ತರ್ಕಕ್ಕೆ ನಿಲುಕದು! ಉಗಮವಾದ ಲಾಗಾಯ್ತು ಮಾನವ ವಿನೋದಪ್ರಿಯ. ಜಾಣ್ಮೆ, ಲೆಕ್ಕ, ಮನೋಹರ ಸಮಸ್ಯೆ, ಮೋಜಿನ ಸವಾಲು, ಗೂಢಪ್ರಶ್ನೆ, ಒಗಟು, ಒಡಪುಗಳಿಗೆ ಆತ ಆಕರ್ಷಿತ. ಮೇಲ್ನೋಟಕ್ಕೆ ಕಗ್ಗಂಟಾಗಿ ತೋರಿದರೂ ತಿಣುಕಿನ ಹಿಂದೆ ನಮ್ಮನ್ನು ಚಿಂತನೆಗೆ ಹಚ್ಚುವ ಸೆಲೆಯಿರುತ್ತದೆ. ಇಲ್ಲಿ ಸಮಸ್ಯೆಗೆ ಪರಿಹಾರ ದೊರಕುವುದು, ವಿವರಣೆ ದಕ್ಕುವುದು ಮುಖ್ಯವಲ್ಲ. ವಿಜ್ಞಾನ ಕಾರ್ಯಕಾರಣ ಸಂಬಂಧವನ್ನು ಅರಸಿ ಹೊರಟ ತೇರು. ಪ್ರಶ್ನಿಸದೆ ಏನನ್ನೂ ಒಪ್ಪದ ಜ್ಞಾನ. ತರ್ಕಕ್ಕೆ ಮಾತ್ರ ಏನಿದ್ದರೂ ಕೆಂಪುಹಾಸಿನ ಸ್ವಾಗತ. ಗಣಿತಕ್ಕೆ ವಿಜ್ಞಾನದ ರಾಣಿ ಎಂಬ ಅಗ್ರಪಟ್ಟ. ಸಂಕೀರ್ಣತೆ ರೋಚಕತೆಯನ್ನು ಪುಟಿದೇಳಿಸುತ್ತದೆ. ಈ ನಿಟ್ಟಿನಲ್ಲಿ ತರ್ಕ ಅಥವಾ ನಮ್ಮ ಸಾಮಾನ್ಯ ಗ್ರಹಿಕೆಗೆ ಅಸಂಗತವನ್ನು ಸೃಜಿಸುವ ಹೇಳಿಕೆಗಳು, ವ್ಯಾಖ್ಯೆಗಳು, ವಾದಗಳು ನಮ್ಮ ಗಮನ ಸೆಳೆಯುತ್ತವೆ. ಇತ್ತಪ್ರತಿಪಾದಿಸಲೂ ಆಗದ, ಅತ್ತ ನಿರಾಕರಿಸಲೂ ಆಗದ ಸ್ವಯಂ ವಿರೋಧೋಕ್ತಿಗಳು ಅವು! 'ಪ್ಯಾರಾಡಾಕ್ಸ್‌' () ಎಂದು ಕರೆಯಲಾಗುವ ಈ ಕಥನಗಳು ಸಂದಿಗ್ಧ ಒಡ್ಡುತ್ತವೆ ನಿಜ. ಆದರೆ ರಂಜನೆ, ಬುದ್ಧಿ ಪ್ರಚೋದನೆ ಅಸಮಾನ್ಯ. ಒಂದಷ್ಟು ಹೇಳಿಕೆಗಳನ್ನು ಅವಲೋಕಿಸೋಣ... 'ಆ ಖಾನಾವಳಿಗೆ ಯಾರೂ ಹೋಗುವುದಿಲ್ಲ. ಏಕೆಂದರೆ ಅಲ್ಲಿ ಜನ ಮುಗಿಬಿದ್ದಿರುತ್ತಾರೆ.' 'ಈಜು ಕಲಿಯದ ಹೊರತು ನೀರಿನತ್ತ ಹೋಗಬಾರದು'. 'ಮದುವೆಯಾಗುವ ತನಕ ನೌಕರಿ ಸಿಗದು. ನೌಕರಿ ಸಿಗುವ ತನಕ ಮದುವೆ ಆಗದು.' 'ನನಗೆ ಏನೂ ತಿಳಿಯದೆಂದು ನನಗೆ ತಿಳಿದಿದೆ'. 