ಭೂಮಿಯ ಸೃಷ್ಟಿ ರಹಸ್ಯ ಬಯಲಾಗುವುದೇ? 130 ಜ್ಯೋತಿರ್ವರ್ಷಗಳಾಚೆ ನಕ್ಷತ್ರವೊಂದರ ಕಕ್ಷೆಯಲ್ಲಿ ಸುತ್ತುತ್ತಿರುವ ಬೃಹತ್ ಗ್ರಹವೊಂದು ಇತ್ತೀಚೆಗಷ್ಟೇ ಪತ್ತೆಯಾಗಿರುವುದು ನಿಮಗೆಲ್ಲ ಗೊತ್ತಿರಬಹುದು. ಮಾನವ ವಾಸಯೋಗ್ಯ ಭೂಮಿಯ ಹುಡುಕಾಟದಲ್ಲಿ ನಿರತರಾಗಿರುವ ವಿಜ್ಞಾನಿಗಳಿಗೆ ಇದು ಹೊಸ ಅವಕಾಶಗಳನ್ನು ಕಲ್ಪಿಸಿಕೊಟ್ಟಿದೆ. ಎಚ್‌ಆರ್ 8799ಸಿ ಎಂಬ ಹೆಸರಿನ ಈ ಗ್ರಹದಲ್ಲಿ ಜೀವಜಲ ಮತ್ತು ಕಾರ್ಬನ್ ಮೋನಾಕ್ಸೈಡ್ ತೇವಾಂಶವಿರುವುದೂ ಪತ್ತೆಯಾಗಿದೆ. ಇದು ಭೂಮಿಯ ಹುಟ್ಟಿನ ಬಗೆಗಿನ ಅನೇಕ ರಹಸ್ಯ ಸತ್ಯಗಳನ್ನು ಬಹಿರಂಗಪಡಿಸಲಿದೆ ಎಂಬುದು ವಿಜ್ಞಾನಿಗಳ ವಾದ. ಗುರು ಗ್ರಹಕ್ಕೆ ಹೋಲಿಸಿದರೆ ಈ ಗ್ರಹದ ದ್ರವ್ಯರಾಶಿಯು 8 ಪಟ್ಟು ಅಧಿಕವಾಗಿದೆ. ನಮ್ಮ ಭೂಮಿಗೆ ಸೌರವ್ಯವಸ್ಥೆಯು ಇದೇ ಮಾದರಿಯಲ್ಲಿ ರಚಿತವಾಗಿದೆ ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ. ಒಂದು ವೇಳೆ ಅವರ ಕಲ್ಪನೆ ನಿಜವಾದರೆ, ಭೂಮಿಯ ಮಾದರಿಯ ಇನ್ನಷ್ಟು ಗ್ರಹಗಳನ್ನು ಪತ್ತೆಹಚ್ಚುವ ಸದವಕಾಶ ಸಿಗಲಿದೆ ಎನ್ನುವುದೇ ಈಗ ವಿಜ್ಞಾನಿಗಳಿಗೆ ಖುಷಿಯ ಸಂಗತಿ.