರುಕಟ್ಟೆಗೆ ತರುವ ಸಾಧ್ಯತೆಯಿದೆ. ಈ ತಂತ್ರಜ್ಞಾನಗಳು ಅಭಿವೃದ್ಧಿಯಾಗಿ ಮಾರುಕಟ್ಟೆಯಲ್ಲಿ ಯಶಸ್ವಿಯಾದರೆ ಇವುಗಳ ಬೆಲೆಯೂ ಸ್ವಲ್ಪ ಕಡಿಮೆಯಾದೀತು. - ರಾಜೀವ ಹೆಗಡೆ .@.