'ಈ ವಾಕ್ಯ ಸುಳ್ಳು'. ಒಂದೊಂದರಲ್ಲೂ ಅಸಂಬದ್ಧತೆ ಇದೆ. ನಿಜವೂ ಹೌದು, ಸುಳ್ಳೂ ಹೌದೆಂಬ ಎಡವಟ್ಟು! ಪ್ರಸಿದ್ಧವಾದ ಪ್ಯಾರಾಡಾಕ್ಸ್‌ಗಳಿವೆ. ಗ್ರೀಕ್ ತತ್ವಜ್ಞಾನಿ ಎಪಿಮನಿಡಸ್ (ಕ್ರಿ.ಪೂ. 6ನೇ ಶತಮಾನ) ಪ್ಯಾರಾಡಾಕ್ಸ್‌ಗಳನ್ನು ಸೃಷ್ಟಿಸುವುದೇ ಹವ್ಯಾಸವನ್ನಾಗಿಸಿಕೊಂಡಿದ್ದ. ಗೆಲಿಲಿಯೋ (1564-1642), ನ್ಯೂಟನ್ (1643-1727), ಐನ್‌ಸ್ಟೈನ್ (1879-1955) ಮೊದಲಾದ ಅತಿರಥ ಮಹಾ ವಿಜ್ಞಾನಿಗಳೂ ಪ್ಯಾರಾಡಾಕ್ಸ್‌ಗಳನ್ನು ಹಾರಿಬಿಟ್ಟವರೇ. ಬ್ರಿಟನ್ನಿನ ಬಟ್ರಂಡ್ ರಸೆಲ್ (1872-1970) ತತ್ತ್ವಜ್ಞಾನಿ, ಇತಿಹಾಸಕಾರ, ಸಾಮಾಜಿಕ ಚಿಂತಕರಷ್ಟೇ ಅಲ್ಲ ಶ್ರೇಷ್ಠ ಗಣಿತಜ್ಞರೂ ಆಗಿದ್ದರು. ಗಣಸಿದ್ಧಾಂತಕ್ಕೆ (ಖಜಡಿ ಝಿಜ್ಟ್ಠಣ) ಸಂಬಂಧಿಸಿದ ತಮ್ಮದೊಂದು ಪ್ಯಾರಾಡಾಕ್ಸ್‌ಗೆ ಶ್ರೀಸಾಮಾನ್ಯರಿಗೂ ಅರ್ಥವಾಗಲೆಂದು ಅವರು ಕಥನ ರೂಪ ಕೊಟ್ಟರು. ಅದು 'ಬಾರ್ಬರ್ಸ್ ಪ್ಯಾರಡಾಕ್ಸ್‌' ಎಂದು ಪ್ರಸಿದ್ಧವಾಯಿತು. ಇಂದಿಗೂ ಅದರ ಬಗ್ಗೆ ಗಣಿತಾಸಕ್ತರು, ತರ್ಕಪ್ರಿಯರು, ಜಿಜ್ಞಾಸೆ ನಡೆಸಿಯೇ ಇದ್ದಾರೆ. ಅದರ ಪೂರ್ಣಪಾಠ ಹೀಗಿದೆ... ಒಂದು ಊರು. ಅಲ್ಲಿ ಒಬ್ಬನೇ ಒಬ್ಬ ಕ್ಷೌರಿಕನಿದ್ದಾನೆ. ಆ ಊರಿನಲ್ಲಿ ಪ್ರತಿಯೊಬ್ಬ ಪುರುಷನೂ ಕ್ಷೌರ ಮಾಡಿಸಿಕೊಳ್ಳುತ್ತಾನೆ. ಕ್ಷೌರಿಕ ಎಂದರೆ ಯಾರು ತಂತಾವೇ ಕ್ಷೌರ ಮಾಡಿಕೊಳ್ಳುವುದಿಲ್ಲವೋ ಹಾಗೂ ಯಾರು ತಂತಾವೇ ಕ್ಷೌರ ಮಾಡಿಕೊಳ್ಳುವುದಿಲ್ಲವೋ ಅಂಥವರಿಗೆ ಮಾತ್ರ ಕ್ಷೌರ ಮಾಡುವವ ಎನ್ನುವುದೂ ವ್ಯಾಖ್ಯೆ. ಮೇಲ್ನೋಟಕ್ಕೆ ಈ ವ್ಯಾಖ್ಯೆ ಅಪ್ಪಟ ತಾರ್ಕಿಕವಾಗಿಯೇ ತೋರುತ್ತದೆ. ಆದರೆ ತನ್ನಲ್ಲಿ ಒಂದು ಸಂದಿಗ್ಧತೆಯನ್ನಿರಿಸಿಕೊಂಡಿದೆ. ಆ ಕ್ಷೌರಿಕನಿಗೆ ಕ್ಷೌರ ಮಾಡುವವ ಯಾರು ಎಂದು ಪ್ರಶ್ನಿಸಿದಾಗಲೇ, ಆ ಅಸಮಂಜಸತೆ ಬಯಲಾಗುವುದು! ಏಕೆನ್ನುತ್ತೀರಾ? ಇದೋ ಗಮನಿಸಿ... 1. ಕ್ಷೌರಿಕ ತಂತಾನೆ ಕ್ಷೌರ ಮಾಡಿಕೊಳ್ಳುವುದಿಲ್ಲ ಅನ್ನಿ. ಆಗ ಅವನಿಗೆ ವ್ಯಾಖ್ಯೆಯಂತೆ ಕ್ಷೌರ ಮಾಡಿಕೊಳ್ಳುವ ಅರ್ಹತೆ ಬಂದಿರುತ್ತದೆ! ಒಟ್ಟಾರೆ ಕ್ಷೌರಿಕ ಕ್ಷೌರ ಮಾಡಿಕೊಂಡರೂ ತಪ್ಪು ಮಾಡಿಕೊಳ್ಳದಿದ್ದರೂ ತಪ್ಪು. ಅಂದ ಹಾಗೆ ಸೂಕ್ತ ತಿದ್ದುಪಡಿಯಿಂದ ಈ ಪ್ಯಾರಾಡಾಕ್ಸ್ ಪರಿಹರಿಸಲು ಸಾಧ್ಯ. ಆ ಊರಿನಲ್ಲಿ ಹಲವು ಮಂದಿ ಕ್ಷೌರಿಕರಿದ್ದು, ಪ್ರತಿಯೊಬ್ಬನೂ ಸ್ವಯಂ ಕ್ಷೌರ ಮಾಡಿಕೊಳ್ಳಬೇಕು ಅಥವಾ ಕ್ಷೌರಿಕನಿಂದ ಕ್ಷೌರ ಮಾಡಿಸಿಕೊಳ್ಳಬೇಕು. ಒಟ್ಟಾರೆ ಊರಿನ ಪುರುಷರೆಲ್ಲ ಕ್ಷೌರಕ್ಕೊಳಗಾಗಬೇಕು. ಹೀಗೆ ಬದಲಿಸಿದರೆ ಸಂದಿಗ್ಧವಿರದೇನೋ ಸರಿ. ಆದರೆ ಪ್ಯಾರಾಡಾಕ್ಸ್‌ನಲ್ಲಿರುವ ಪುಳಕ ಕಳೆದುಕೊಳ್ಳಲು ಯಾರು ತಾನೆ ಹಂಬಲಿಸಿಯಾರು ಹೇಳಿ ಮಾರಾಯ್ರೆ! ವಿಶ್ವಪ್ರಸಿದ್ಧ ನಾಟಕಕಾರ ಶೇಕ್ಸ್‌ಪಿಯರ್ ತನ್ನ ಹ್ಯಾಮ್ಲೆಟ್‌ನಲ್ಲಿ ನಾಯಕನಿಂದ ಈ ಮಾತು ಹೇಳಿಸಿದ್ದಾನೆ; 'ಕರುಣಾಮಯಿಯಾಗಿರಲು ನಾನು ಕ್ರೂರನಾಗಿರಬೇಕಾಗುತ್ತದೆ...' ಇಲ್ಲಿ ವಿರೋಧಾಭಾಸ ಗುರುತಿಸದೆ ನಾವು ಕರುಣೆಯ ಮೌಲ್ಯವನ್ನು ಮಾತ್ರ ಮನಗಾಣಬೇಕಷ್ಟೆ. ಸಾಹಿತ್ಯದ ಒಟ್ಟು ಆಶಯ ಮುಖ್ಯವಾಗಬೇಕೇ ಹೊರತು ಒಕ್ಕಣೆಗಳನ್ನು ಅಳೆದು ತೂಗಿ ಸಂದಿಗ್ಧಗಳಿಗೆ ಹುಡುಕಾಡ ಬಾರದಲ್ಲವೆ? - ಬಿಂಡಿಗನವಿಲೆ ಭಗವಾನ್ ಮೊ. 98867 98182