ವಾಟ್ಸ್ ಆ್ಯಪ್ ಮಣಿಸಲು ಗೂಗಲ್ ತಂತ್ರ? ಮೊಬೈಲ್ ತಂತ್ರಜ್ಞಾನ ಕ್ಷೇತ್ರದಲ್ಲಿ ಯುದ್ಧವೇ ಆರಂಭವಾಗುವ ಸಾಧ್ಯತೆ ನಿಚ್ಚಳವಾಗಿದೆ... ನವದೆಹಲಿ: ಮೊಬೈಲ್ ತಂತ್ರಜ್ಞಾನ ಕ್ಷೇತ್ರದಲ್ಲಿ ಯುದ್ಧವೇ ಆರಂಭವಾಗುವ ಸಾಧ್ಯತೆ ನಿಚ್ಚಳವಾಗಿದೆ. ಈಗಾಗಲೇ ಮೊಬೈಲ್ ಬಳಕೆದಾರರಲ್ಲಿ ಜನಪ್ರಿಯವಾಗಿರುವ ವಾಟ್ಸ್ ಆ್ಯಪ್ ಜನಪ್ರಿಯತೆಯಿಂದ ಕಂಗೆಟ್ಟಿರುವ ಗೂಗಲ್ ಅದಕ್ಕೆ ಸಮಾನವಾದ ಆ್ಯಪ್ ಒಂದನ್ನು ಅಭಿವೃದ್ಧಿಪಡಿಸಿ, ಈ ಮೂಲಕ ಮೊಬೈಲ್ ಮೆಸೆಂಜಿಂಗ್ ಕ್ಷೇತ್ರಕ್ಕೂ ಆನ್‌ಲೈನ್ ದಿಗ್ಗಜ ಲಗ್ಗೆ ಹಾಕಿ ವಾಟ್ಸ್ ಆ್ಯಪ್ ಪಾರಮ್ಯ ಕೊನೆಗಾಣಿಸುವ ಪಣ ತೊಟ್ಟಿದೆ. ಅದರ ಪ್ರಯೋಗ ಮತ್ತು ಅಭಿವೃದ್ಧಿಗೆ ಗೂಗಲ್ ಭಾರತವನ್ನೇ ಆಯ್ಕೆ ಮಾಡಿದೆ. ಅದಕ್ಕಾಗಿಯೇ ತನ್ನ ಹಿರಿಯ ಅಧಿಕಾರಿ ನಿಖಿಲ್ ಸೆಹೆಗಲ್ ಅವರನ್ನು ಕ್ಯಾಲಿಪೋರ್ನಿಯಾದಿಂದ ಕಳುಹಿಸಿಕೊಟ್ಟಿದ್ದು, ಭಾರತೀಯ ಮೊಬೈಲ್ ಮಾರುಕಟ್ಟೆಗೆ ಸಂಬಂಧಿಸಿದಂತೆ ನವೀನತೆಯಲ್ಲಿ ಆ್ಯಪ್ ಅನ್ನು ಅಭಿವೃದ್ಧಿಪಡಿಸಬಹುದು ಎಂಬುದನ್ನು ಅಧ್ಯಯನ ನಡೆಸಲು ಅವರಿಗೆ ಸೂಚಿಸಲಾಗಿದೆ.ಮುಂದಿನ ವರ್ಷ?: ಮೂಲಗಳ ಪ್ರಕಾರ 2015ರಲ್ಲಿ ಗೂಗಲ್‌ನ ಆ್ಯಪ್ ಮೊಬೈಲ್‌ಗಳಿಗೆ ಲಗ್ಗೆ ಹಾಕಲಿದೆ. ಎಲ್ಲದಕ್ಕಿಂತ ಹೆಚ್ಚಾಗಿ ವಾಟ್ಸ್ ಆ್ಯಪ್ ಅನ್ನು ಗೂಗಲ್ ರು.60 ಸಾವಿರ ಕೋಟಿಗೆ ಖರೀದಿಸುವ ಪ್ರಸ್ತಾಪ ಒಡ್ಡಿತ್ತು ಎಂದು ಹೇಳಲಾಗಿದೆ. ಆದರೆ ಅಂತಿಮವಾಗಿ ವಾಟ್ಸ್ ಆ್ಯಪ್ ಅನ್ನು ಫೇಸ್ ಬುಕ್ ರು.1.2 ಲಕ್ಷ ಕೋಟಿಗೆ ಖರೀದಿಸಿತು.